ADVERTISEMENT

ವಾಚಕರ ವಾಣಿ | ಸಮಷ್ಟಿ ಪ್ರಜ್ಞೆಗೆ ಸಕಾಲಿಕ ಎಚ್ಚರಿಕೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ನವೆಂಬರ್ 2021, 20:30 IST
Last Updated 25 ನವೆಂಬರ್ 2021, 20:30 IST

‘ಸಂಘಟಿತ ಹೋರಾಟದ ಎರಡು ಮಾದರಿ’ ಎಂಬ ಸಿ.ಎನ್.ರಾಮಚಂದ್ರನ್ ಅವರ ಲೇಖನ (ಸಂಗತ, ನ. 24) ತಿಳಿವಳಿಕೆ ಮತ್ತು ಎಚ್ಚರಿಕೆ ಎರಡೂ ದೃಷ್ಟಿಯಿಂದ ಸಕಾಲಿಕವಾಗಿದೆ. 160 ವರ್ಷಗಳ ಹಿಂದೆ ನೀಲಿ (ಇಂಡಿಗೊ) ಬೆಳೆ ವಿರುದ್ಧ ಬಂಗಾಳದಲ್ಲಿ ನಡೆದ ಹೋರಾಟಕ್ಕೂ ಈಗಿನ ರೈತರ ಹೋರಾಟಕ್ಕೂ ಸಾಮ್ಯತೆ ಇದೆ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಆಗ ಭಾರತೀಯ, ಬ್ರಿಟಿಷ್ ಮತ್ತು ಐರೋಪ್ಯ ಜಮೀನ್ದಾರರಿಂದ ಜಮೀನನ್ನು ಗೇಣಿಗೆ ಪಡೆದಿದ್ದ ರೈತರು ನೀಲಿ ಬೆಳೆಯನ್ನೇ ಬೆಳೆಯಬೇಕೆಂಬ ಕಡ್ಡಾಯ ಬಂಗಾಳದಲ್ಲಿ ಮಾತ್ರವಲ್ಲ ಬಿಹಾರದಲ್ಲೂ ಜಾರಿಯಲ್ಲಿತ್ತು. ‘ಟಿಂಕಾಥಿಯಾ’ ಎನ್ನುವ ಕಾನೂನು ಕಟ್ಟಳೆಯ ಮೂಲಕ ಅಲ್ಲಿ ಲಾಭದಾಯಕವಲ್ಲದಿದ್ದರೂ ರೈತರು ತಮ್ಮ ಜಮೀನುಗಳಲ್ಲಿ ಇಂಡಿಗೊ ಬೆಳೆಯನ್ನೇ ಬೆಳೆಯತಕ್ಕದ್ದೆಂದು ಕಡ್ಡಾಯಗೊಳಿಸಲಾಗಿತ್ತು.

1917ರ ಸುಮಾರಿನಲ್ಲಿ ಉತ್ತರ ಬಿಹಾರದ ಚಂಪಾರಣ್ಯ ವಿಭಾಗದ ರೈತರು ಈ ಕಾಯ್ದೆ ವಿರುದ್ಧ ಮಹಾತ್ಮ ಗಾಂಧಿ ನೇತೃತ್ವದಲ್ಲಿ ಸತ್ಯಾಗ್ರಹ ಆರಂಭಿಸಿದರು. ಗಾಂಧಿಯವರು ಬಿಹಾರದಲ್ಲಿ ‘ಅನಪೇಕ್ಷಿತ ವ್ಯಕ್ತಿ’ ಎಂದು ಅವರನ್ನು ಉಚ್ಚಾಟಿಸುವಂತೆ ಜಮೀನ್ದಾರರು ಸರ್ಕಾರದ ಮೇಲೆ ಒತ್ತಡ ತಂದರು. ಚಂಪಾರಣ್ಯ ಬಿಟ್ಟು ಹೋಗುವಂತೆ 1917ರ ಏಪ್ರಿಲ್ 16ರಂದು ಗಾಂಧಿಯವರಿಗೆ ನೋಟಿಸ್ ಜಾರಿ ಮಾಡಲಾಯಿತು. ಈ ಆಜ್ಞೆಯನ್ನು ಪಾಲಿಸುವುದಿಲ್ಲವೆಂದು ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಗಾಂಧಿ ಪ್ರತ್ಯುತ್ತರ ಕೊಟ್ಟರು. ಚಂಪಾರಣ್ಯದ ರೈತ ಚಳವಳಿ ಜೊತೆಗೆ ಗಾಂಧಿಯವರ ಸ್ವಾತಂತ್ರ್ಯ ಸತ್ಯಾಗ್ರಹ ರಾಷ್ಟ್ರವ್ಯಾಪಿ ಹಬ್ಬುತ್ತಿತ್ತು. ಇದನ್ನರಿತ ಬ್ರಿಟಿಷ್ ಸರ್ಕಾರಕ್ಕೆ ಗಾಂಧಿಯವರ ಉಚ್ಚಾಟನೆ ಹೆಚ್ಚು ಅಪಾಯಕಾರಿಯಾಗಬಹುದೆಂದು ಮನವರಿಕೆಯಾಗಿ ಉಚ್ಚಾಟನೆಯ ಆಜ್ಞೆಯನ್ನು ಹಿಂದೆಗೆದುಕೊಂಡಿತು. ಅದೇ ಕಾಲಕ್ಕೆ ವಾಣಿಜ್ಯ ಬೆಳೆಯಾಗಿ ವಿಶ್ವ ಮಾರುಕಟ್ಟೆಯಲ್ಲಿ ಇಂಡಿಗೊ ಕಿಮ್ಮತ್ತೂ ಕುಸಿಯುತ್ತಿತ್ತು. ಇದೆಲ್ಲವನ್ನೂ ಮನಗಂಡ ಸರ್ಕಾರ ಕೊನೆಗೆ ಸತ್ಯಾಗ್ರಹಕ್ಕೆ ಮಣಿದು ‘ಟಿಂಕಾಥಿಯಾ’ ಕಾನೂನನ್ನು ವಾಪಸು ತೆಗೆದುಕೊಂಡಿತು (ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಾನು ಅನುವಾದಿಸಿರುವ ‘ಮೋಹನದಾಸ್: ಒಂದು ಸತ್ಯ ಕಥೆ’ ಗ್ರಂಥದಲ್ಲಿ ಕಾಣಬಹುದು).

ಅಂದಿನ ಇಂದಿನ ಎರಡು ರೈತ ಚಳವಳಿಗಳಲ್ಲಿ ಸಾಮ್ಯತೆಯನ್ನು ಗುರುತಿಸಿರುವ ರಾಮಚಂದ್ರನ್ ‘... ರೈತರು ಸಂಘಟಿತರಾಗಿ ಬಂಡೆದ್ದರೆ ಯಾವ ಪ್ರಭುತ್ವವೂ-ಅದು ಬ್ರಿಟಿಷ್ ಪ್ರಭುತ್ವವಾಗಲೀ ದೇಶಿ ಪ್ರಭುತ್ವವಾಗಲೀ- ಸೋಲಿಸಲು ಸಾಧ್ಯವಿಲ್ಲ’ ಎಂಬ ಕಟುಸತ್ಯವನ್ನು ಎತ್ತಿತೋರಿದ್ದಾರೆ. ಮಂಕುಬೂದಿ ಎರಚಿಸಿಕೊಂಡು ಮಬ್ಬಾಗಿರುವ ದೇಶದ ಸಮಷ್ಟಿ ಪ್ರಜ್ಞೆಗೆ, ಇನ್ನಾದರೂ ಜಾಗೃತರಾಗಿ ಎನ್ನುವ ಸಕಾಲಿಕ ಎಚ್ಚರಿಕೆಯೂ ಆಗಿದೆ ಈ ಲೇಖನ.

ADVERTISEMENT

- ಜಿ.ಎನ್.ರಂಗನಾಥ ರಾವ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.