ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ

ವಾಚಕರ ವಾಣಿ
Published 24 ನವೆಂಬರ್ 2025, 19:11 IST
Last Updated 24 ನವೆಂಬರ್ 2025, 19:11 IST
   

ಪಬ್ಲಿಕ್‌ ಶಾಲೆ: ಬಡಮಕ್ಕಳಿಗೆ ಅಡಕತ್ತರಿ

ಕರ್ನಾಟಕ ಪಬ್ಲಿಕ್‌ ಶಾಲೆಗಳೊಂದಿಗೆ ಇತರ ಸರ್ಕಾರಿ ಶಾಲೆಗಳನ್ನು ವಿಲೀನ
ಗೊಳಿಸುವ ಪ್ರಕ್ರಿಯೆಯು ಆತಂಕಕಾರಿ ಬೆಳವಣಿಗೆ. ಗ್ರಾಮೀಣ ಹಾಗೂ ಬಡವರ್ಗದ ಸಾವಿರಾರು ಮಕ್ಕಳಿಗೆ ಸರ್ಕಾರಿ ಶಾಲೆಗಳೇ ಶೈಕ್ಷಣಿಕ ಆಧಾರ. ಖಾಸಗಿ ಶಾಲೆಗಳ ಶುಲ್ಕ ಸಾಮಾನ್ಯ ಕುಟುಂಬಗಳಿಗೆ ಭರಿಸಲಾಗದ ಹೊರೆ. ಸರ್ಕಾರಿ ಶಾಲೆಗಳನ್ನು ಬಲ
ಪಡಿಸುವ ಬದಲಿಗೆ, ಅವುಗಳನ್ನು ನಿಷ್ಕ್ರಿಯಗೊಳಿಸುವುದು ಸಾಮಾಜಿಕ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸಿದಂತಾಗುತ್ತದೆ. ಮಕ್ಕಳ ಭವಿಷ್ಯಕ್ಕೆ ಬುನಾದಿ
ಆಗಿ ನಿಲ್ಲಬೇಕಾದದ್ದು ಸರ್ಕಾರದ ಕರ್ತವ್ಯ. ಹಾಗಾಗಿ, ಸರ್ಕಾರಿ ಶಾಲೆಗಳ ಉಳಿಸುವಿಕೆ ಮತ್ತು ಬಲಪಡಿಸುವಿಕೆಯತ್ತ ಗಮನ ಹರಿಸಲಿ.

⇒ರುಕ್ಮಿಣಿ ನಾಗಣ್ಣವರ, ಬೆಂಗಳೂರು

ADVERTISEMENT

ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಿ

‘ಕೆಪಿಎಸ್‌ಗೆ ಬಲ: ಮಕ್ಕಳ ಪ್ರವೇಶ ಹೆಚ್ಚಳ’ ಸುದ್ದಿ (ಪ್ರ.ವಾ., ನ. 22) ಓದಿ ವ್ಯಥೆಯಾಯಿತು. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಮಕ್ಕಳಿಗೆ ಮುಖ್ಯವಾಗಿ ಶಿಕ್ಷಣ ಬೇಕು. ತಂದೆ–ತಾಯಿ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಶಿಕ್ಷಕರಿರುವ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ. ಹಣ ಖರ್ಚಾದರೂ ಪರವಾಗಿಲ್ಲ, ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎನ್ನುವುದು ಅವರ ಇರಾದೆ. ಶಾಲೆಗಳಲ್ಲಿ ಸರಿಯಾಗಿ ಶಿಕ್ಷಕರಿಲ್ಲದಿದ್ದಾಗ ಸವಲತ್ತು ಕಲ್ಪಿಸಿದರೆ ಪ್ರಯೋಜನವಾದರೂ ಏನು? ಖಾಲಿ ಇರುವ ಹುದ್ದೆಗಳಿಗೆ ಶಿಕ್ಷಕರನ್ನು ನೇಮಿಸಿದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಲಿದೆ. ಇಲ್ಲದಿದ್ದರೆ ಹೊಟ್ಟೆಗೆ ಹಿಟ್ಟಿಲ್ಲ; ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತಾಗುತ್ತದೆ.

⇒ಕುಂದೂರು ಮಂಜಪ್ಪ, ಹೊಳೆ ಸಿರಿಗೆರೆ 
ಪ್ರತಿಭಾ ಕಾರಂಜಿ: ಭಾಷಣಗಳು ಹೊರೆ

ಈಗ ಶಾಲೆಗಳಲ್ಲಿ ಪ್ರತಿಭಾ ಕಾರಂಜಿಯ ಕಾಲ.‌ ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುವುದೇ ಇದರ ಉದ್ದೇಶ. ಆದರೆ, ಆರಂಭದಲ್ಲಿ ಮಾಡುವ ವೇದಿಕೆ ಕಾರ್ಯಕ್ರಮದ ಮೂಲಕ ಮಕ್ಕಳನ್ನು ಶೋಷಿಸುವುದು ಎಷ್ಟು ಸರಿ? ವೇದಿಕೆ ಮೇಲೆ ಅತಿಥಿಗಳು, ಸಂಘ–ಸಂಸ್ಥೆಯ ಪದಾಧಿಕಾರಿಗಳು, ಅಧಿಕಾರಿಗಳು ತುಂಬಿರುತ್ತಾರೆ. ಹಾಡು, ನೃತ್ಯ, ಭಾಷಣ, ಪ್ರಬಂಧ ಇತ್ಯಾದಿ ಕಲಿತು ಅದನ್ನು ಯಶಸ್ವಿಯಾಗಿ ಪ್ರದರ್ಶಿಸುವ ಆಸೆಯಲ್ಲಿರುವ ಮಕ್ಕಳಿಗೆ ಅತಿಥಿಗಳ ದೀರ್ಘ ಭಾಷಣ ತಣ್ಣೀರು ಎರಚುತ್ತದೆ. ಪ್ರತಿಭಾ ಕಾರಂಜಿಯು ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಮತ್ತು ಅಧಿಕಾರಿಗಳ ಹೆಚ್ಚುಗಾರಿಕೆ ಅಲ್ಲ. ಅದು ಸಂಪೂರ್ಣ ಮಕ್ಕಳ ಪ್ರತಿಭೆಯ ಅನಾವರಣದ ತಾಣವಾಗಬೇಕು. ಹಾಗಾಗಿ, ವೇದಿಕೆ ಕಾರ್ಯಕ್ರಮವನ್ನು ರದ್ದುಪಡಿಸುವುದು ಉತ್ತಮ.

⇒ರವಿ ಬಿ.ಎನ್., ಹರಿಹರ 

‘ಭೀಮ ನಡೆ’ ಹೆಸರಿನಲ್ಲಿ ವಿಷ ಬಿತ್ತಬೇಡಿ

ಜನರಿಗೆ ಸಂವಿಧಾನದ ಆಶಯ ಮುಟ್ಟಿಸಲು ‘ಭೀಮ ನಡೆ’ ಕಾರ್ಯಕ್ರಮ ಹಮ್ಮಿ
ಕೊಳ್ಳುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ (ಪ್ರ.ವಾ., ನ. 24). ಅವರ ಈ ಆಲೋಚನೆ ಒಳ್ಳೆಯದು. ಆದರೆ, ಇಂತಹ ಆಲೋಚನೆ ಅವರಿಗೆ ವಿಳಂಬವಾಗಿ ಹೊಳೆದಿರುವುದೇ ಅಚ್ಚರಿ. ಭಾರತ ಜಾತ್ಯತೀತ ರಾಷ್ಟ್ರವೆಂದು ಸಂವಿಧಾನದಲ್ಲಿ ಹೇಳಲಾಗಿದೆ. ಆದರೆ, ಬಿಜೆಪಿ ಹಾಗೂ ಸಂಘ ಪರಿವಾರವು ದೇಶವನ್ನು ಹಿಂದೂರಾಷ್ಟ್ರ ಮಾಡಲು ಹೊರಟಿದೆ. ಸಂವಿಧಾನ
ತತ್ತ್ವಗಳಿಗೆ ವಿರುದ್ಧ ನಡೆದು, ಈಗ ಸಂವಿಧಾನವನ್ನು ಮನೆ ಮನೆಗೆ ಮುಟ್ಟಿಸುತ್ತೇವೆ ಎನ್ನುವುದು ದೊಡ್ಡ ನಾಟಕದಂತೆ ತೋರುತ್ತದೆ. ಸಂವಿಧಾನ ಮತ್ತು ಅಂಬೇಡ್ಕರ್
ಅವರ ಹೆಸರಲ್ಲಿ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತುವುದು ತಪ್ಪು. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೂ ಮಾರಕ. 

⇒ಉಷಾ, ಕಲಬುರಗಿ 

ಪ್ರಾಣ ಕಳೆದುಕೊಳ್ಳುವುದು ಪರಿಹಾರವಲ್ಲ

ಚಿತ್ರದುರ್ಗದಲ್ಲಿ ಸಂಚಾರ ಪೊಲೀಸರ ಕಿರುಕುಳದಿಂದ ಬೇಸತ್ತ ಆಟೊ ಚಾಲಕ
ರೊಬ್ಬರು, ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದು ಸಮಾಜದ ದುಃಸ್ಥಿತಿಗೆ ಹಿಡಿದ ಕನ್ನಡಿ. ಚಾಲಕನ ಕುಟುಂಬಕ್ಕೆ ಆದ ಅನ್ಯಾಯ ಸರಿಪಡಿಸಲು ಸಾಧ್ಯವಿಲ್ಲ. ಆದರೆ, ಅವಮಾನಕರ ಸನ್ನಿವೇಶಗಳ ನಡುವೆಯೂ ಬದುಕಿಯೇ ಉತ್ತರಿಸಬೇಕು.

ಪ್ರಾಣ ಕಳೆದುಕೊಳ್ಳುವುದೊಂದೇ ಪರಿಹಾರವಲ್ಲ. ‘ಮಾನವ ಜನ್ಮ ದೊಡ್ಡದು’ ಎಂದು ಪುರಂದರದಾಸರ ಮಾತನ್ನು ಮರೆಯಬಾರದು. ದೌರ್ಜನ್ಯ ಎದುರಿಸುವುದನ್ನು ಅಂಬೇಡ್ಕರ್ ಅವರಿಂದ ಕಲಿಯಬೇಕು; ಗಾಂಧೀಜಿಯವರ ಸತ್ಯಾಗ್ರಹದ ಮಾರ್ಗವನ್ನೂ ನೆನಪಿಸಿಕೊಳ್ಳಬೇಕು.

⇒ಕೆ. ನಿರ್ಮಲ ಮರಡಿಹಳ್ಳಿ, ಚಿತ್ರದುರ್ಗ

ಸಂವಿಧಾನ ಅನುಸರಿಸುವಲ್ಲಿ ವಿಫಲ

ಭಾರತವು ಸ್ವತಂತ್ರಗೊಂಡ ನಂತರ ಸರ್ವಧರ್ಮಗಳ ಶ್ರೇಷ್ಠ ಧರ್ಮಗ್ರಂಥ
ಗಳನ್ನು ಬದಿಗೊತ್ತಿ, ಸಂವಿಧಾನವೇ ಪವಿತ್ರವೆಂದು ಅರ್ಪಿಸಿಕೊಳ್ಳಲಾಗಿದೆ. ಆದರೆ, ಸಂವಿಧಾನ ಜಾರಿಯಾಗಿ ಮುಕ್ಕಾಲು ಶತಕ ಕಳೆದರೂ ಅದನ್ನು ಅರ್ಥೈಸಿಕೊಳ್ಳುವುದರಲ್ಲಿ ಜನಸಾಮಾನ್ಯರು ಹಾಗೂ ರಾಜಕಾರಣಿಗಳು ಸೋತಿರುವುದು ದುರ್ದೈವ. ಇದಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಗದ್ದುಗೆ ಕುರಿತಂತೆ ತಲೆದೋರಿರುವ ಗೊಂದಲದ ವಾತಾವರಣವೇ ಸಾಕ್ಷಿ. ಮುಖ್ಯಮಂತ್ರಿ ಹುದ್ದೆಗೆ ನೇಮಕಗೊಳ್ಳಲು ಹೈಕಮಾಂಡ್‌ನತ್ತ ಬೆಟ್ಟು ತೋರಿಸುತ್ತಿರುವುದು ಸಂವಿಧಾನಕ್ಕೆ ಮಾರಕ. ಮುಖ್ಯಮಂತ್ರಿ ಹುದ್ದೆಯ ಆಯ್ಕೆಯಲ್ಲಿ ಶಾಸಕರ ಸಂಖ್ಯೆ ಅಂತಿಮವೇ ಹೊರತು, ಹೈಕಮಾಂಡ್ ನಿರ್ಣಯ ಅಲ್ಲ. ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ‘ಸಂವಿಧಾನ ರಕ್ಷಿಸಿ’ ಎಂದು ವೇದಿಕೆಯಲ್ಲಿ ರಾಜಕೀಯ ಧುರೀಣರು ಘೋಷಿಸಿದರೆ ಸಾಲದು; ಅದರೊಳಗಿನ ಅಂಶಗಳನ್ನು ಅರ್ಥೈಸಿಕೊಳ್ಳಬೇಕು.

 ಹೆಂದೊರೆ ಸಂಜು, ಶಿರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.