ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 25 ನವೆಂಬರ್ 2025, 19:13 IST
Last Updated 25 ನವೆಂಬರ್ 2025, 19:13 IST
   

ಕೌನ್ಸೆಲಿಂಗ್‌ ವೈಜ್ಞಾನಿಕವಾಗಿ ನಡೆಯಲಿ

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಸೇವೆಗೆ ಪ್ರಸ್ತುತ ನಡೆಯು
ತ್ತಿರುವ ಕೌನ್ಸೆಲಿಂಗ್‌ನಲ್ಲಿ, ಅಂಗವಿಕಲ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗಿದೆ. ಶೈಕ್ಷಣಿಕ ಹಾಗೂ ಸೇವಾ ಜ್ಯೇಷ್ಠತೆ ಪರಿಗಣಿಸದೆ, ಕೇವಲ ಅಂಗವೈಕಲ್ಯದ ಅಂಶ
ವನ್ನಷ್ಟೆ ಗಣನೆಗೆ ತೆಗೆದುಕೊಳ್ಳಲಾಗಿದೆ. ಅಂಗವಿಕಲರಿಗೆ ಆದ್ಯತೆ ನೀಡುವುದು ತಪ್ಪಲ್ಲ. ಹಾಗೆಂದು ಶೈಕ್ಷಣಿಕ ಅರ್ಹತೆ ಹೊಂದಿರುವ ಇತರ ಅಭ್ಯರ್ಥಿಗಳನ್ನು ಸಂಪೂರ್ಣವಾಗಿ ಕಡೆಗಣಿಸುವುದು ಸರಿಯಲ್ಲ. ಕಾಲೇಜು ಶಿಕ್ಷಣ ಇಲಾಖೆಯು, ಈ ಹಿಂದೆ ಅಂಗವಿಕಲ ಅಭ್ಯರ್ಥಿಗಳಿಗೆ ನೀಡಿದ್ದ ಮೀಸಲು ಅಂಕಗಳನ್ನಷ್ಟೆ ಪರಿಗಣಿಸಿ ವೈಜ್ಞಾನಿಕ ರೀತಿಯಲ್ಲಿ ಕೌನ್ಸೆಲಿಂಗ್ ನಡೆಸುವುದು ಉತ್ತಮ.

⇒ಸಂಪತ್ ಬೆಟ್ಟಗೆರೆ, ಮೂಡಿಗೆರೆ

ADVERTISEMENT

ಎಂದಿಗೂ ಮರೆಯದ ‘ವೀರು’ ನೆನಪು

ನಟ ಧರ್ಮೇಂದ್ರ ಅವರು, ಬಾಲಿವುಡ್‌ನಲ್ಲಿ ‘ಹೀ ಮ್ಯಾನ್’ ಎಂದೇ ಪ್ರಸಿದ್ಧರು. ಎಪ್ಪತ್ತು– ಎಂಬತ್ತರ ದಶಕದಲ್ಲಿ ಅವರ ಮನೋಜ್ಞ ಅಭಿನಯ ಯುವಜನರ ಮನಸೂರೆಗೊಂಡಿತ್ತು. ‘ಶೋಲೆ’ ಚಿತ್ರದಲ್ಲಿನ ಅವರ ‘ವೀರು’ ಪಾತ್ರ ಮತ್ತು ಕರ್ನಾಟಕದೊಂದಿಗಿನ ಅವರ ನಂಟು ಚಿರಕಾಲ ನೆನಪಿನಲ್ಲಿ ಉಳಿಯಲಿದೆ. ಅವರು ಭಾರತೀಯ ಚಿತ್ರರಂಗದ ಅಪ್ರತಿಮ ವ್ಯಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. 

⇒ಪರಮೇಶ್ವರ ಜೆ.ಎಂ., ಸಂಡೂರು 

ಗೃಹಲಕ್ಷ್ಮೀ: ಅನಿಯಮಿತ ಹಣ ಪಾವತಿ

ಗೃಹಲಕ್ಷ್ಮೀ ಯೋಜನೆಯು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನೆರವಾಗಿದೆ. ಆದರೆ, ಯೋಜನೆ ಜಾರಿಗೊಂಡ ದಿನದಿಂದಲೂ ಇಲ್ಲಿಯವರೆಗೆ ಪ್ರತಿ ತಿಂಗಳು ನಿಯಮಿತವಾಗಿ ಹಣ ಪಾವತಿಯಾಗುತ್ತಿಲ್ಲ. ಒಂದು ತಿಂಗಳ ಹಣ ಪಾವತಿ ಮಾಡಿ
ದರೆ, ಮುಂದಿನ 3-4 ತಿಂಗಳ ಹಣ ಪಾವತಿ ಮಾಡುವುದಿಲ್ಲ. ಪಾವತಿ ವಿಳಂಬಕ್ಕೆ ತಾಂತ್ರಿಕ ಸಮಸ್ಯೆಯ ನೆಪ ಮುಂದಿಡುವುದು ಸಾಮಾನ್ಯವಾಗಿದೆ. ಇನ್ನೂ ಕೆಲವು ಮಹಿಳೆಯರ ಬ್ಯಾಂಕ್‌ ಖಾತೆಗೆ ಒಂದೇ ದಿನ ಎರಡೆರಡು ಕಂತು ಪಾವತಿಯಾದರೆ, ಕೆಲವರಿಗೆ ಬಾಕಿ ತಿಂಗಳುಗಳ ಒಂದೂ ಕಂತು ಜಮೆ ಆಗಿರುವುದಿಲ್ಲ. ಸರ್ಕಾರ
ಕೊಟ್ಟ ಮಾತಿನಂತೆ ಪ್ರತಿ ತಿಂಗಳ ನಿರ್ದಿಷ್ಟ ದಿನಾಂಕದಂದು ಎಲ್ಲಾ ಫಲಾನುಭವಿ
ಗಳ ಖಾತೆಗೆ ಏಕಕಾಲಕ್ಕೆ ಹಣ ಜಮೆ ಮಾಡಬೇಕಿದೆ.

⇒ಸಂತೋಷ ಜಾಬೀನ್ ಸುಲೇಪೇಟ, ಕಲಬುರಗಿ

ನಕಲಿ ಪ್ರಮಾಣಪ‍ತ್ರ: ಅರ್ಹರಿಗೆ ತೊಂದರೆ

ರಾಜ್ಯದಲ್ಲಿ ನಕಲಿ ಪದವಿ ಪ್ರಮಾಣಪತ್ರಗಳ ಹಾವಳಿಯಿಂದ ​ಉನ್ನತ ಶಿಕ್ಷಣದ ಪಾವಿತ್ರ್ಯ ಮಲಿನಗೊಂಡಿದೆ. ಕಷ್ಟಪಟ್ಟು ಅಧ್ಯಯನ ಮಾಡಿ, ಪ್ರತಿಭೆಯಿಂದ ಪದವಿ ಪಡೆದವರಿಗೆ ನಕಲಿ ಜಾಲದ ಹಾವಳಿಯು ಕಂಟಕಪ್ರಾಯವಾಗಿದೆ. ಅರ್ಹತೆ ಮತ್ತು
ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ. ಎಷ್ಟೋ ವಿದ್ಯಾರ್ಥಿಗಳ ಕನಸುಗಳು ಕಮರಿವೆ. ನಕಲಿ ಪದವಿ ಪ್ರಮಾಣಪತ್ರಗಳಿಗೆ ಕಡಿವಾಣ ಹಾಕುವುದಾಗಿ ಸರ್ಕಾರ ಹೇಳಿದೆ. ಈ ಭರವಸೆಯು ಕಾಗದದಲ್ಲಷ್ಟೆ ಉಳಿಯಬಾರದು. ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟ ಆಡುತ್ತಿರುವ ದಂಧೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ.

⇒ಲಾರೆನ್ಸ್ ಡಿಸೋಜಾ, ರಾಯಚೂರು

ಶಾಲೆಗಳಲ್ಲಿ ಅನುರಣಿಸಲಿ ‘ನೀರಿನ ಗಂಟೆ’

ರಾಜ್ಯದಲ್ಲಿರುವ ಎಲ್‌ಕೆಜಿ, ಯುಕೆಜಿ ಒಳಗೊಂಡಂತೆ ಎಲ್ಲಾ ಸರ್ಕಾರಿ, ಅನುದಾನಿತ
ಮತ್ತು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ದಿನಕ್ಕೆ ಮೂರು ಬಾರಿ ನೀರು ಕುಡಿ
ಯುವಂತೆ ನೆನಪಿಸಲು ‘ನೀರಿನ ಗಂಟೆ’ ಬಾರಿಸುವಂತಹ ಕೆಲಸವು ಕಡ್ಡಾಯ
ಆಗಬೇಕಿದೆ. ಶಾಲೆಯ ಮಕ್ಕಳಿಗೆ ಆಗಾಗ ನೀರು ಕುಡಿಯಬೇಕೆಂಬ ಅರಿವು ಅಷ್ಟಾಗಿ ಇಲ್ಲದೇ ಇರುವುದರಿಂದ, ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಶಾಲೆಗಳಲ್ಲಿ ನೀರು ಕುಡಿಯುವಂತೆ ನೆನಪಿಸಲು ಗಂಟೆ ಬಾರಿಸಬೇಕಾಗಿದೆ. ಬೆರಳೆಣಿಕೆಯಷ್ಟು ಶಾಲೆಗಳಲ್ಲಿ ಈ ಪದ್ಧತಿ ಈಗಾಗಲೇ ಇದೆ. ರಾಜ್ಯ ಸರ್ಕಾರ ಎಲ್ಲಾ ಶಾಲೆಗಳಲ್ಲೂ ಇಂತಹ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಬೇಕಿದೆ.

⇒ಮಹೇಶ್ ಕೂದುವಳ್ಳಿ, ಚಿಕ್ಕಮಗಳೂರು

ಅಂಗವಿಕಲ ಕ್ರಿಕೆಟಿಗರನ್ನು ಪ್ರೋತ್ಸಾಹಿಸಿ

ಅಂಧರ ಮಹಿಳಾ ವಿಶ್ವಕಪ್ ಗೆದ್ದಿರುವ ಭಾರತ ತಂಡಕ್ಕೆ ಹೆಚ್ಚು ನಗದು ಪುರಸ್ಕಾರ ನೀಡುವ ಮೂಲಕ ಅವರಿಗೆ ಆತ್ಮವಿಶ್ವಾಸ ತುಂಬಬೇಕಿದೆ. ಅಂಗವೈಕಲ್ಯ ಹೊಂದದೆ ಇರುವವರ ಸಾಧನೆಗಿಂತ ಇವರ ಸಾಧನೆಯನ್ನು ವಿಶಿಷ್ಟವೆಂದು ಪರಿಗಣಿಸಬೇಕು. ಆಗಷ್ಟೇ ಅಂಗವಿಕಲರನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪ್ರೇರೇಪಿಸಿದಂತಾಗುತ್ತದೆ.

⇒ಬಸವರಾಜ ಕರೆಕಲ್, ಮಾವಿನ ಇಟಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.