ADVERTISEMENT

ಮೀಸಲಾತಿ: ಸಂಕುಚಿತ ಮನೋಭಾವ ಬೇಡ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 19:44 IST
Last Updated 11 ಮಾರ್ಚ್ 2020, 19:44 IST

ಸಂವಿಧಾನ ಕುರಿತು ವಿಧಾನಸಭೆಯಲ್ಲಿ ಇತ್ತೀಚೆಗೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ, ‘ಸಬಲರಾಗಿರುವ ಪರಿಶಿಷ್ಟರು ಮೀಸಲಾತಿ ತ್ಯಾಗ ಮಾಡಲಿ’ ಎಂದು ಹೇಳಿದ್ದಾರೆ (ಪ್ರ.ವಾ., ಮಾರ್ಚ್‌ 5). ದಲಿತರ ಇಂದಿನ ನೈಜ ಸ್ಥಿತಿಗತಿಯನ್ನು ಅರಿಯದವರಷ್ಟೇ ಇಂತಹ ಮಾತುಗಳನ್ನು ಆಡಲು ಸಾಧ್ಯ. ಮೀಸಲಾತಿ ಎಂಬುದು ಬಡತನ ಹಾಗೂ ದಾರಿದ್ರ್ಯವನ್ನು ನಿರ್ಮೂಲನೆ ಮಾಡಲು ಇರುವ ಸರ್ಕಾರದ ಯಾವುದೋ ಯೋಜನೆ ಅಥವಾ ಕಾರ್ಯಕ್ರಮ ಎಂಬ ಸಂಕುಚಿತ ಮನೋಭಾವವನ್ನು ಅವರು ಹೊಂದಿರುವಂತಿದೆ.

ಸಾವಿರಾರು ವರ್ಷಗಳಿಂದ ಸಮಾಜದ ಮುಖ್ಯವಾಹಿನಿಯಿಂದ ದೂರತಳ್ಳಲಾಗಿರುವ ಈ ದೇಶದ ಮೂಲ ನಿವಾಸಿಗಳು ಹಾಗೂ ಬಹುಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ನಮ್ಮ ಸಂವಿಧಾನವು ನೀಡುತ್ತಿರುವ ಪ್ರಾತಿನಿಧ್ಯವೇ ಮೀಸಲಾತಿ. ಹೀಗಾಗಿ, ಇದೊಂದು ಬಡತನ ನಿರ್ಮೂಲನಾ ಕಾರ್ಯಕ್ರಮ ಅಲ್ಲವೇ ಅಲ್ಲ ಎಂಬುದನ್ನು ಶಾಸಕರು ಅರ್ಥ ಮಾಡಿಕೊಳ್ಳಬೇಕು.

ಸಿರಿವಂತ ದಲಿತರು ತಮ್ಮ ಸಮುದಾಯದ ಕಟ್ಟಕಡೆಯ ವ್ಯಕ್ತಿಗೆ ಆ ಸೌಲಭ್ಯವನ್ನು ಬಿಟ್ಟುಕೊಡಬೇಕು ಎಂದು ಶಾಸಕರು ಸಲಹೆ ನೀಡಿದ್ದಾರೆ. ಒಂದೇ ಕ್ಷೇತ್ರದಿಂದ ನಾಲ್ಕಾರು ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಅಧಿಕಾರ ಅನುಭವಿಸಿ ಆರ್ಥಿಕವಾಗಿ ಸದೃಢರಾಗಿರುವ, ಸಾಮಾಜಿಕವಾಗಿಯೂ ಸಬಲರಾಗಿರುವ ರಾಮಸ್ವಾಮಿ ಅವರು ತಮ್ಮ ಶಾಸಕ ಸ್ಥಾನವನ್ನು ತ್ಯಾಗ ಮಾಡಿ, ತಮ್ಮದೇ ಸಮುದಾಯದ ಕಟ್ಟಕಡೆಯ ವ್ಯಕ್ತಿಯು ವಿಧಾನಸಭೆಗೆ ಆಯ್ಕೆಯಾಗುವ ಅವಕಾಶ ಕಲ್ಪಿಸಿಕೊಡುವರೇ?

ADVERTISEMENT

–ನಜೀರ್ ಅಹಮದ್, ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.