ADVERTISEMENT

ಧಾವಂತದ ಕೂಸು

ಪ್ರೀತಮ್‌ ಪಾಯ್ಸ್‌ ಬೆಂಗಳೂರು
Published 24 ಅಕ್ಟೋಬರ್ 2018, 20:00 IST
Last Updated 24 ಅಕ್ಟೋಬರ್ 2018, 20:00 IST

ಈಗ್ಗೆ ಕುಂದಾಪುರದಲ್ಲಿ ಬಸ್ಸಿಗಾಗಿ ಕಾಯುತ್ತ ನಿಂತಿದ್ದೆ. ಕಾದದ್ದು 10 ನಿಮಿಷವಿರಬೇಕು. ಅಷ್ಟರಲ್ಲೇ 10 ಬಾರಿ ಫೋನ್ ಗಮನಿಸಿದೆ, ಗೋಣು ಹೊರಳಿಸಿ ಬಸ್ಸಿನ ದಾರಿ ನೋಡಿದೆ, ಸೆಕೆಗೆ ಗೊಣಗಿದೆ, ಸಹ ನಿರೀಕ್ಷಕರ ಬಳಿ ‘ಬಸ್ಸು ಲೇಟ್ ಆಗ್ತದೋ’ ಎಂದು ಕೇಳಿದೆ. ಬಸ್‌ ಬಂತು. ಆದರೇನು? ಅದು ನಿಲ್ದಾಣದಿಂದ ಹೊರಡಲು ಮತ್ತೂ ಹತ್ತು ನಿಮಿಷವಾಯಿತು. ಪುನಃ ಅದೇ ಚಾಳಿ. ಫೋನ್ ಹಿಡಿದು ಗೆಳೆಯರಿಗೆ ಬಸ್‌, ಸೆಕೆ ಎಂದೆಲ್ಲಾ ಮೆಸೇಜ್ ಮಾಡಿದೆ. ಬಸ್ ಹೊರಟಿತು. ಅದು ಹೋಗುವ ವೇಗಕ್ಕೆ ಹೊಟ್ಟೆಯಲ್ಲಿನ ಸಿಟ್ಟು ನೆತ್ತಿಗೇರಿತ್ತು. ‘ಅದೇನು ಬಸ್ ಓಡಿಸ್ತೀರೋ ಮಾರಾಯ, ನಡೆದೇ ಹೋಗಿ ಮನೆ ಸೇರಬಹುದಿತ್ತು’ ಎಂದು ಕಂಡಕ್ಟರ್‌ ಬಳಿ ಸಿಡಿಮಿಡಿ.

ಈ ಪ್ರಯಾಣವನ್ನು 1995ರಿಂದಲೂ ಮಾಡುತ್ತಿದ್ದೇನೆ. ಆ ಹೊತ್ತಿಗೆ ಹೋಲಿಸಿದರೆ ಈಗ ಬಸ್ಸುಗಳ ಸಂಖ್ಯೆ ಹೆಚ್ಚು, ರಸ್ತೆ ಅಗಲವಾಗಿದೆ, ನಯವಾಗಿದೆ. ಕಾಯಲು ಕುಳಿತ ಬಸ್ ನಿಲ್ದಾಣ ಸ್ವಚ್ಛವಾಗಿದೆ. ಮನ ತಣಿಸಲು ಕೈಯಲ್ಲಿ ಫೋನ್ ಇದೆ. ಬಸ್ಸಿನ ಸೀಟುಗಳು ಆರಾಮವಾಗಿವೆ. ಆದರೂ ಆಗಿನಂತೆ ಸಂಯಮವಿಲ್ಲ, ಧಾವಂತ ಹೆಚ್ಚಿದೆ. ನಿರಾಳವಾಗಿ ಕುಳಿತರೆ ಕನಸು ಆವರಿಸುತ್ತಿತ್ತು. ಈಗ ಅರೆಕ್ಷಣ ಮೌನವಾಗಿರಲು ಬಿಡುತ್ತಿಲ್ಲ ಮನಸ್ಸು. ಇದಕ್ಕೆ ಕಾರಣವೇನು? ಈ ವೇಗ–ಆವೇಗಕ್ಕೆ ಹೊಂದಿಕೊಂಡ ನಮಗೆ ಸಾವಧಾನ ಮರೆಯಾಗಿ, ತುಡಿತ ಹೆಚ್ಚಾಗುತ್ತಿದೆ.

ಇದೇ ಮನಸ್ಥಿತಿ, ಈಗಿನ #metooಗೆ ಸಹ ತಗುಲಿದೆ. ನಮ್ಮ ನ್ಯಾಯ ವ್ಯವಸ್ಥೆ ಈಗಿನ ಸಮಾಜಕ್ಕೆ, ಮತ್ತದರ ನಿರೀಕ್ಷೆಗಳಿಗೆ ಎಷ್ಟು ಹತ್ತಿರವಾಗಿದೆ? ನ್ಯಾಯಮೂರ್ತಿಗಳಿಗೂ ತಟ್ಟುತ್ತಿರುವ ವಿವಾದಗಳಿಂದ, ಭ್ರಷ್ಟಾಚಾರ ಆರೋಪಗಳಿಂದ, ವಿಳಂಬವೇ ಮೈಗೊತ್ತಿರುವುದರಿಂದ, ದುಬಾರಿಯಾಗುತ್ತಿರುವ ವಕೀಲಿಕೆಯಿಂದ, ರಾಜಕೀಯ ಹಸ್ತಕ್ಷೇಪಗಳಿಂದ, ಆಂತರಿಕ ಕಚ್ಚಾಟಗಳಿಂದ... ಹೀಗೆ ಹತ್ತು ಹಲವು ಸಮಸ್ಯೆಗಳೊಂದಿಗೆ ನಲುಗುತ್ತಿರುವ ನಮ್ಮ ನ್ಯಾಯ ವ್ಯವಸ್ಥೆಯು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ.

ADVERTISEMENT

ಇಂತಹ ಪರಿಸ್ಥಿತಿಯಲ್ಲಿ ಮೀಟೂನಂಥ ಹಾದಿಗಳು ಸುಲಭವೂ, ಅನುಕೂಲಕರವೂ ಆಗಿ ಪರಿಣಮಿಸುತ್ತವೆ. ಈ ಆಂದೋಲನಕ್ಕೆ ಧುಮುಕಿದವರನ್ನು ‘ಪೊಲೀಸ್ ಕಂಪ್ಲೆಂಟ್ ಕೊಡಬೇಕಿತ್ತು, ನ್ಯಾಯಾಂಗದ ಬಾಗಿಲು ಬಡಿಯಬಹುದಿತ್ತು’ ಎಂದು ಕೇಳುವವರು ಒಮ್ಮೆ ನಮ್ಮ ಪೊಲೀಸ್ ಹಾಗೂ ನ್ಯಾಯದಾನ ವ್ಯವಸ್ಥೆಗಳ ಕ್ಷಮತೆಯನ್ನು ಅವಲೋಕಿಸಬೇಕು. ಅಂತೆಯೇ ಮೀಟೂನಿಂದ ನ್ಯಾಯ ನಿರೀಕ್ಷೆಯಲ್ಲಿರುವವರು, ಸಾಂವಿಧಾನಿಕ ಚೌಕಟ್ಟಿನ ಹೊರತಾಗಿ ದೊರೆಯುವ ನ್ಯಾಯ ಔಚಿತ್ಯಪೂರ್ಣದ್ದಲ್ಲ ಎಂಬುದನ್ನೂ ಅರಿಯಬೇಕು. ನಮ್ಮ ಧಾವಂತಕ್ಕೆ, ನಿರೀಕ್ಷೆಗೆ, ಕಾಲಕ್ಕೆ ತಕ್ಕುದಾದ ಚುರುಕು ವ್ಯವಸ್ಥೆಯನ್ನು ರೂಪಿಸಿದರಷ್ಟೇ ಸರ್ವರಿಗೂ ನ್ಯಾಯ ದೊರಕೀತು. ಇಲ್ಲದಿದ್ದರೆ ವಿಮಾನದ ಎಂಜಿನ್‌ನಂತಿರುವ ನಮ್ಮ ಯುವ ಸಮಾಜಕ್ಕೆ, ಎತ್ತಿನಗಾಡಿಯಂತಿರುವ ವ್ಯವಸ್ಥೆ ಎಂದೂ ಸಾಟಿಯಾಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.