ADVERTISEMENT

ನಿಯಮ ತಿದ್ದುಪಡಿಯಾಗಲಿ, ಜೋಲಿ ತಪ್ಪಲಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 19:31 IST
Last Updated 13 ಜೂನ್ 2021, 19:31 IST

ಕಾರವಾರ ತಾಲ್ಲೂಕಿನ ಮಚ್ಚಳ್ಳಿಗೆ ರಸ್ತೆ ಸಂಪರ್ಕ ಇಲ್ಲದ್ದರಿಂದ ಮಹಿಳೆಯೊಬ್ಬರನ್ನು ಚಿಕಿತ್ಸೆಗಾಗಿ ಏಳು ಕಿಲೊಮೀಟರ್ ದೂರ ನಾಲ್ಕು ಮಂದಿ ಹೊತ್ತು ಸಾಗಿಸಿದ ಚಿತ್ರ (ಪ್ರ.ವಾ., ಜೂನ್‌ 14) ಮನಕಲಕುವಂತಿದೆ. ಉತ್ತರ ಕನ್ನಡ ಜಿಲ್ಲೆ ನೈಸರ್ಗಿಕವಾಗಿ ಸಂಪದ್ಭರಿತವಾಗಿದ್ದರೂ ಜನರ ಜೀವನ ಮಾತ್ರ ಸುಂದರವಾಗಿಲ್ಲ. ಹೊಲ, ಗದ್ದೆ, ತೋಟ ಇರುವ ಸ್ಥಳದಲ್ಲಿಯೇ ಮನೆ ಕಟ್ಟಿ ವಾಸಿಸುವ ಜನರು ಸದಾ ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಜೋಲಿ, ಸಂಕ, ಹಳ್ಳ, ಹೊಳೆ, ಗುಡ್ಡ, ಕೊಂಪೆ, ಕಾಲುದಾರಿ ಜನರಿಗೆ ಚಿರಪರಿಚಿತ ಪದಗಳು. ಮಳೆಗಾಲದಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆ ಸರ್ವೇ ಸಾಮಾನ್ಯ.

ತುರ್ತು ಚಿಕಿತ್ಸೆಗಾಗಿ ಶಿರಸಿ- ಯಲ್ಲಾಪುರದವರು ಹುಬ್ಬಳ್ಳಿ– ಧಾರವಾಡ ಕಡೆಗೂ, ಕಾರವಾರ- ಅಂಕೋಲದವರು ಗೋವಾ ಕಡೆಗೂ, ಹೊನ್ನಾವರ- ಭಟ್ಕಳ ಭಾಗದವರು ಮಣಿಪಾಲದ ಕಡೆಗೂ, ಸಿದ್ದಾಪುರದವರು ಶಿವಮೊಗ್ಗ ಕಡೆಗೂ ಓಡುವ ಪರಿಸ್ಥಿತಿ ಇರುವ ಚತುರ್ಮುಖ ಸಂಪರ್ಕಿತರ ಜಿಲ್ಲೆ ನಮ್ಮದು. ಕರಾವಳಿ, ಮಲೆನಾಡು, ದಟ್ಟ ಕಾಡು, ಬಯಲುಸೀಮೆ ಹೀಗೆ ವಿವಿಧ ಭೌಗೋಳಿಕ ಹಿನ್ನೆಲೆಯಲ್ಲಿ ವಾಸಿಸುವ ಜನರಿಗೆ ಹಲವೆಡೆ ಇನ್ನೂ ಕನಿಷ್ಠ ನಾಗರಿಕ ಸೌಲಭ್ಯ ನೀಡಲು ಸಾಧ್ಯವಾಗದೇ ಜಿಲ್ಲಾಡಳಿತ ಕೈಕಟ್ಟಿ ಕುಳಿತಿದೆ. ಈ ಸಮಸ್ಯೆಗಳ ಪರಿಹಾರಕ್ಕೆ ತೊಡಕಾಗಿರುವುದು ಅರಣ್ಯ ಕಾಯ್ದೆ ಮತ್ತು ಪ್ರಜಾಪ್ರತಿನಿಧಿಗಳ ನಿರಾಸಕ್ತಿ. ಚುನಾವಣಾ ಸಮಯದಲ್ಲಿ ಮತದಾರರ ಮೇಲಿರುವ ಅಕ್ಕರೆ, ಚುನಾವಣೆಯ ನಂತರವೂ ಇದ್ದರೆ ಹೀಗಾಗುವುದಿಲ್ಲ. ಅರಣ್ಯ ರಕ್ಷಣೆಯ ನೆಪದಲ್ಲಿ ನಾಗರಿಕ ಸೌಲಭ್ಯ ನೀಡಲು ಅಡ್ಡಗಾಲು ಹಾಕುವ ನಿಯಮಗಳಿಗೆ ತಿದ್ದುಪಡಿ ಮಾಡುವ ಮೂಲಕ ಜನರಿಗೆ ನಾಗರಿಕ ಸೌಲಭ್ಯ ನೀಡಲಿ.

-ಗಣಪತಿ ನಾಯ್ಕ್,ಕಾನಗೋಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.