ADVERTISEMENT

ಯಾರ ಇತಿಹಾಸ ಎಂದು ಕೇಳಬೇಕಾಗುತ್ತದೆ

​ಪ್ರಜಾವಾಣಿ ವಾರ್ತೆ
Published 30 ಮೇ 2022, 19:31 IST
Last Updated 30 ಮೇ 2022, 19:31 IST

‘ನಮ್ಮ ದೇಶದ ಬಹುಸಂಖ್ಯಾತ ಜನಸಮುದಾಯದಲ್ಲಿ ಆಗಿಂದಾಗ್ಗೆ ಜಾತಿ ಜಾತಿಗಳ ನಡುವೆ ಸಣ್ಣಪುಟ್ಟ ಜಗಳಗಳು ನಡೆಯುತ್ತ ಬಂದಿದ್ದರೂ ಒಟ್ಟಾರೆ ಎಲ್ಲರೂ ಎಲ್ಲರ ಜತೆ ಸೌಹಾರ್ದಯುತವಾಗಿ ಬದುಕುತ್ತ ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ’ ಎಂಬ ಡಾ. ಆರ್.ಲಕ್ಷ್ಮೀನಾರಾಯಣ ಅವರ ನುಡಿಗಳನ್ನು (ಸಂಗತ, ಮೇ 30) ಓದಿ ಅಚ್ಚರಿಯ ಜತೆಗೆ ಆಘಾತವಾಯಿತು. ಇಂಡಿಯಾ ದೇಶದ ಇತಿಹಾಸದ ಉದ್ದಕ್ಕೂ ಇಂದಿನ ತನಕವೂ ದುಡಿಯುವ ವರ್ಗದ ಕೋಟಿಗಟ್ಟಲೆ ಜನರು ಜಾತಿಯೊಂದರ ಕಾರಣದಿಂದಲೇ ಅನ್ನ, ಬಟ್ಟೆ, ವಸತಿ, ವಿದ್ಯೆ ಮತ್ತು ಆರೋಗ್ಯದಿಂದ ವಂಚಿತರಾಗಿ ಹಸಿವು, ಬಡತನ ಮತ್ತು ಜಾತಿನಿಂದನೆಯ ಅಪಮಾನದಲ್ಲಿ ಬೇಯುತ್ತಿದ್ದಾರೆ. ‘ಸೌಹಾರ್ದಯುತ ವಾಗಿ ಬದುಕುವುದು ಎಂದರೆ ದುರ್ಬಲ ಜಾತಿಯ ಜನರು ತಮ್ಮ ದೀನಸ್ಥಿತಿಯನ್ನು ಒಪ್ಪಿಕೊಂಡು, ತಮ್ಮ ಜಾತಿ ಸಮುದಾಯಗಳಿಗೆ ಹಾಕಿರುವ ವಿಧಿನಿಷೇಧಗಳನ್ನು ಮೀರದೆ, ಮೌನದಿಂದಲೇ ಎಲ್ಲ ಬಗೆಯ ಸಂಕಟಗಳನ್ನೂ ಅನುಭವಿಸುವುದು’ ಎಂದು ಅರ್ಥ.

ಜಾತಿಯ ಕಟ್ಟುಪಾಡುಗಳ ಎಲ್ಲೆಯನ್ನು ಮೀರಿದರೆಂಬ ಕಾರಣಕ್ಕಾಗಿ ದೇಶದ ಉದ್ದಗಲದಲ್ಲಿ ಪ್ರಭಾವಿ ಜಾತಿಯವರು ದುರ್ಬಲ ಜಾತಿಯವರ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆ, ಸುಲಿಗೆಯನ್ನು ಮಾಡುತ್ತಿರುವ ವರದಿಗಳು ನಿರಂತರವಾಗಿ ವರದಿಯಾಗುತ್ತಲೇ ಇವೆ. ಕಣ್ಣ ಮುಂದೆ ಇಷ್ಟೆಲ್ಲಾ ನಡೆಯುತ್ತಿರುವುದನ್ನು ನೋಡುತ್ತ, ಕಿವಿಯಿಂದ ಕೇಳುತ್ತ, ಮತ್ತೆ ಮತ್ತೆ ‘ಭಾರತೀಯರಾದ ನಾವು ಸೌಹಾರ್ದಯುತವಾಗಿ ಬದುಕುತ್ತಿದ್ದೇವೆ’ ಎಂದರೆ ಅದನ್ನು ಯಾರ ಇತಿಹಾಸ ಎಂದು ಕೇಳಬೇಕಾಗುತ್ತದೆ.

- ಸಿ.ಪಿ. ನಾಗರಾಜ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.