ವಾಚಕರ ವಾಣಿ
ಶುಭಾಶಯಕ್ಕೆ ಧರ್ಮವಿಲ್ಲ, ಜಾತಿಯಿಲ್ಲ...
ಪರಿಚಯದ ವ್ಯಕ್ತಿಯೊಬ್ಬರಿಗೆ ‘ಹೊಸ ವರ್ಷದ ಶುಭಾಶಯಗಳು’ ಎಂದು ಹೇಳಿದೆ. ‘ನಮಗೆ ಯಾವ ಹೊಸ ವರ್ಷ? ನಮಗೆ ಯುಗಾದಿಯೇ ಹೊಸ ವರ್ಷ. ನೀವು ಯಾವಾಗ ಕ್ರಿಶ್ಚಿಯನ್ ಆದಿರಿ?’ ಎಂಬ ಅವರ ಕೊಂಕು ಪ್ರತಿಕ್ರಿಯೆ ನನ್ನನ್ನು ಅಚ್ಚರಿಗೊಳಿಸಿತು. ಶುಭಾಶಯ ಹೇಳುವ ನನ್ನ ಮಾತಿನಲ್ಲಿ ಧರ್ಮವಿರಲಿಲ್ಲ, ಆಚರಣೆಯ
ಹೋಲಿಕೆಯಿರಲಿಲ್ಲ. ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನಿಗೆ ಕೋರಬಹುದಾದ ಒಳಿತಿನ ಹಾರೈಕೆಯನ್ನು ಧರ್ಮದ ಕಣ್ಣಿನಿಂದ ನೋಡಿ ತಳ್ಳಿಹಾಕುವ ಮನೋಭಾವ ನೋವು ತಂದಿತು.
‘ಇದು ನಮ್ಮದಲ್ಲ, ನಮ್ಮದು ಬೇರೆ, ನಾವು ಇದನ್ನು ಆಚರಿಸ ಬಾರದು’ ಎಂಬ ಸಂಕುಚಿತ ಚಿಂತನೆ ಸಾಮಾಜಿಕ ಚಾಳಿಯಾಗಿ ಬೆಳೆಯುತ್ತಿರುವುದು ವಿಷಾದಕರ. ಶುಭಾಶಯಕ್ಕೆ ಧರ್ಮವಿಲ್ಲ, ಜಾತಿಯಿಲ್ಲ, ಭಾಷೆಯಿಲ್ಲ. ಅದು ಮಾನವೀಯತೆಯ ಅಭಿವ್ಯಕ್ತಿ. ಅದನ್ನೂ ಅಳೆಯುವ, ತೂಕ ಹಾಕುವ, ತಳ್ಳಿಹಾಕುವ ಮನಸ್ಸು ಸಮಾಜ ವನ್ನು ಇನ್ನಷ್ಟು ಕಿರಿದಾಗಿಸುವುದಷ್ಟೇ ಹೊರತು, ಸಂಸ್ಕೃತಿಯನ್ನು ಉಳಿಸುವುದಿಲ್ಲ.
⇒ಎಂ.ಎಸ್. ಅಲ್ಲಮಪ್ರಭು, ಬೆಂಗಳೂರು
‘ಕೆಡಿ’ಗೆ ಹೆಣ್ಣಿನ ಘನತೆಯ ಚಿಂತೆಯಿಲ್ಲವೆ?
ಇನ್ನೂ ತೆರೆಕಾಣಬೇಕಿರುವ ‘ಕೆಡಿ’ ಸಿನಿಮಾದ ‘ಅಣ್ತಮ್ಮ ಜೋಡೆತ್ತು ಕಣೊ’ ಗೀತೆ ಬಿಡುಗಡೆಯಾಗಿ ಕೇಳುಗರ ಮನಮುಟ್ಟಿದೆ. ಗೀತೆಯಲ್ಲಿ ಒಳ್ಳೆಯ ಸಂದೇಶ ಇದೆ. ಆದರೆ, ಹಾಡಿನಲ್ಲಿ ಬಳಸಿರುವ ‘ರಂಡೆ, ಮುಂಡೆ’ ಪದಗಳು ಬೇಕಿರಲಿಲ್ಲ. ಗ್ರಾಮ್ಯ ಭಾಷೆಯಲ್ಲಿ ಈ ಪದಗಳು ಸಹಜವೇ ಇರಬಹುದು. ಆದರೆ, ಇವು ಮಹಿಳೆಯನ್ನು ಅವಮಾನಿಸುವ ಬೈಗುಳವಾಗಿವೆ. ಗೀತರಚನೆಕಾರರು ಸೂಕ್ಷ್ಮತೆ ಮೆರೆಯಬೇಕಿತ್ತು. ಸಿನಿಮಾ ನಿರ್ದೇಶಕ ಪ್ರೇಮ್ ತಮ್ಮ ಪ್ರತಿ ಸಿನಿಮಾದಲ್ಲೂ ತಾಯಿ ಬಗ್ಗೆ ಅಪಾರವಾದ
ಪ್ರೀತಿ, ಗೌರವ ತೋರಿಸಿರುವುದನ್ನು ನೋಡಿದ್ದೇವೆ. ಅವರಾದರೂ ಯೋಚನೆ ಮಾಡಬೇಕಿತ್ತು. ನಿರ್ದೇಶಕ ತನ್ನ ಸಾಮಾಜಿಕ ಜವಾಬ್ದಾರಿ ಮರೆಯಬಾರದು. ಈಗಲೂ ಕಾಲ ಮಿಂಚಿಲ್ಲ. ಆ ಪದಗಳಿಗೆ ಕತ್ತರಿ ಹಾಕಿ ಸಿನಿಮಾ ಬಿಡುಗಡೆ ಮಾಡಲಿ.
⇒ಲೋಕೇಶ ಬೆಕ್ಕಳಲೆ, ಬಸರಾಳು
ಗುರುಗಳ ವಿಚಾರದಲ್ಲಿ ಹಸ್ತಕ್ಷೇಪ ಸಲ್ಲದು
ಕೇರಳದ ವರ್ಕಳದಲ್ಲಿನ ಶಿವಗಿರಿ ಮಠಕ್ಕೆ ಭೇಟಿ ಕೊಟ್ಟಿರುವ ಕರ್ನಾಟಕದ
ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಮಠವು ಆಧುನಿಕ ಭಾರತದ ನೈತಿಕ
ವಿಶ್ವವಿದ್ಯಾಲಯವಾಗಿದೆ’ ಎಂದಿದ್ದಾರೆ (ಪ್ರ.ವಾ., ಡಿ. 31). ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿಯಬೇಕಿದೆ: ಈ ಸಭೆ ಏರ್ಪಡಿಸಿದ ಟ್ರಸ್ಟ್ ಹಾಗೂ ‘ನಾರಾಯಣ ಧರ್ಮ ಪರಿಪಾಲನ ಯೋಗಂ’ಗೂ (ಎಸ್‌ಎನ್‌ಡಿಪಿ) ವ್ಯತ್ಯಾಸವಿದೆ. ‘ಎಸ್‌ಎನ್‌ಡಿಪಿ’ ಒಂದು ಚಳವಳಿ ಆಗಿತ್ತು. ಅದಕ್ಕೆ ಸ್ಥಾವರ ರೂಪ ಬಂದಿದ್ದು 1903ರಲ್ಲಿ. ನಾರಾಯಣ ಗುರುಗಳು ಅದರ ಪ್ರಥಮ ಅಧ್ಯಕ್ಷರು. ಈಗ ಅದು ಹಲವು ಯೂನಿಯನ್ ಹಾಗೂ ಸಬ್ ಯೂನಿಟ್‌ಗಳನ್ನು ಹೊಂದಿದೆ. ‘ಒಂದು ಜಾತಿ, ಒಂದು ಧರ್ಮ, ಒಂದು ದೇವರು’ ಎಂಬ ಮೂಲತತ್ತ್ವ ಈಗ ಬೇರೆ ರೂಪದಲ್ಲಿ ಪಾಲನೆಯಾಗಿದೆ. ಯಾತ್ರಾಕೇಂದ್ರ, ತೀರ್ಥಯಾತ್ರೆ ಇವೆಲ್ಲ ಈಗಿನ ಪರಿಕಲ್ಪನೆ. ಹಾಗೆಯೇ ನೈತಿಕ ವಿಶ್ವವಿದ್ಯಾಲಯ ಎಂಬ ಗ್ರಹಿಕೆಯೂ. ನಾರಾಯಣ ಗುರುಗಳ ವಿಚಾರಗಳಲ್ಲಿ ಏನೇನನ್ನೋ ಸೇರಿಸಲು ರಾಜಕಾರಣಿಗಳು ಹೋಗಬಾರದು.
⇒ಎಚ್.ಎಸ್. ಮಂಜುನಾಥ, ಗೌರಿಬಿದನೂರು
ನ್ಯಾಕ್: ಕನ್ನಡದಲ್ಲಿ ಸಂವಹನ ಸ್ವಾಗತಾರ್ಹ
ಸರ್ಕಾರಿ ಪ್ರಥಮ ದರ್ಜೆ, ಖಾಸಗಿ ಅನುದಾನಿತ ಹಾಗೂ ಬಿ.ಎಡ್. ಕಾಲೇಜುಗಳಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ‘ನ್ಯಾಕ್’ (ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ
ಮಂಡಳಿ) ಮೌಲ್ಯಮಾಪನ ನಡೆಸಿ ಶ್ರೇಣಿ ನೀಡುತ್ತದೆ. ಈ ಪ್ರಕ್ರಿಯೆಗೆ ಸಂಬಂಧಿಸಿ ದಂತೆ ಕಾಲೇಜುಗಳ ಎಲ್ಲ ವ್ಯವಹಾರ ಇದುವರೆಗೆ ಇಂಗ್ಲಿಷ್‌ನಲ್ಲಿ ನಡೆಯುತ್ತಿತ್ತು. ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಹಾಗೂ ಆಡಳಿತ ಭಾಷೆ ಆಗಿರುವುದರಿಂದ, ‘ನ್ಯಾಕ್’ಗೆ ಸಂಬಂಧಿಸಿದಂತೆ ನಡೆಸುವ ದೈನಂದಿನ ಪತ್ರ ವ್ಯವಹಾರಗಳನ್ನು ಇನ್ನುಮುಂದೆ ಕನ್ನಡದಲ್ಲಿ ನಡೆಸುವಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಈ ಸೂಚನೆ ಸ್ವಾಗತಾರ್ಹ.
⇒ಜಯವೀರ ಎ.ಕೆ., ಖೇಮಲಾಪುರ
ಎಂ.ಜಿ. ರಸ್ತೆ: ಹೆಸರು ಬದಲಿಸಬಾರದೇಕೆ?
ಹೊಸವರ್ಷದ ಸಂಭ್ರಮಾಚರಣೆಗೆ ಯುವಕ ಯುವತಿಯರು ಬೆಂಗಳೂರಿನ ಎಂ.ಜಿ. ರಸ್ತೆ ಮತ್ತು ಅದರ ಸಮೀಪದ ರಸ್ತೆಗಳಲ್ಲಿ ಸೇರುವುದು ವಾಡಿಕೆಯಾಗಿದೆ. ಮಹಾತ್ಮ ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಮದ್ಯಪಾನ ನಿಷೇಧಕ್ಕೆ ಹೋರಾಟ ಮಾಡಿದ್ದರು. ಅಂತಹವರ ಹೆಸರಿರುವ ರಸ್ತೆಯಲ್ಲಿ ಸಂಭ್ರಮದ ಹೆಸರಿನಲ್ಲಿ ಕುಡಿದು ತೂರಾಡುವ ಹಾಗೂ ಅನುಚಿತವಾಗಿ ವರ್ತಿಸುವ ಘಟನೆಗಳು ನಡೆಯುತ್ತವೆ. ಹಾಗಾಗಿ, ಆ ರಸ್ತೆಯ ಹೆಸರನ್ನು ಬದಲಿಸುವುದೇ ಒಳ್ಳೆಯದು. ಇಲ್ಲವಾದರೆ,
‘ಎಂ.ಜಿ.’ ಎಂದರೆ ಮಹಾತ್ಮಾ ಗಾಂಧಿ ಎಂಬರ್ಥ ಅಳಿದು ‘ಮದ್ಯದ ಗಮ್ಮತ್ತು’ ಎಂದು ಉಳಿಯಬಹುದು.
⇒ಪತ್ತಂಗಿ ಎಸ್. ಮುರಳಿ, ಬೆಂಗಳೂರು
ಅಭಿರುಚಿಹೀನ ಸಾಹಿತ್ಯವನ್ನು ನಿಯಂತ್ರಿಸಿ
ಹೊಸ ವರ್ಷದ ಸಂಭ್ರಮದ ಹೆಸರಿನಲ್ಲಿ ನಡೆಯುತ್ತಿರುವ ಉತ್ತರ ಕರ್ನಾಟಕ ಭಾಗದ ಸ್ವಘೋಷಿತ ಜಾನಪದ ಕಲಾವಿದರ ಹುಚ್ಚಾಟಗಳು ಬೇಸರ ತರಿಸಿವೆ. ಇವರಿಂದ ನಡೆಯುವ ಜಾನಪದ ಹಾಡು, ರಸಮಂಜರಿಗಳಲ್ಲಿ ಅಶ್ಲೀಲ ಪದ ಬಳಕೆ ನಿಲ್ಲಿಸಬೇಕಾಗಿದೆ. ಮಕ್ಕಳಾದಿಯಾಗಿ ಲಕ್ಷಾಂತರ ಜನ ಈ ಹಾಡುಗಳಿಂದ ಪ್ರಭಾವಿತರಾಗುತ್ತಿದ್ದಾರೆ. ಈ ಬೆಳವಣಿಗೆ ಸಮಾಜದ ಹಿತಕ್ಕೆ ಪೂರಕವಲ್ಲ. ಈ ಅನಪೇಕ್ಷಿತ ಬೆಳವಣಿಗೆಯನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿ.
⇒ಮಾದಪ್ಪ ಎಸ್. ಕಠಾರಿ, ವಿಜಯಪುರ
ಹೆಮ್ಮೆ
ಭಾರತ ಮಾತೆಗೆ
ಈಗ ಬಲು ಸಾರ್ಥಕತೆ!
ಕಾರಣ, ನಾವು
ವಿಶ್ವದ ನಾಲ್ಕನೇ
ದೊಡ್ಡ ಆರ್ಥಿಕತೆ!
ಮಹಾಂತೇಶ, ಮಾಗನೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.