ಇನ್ನೇನು ಎಸ್ಸೆಸ್ಸೆಲ್ಸಿ ಪರೀಕ್ಷೆ ಶುರುವಾಗುತ್ತದೆ. ವಿದ್ಯಾರ್ಥಿಗಳು ಕೈಗಡಿಯಾರವನ್ನು ಪರೀಕ್ಷಾ ಕೊಠಡಿಗೆ ಒಯ್ಯುವಂತಿಲ್ಲ ಎಂದು ಆದೇಶಿಸಿರುವ ಕುರಿತು ಚರ್ಚೆ ಸಾಗಿದೆ. ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಸಹ ಮೊಬೈಲ್ ಫೋನನ್ನು ಪರೀಕ್ಷಾ ಸಮಯದಲ್ಲಿ ಬಳಸುವಂತಿಲ್ಲ ಎಂದು ಆದೇಶ ಹೊರಡಿಸುವುದು ಸೂಕ್ತ. ಏಕೆಂದರೆ ಕೆಲವು ಮೇಲ್ವಿಚಾರಕರು ಪರೀಕ್ಷಾ ಸಮಯದಲ್ಲಿ ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಂತಹ ಚಟುವಟಿಕೆಗಳಲ್ಲಿ ಮುಳುಗಿರುತ್ತಾರೆ. ಇದರಿಂದ, ವಿದ್ಯಾರ್ಥಿಗಳ ಬಗ್ಗೆ ಗಮನಹರಿಸುವುದು, ಸಾವಧಾನದಿಂದ ಬರೆಯಲು ಅವರನ್ನು ಹುರಿದುಂಬಿಸುವುದು, ನೀರು, ಹೆಚ್ಚುವರಿ ಪೇಪರ್ ಮುಂತಾಗಿ ಕೊಡುವುದಕ್ಕೆ ಗಮನಹರಿಸಲು
ಸಾಧ್ಯವಾಗದು.
ಕೆಲ ವರ್ಷಗಳ ಹಿಂದೆ ನನ್ನ ಮಗಳು ಪರೀಕ್ಷೆ ಬರೆಯುವಾಗ ಕೊಠಡಿ ಮೇಲ್ವಿಚಾರಕರು ತೋರಿದ ಅಸಡ್ಡೆ, ಒಟ್ಟಿಗೇ ಊಟಕ್ಕೆ ಬೇಗ ಹೋಗಬೇಕೆಂದು ಅವರ ಮಿತ್ರ ಪದೇ ಪದೇ ಫೋನ್ ಮಾಡಿದ್ದರಿಂದ ಪರೀಕ್ಷೆ ಬರೆಯುತ್ತಿದ್ದವರಿಗೆ ಕಿರಿಕಿರಿಯಾಗಿತ್ತು. ನಂತರ ಎಲ್ಲರ ಉತ್ತರ ಪತ್ರಿಕೆಗಳನ್ನೂ ಅವಧಿಗೆ ಮುನ್ನ (10 ನಿಮಿಷ) ಪಡೆಯಲಾಯಿತು. ಊಟಕ್ಕೆ ಎಂದು ಓಡಿದ್ದೇ! ಇದರಿಂದ ನನ್ನ ಮಗಳು ಹಾಗೂ ಇತರ ವಿದ್ಯಾರ್ಥಿಗಳು 5 ಅಂಕಗಳ ಪುಟ್ಟ ಪ್ರಬಂಧ ಬರೆಯಲಾಗಲಿಲ್ಲ. ಈಗಲೂ ಆ ಬಗ್ಗೆ ಪಶ್ಚಾತ್ತಾಪ ಇದೆ. ದಯವಿಟ್ಟು ಶಿಕ್ಷಣ ಇಲಾಖೆ ಈ ಬಗ್ಗೆ ಗಮನಹರಿಸಿ, ಮೇಲ್ವಿಚಾರಕರು ಮೊಬೈಲ್ ಫೋನ್ ಬಳಸದಂತೆ ಆದೇಶಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.