ADVERTISEMENT

ದಂಡವೆಂಬ ಬ್ರಹ್ಮಾಸ್ತ್ರ ಇರಲಿ; ವಿನಾಯಿತಿ ಬೇಡ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 20:15 IST
Last Updated 17 ಸೆಪ್ಟೆಂಬರ್ 2019, 20:15 IST

ನಿಯಮಗಳನ್ನು ನೂರು ಬಾರಿ ಉಲ್ಲಂಘಿಸಿದರೂ ಪೊಲೀಸರಿಗೆ ಸಿಕ್ಕಿ ಬೀಳುವುದು ಒಂದೇ ಸಲ ಎಂದಾದಾಗ, ದಂಡದ ಮೊತ್ತ ಸ್ವಲ್ಪವೇ ಇದ್ದಾಗ ಶಿಸ್ತು ಉಲ್ಲಂಘನೆ ನಡೆದೇ ಇರುತ್ತದೆ. ಅಮಾಯಕರು ಪ್ರಾಣ ತೆರಬೇಕಾಗುತ್ತದೆ. ಹೆಲ್ಮೆಟ್ ಧರಿಸದಿದ್ದರೆ ದಂಡ ನೂರು ರೂಪಾಯಿ ಇದ್ದಾಗ, ಅದನ್ನು ಧರಿಸದೆ ವಾಹನ ಚಲಾಯಿಸುತ್ತಿದ್ದ ಸವಾರರು ಮತ್ತು ಹಿಂಬದಿ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿದ್ದರು. ಆದರೆ ದಂಡದ ಮೊತ್ತ ಸಾವಿರ ರೂಪಾಯಿ ಆದಂದಿನಿಂದ ರಸ್ತೆಗಳಲ್ಲಿ ಇಂತಹವರ ಸಂಖ್ಯೆ ಕಡಿಮೆಯಾಗಿದೆ. ದೊಡ್ಡ ಮೊತ್ತವಾದ ಸಾವಿರವು ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ಮಾಡಿತ್ತು.

ಕುಡಿದು ಚಾಲನೆ ಮಾಡುವುದು ಅಪಘಾತಕ್ಕೆ ಕಾರಣವಾಗಿ ಅನೇಕರ ಪ್ರಾಣಕ್ಕೆ ಸಂಚಕಾರವಾಗಿತ್ತು. ದಂಡದ ಪ್ರಮಾಣ ಹತ್ತು ಸಾವಿರ ರೂಪಾಯಿ ಎಂದಾದಾಗ ಚಾಲಕನಿಗೆ ಕುಡಿಯುವ ಧೈರ್ಯ ಬರಲಿಲ್ಲ. ಹೀಗೆ ಹೆಚ್ಚು ದಂಡನೆಯು ವಾಹನ ಚಾಲಕರಲ್ಲಿ, ಅದರಲ್ಲೂ ಮುಖ್ಯವಾಗಿ ಲಾರಿ, ಬಸ್, ಆಟೊ ಚಾಲಕರಲ್ಲಿ ಭಯ ಹುಟ್ಟಿಸಿ, ಚಾಲನೆ ಮಾಡುವಾಗ ಕುಡಿತದಿಂದ ದೂರ ಇರುವಂತೆ ಮಾಡಿದ್ದು ನಿಜ. ಆದರೂ ಪ್ರಾಣ ರಕ್ಷಣೆ ಮಾಡುವ ಉದ್ದೇಶದ ನಿಯಮಗಳ ಬಗ್ಗೆ ಚಾಲಕರ ಆಕ್ರೋಶ ಯಾಕಾಗಿ? ಪರವಾನಗಿ ಹೊಂದಿರುವುದರಲ್ಲಿ, ಸಿಗ್ನಲ್ ನಿಯಮ ಪಾಲಿಸುವಲ್ಲಿ, ನಿಗದಿತ ವೇಗದಲ್ಲಿ ಹೋಗುವುದರಲ್ಲಿ ವಾಹನ ಚಾಲಕರಿಗೆ ಇರುವ ತೊಂದರೆ ಏನು? ಅವರಿಗೆ ತೊಂದರೆ ಆಗುವುದಿದ್ದರೆ ಅದು ಸಂಚಾರ ಪೊಲೀಸರ ಕಿರುಕುಳದಿಂದ ಆಗಬಹುದು. ಸಿ.ಸಿ ಟಿ.ವಿ ಕ್ಯಾಮೆರಾ ಗಳನ್ನು ಸೂಕ್ತ ಸ್ಥಳಗಳಲ್ಲಿ ಸ್ಥಾಪಿಸಿ ಈ ಸಮಸ್ಯೆ ಬಗೆ ಹರಿಸಬಹುದು. ಅನಗತ್ಯವಾಗಿ ಪ್ರಕರಣ ದಾಖಲಿಸುವ ಪೊಲೀಸರಿಗೂ ದೊಡ್ಡ ಶಿಕ್ಷೆ ನೀಡಿ, ಇದನ್ನು ತಡೆಯಬಹುದು.

ಆದರೆ, ಅಪಘಾತ ಮಾಡುವುದು ನಮ್ಮ ಹಕ್ಕು ಎನ್ನುವಂತೆ, ದಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಚಾಲಕರ ಒತ್ತಡಕ್ಕೆ ಮಣಿದಿರುವುದು ಸರಿಯಲ್ಲ. ಕೆಲವು ಉಲ್ಲಂಘನೆಗಳಿಗೆ ದಂಡದ ಮೊತ್ತ ಹೆಚ್ಚು ಎನ್ನಿಸಿದರೆ ಅದನ್ನು ಮಾತ್ರ ಪುನರ್‌ವಿಮರ್ಶಿಸುವುದು ಸೂಕ್ತ. ಅದುಬಿಟ್ಟು, ಅಮಾಯಕರ ಪ್ರಾಣ ತೆಗೆಯುವ ಅತಿವೇಗ, ಕುಡಿದು ಚಾಲನೆ ಮಾಡುವಂತಹ ಘೋರ ಅಪರಾಧಗಳಿಗೆ ಎಂದೂ ವಿನಾಯಿತಿ ನೀಡಬಾರದು.

ADVERTISEMENT

- ಸತ್ಯಬೋಧ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.