ADVERTISEMENT

ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 19:30 IST
Last Updated 20 ಜುಲೈ 2020, 19:30 IST

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ, ಯುಜಿಸಿ ಮಾರ್ಗಸೂಚಿ ಅನ್ವಯ ಸೆಪ್ಟೆಂಬರ್ ಅಂತ್ಯದೊಳಗೆ ಪದವಿ, ಎಂಜಿನಿಯರಿಂಗ್ ಮತ್ತು ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ (ಸೆಮಿಸ್ಟರ್) ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಮತ್ತು ಈಗಾಗಲೇ ಪರೀಕ್ಷಾ ವೇಳಾಪಟ್ಟಿಯನ್ನೂ ಕೆಲವು ವಿಶ್ವವಿದ್ಯಾಲಯಗಳು ಪ್ರಕಟಿಸಿವೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ. ಆದರೆ, ಪರೀಕ್ಷಾ ಕ್ಯಾಲೆಂಡರ್‌ ಪ್ರಕಟಿಸುವ ಮೊದಲು ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಿಸಬೇಕಿತ್ತು.

ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ಡೆಸರ್ಟೇಶನ್ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ಡೆಸರ್ಟೇಶನ್‌ ಸಿದ್ಧಪಡಿಸುವುದು ಸಂಶೋಧನಾ ವಿಧಾನವಾದ್ದರಿಂದ ವಿದ್ಯಾರ್ಥಿಗಳಿಗೆ ಕೊರೊನಾ ಭೀತಿಯ ನಡುವೆ ಇದು ಸುಲಭದ ಕೆಲಸವಲ್ಲ. ಕೆಲ ಸಂಪನ್ಮೂಲ ವ್ಯಕ್ತಿಗಳನ್ನು, ವಿವಿಧ ಪ್ರದೇಶದಲ್ಲಿನ ಜನರನ್ನು ನೇರವಾಗಿ ಭೇಟಿ ಮಾಡಿ, ನೈಜ ಮಾಹಿತಿ ಸಂಗ್ರಹಿಸಬೇಕು. ಕಾಲೇಜುಗಳಿಗೆ ರಜೆ ಇರುವುದರಿಂದ ಸಾವಿರಾರು ವಿದ್ಯಾರ್ಥಿಗಳು ನಗರಗಳನ್ನು ತೊರೆದು ತಮ್ಮ ಊರುಗಳನ್ನು ಸೇರಿದ್ದಾರೆ. ಈ ವಿದ್ಯಾರ್ಥಿಗಳಿಗೆ ಅಲ್ಲಿ ಡೆಸರ್ಟೇಶನ್‌ ಸಿದ್ಧಪಡಿಸಲು ಬೇಕಾದ ವ್ಯವಸ್ಥೆ ಇಲ್ಲದಿರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಸೋಂಕು ಹೆಚ್ಚು ಕಂಡುಬರುತ್ತಿರುವ ಪ್ರದೇಶಗಳನ್ನು ಸೀಲ್‍ಡೌನ್ ಮತ್ತು ಲಾಕ್‍ಡೌನ್ ಮಾಡಲಾಗಿದೆ. ಹೀಗಿರುವಾಗ ವಿದ್ಯಾರ್ಥಿಗಳು ಮನೆಯಿಂದ ಹೊರಗೆ ಹೋಗಿ ಮಾಹಿತಿ ಸಂಗ್ರಹಿಸುವುದಾದರೂ ಹೇಗೆ? ಆನ್‌ಲೈನ್‌ ಪಾಠ ಕೇಳಿ, ಮನೆಯಲ್ಲಿ ಕೂತು, ಕೇವಲ ಗೂಗಲ್‍ನಲ್ಲಿ ಸಿಗುವ ಮಾಹಿತಿಯಿಂದ ಡೆಸರ್ಟೇಶನ್‌ ಸಿದ್ಧಪಡಿಸಲು ಹೇಗೆ ಸಾಧ್ಯ? ಸಿದ್ಧಪಡಿಸಿದರೂ ಅದು ಗುಣಾತ್ಮಕವಾಗಿ ಕೂಡಿರುವುದಿಲ್ಲ.

ಈ ಕುರಿತು ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಮರುಚಿಂತಿಸಿ, ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಿಸಬೇಕು. ಡೆಸರ್ಟೇಶನ್ ಬದಲು ಪರೀಕ್ಷೆಗೆ ಸಂಬಂಧಿಸಿದಂತೆ ಇನ್ನಷ್ಟು ಅಸೈನ್‍ಮೆಂಟ್‌ಗಳನ್ನು ವಿದ್ಯಾರ್ಥಿಗಳಿಂದ ಬರೆಸಿದರೆ, ಅವರು ಪರೀಕ್ಷೆಗೆ ಉತ್ತಮವಾಗಿ ತಯಾರಾಗಲು ನೆರವಾಗುತ್ತದೆ.

ADVERTISEMENT

- ಶಿವಶಂಕರ ಎಸ್.,ಮುತ್ತರಾಯನಹಳ್ಳಿ, ಮಧುಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.