ADVERTISEMENT

ವಾಚಕರವಾಣಿ: ವಿ.ವಿ. ಶಿಕ್ಷಣ ಉಳ್ಳವರ ಸೊತ್ತೇ?

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 19:30 IST
Last Updated 13 ಜನವರಿ 2022, 19:30 IST

ಹೆಗ್ಗೋಡಿನ ಚರಕ ಸಂಸ್ಥೆಯಲ್ಲಿ ನನ್ನೊಡನೆ ಬಣ್ಣಗಾರಿಕೆ ಕೆಲಸ ಮಾಡುತ್ತಿದ್ದ ನನ್ನ ಸ್ನೇಹಿತನ ಮಗಳುಶೇ 81ರಷ್ಟು ಅಂಕಗಳೊಂದಿಗೆ ಬಿ.ಎ. ಪಾಸಾಗಿದ್ದಾಳೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎ.ಗೆ ಪ್ರವೇಶ ಕೂಡ ಸಿಕ್ಕಿದೆ. ತರಗತಿಗಳು ಈ ತಿಂಗಳ 3ರಿಂದಲೇ ಆರಂಭವಾಗಿವೆ. ಆದರೆ ವಸತಿ ನಿಲಯ ಮಾತ್ರ (ಒಬಿಸಿ) ಆರಂಭವಾಗಲು ಇನ್ನೂ ಒಂದು ತಿಂಗಳು ಬೇಕಂತೆ. ಜನರಲ್ ಹಾಸ್ಟೆಲ್ ಆರಂಭವಾಗಿದೆ. ಅಲ್ಲಿ ₹ 12,000 ಪ್ರವೇಶ ಶುಲ್ಕ ಮತ್ತು ಮಾಸಿಕ ₹ 2000 ಅಂದಾಜು ಊಟದ ಶುಲ್ಕವಿದೆ. ಒಬಿಸಿ ಹಾಸ್ಟೆಲ್‌ನಲ್ಲಿ ಪ್ರವೇಶ ಸಿಕ್ಕರೆ ಈ ಹಣವನ್ನೇನೂ ಹಿಂದಿರುಗಿಸುವುದಿಲ್ಲವಂತೆ.

ಕೇವಲ ಒಂದು– ಎರಡು ಎಕರೆ ಗದ್ದೆ, ಹತ್ತು ಗುಂಟೆ ತೋಟ ಇರುವ ಅವನು, ಒಬ್ಬಳೇ ಮಗಳು ಮತ್ತು ಬುದ್ಧಿವಂತೆ ಎಂಬ ಕಾರಣಕ್ಕೆ ಸಾಲ ಮಾಡಿಯಾದರೂ ಎಂ.ಎ. ಓದಿಸಲು ಮುಂದಾಗಿದ್ದಾನೆ. ಇಲ್ಲವಾದಲ್ಲಿ ಇಷ್ಟಕ್ಕೇ ಓದು ನಿಲ್ಲಿಸಿ ಮದುವೆಗೆ ಸಿದ್ಧತೆ ಮಾಡುತ್ತಿದ್ದನೇನೊ. ವಾಸ್ತವವಾಗಿ ಶಾಲಾ- ಕಾಲೇಜು ಅಥವಾ ವಿಶ್ವವಿದ್ಯಾಲಯದ ತರಗತಿಗಳು ಆರಂಭವಾಗುವ ಮೊದಲೇ ಆಯಾ ಹಾಸ್ಟೆಲ್‌ಗಳು ಆರಂಭವಾಗಿರಬೇಕಲ್ಲವೇ? ಇಲ್ಲವಾದರೆ ಹಳ್ಳಿಯಿಂದ ಬರುವ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವುದಾದರೂ ಹೇಗೆ? ಇಷ್ಟು ಸಣ್ಣ ಸಾಮಾನ್ಯ ಜ್ಞಾನವು ಸಮಾಜ ಕಲ್ಯಾಣ ಇಲಾಖೆಗಾಗಲೀ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗಾಗಲೀ ಇರಬೇಡವೇ? ಬಡವರ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳು ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತದಿರಲು ಇಂತಹವೇ ಹತ್ತು ಹಲವು ಕಾರಣಗಳು ಇರಬಹುದಲ್ಲವೇ?

- ಎನ್.ಎಂ.ಕುಲಕರ್ಣಿ, ಹೆಗ್ಗೋಡು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.