ADVERTISEMENT

ಶಿಕ್ಷಣ ನೀತಿ: ಗೊಂದಲ ನೀಗಿಸಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 20:01 IST
Last Updated 1 ಜುಲೈ 2019, 20:01 IST

ನೂತನ ಶಿಕ್ಷಣ ನೀತಿಗೆ (ಎನ್‌ಇಪಿ) ಸಂಬಂಧಿಸಿದಂತೆ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಕರಡು ಪ್ರತಿಯ ಬಗ್ಗೆ ದೇಶದಾದ್ಯಂತ ಚರ್ಚೆ ನಡೆಯುತ್ತಿದೆ. ಈ ಕರಡು ಪ್ರತಿಯ ಒಂದು ಘಟ್ಟವಾದ ಉಚ್ಚ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣದ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಚರ್ಚೆ, ಸಂವಾದಗಳು ನಡೆಯುತ್ತಿವೆ. ಆದರೆ, ಕರಡು ಪ್ರತಿಯಲ್ಲಿ ನಮೂದಾಗಿರುವ ಪ್ರಾಥಮಿಕ ಶಿಕ್ಷಣ ಮಾಧ್ಯಮದ ಬಗ್ಗೆ ಶಿಕ್ಷಣ ತಜ್ಞರ ಖಚಿತವಾದ ಚಿಂತನೆಗಳು, ಅಭಿಪ್ರಾಯಗಳು ಅಷ್ಟಾಗಿ ವ್ಯಕ್ತವಾಗುತ್ತಿಲ್ಲ. ಸಮಿತಿಯು ಈ ಬಗ್ಗೆ ಖಚಿತವಾದ ಅಭಿ
ಪ್ರಾಯವನ್ನು ಹೇಳದೆ ಅಡ್ಡಗೋಡೆಯ ಮೇಲೆ ದೀಪ ಇರಿಸಿದೆ. ಕರಡು ಪ್ರತಿ ಹೀಗೆ ಹೇಳುತ್ತದೆ: ‘ಕನಿಷ್ಠ 5ನೇ ತರಗತಿಯವರೆಗೆ ಶಿಕ್ಷಣ ಮಾಧ್ಯಮದ ಭಾಷೆಯಾಗಿ ಮನೆಭಾಷೆ, ಮಾತೃಭಾಷೆ ಅಥವಾ ಸ್ಥಳೀಯಭಾಷೆ ಸಾಧ್ಯವಾದಷ್ಟುಮಟ್ಟಿಗೆ ಇರಬೇಕು ಮತ್ತು ಕನಿಷ್ಠ 8ನೇ ತರಗತಿಯವರೆಗೆ ಅದರಲ್ಲೇ ಮುಂದುವರಿಯುವ ಆಯ್ಕೆಗೆ ಅವಕಾಶ ಇರಬೇಕು’. ‘...5ನೇ ತರಗತಿಯ ನಂತರ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಮಾತೃಭಾಷೆಯನ್ನು ಕಡ್ಡಾಯವಾಗಿ ಬೋಧಿಸಬೇಕು’.

ಇಲ್ಲಿ ‘ಸಾಧ್ಯವಾದಷ್ಟು ಮಟ್ಟಿಗೆ’ ಎಂಬ ಪದಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಈ ಬಗ್ಗೆ ಖಚಿತತೆ ಬೇಕಾಗಿದೆ. ಪ್ರಾಥಮಿಕ ಶಿಕ್ಷಣದ ಭಾಷಾ ಮಾಧ್ಯಮದ ಬಗ್ಗೆ ಸಂದೇಹ ಇರಿಸಿರುವುದು ಸರಿಯಲ್ಲ. ಈ ದೇಶದ ಮೂಲಸೆಲೆ ಇರುವುದು ದೇಶೀಯ ಭಾಷೆಗಳಲ್ಲೇ ಹೊರತು ಇಂಗ್ಲಿಷ್‌ನಲ್ಲಿ ಅಲ್ಲ ಎಂಬುದನ್ನು ಅರಿಯಬೇಕು.

- ಹೊರೆಯಾಲ ದೊರೆಸ್ವಾಮಿ,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.