ADVERTISEMENT

ಪ್ರಭುಗಳೇ, ಇಲ್ಲಿ ಬಂದು ಕಲಿಯಿರಿ!

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 20:00 IST
Last Updated 5 ಜುಲೈ 2019, 20:00 IST

ಕೆಲವು ದಿನಗಳಿಂದ ಮಲೆನಾಡಿನಲ್ಲಿ ಒಂದು ಪವಾಡವನ್ನೇ ಕಾಣುತ್ತಿದ್ದೇವೆ. ಕಳೆದ ಚುನಾವಣೆಯ ನಂತರ ಪ್ರಜಾಪ್ರಭುತ್ವದ ಕೊನೆಯ ದಿನಗಳು ಇನ್ನೇನು ಆರಂಭವಾದವು ಎಂದುಕೊಂಡು, ವಾಸ್ತವವನ್ನು ಮರೆತು ಭ್ರಮೆಗಳಿಗೆ ಶರಣಾದ ನಮ್ಮ ಜನರಿಗೆ ಏನಾಗಿದೆಯೆಂದು ನಿಟ್ಟುಸಿರು ಬಿಡುತ್ತಿರುವಾಗ ಈ ಪವಾಡ ಆರಂಭವಾಗಿದೆ. ಶರಾವತಿಯ ನೀರನ್ನು ಬೆಂಗಳೂರಿಗೆ ಒಯ್ಯುವ ಜನದ್ರೋಹಿ ಯೋಜನೆ ಪ್ರಸ್ತಾವವನ್ನು ವಿರೋಧಿಸಿ ಇಲ್ಲಿಯ ಹಳ್ಳಿಹಳ್ಳಿಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ಜನ ಹೊರಬಂದು ಪ್ರತಿಭಟಿಸುತ್ತಿದ್ದಾರೆ. ಇಲ್ಲಿ ಸೆಲೆಬ್ರಿಟಿಗಳಿಲ್ಲ, ವಿದ್ವಾಂಸರಿಲ್ಲ, ವಾಗ್ಮಿಗಳಿಲ್ಲ, ಬೆಂಕಿಯುಗುಳುವ ಕ್ರಾಂತಿಕಾರಿಗಳಿಲ್ಲ. ದಶಕಗಳಿಂದ ತಮ್ಮ ಪ್ರೀತಿಯ ಮಲೆನಾಡನ್ನು ಯೋಜನೆಗಳ ಮೂಲಕ ನಾಶ ಮಾಡುವ ಸರ್ಕಾರಗಳನ್ನು, ಅಧಿಕಾರಿಗಳನ್ನು ಸಹಿಸಿಕೊಂಡು ಒಳಗೇ ಕೊರಗುತ್ತಿದ್ದ ಜನ ಈಗ ಮಾತನಾಡುತ್ತಿದ್ದಾರೆ. ತಾವಿದ್ದ ಭಾಗಗಳಲ್ಲಿಯೇ ಒಂದುಗೂಡಿ ಶರಾವತಿ ಉಳಿಸಿ ಎಂದು ಹೇಳುತ್ತಿದ್ದಾರೆ.

ಈ ಚಳವಳಿ ಈ ದೇಶದ ಪ್ರಜಾಪ್ರಭುತ್ವದ ಶಕ್ತಿಯಲ್ಲಿ ಮತ್ತೆ ಭರವಸೆ ಹುಟ್ಟಿಸಿದೆ. ಇಡೀ ಭಾರತವೇ ಇಂಥ ಚಳವಳಿಯನ್ನು ನೋಡಿ ಮರುಜೀವ ಪಡೆಯಬೇಕಿದೆ. ವಿವೇಕ, ಅಂತಃಕರಣ, ವ್ಯಕ್ತಿ ಸ್ವಾತಂತ್ರ್ಯ ಹಾಗೂ ಜವಾಬ್ದಾರಿಯಿಂದ ಕೂಡಿದ ನಮ್ಮ ಜನರ ಮಾತುಗಳು, ಪ್ರತಿಭಟನೆಯ ಸಾಲು ಸಾಲುಗಳು, ಪತ್ರಗಳು ಇತ್ತೀಚಿನ ವರ್ಷಗಳಲ್ಲಿ ಹೊರಬಂದ ಶ್ರೇಷ್ಠ ಕಾವ್ಯದಂತಿವೆ. ಜಾತಿ, ಹಣ, ದುರಾಸೆ ಇವುಗಳನ್ನು ಮೀರಿದ ಸಾಚಾ ಮನುಷ್ಯಜೀವಿಗಳಾದ ನಮ್ಮ ಪ್ರಜೆಗಳು, ನೂರು ಕೃತಿಗಳು ಹೇಳಲಾಗದ ಸತ್ಯವನ್ನು ಸರಳವಾಗಿ ಹೇಳಿದ್ದಾರೆ. ಆದರೆ ಪ್ರಭುಗಳು? ಅಧಿಕಾರದ ಅಹಂಕಾರದ ಮದದಲ್ಲಿ ಬೆಂಗಳೂರಿನಲ್ಲಿದ್ದಾರೆ. ಈ ಯೋಜನೆ ನಿಂತರೆ ತಮಗೆ ಬರಬೇಕಾಗಿದ್ದ ಕಪ್ಪವು ಬರುವುದಿಲ್ಲವೆನ್ನುವ ಗಾಬರಿಯಿಂದ ತಂತ್ರಗಳನ್ನು ಯೋಚಿಸುತ್ತಿದ್ದಾರೆ. ಇನ್ನಷ್ಟು ಸುಳ್ಳುಗಳನ್ನು ಹೇಳಿ ಜನರನ್ನು ದಾರಿ ತಪ್ಪಿಸಲು ಕಾಯುತ್ತಿದ್ದಾರೆ. ಬಹುಶಃ ಜುಲೈ 10ರ ಬಂದ್ ಆದಮೇಲೆ ಬಲಾಬಲ ಪರೀಕ್ಷೆ ಮಾಡಿ ನೋಡೋಣವೆನ್ನುವ ಕ್ಷುಲ್ಲಕ ಲೆಕ್ಕಾಚಾರದಲ್ಲಿದ್ದಾರೆ. ಪ್ರಜೆಗಳ ಮಾತನ್ನಲ್ಲ ಮೌನವನ್ನು ಕೇಳುವುದು ಆರೋಗ್ಯಕರ ರಾಜಕೀಯ.ಪ್ರಭುಗಳೇ, ಇತ್ತ ಚಿತ್ತ ಹರಿಸಿ ಎಂದು ನಾವು ಕೇಳುವುದಿಲ್ಲ. ನಮ್ರವಾಗಿ, ವಿನಯದಿಂದ ಇಲ್ಲಿ ಬಂದು ಪ್ರಜೆಗಳಿಂದ ಸ್ವಲ್ಪ ಕಲಿಯಿರಿ ಎಂದು ಸೂಚಿಸುತ್ತಿದ್ದೇವೆ, ಅದೂ ತಮ್ಮ ಮನಸ್ಸಿನ ಆರೋಗ್ಯದ ದೃಷ್ಟಿಯಿಂದ.

- ರಾಜೇಂದ್ರ ಚೆನ್ನಿ,ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.