ADVERTISEMENT

ವಾಚಕರ ವಾಣಿ | ಡೆಂಗಿ: ಸೊಳ್ಳೆ ನಿಯಂತ್ರಿಸಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 10:39 IST
Last Updated 22 ಜುಲೈ 2024, 10:39 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಡೆಂಗಿ: ಸೊಳ್ಳೆ ನಿಯಂತ್ರಿಸಿ

ರಾಜ್ಯದಲ್ಲಿ ಡೆಂಗಿ ಜ್ವರ ಉಲ್ಬಣಿಸಿರುವುದು ಆತಂಕಕಾರಿ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಡೆಂಗಿ ನಿಯಂತ್ರಣಕ್ಕೆ ನಮ್ಮ ಆರೋಗ್ಯ ವ್ಯವಸ್ಥೆ ಈಗ ಒದ್ದಾಡುತ್ತಿದೆ. ಮಳೆಗಾಲ ಆರಂಭವಾಗುವುದಕ್ಕೆ ಮೊದಲೇ ಮುನ್ನೆಚ್ಚರಿಕೆ ವಹಿಸಬೇಕಿತ್ತು, ಅಲ್ಲವೇ?

ADVERTISEMENT

ಕರ್ನಾಟಕದಲ್ಲಿ ಈ ಜ್ವರ ಪ್ರತಿವರ್ಷ ಹಲವು ಜೀವಗಳನ್ನು ಬಲಿ ಪಡೆಯುತ್ತಿದೆ. ಹೀಗಿರುವಾಗ ರೋಗ ನಿಯಂತ್ರಣಕ್ಕೆ ಹೆಚ್ಚು ಆಸ್ಥೆ ವಹಿಸಬೇಕಿತ್ತು. ಸೂಕ್ತ ಔಷಧೋಪಚಾರದ ಲಭ್ಯತೆಯನ್ನು ಖಾತರಿಪಡಿಸುವ ದಿಸೆಯಲ್ಲಿ ಅಗತ್ಯ ಉಪಕ್ರಮ
ಗಳನ್ನು ಕೈಗೊಳ್ಳಬೇಕಿತ್ತು. ನಿದ್ರಾವಸ್ಥೆಯಲ್ಲಿರುವ ನಮ್ಮ ಸ್ಥಳೀಯ ಸಂಸ್ಥೆಗಳನ್ನು ಈಗಲಾದರೂ ಎಬ್ಬಿಸಿ, ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಜರುಗಿಸುವಂತೆ ಮಾಡಬೇಕು.  

-ನಂದೀಶ್ ದುಗಡಿಹಳ್ಳಿ, ಬೆಂಗಳೂರು

ಜಾಹೀರಾತು ರೂಪದ ಸುದ್ದಿ: ನೈತಿಕತೆ ಉಳಿಯಲಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ₹ 187 ಕೋಟಿ ಮೊತ್ತದ ಹಗರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ 19ರಂದು ವಿಧಾನಸಭೆ ಅಧಿವೇಶನದಲ್ಲಿ ಉತ್ತರ ಕೊಡಬೇಕಿತ್ತು. ಮುಖ್ಯಮಂತ್ರಿ ಸಿದ್ಧತೆಯೊಂದಿಗೆ ಸದನಕ್ಕೆ ಬಂದಿದ್ದರಾದರೂ ಅಂದುಕೊಂಡಂತೆ ಉತ್ತರಿಸಲು ಅವರಿಗೆ ಆಗಲಿಲ್ಲ. ವಿರೋಧ ಪಕ್ಷದವರು ಸದನದ ಬಾವಿಗಿಳಿದು ಗದ್ದಲ ಎಬ್ಬಿಸಿದ್ದರು. ಕೊನೆಗೆ ಮುಖ್ಯಮಂತ್ರಿ ತಾವು ಸಿದ್ಧಪಡಿಸಿ ತಂದಿದ್ದನ್ನು ಗದ್ದಲದ ನಡುವೆ ಓದಿ ಹೇಳಬೇಕಾಯಿತು. ತಮ್ಮ ಎಂದಿನ ಮೊನಚು ಶೈಲಿಯ ಉತ್ತರಕ್ಕೆ ಅವಕಾಶ ಸಿಗದೇ ಇದ್ದುದರಿಂದ ಮುಖ್ಯಮಂತ್ರಿಯವರು ಸದನ ಮುಕ್ತಾಯವಾದ ನಂತರ ಪತ್ರಿಕಾಗೋಷ್ಠಿ ನಡೆಸಿ ದಾಖಲೆಗಳ ಸಮೇತ ವಿಷಯ ಮುಂದಿಟ್ಟರು. ಸದನದಲ್ಲಿ ಸ್ಪಷ್ಟಪಡಿಸಲಾಗದಿದ್ದನ್ನು ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯ ಮೂಲಕ ಜನರ ಮುಂದಿಟ್ಟರೆಂಬುದೇನೊ ಸರಿ. ಆದರೆ ಮರುದಿನ ಅಂದರೆ ಜುಲೈ 20ರ ಪತ್ರಿಕೆಗಳಲ್ಲಿ ವಿಚಿತ್ರ ಆಶ್ಚರ್ಯ ಕಾದಿತ್ತು. ಎಲ್ಲ ಪತ್ರಿಕೆಗಳಲ್ಲಿ ಜಾಹೀರಾತು ಮಾದರಿಯ ಒಂದು ಪುಟದ ವರದಿ. ‘ಪ್ರಜಾವಾಣಿ’ ಪತ್ರಿಕೆಯು ಮುಖ್ಯಮಂತ್ರಿಯವರ ಈ ಸಿದ್ಧಪಡಿಸಿದ ವರದಿಯನ್ನು ಜಾಹೀರಾತು ಎಂದು ಸ್ಪಷ್ಟಪಡಿಸಿತ್ತು. ಕೆಲವು ಪತ್ರಿಕೆಗಳು ಅದನ್ನೂ ಮಾಡದೆ ‘ಸುದ್ದಿ’ ಎಂಬಂತೆ ಬಿಂಬಿಸಿದ್ದವು.

ಈಗೀಗ ಈ ರೀತಿಯ ‘ಜಾಹೀರಾತು ರೂಪದ ಸುದ್ದಿ’ಗಳು ಹೆಚ್ಚಾಗುತ್ತಿವೆ. ಚುನಾವಣೆ, ಹುಟ್ಟುಹಬ್ಬ, ಪಕ್ಷಗಳ ಸಮಾವೇಶಗಳ ಪ್ರಚಾರಕ್ಕೆ ಇದು ಸೀಮೀತವಾಗಿತ್ತು. ಆದರೆ ಈಗ ಪ್ರಕಟವಾದ ಜಾಹೀರಾತು ರೂಪದ ಸುದ್ದಿಯು ಮೂಲದಲ್ಲಿ ಮುಖ್ಯಮಂತ್ರಿ ಸದನದಲ್ಲಿ ಮಾಡಿದ ಭಾಷಣ. ಅದನ್ನು ಜಾಹೀರಾತಿನ ರೂಪದಲ್ಲಿ ಪತ್ರಿಕೆಗಳಿಗೆ ಕೊಡುವುದು ಎಷ್ಟು ಸರಿ? ಮುಖ್ಯಮಂತ್ರಿಯವರು ಸದನದಲ್ಲಿ ಮಾಡುವ ಭಾಷಣಕ್ಕೆ ಮಾಧ್ಯಮಗಳು ಸಹಜವಾಗಿಯೇ ಆದ್ಯತೆ ಕೊಡುತ್ತವೆ. ಆದರೂ ಅವರು ಜಾಹೀರಾತಿನ ಮೊರೆ ಹೋದರೆ ಉಳಿದ ಜನಪ್ರತಿನಿಧಿಗಳಿಗೆ ಇದು ಅಡ್ಡದಾರಿ ಕಲಿಸುವುದಿಲ್ಲವೇ? ಈಗಾಗಲೇ ವಿಧಾನಮಂಡಲವು ‘ಕುಳಗಳು’, ‘ಧಣಿ’ಗಳಿಂದ ತುಂಬಿಹೋಗಿದೆ. ಇವರಿಗೆ ಈ ಮಾದರಿಯ ರುಚಿ ಹತ್ತಿದರೆ ಏನಾಗಬಹುದು?

ಹಾಗೆ ನೋಡಿದರೆ ಸಿದ್ದರಾಮಯ್ಯನವರು ನೈತಿಕತೆ ಉಳಿಸಿಕೊಂಡು ಬಂದ ರಾಜಕಾರಣಿ. ಅವರಾದರೂ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಸದನದ ಭಾಷಣವು ಜಾಹೀರಾತಿನ ರೂಪದ ಸುದ್ದಿಯಾಗುವುದರ ಬಗ್ಗೆ ಸಭಾಧ್ಯಕ್ಷರದ್ದೂ ನಿಗಾ ಬೇಕು. 

⇒ವಾದಿರಾಜ್, ಬೆಂಗಳೂರು

ತುಟ್ಟಿಭತ್ಯೆ: ಇರಲಿ ಮಾನವೀಯ ದೃಷ್ಟಿಕೋನ

ಕೋವಿಡ್ ಕಾಲದಲ್ಲಿ ಸರ್ಕಾರ ತಡೆಹಿಡಿದಿದ್ದ ತುಟ್ಟಿಭತ್ಯೆಯನ್ನು ಬಿಡುಗಡೆ ಮಾಡುವಂತೆ ನೌಕರರ ಸಂಘಗಳು  ಸರ್ಕಾರವನ್ನು ಒತ್ತಾಯಿಸಿವೆ. ಕೋವಿಡ್ ಕಾಲವು ಮನುಕುಲಕ್ಕೆ ಒಂದು ಪರೀಕ್ಷಾ ಘಟ್ಟ. ಅಂಥ ಕ್ಲಿಷ್ಟ ಸ್ಥಿತಿಯಲ್ಲಿ ಜನರ ಪ್ರಾಣ ಉಳಿಸುವುದು ಯಾವುದೇ ದೇಶದ ಸರ್ಕಾರದ ಆದ್ಯತೆಯಾಗಬೇಕಿತ್ತು. ಅದನ್ನೇ ನಮ್ಮ ಸರ್ಕಾರ ಮಾಡಿತು. ಆ ಪರ್ವ ಕಾಲದಲ್ಲಿ ಸರ್ಕಾರಕ್ಕೆ ಹೆಗಲು ಕೊಡುವುದು ಪ್ರತಿ ಪ್ರಜೆಯ ಜವಾಬ್ದಾರಿ. ಸರ್ಕಾರಕ್ಕೆ ಆರ್ಥಿಕ ನೆರವು ಅತ್ಯವಶ್ಯವಾಗಿತ್ತು. ಆಗ ತನ್ನ ನೌಕರರ ತುಟ್ಟಿಭತ್ಯೆಯನ್ನು ತಡೆಹಿಡಿದ ನಡೆ ಸರಿಯಾದುದೇ ಆಗಿತ್ತು. ಆ ಘಟ್ಟದಲ್ಲಿ ತಡೆಹಿಡಿದ ತುಟ್ಟಿಭತ್ಯೆಯನ್ನು ಈಗ ಕೊಡಿ ಎಂದು ಕೇಳುವುದು ಸರಿಯಲ್ಲ.

ಒಂದಿಷ್ಟು ನಿರ್ಗತಿಕರಿಗೆ ಸಹಾಯ ಮಾಡಿದೆವು ಎಂಬ ಮನೋಭಾವ ಮೂಡಿದಾಗ ಸಿಗುವ ತೃಪ್ತಿಯ ಮುಂದೆ, ದೊರೆಯುವ ಕೆಲವೊಂದು ಸಾವಿರ ರೂಪಾಯಿ ಕ್ಷುಲ್ಲಕ ಎನಿಸುತ್ತದೆ. ಕೇಂದ್ರ ಸರ್ಕಾರದ ಒಬ್ಬ ನಿವೃತ್ತ ನೌಕರನಾಗಿ ನನಗೆ ಹಾಗೆ ಅನ್ನಿಸಿದೆ. ನಾನು ಎಂದೂ ಯಾವ ರಾಜಕೀಯ ಪಕ್ಷದ ಪರವಾಗಿ ನಿಲ್ಲುವವನಲ್ಲ. ಇದು, ಒಂದು ಮಾನವೀಯ ದೃಷ್ಟಿಕೋನದ ವಿಶ್ಲೇಷಣೆ ಮಾತ್ರ.

-ಕೃ.ನಾಗೇಶ, ಬೆಂಗಳೂರು

ಅವರ ಜೇಬು ಭರ್ತಿ, ನಮ್ಮ ಸಮಯ ವ್ಯರ್ಥ!

ಕ್ರಿಕೆಟ್‌ಗೆ ನೀಡುವ ಅತಿಯಾದ ಮನ್ನಣೆ ಕುರಿತು ವಸ್ತುನಿಷ್ಠ ವಿಶ್ಲೇಷಣೆ ನಡೆಯಬೇಕು ಎಂಬ ಯೋಗಾನಂದ ಅವರ ಲೇಖನ (ಸಂಗತ, ಜುಲೈ 17) ವಾಸ್ತವಿಕವಾಗಿದೆ. ಹೌದು, ಕ್ರಿಕೆಟ್‌ಗೆ ಈ ಪರಿಯ ಆದರ, ಮನ್ನಣೆ ಬೇಕೆ? ಭಾರತದಲ್ಲಿ ಹಾಕಿ, ಕಬಡ್ಡಿ, ಫುಟ್‌ಬಾಲ್, ಬ್ಯಾಸ್ಕೆಟ್‌ಬಾಲ್, ಟೆನಿಸ್, ಬ್ಯಾಡ್ಮಿಂಟನ್‌ನಂತಹ ಎಷ್ಟೊಂದು ಕ್ರೀಡೆಗಳು ಇವೆ. ಆದರೆ, ಅವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಯಾವುದಕ್ಕೂ ಇಲ್ಲಿ ಮನ್ನಣೆ ಇಲ್ಲ. ಏಕೆ ಹೀಗೆ? ಈ ಕ್ರೀಡೆಗಳ ಸುಪ್ತ ಪ್ರತಿಭೆಗಳು ಬೆಳೆಯಲಾಗುತ್ತಿಲ್ಲ. ಬೆಳಕಿಗೆ ಬರಲು ಆಸ್ಪದವೂ ಇಲ್ಲ.

ಕ್ರಿಕೆಟ್‌ಗೆ ಮಾತ್ರ ರಾಜ ಮರ್ಯಾದೆ. ಉಳಿದ ಕ್ರೀಡೆಗಳತ್ತ ತಿರುಗಿ ನೋಡುವವರೂ ಇಲ್ಲ. ಎಲ್ಲ ಕ್ರೀಡೆಗಳನ್ನೂ ಸರಿಸಮನಾಗಿ ನೋಡಬೇಕಲ್ಲವೇ? ಕ್ರಿಕೆಟ್ ಪಂದ್ಯಕ್ಕೆ ಬಹಳಷ್ಟು ಸಮಯ ವ್ಯರ್ಥವಾಗುತ್ತದೆ. ಈ ಪಂದ್ಯ ಇದ್ದರಂತೂ ಆಬಾಲವೃದ್ಧರಾದಿಯಾಗಿ ಎಲ್ಲರೂ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಟಿ.ವಿ. ಮುಂದೆ ಹಾಜರಾಗುತ್ತಾರೆ. ಮೊದಲೇ ಸೋಮಾರಿಗಳಾದ ಜನರಿಗೆ ‘ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಅದೇ’ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆಡಿದ ಮಾತು, ಜಾರಿದ ಸಮಯವನ್ನು ನಾವು ಎಂದಿಗೂ ಹಿಂಪಡೆಯಲಾಗದು. ಹೀಗಿರುವಾಗ, ಬಹುತೇಕರ ಸಮಯವನ್ನು ಪೋಲು ಮಾಡುವ ಈ ಕ್ರೀಡೆಗೆ ಏಕಿಷ್ಟು ಮಹತ್ವ? ಅಷ್ಟಕ್ಕೂ, ಕೋಟಿಗಟ್ಟಲೆ ಹಣ ಹೋಗುವುದು ಆಟಗಾರರ ಜೇಬಿಗೆ, ಕಳೆದುಕೊಂಡ ಅಮೂಲ್ಯ ಸಮಯ ಮಾತ್ರ ನಮ್ಮ ಪಾಲಿಗೆ.

-ವೀಣಾ ಸುಬ್ರಹ್ಮಣ್ಯ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.