ADVERTISEMENT

ವಾಚಕರ ವಾಣಿ: ಸನ್ಮಾನ್ಯ ಕನ್ನಡಕ್ಕೆ ಅನ್ಯಾಯ ಆಗದಿರಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 22 ಜೂನ್ 2021, 19:45 IST
Last Updated 22 ಜೂನ್ 2021, 19:45 IST

ಈಗ ನಮ್ಮ ನಾಡಿನ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚು ಚರ್ಚೆಗೆ ಬರುತ್ತಿರುವುದು ಕನ್ನಡದ ಅಧ್ಯಯನಕ್ಕೆ ಸಂಬಂಧಿಸಿದ ವಿಷಯ. ಉನ್ನತ ಶಿಕ್ಷಣ ಸಚಿವರು ಪದವಿ ತರಗತಿಯ ಅವಧಿಯನ್ನು ವಿಸ್ತರಿಸುತ್ತಿದ್ದಾರೆ. ಇದುವರೆಗೆ ಮೂರು ವರ್ಷಗಳ ಅಧ್ಯಯನವೇ ಶೈಕ್ಷಣಿಕ ಇತ್ಯಾತ್ಮಕ ವಿನ್ಯಾಸವಾಗಿತ್ತು. ಈಗ ಸಚಿವರು ಅದನ್ನು ನಾಲ್ಕು ವರ್ಷಗಳ ಅವಧಿಗೆ (ಅಂದರೆ ಎಂಟು ಸೆಮಿಸ್ಟರ್) ವಿಸ್ತರಿಸುತ್ತಿದ್ದಾರೆ. ಅದರ ಬಗ್ಗೆ ನಮ್ಮ ತಕರಾರಿಲ್ಲ! ಆದರೆ ಆ ನೆಪದಲ್ಲಿ ಕನ್ನಡ ಬೋಧನೆಗೆ ಪ್ರಾಧಾನ್ಯತೆ ಸಿಗುತ್ತಿಲ್ಲ. ಇದು ವಿಷಾದನೀಯ. ಈಗಾಗಲೇ ತಾಂತ್ರಿಕ ವಿದ್ಯಾಲಯಗಳಲ್ಲಿ ಕನ್ನಡದ ಕಲಿಕೆ ‘ನಾಮಕೆವಾಸ್ತೆ’ ಆಗಿದೆ. ಈಗ ಅವಧಿಯನ್ನು ಕಡಿತಗೊಳಿಸುತ್ತಿರುವುದರಿಂದ ಶೈಕ್ಷಣಿಕ ಅಧೋಗತಿ.

ಸುಧಾರಣೆಗಳು ಇತ್ಯಾತ್ಮಕವಾಗಿರಬೇಕು, ಜ್ಞಾನಾರ್ಜನೆ ಪರವಾಗಿರಬೇಕು. ಬದಲಾವಣೆ ಸಹಜ. ಹಾಗೆಂದು ಅದು ಕನ್ನಡದ ಸ್ಥಾನಮಾನಕ್ಕೆ ಚ್ಯುತಿ ತರಬಾರದು. ಭಾಷಾ ಕಲಿಕೆ ಬಹಳ ಮುಖ್ಯ. ಕನ್ನಡದಲ್ಲಿ ಪ್ರೌಢಿಮೆ ಸಾಧ್ಯವಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೆ ಭಾಷೆಯ ಬಗೆಗಿನ ತಿಳಿವಳಿಕೆ ಸರಿಯಾಗಿದ್ದರೆ ಸಂವಹನ ಸಲೀಸಾಗುತ್ತದೆ. ತಾಂತ್ರಿಕ ಪದವಿ ಗಳಿಸುವಲ್ಲಿ ವಿದ್ಯಾರ್ಥಿ ನಮ್ಮ ನಾಡಿನ ಮೂಲ ತಳಹದಿಯನ್ನೇ ಮರೆಯಬಾರದು. ನಾಲ್ಕು ಸೆಮಿಸ್ಟರ್‌ಗಳಲ್ಲೂ ಕನ್ನಡವನ್ನೂ ಇತರ ವಿಷಯಗಳ ಜೊತೆ ಸಮರ್ಥವಾಗಿ ಗ್ರಹಿಸಬೇಕು. ಭಾಷೆಯ ಅಧ್ಯಯನದ ಬಗೆಗೆ ಬೇಕಾಬಿಟ್ಟಿ ನಿಲುವು ಸರಿಯಲ್ಲ. ಕನ್ನಡ ಭಾಷೆಯಲ್ಲೂ ಅವನು ಪದವಿ ಗಳಿಸುವುದಾದರೆ ಆಗ ಶಿಕ್ಷಣ ಅರ್ಥಪೂರ್ಣ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಧೋರಣೆ ಸರ್ವಸಮ್ಮತವಲ್ಲ. ಕನ್ನಡದಲ್ಲೂ ಮೂವತ್ತೈದು ಅಂಕ ತೆಗೆದುಕೊಂಡು ತೇರ್ಗಡೆ ಆದಾಗ ಮಾತ್ರ- ತಾಂತ್ರಿಕ ವಿಷಯಗಳಲ್ಲಿ ಪರಿಣತಿ ಪಡೆದದ್ದಕ್ಕೆ ಸಾಕ್ಷಿ!

ಸರಿಯಾದ ಭಾಷಾಪ್ರಯೋಗ ಅತ್ಯಂತ ಅವಶ್ಯ. ಕನ್ನಡವಾಗಲೀ ಇಂಗ್ಲಿಷ್‍ ಆಗಲೀ ವ್ಯಾಕರಣಬದ್ಧವಾಗಿ ಬರೆಯುವ, ಓದುವ ಪ್ರೌಢಿಮೆ ಮೆರೆಯಬೇಕು. ವಿದೇಶಗಳಲ್ಲಿ ಓದಲು ಹೋಗುವ ಭಾರತೀಯ ವಿದ್ಯಾರ್ಥಿಗಳು ತಾವು ಕಲಿತ ವಿಷಯಗಳಲ್ಲಿ ಶುದ್ಧವಾಗಿರಬೇಕೆಂದೂ, ಅದರಲ್ಲಿ ಪರಿಣತಿ ಇರಬೇಕೆಂದೂ ಆಶಿಸುವುದರಿಂದ ಅದಕ್ಕೆ ಆದ್ಯತೆ ಸಿಗುತ್ತದೆ. ಭಾಷೆಯ ವಿಷಯದಲ್ಲಿ ಇದು ಐಚ್ಛಿಕವಾಗಿರುವುದರಿಂದ ಪಠ್ಯಕ್ರಮ ಹಗುರಾಗುತ್ತಿದೆ. ಕನ್ನಡವೆಂದರೆ ತಿರಸ್ಕಾರ ಬೇಡ. ಇದನ್ನು ತಾಂತ್ರಿಕ ವಿಶ್ವವಿದ್ಯಾಲಯಗಳೂ ವೈದ್ಯಕೀಯ ವಿಶ್ವವಿದ್ಯಾಲಯಗಳೂ ಮೊದಲು ಅರ್ಥಮಾಡಿಕೊಳ್ಳಬೇಕು.

ADVERTISEMENT

ಎಂಜಿನಿಯರ್‌ಗಾಗಲೀ ಡಾಕ್ಟರ್‌ಗಾಗಲೀ ಭಾಷೆ ಬಹಳ ಮುಖ್ಯವಾಗುತ್ತದೆ. ಇಲ್ಲದೆಹೋದರೆ ಸಂವಹನ ಕಷ್ಟ ಸಾಧ್ಯ. ಇನ್ನು ಕನ್ನಡ ಬೋಧನೆಯನ್ನು ಕನಿಷ್ಠ ಮೂರು ವರ್ಷಗಳಿಗೆ (ಆರು ಸೆಮಿಸ್ಟರ್) ನಿಗದಿ ಮಾಡುವುದರಿಂದ ಕನ್ನಡ ನಾಡಿನಲ್ಲಿ ಕನ್ನಡ ಅಧ್ಯಾಪಕರಿಗೆ ನಿರುದ್ಯೋಗ ಸಮಸ್ಯೆ ಪರಿಹಾರವಾಗುತ್ತದೆ. ಇದರಿಂದ, ಕನ್ನಡ ಎಂ.ಎ ಅಥವಾ ಕನ್ನಡ ಪಿಎಚ್.ಡಿ. ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ.

ಈಗಲೂ ಕಾಲ ಮಿಂಚಿಲ್ಲ. ಉನ್ನತ ಶಿಕ್ಷಣ ಸಚಿವರು ಮತ್ತೊಮ್ಮೆ ಮಗದೊಮ್ಮೆ ಮರುಚಿಂತನೆ ಮಾಡಲಿ. ಕನ್ನಡದ ಬೇರುಗಳು ಭದ್ರವಾಗಬೇಕು. ಕನ್ನಡದ ಕಲಿಕೆ ಅರ್ಥಪೂರ್ಣ ಆಗಬೇಕು. ಕನ್ನಡದ ಬಗ್ಗೆ ವೇದಿಕೆ ಭಾಷಣದಿಂದಪ್ರಯೋಜನವಿಲ್ಲ.

- ಡಾ. ದೊಡ್ಡರಂಗೇಗೌಡ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.