ವಾಚಕರ ವಾಣಿ
ಭಾಷಾ ಕಲಿಕೆ: ತಾರತಮ್ಯ ದೂರವಾಗಲಿ
‘ಪ್ರಥಮ ಭಾಷೆ ಮತ್ತು ನ್ಯಾಯದ ಗಂಟೆ’ ಎಂಬ ಪು.ಸೂ.ಲಕ್ಷ್ಮೀನಾರಾಯಣ ರಾವ್ ಅವರ ಲೇಖನ
(ಚರ್ಚೆ, ಮೇ 5) ಮತ್ತು ಅದೇ ವಿಷಯದ ಕುರಿತು ಪ್ರಕಟವಾದ ಜನಾರ್ದನ ಚ.ಶ್ರೀ. ಅವರ, ಪಿಯುಸಿ ಹಂತದ ಭಾಷಾ ಕಲಿಕೆ ಕುರಿತ ಮೂಲ ಲೇಖನ (ಸಂಗತ, ಮೇ 1) ಸಂಸ್ಕೃತ, ಹಿಂದಿ ಮತ್ತು ಕನ್ನಡ ಭಾಷೆಗಳ ಕಲಿಕೆ, ಪರಿಣತಿ
ಹಾಗೂ ಮೌಲ್ಯಮಾಪನದಲ್ಲಿ ಐದಾರು ದಶಕಗಳಿಂದ ನಡೆಯುತ್ತಾ ಬಂದಿರುವ ತರತಮ ಧೋರಣೆಯನ್ನು
ಸ್ಪಷ್ಟಪಡಿಸಿವೆ. ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಓದಿ ಪೂರ್ಣಾಂಕ ಪಡೆದಿರುವ ವಿದ್ಯಾರ್ಥಿಗಳಿಗಿಂತ ತೃತೀಯ ಭಾಷೆಯಲ್ಲಿ ಪೂರ್ಣಾಂಕ ಪಡೆದಿರುವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು ದುಪ್ಪಟ್ಟು ಇದೆ. ಭಾಷೆಗಳ ವಿಷಯದಲ್ಲಿ ತರತಮ ಕಲಿಕೆ ಮತ್ತು ತರತಮ ಮೌಲ್ಯಮಾಪನವನ್ನು ಇದು ಪ್ರತಿಫಲಿಸುತ್ತದೆ.
ಸಂಸ್ಕೃತ ಮತ್ತು ಹಿಂದಿ ಭಾಷೆ ತೆಗೆದುಕೊಂಡು ಹೆಚ್ಚಿನ ಪರಿಣತಿ, ಪರಿಶ್ರಮ ಇಲ್ಲದೆ ಹೆಚ್ಚು ಅಂಕ ಪಡೆದು
ಪಾಸಾಗಿಬಿಡಬಹುದು. ಅದರ ಪ್ರಯೋಜನ ಎಷ್ಟು, ಏನು ಎಂಬುದು ನಗಣ್ಯವಾಗಿದೆ. ಇದರಿಂದ ನಮ್ಮ ರಾಜ್ಯಭಾಷೆ ನಲುಗುವಂತಾಗಿದೆ.
ಎಸ್ಎಸ್ಎಲ್‌ಸಿಯಲ್ಲಿ ಹಿಂದಿ ಕಡ್ಡಾಯ ತೃತೀಯ ಭಾಷೆಯಾಗಿ, ಕಲಿಕೆಯಿಂದ ಅನುತ್ತೀರ್ಣವಾಗುತ್ತಿರುವ ಮಕ್ಕಳ ಸಂಖ್ಯೆ ದೊಡ್ಡದಿದೆ. ಮಕ್ಕಳ ಮೇಲೆ ಹಿಂದಿ ಭಾಷೆಯ ಕಲಿಕೆಯ ಭಾರವನ್ನು ಸ್ವಲ್ಪ ಕಡಿಮೆ ಮಾಡಿ ಕನ್ನಡ ಮತ್ತು ಇಂಗ್ಲಿಷ್ ಭಾಷೆ ಕಲಿಕೆಗೆ ಹೆಚ್ಚು ಒತ್ತು ನೀಡಬಹುದಾಗಿದೆ. ಪಿಯುಸಿ ಹಂತದಲ್ಲಿ ಬೇರೆ ಬೇರೆ ಭಾಷೆಗಳ ಕಲಿಕೆಯಲ್ಲಿ ಮತ್ತು
ಮೌಲ್ಯಮಾಪನದಲ್ಲಿ ಆಗುತ್ತಿರುವ ತಾರತಮ್ಯವನ್ನು ಕೂಡಲೇ ದೂರ ಮಾಡಬೇಕಾಗಿದೆ. ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮ ಈಗ ಮುನ್ನೆಲೆಗೆ ಬರುತ್ತಿದೆ. ಎರಡೂ ಮಾಧ್ಯಮಗಳ ವಿದ್ಯಾರ್ಥಿಗಳ ಎಸ್ಎಸ್ಎಲ್‌ಸಿ ಫಲಿತಾಂಶವನ್ನು ವಿಷಯವಾರು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ, ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದ ಕಲಿಕೆಯ ಸಾಧಕ– ಬಾಧಕಗಳನ್ನೂ ಅರಿಯಬಹುದಾಗಿದೆ. ಶಿಕ್ಷಣ ಇಲಾಖೆ, ಪಿಯುಸಿ ಮಂಡಳಿ ಈ ಕುರಿತು ಗಮನಹರಿಸಬಹುದೇ?
⇒ವೆಂಕಟೇಶ ಮಾಚಕನೂರ, ಧಾರವಾಡ
ಅರಣ್ಯ ಪ್ರದೇಶದಲ್ಲಿ ಹೆದ್ದಾರಿ ಯೋಜನೆ ಸಲ್ಲ
ವನ್ಯಜೀವಿಗಳಿಗೆ ಹೆದ್ದಾರಿಗಳು ಉರುಳಾಗಿ ಪರಿಣಮಿಸಿರುವುದನ್ನು ಲೇಖನ (ಒಳನೋಟ, ಮೇ 4) ವಿವರಿಸಿದೆ. ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿ ಪ್ರಾಣಿಗಳ ಮೇಲೆ ಸಹಾನುಭೂತಿ ತೋರುವ ನಾವೇ ಹೀಗೆ ಪ್ರಾಣಿಗಳ ಹತ್ಯೆ ಮಾಡುತ್ತಿರುವುದು ಬೇಸರದ ಸಂಗತಿ. ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಹಾಗೂ ಪರಿಸರ ಸೂಕ್ಷ್ಮ ವಲಯದಲ್ಲಿ
ಹೆದ್ದಾರಿ ಯೋಜನೆಗಳನ್ನು ರೂಪಿಸುವುದು ನಮಗಿರುವ ಆಯ್ಕೆಯಾಗಬಾರದು. ವನ್ಯಜೀವಿಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು.⇒ಸುರೇಂದ್ರ ಪೈ, ಭಟ್ಕಳ
ಬೇಕಾಗಿದೆ ಪ್ರಗತಿಪರ ಚಿಂತನೆಯ ಕಿರುಚಿತ್ರ
ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯದ ಅರ್ಚಕರಿಗೆ ಪ್ರಗತಿಪರ ಚಿಂತನೆಯನ್ನು ಪರಿಚಯಿಸಲು ಅನುಕೂಲವಾಗುವಂತೆ ಗುರುಕುಲ ಆರಂಭಿಸಲು ಚಿತ್ರದುರ್ಗದಲ್ಲಿ ಜಾಗ ಗುರುತಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿರುವುದಾಗಿ (ಪ್ರ.ವಾ., ಮೇ 4) ವರದಿಯಾಗಿದೆ. ಪ್ರಗತಿಪರ ಚಿಂತನೆಯ ಅಗತ್ಯವು ಹಿಂದುಳಿದ, ದಲಿತ ಸಮುದಾಯಗಳೆನ್ನದೆ ನಾಡಿನಾದ್ಯಂತ ಎಲ್ಲ ಸಮಾಜಗಳಿಗೂ ಬೇಕಾಗಿದೆ. ಅದಕ್ಕಾಗಿ ನಿರ್ದಿಷ್ಟ ಜಾಗ ಹುಡುಕಿ, ಅಲ್ಲಿ ‘ದಲಿತ ಗುರುಕುಲ’ ಮಾಡಿದರೆ, ಈಗ ನಾಡಿನಲ್ಲಿರುವ ಬಹುತೇಕ ಬಲಿತವರ ಮಠಗಳಂತಾಗಿ, ಅವುಗಳಲ್ಲಿ ಇದೂ ಒಂದಾಗಿ, ಮುಂದೆ ಜಡವಾದೀತೆಂಬ ಭವಿಷ್ಯದ ಭಯವೂ ಪ್ರಜ್ಞಾವಂತರಿಗೆ ಬರಬಹುದು.
ನಾವು ಮಕ್ಕಳಿದ್ದಾಗ ವಾರ್ತಾ ಇಲಾಖೆಯ ಸಂಚಾರ ವಾಹನ ಬಂದು ಊರಿನ ಮಧ್ಯ ಭಾಗದಲ್ಲಿ ನಿಲ್ಲುತ್ತಿತ್ತು. ಆ ವಾಹನದ ಬದಿಗೆ ಇಲ್ಲವೇ ಮನೆಯ ಗೋಡೆಯ ಮೇಲೆ ಕಪ್ಪು ಬಿಳುಪಿನ ಕಿರುಚಿತ್ರಗಳು ಮೂಡಿಬರುತ್ತಿದ್ದವು. ಮಲೇರಿಯಾ, ಸಿಡುಬು, ಪ್ಲೇಗ್, ಕಾಲರಾ, ಕಾಲುಬಾಯಿಯಂತಹ ರೋಗಗಳ ನಿವಾರಣೆ ಬಗ್ಗೆ ಅಗತ್ಯ ಮಾಹಿತಿ ಕೊಡುತ್ತಿದ್ದರು. ಸ್ವಾತಂತ್ರ್ಯ ಹೋರಾಟಗಾರರ ವ್ಯಕ್ತಿಚಿತ್ರಗಳು, ಸಾಮಾಜಿಕ ಕರ್ತವ್ಯ, ಜವಾಬ್ದಾರಿಗಳಿಗೆ ಸಂಬಂಧಿಸಿದ ವಿಷಯಗಳು ಮೂಡಿಬರುತ್ತಿದ್ದವು. ಅವುಗಳನ್ನು ನೋಡಿ ಅನಕ್ಷರಸ್ಥರಿಗೂ ಒಂದಷ್ಟು ತಿಳಿವಳಿಕೆ ಮೂಡುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಮನೆ ಮನೆಗೆ ಟಿ.ವಿ, ಮೊಬೈಲ್ ಫೋನ್, ಇಂಟರ್ನೆಟ್ ಬಂದಮೇಲೆ ಇಲಾಖೆ ತನ್ನ ಕೆಲಸವನ್ನು ಕಡಿಮೆ ಮಾಡಿದಂತಿದೆ. ಅಲ್ಲದೆ ಶಾಲಾ ಕಾಲೇಜುಗಳಲ್ಲಿ ಹೆಚ್ಚಾಗಿ ಅಂಕ ಗಳಿಕೆಯ ಕಡೆಗೆ ಶಿಕ್ಷಣ ಕೇಂದ್ರೀಕೃತವಾಗಿದೆ. ವಾಟ್ಸ್‌ಆ್ಯಪ್, ಫೇಸ್‌ಬುಕ್ ಕಡೆಗೆ ಯುವಜನರ ಗಮನ ಹೋದಮೇಲೆ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗಿದೆ. ಹಲವು ಕಾರಣಗಳಿಂದಾಗಿ ವೈಜ್ಞಾನಿಕ ಮತ್ತು ವೈಚಾರಿಕ ಪ್ರಜ್ಞೆ ಇಲ್ಲವಾಗಿದೆ. ನಾವೀಗ ಮತ್ತೆ ಹಳೆಯದರ ಕಡೆಗೆ ಹೆಜ್ಜೆ ಹಾಕಬೇಕಾಗಿದೆ. ಪ್ರತಿ ಜಿಲ್ಲೆ, ತಾಲ್ಲೂಕು, ಗ್ರಾಮಕ್ಕೂ ಮುಟ್ಟುವಂತೆ ಮಹಾತ್ಮರ ವ್ಯಕ್ತಿಚಿತ್ರಗಳು ಮತ್ತು ಅವರ ಬೋಧನೆಗಳನ್ನು ಕಿರುಚಿತ್ರಗಳ ರೂಪದಲ್ಲಿ ಪ್ರತಿಯೊಬ್ಬರಿಗೂ ಮುಟ್ಟಿಸಲು ಸರ್ಕಾರ ಪ್ರಯತ್ನ ಮಾಡಲೇಬೇಕಾದ ತುರ್ತು ಅಗತ್ಯವಿದೆ. ⇒ತಾ.ಸಿ.ತಿಮ್ಮಯ್ಯ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.