ಕಸ ಸುರಿಯುವ ಹಬ್ಬ: ಉಕ್ರೇನ್ ಮಾದರಿ
ಎಲ್ಲೆಂದರಲ್ಲಿ ಕಸ ಎಸೆಯುವವರ ಮನೆಗಳನ್ನು ಗುರುತಿಸಿ ಅಂಥ ಮನೆಯ ಎದುರೇ ‘ಕಸ ಸುರಿಯುವ ಹಬ್ಬ’ವನ್ನು ಬೆಂಗಳೂರಿನಲ್ಲಿ ಆರಂಭಿಸಿದ ‘ಘನತ್ಯಾಜ್ಯ ನಿರ್ವಹಣಾ ಸಂಸ್ಥೆ’ಯ ನಡೆಯನ್ನು (ಪ್ರ.ವಾ., ಅ. 31) ರಾಜ್ಯದ ಎಲ್ಲ ನಗರ, ಪಟ್ಟಣಗಳ ನಾಗರಿಕರೂ ಸ್ವಾಗತಿಸಲಿಕ್ಕೆ ಸಾಕು. ಅದೆಷ್ಟೊ ಕಡೆ ನಗರಪಾಲಿಕೆ– ಪುರಸಭೆಗಳ ಬೇಜವಾಬ್ದಾರಿ ಜಾಸ್ತಿಯೇ ಇರುತ್ತದೆ. ಕೆಲವೆಡೆ ಪೌರಕಾರ್ಮಿಕರೇ ಕಸದ ರಾಶಿಯನ್ನು ಚರಂಡಿಗೆ ತಳ್ಳುವುದನ್ನು, ಬೆಂಕಿ ಹಚ್ಚುವುದನ್ನು ನಾನೇ ರೆಕಾರ್ಡ್ ಮಾಡಿ ಆರೋಗ್ಯಾಧಿಕಾರಿಗೆ ದೂರು ಕೊಟ್ಟಿದ್ದೇನೆ. ಅವರೋ ತಮಗೆ ‘ಕಸ ಎತ್ತುವ ಯಂತ್ರವಿಲ್ಲ, ಬಿಡಿಎ ನಮಗಿನ್ನೂ ಈ ಬಡಾವಣೆಯನ್ನು ಹಸ್ತಾಂತರಿಸಿಲ್ಲ, ಅದಿಲ್ಲ ಇದಿಲ್ಲ’ವೆಂದು ಮೇಲಿನವರತ್ತ ಬೊಟ್ಟು ಮಾಡುವಾಗ ನಾವೇನು ಮಾಡಲು ಸಾಧ್ಯ?
ಉಕ್ರೇನ್ ದೇಶದ ರಾಜಧಾನಿಯಲ್ಲಿ ಸಂಸತ್ ಸದಸ್ಯನನ್ನೇ ಹಿಡಿದು ಕಸದ ತೊಟ್ಟಿಗೆ ಬಿಸಾಕಿ ಆತನ ಮೇಲೆ ಮತ್ತಷ್ಟು ಕಸ ಸುರಿದ ಘಟನೆ 2014ರಲ್ಲಿ ನಡೆದಿತ್ತು (ಅಂತರ್ಜಾಲದಲ್ಲಿ ಅದರ ವಿಡಿಯೊ ಈಗಲೂ ಲಭ್ಯವಿದೆ). ನಮ್ಮಲ್ಲಿ ಅದೆಷ್ಟೊ ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಿಗೆ ಜನಪ್ರತಿನಿಧಿಗಳೇ ಇಲ್ಲ. ನಾವೂ ಮೇಲಿನವರನ್ನು ಹುಡುಕಿಕೊಂಡು ಹೋಗೋಣವೇ ಉಕ್ರೇನ್ ಮಾದರಿಯ ಕಾರ್ಯಾಚರಣೆಗೆ?
⇒ನಾಗೇಶ ಹೆಗಡೆ, ಕೆಂಗೇರಿ
ಕನ್ನಡ ಶಾಲೆ ಉಳಿವೇ ಕನ್ನಡದ ಗೆಲುವು
ಕನ್ನಡದ ಶ್ರೇಷ್ಠ ಸಾಹಿತಿಗಳ ಪರಿಚಯ ಮತ್ತು ಸಾಹಿತ್ಯಕ್ಕೆ ಇರುವ ಶಕ್ತಿಯು ತಂತ್ರಜ್ಞಾನ ಯುಗದಲ್ಲಿ ಕಣ್ಮರೆಯಾಗಬಹುದು ಎನ್ನುವ ಆತಂಕವಿದೆ. ಸದ್ಯ ಕನ್ನಡವನ್ನು ಉಳಿಸಬೇಕಾಗಿರುವುದು ನಾಮಫಲಕದ ಅಳವಡಿಕೆಯಿಂದಲ್ಲ. ಕನ್ನಡ ಮಾಧ್ಯಮ ಶಾಲೆಗಳಿಗೆ ಪ್ರೋತ್ಸಾಹ ನೀಡಿದರಷ್ಟೇ ಕನ್ನಡ ಉಳಿಯಲು ಸಾಧ್ಯ.
⇒ಕಾರ್ತಿಕ್ ಕಾರ್ ಗದ್ದೆ, ಬೆಂಗಳೂರು
ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ಬೇಕು
ಶಾಲಾ ವಿದ್ಯಾರ್ಥಿಗಳೂ ಹೃದಯಾಘಾತದಿಂದ ಮೃತಪಡುತ್ತಿರುವ ಸುದ್ದಿಗಳು ವರದಿಯಾಗುತ್ತಿವೆ. ಇದು ಸಮಾಜಕ್ಕೆ ಎಚ್ಚರಿಕೆಯ ಗಂಟೆ. ಬದಲಾಗುತ್ತಿರುವ ಜೀವನಶೈಲಿಯಿಂದ ವಿದ್ಯಾರ್ಥಿಗಳಲ್ಲಿ ತೀವ್ರತರವಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ದುರಂತವೆಂದರೆ, ಆರೋಗ್ಯದ ಬಗೆಗಿನ ನಿರ್ಲಕ್ಷ್ಯದಿಂದಲೋ, ಬಡತನದಿಂದಲೋ, ಸೌಲಭ್ಯದ ಕೊರತೆಯಿಂದಲೋ ಕಾಯಿಲೆಗಳನ್ನು ಸರಿಯಾದ ಸಮಯದಲ್ಲಿ ಗುರ್ತಿಸಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಗುರುತಿಸಿದರೂ, ಹಣಕಾಸಿನ ಸಮಸ್ಯೆಯಿಂದ ಚಿಕಿತ್ಸೆ ಪಡೆಯಲಾಗುತ್ತಿಲ್ಲ. ಹಾಗಾಗಿ, ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಆರೋಗ್ಯ ವಿಮಾ ಸೌಲಭ್ಯ ಒದಗಿಸಬೇಕಿದೆ.
⇒ಪುನೀತ್ ಬಿ., ಅಜ್ಜಂಪುರ
ವಿಶ್ವವಿದ್ಯಾಲಯಕ್ಕೆ ಶರೀಫರ ಹೆಸರಿಡಲಿ
‘ಕನ್ನಡದ ಕಬೀರ’ ಎಂದು ಹೆಸರಾದ ಶಿಶುನಾಳ ಶರೀಫ ಸಾಹೇಬರು ನಾಡು ಕಂಡ ಮಹಾಪುರುಷರು. ತತ್ವಪದಗಳ ಮೂಲಕ ಧಾರ್ಮಿಕ ಸಮನ್ವಯ ಸಾರಿದ ಸಂತ. ಹಿಂದೂ–ಮುಸ್ಲಿಮರಿಬ್ಬರಿಗೂ ಅಚ್ಚುಮೆಚ್ಚಿನವರಾಗಿದ್ದಾರೆ. ಆದರೆ, ಕರ್ನಾಟಕದಲ್ಲಿ ಇಲ್ಲಿಯವರೆಗೆ ಅವರಿಗೆ ಸಲ್ಲಬೇಕಾದಷ್ಟು ಗೌರವ ಸರ್ಕಾರದಿಂದ ಸಂದಿಲ್ಲ. ಅವರ ಹೆಸರಿನಲ್ಲಿ ಎದ್ದು ಕಾಣುವ ಯಾವ ಗುರುತೂ ನಾಡಿನಲ್ಲಿಲ್ಲ. ವಿಶ್ವವಿದ್ಯಾಲಯವೊಂದಕ್ಕೆ ಅವರ ಹೆಸರಿಡುವ ಮೂಲಕ ಸೂಕ್ತ ಗೌರವ ಸಲ್ಲಿಸಬೇಕಿದೆ. ಕೋಮುವಾದದ ಕತ್ತಲು ಕವಿದಿರುವ ಈ ಸಮಯದಲ್ಲಿ ಇಂತಹ ದಿಟ್ಟಕ್ರಮ ಅತ್ಯಗತ್ಯವಾಗಿದೆ.
⇒ರೇಷ್ಮಾಬಾನು ದೇಗಿನಾಳ, ಬಬಲೇಶ್ವರ
ನಾಡ ಧ್ವಜಾರೋಹಣ: ಗೊಂದಲ ತಪ್ಪಿಸಿ
ಎಲ್ಲೆಡೆ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಆದರೆ, ಧ್ವಜಾರೋಹಣ ಕುರಿತಂತೆ ಗೊಂದಲ ತಲೆದೋರಿದೆ. ರಾಷ್ಟ್ರೀಯ ಧ್ವಜಸಂಹಿತೆಯ ಉಲ್ಲೇಖದಂತೆ ಕರ್ನಾಟಕ ಸರ್ಕಾರವು 2008ರಲ್ಲಿ ‘ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದುವುದು ಸಂಕುಚಿತ ಭಾವನೆಗೆ ಎಡೆ ಮಾಡಿಕೊಡುತ್ತದೆ. ಎಲ್ಲಾ ಸರ್ಕಾರಿ ಸಮಾರಂಭದಲ್ಲಿ ರಾಷ್ಟ್ರಧ್ವಜ ಮಾತ್ರ ಹಾರಿಸಬೇಕು’ ಎಂದು ಆದೇಶಿಸಿತ್ತು. ಬೆಂಗಳೂರಿನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರು, ರಾಷ್ಟ್ರಧ್ವಜ ಹಾಗೂ ನಾಡಧ್ವಜ ಹಾರಿಸಿದರು. ಕೆಲವು ಜಿಲ್ಲೆ, ತಾಲ್ಲೂಕಿನಲ್ಲಿ ರಾಷ್ಟ್ರಧ್ವಜ ಮಾತ್ರ ಹಾರಿಸಿದರೆ, ಇನ್ನುಳಿದೆಡೆ ಕೇವಲ ನಾಡಧ್ವಜ ಹಾರಿಸಲಾಗಿದೆ. ಈ ಗೊಂದಲ ಪರಿಹರಿಸಬೇಕಿದೆ.
⇒ಸುರೇಂದ್ರ ಪೈ, ಭಟ್ಕಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.