ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 26 ನವೆಂಬರ್ 2025, 19:13 IST
Last Updated 26 ನವೆಂಬರ್ 2025, 19:13 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

‘ಕೇಣಿ’ ಬಂದರಿನ ತೆರೆಮರೆಯ ವೃತ್ತಾಂತ

ಅಂಕೋಲಾ ತಾಲ್ಲೂಕಿನ ಕೇಣಿಯಲ್ಲಿ ಸರ್ವಋತು ಆಳಸಮುದ್ರ ಗ್ರೀನ್‌ಫೀಲ್ಡ್‌ ಬಂದರು ನಿರ್ಮಿಸಲು ಉದ್ದೇಶಿಸಲಾಗಿದೆ. ಇದನ್ನು ಆಕ್ಷೇಪಿಸಿ ಅಂಕೋಲಾ ಬಂದ್‌ ಕೂಡ ನಡೆದಿದೆ. ವಾಣಿಜ್ಯ ಬಂದರು ನಿರ್ಮಾಣವಾದರೆ ಎಲ್ಲವೂ ಮುಳುಗಿಹೋಗಲಿದೆ ಎನ್ನುವುದು ಸ್ಥಳೀಯರ ಆತಂಕ. ಆದರೆ, ಮಂಗಳೂರಿನಲ್ಲಿ ಹಾಗೂ ಪಕ್ಕದ ಗೋವಾದ ವಾಸ್ಕೋದಲ್ಲಿ ಬಂದರು ನಿರ್ಮಾಣವಾದಾಗ ಏನೂ ಮುಳುಗಿಹೋಗಿಲ್ಲ! ಬಂದರು ನಿರ್ಮಾಣ ಕುರಿತು ಸರ್ಕಾರ ಹಾಗೂ ಸ್ಥಳೀಯ ಆಡಳಿತವು ಜನರಿಗೆ ಸರಿಯಾಗಿ ವಿವರಿಸಿಲ್ಲ. ಮೀನುಗಾರರು ಮತ್ತು ಮೀನು ತಿನ್ನುವವರ ಮಕ್ಕಳು ಇಂದು ಒಂದೇ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದಾರೆ. ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಪಡೆಯುತ್ತಿದ್ದಾರೆ. ಆದರೆ ಮೀನುಗಾರಿಕೆ ಮಾಡಲು ಬೇರೆ ರಾಜ್ಯದ, ಸಮುದ್ರದ ಪರಿಚಯವೇ ಇಲ್ಲದ ಜಾರ್ಖಂಡ್‌, ಉತ್ತರಾಖಂಡ, ಬಿಹಾರದ ಜನರು ಬರುತ್ತಿದ್ದಾರೆ. ಇದಕ್ಕೆ ಉತ್ತರಿಸುವವರು ಯಾರು?

ADVERTISEMENT

⇒ಚಂದ್ರಕಾಂತ ನಾಮಧಾರಿ, ಅಂಕೋಲಾ 

ಅಪರಾಧ ಕೃತ್ಯ: ರಕ್ಷಕರೇ ಭಕ್ಷಕರಾದರೆ...

ಬೆಂಗಳೂರಿನಲ್ಲಿ ಸಿಎಂಎಸ್‌ ಏಜೆನ್ಸಿಯ ವಾಹನ ಅಡ್ಡಗಟ್ಟಿ ನಡೆದ ನಗದು ದರೋಡೆ ಹಿಂದೆ ಓರ್ವ ಕಾನ್‌ಸ್ಟೆಬಲ್‌ ಕೈವಾಡ ಇರುವುದು ಬಯಲಾಗಿದೆ. ದಾವಣಗೆರೆಯಲ್ಲಿ ಇಬ್ಬರು ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳು ಚಿನ್ನಾಭರಣ ಸುಲಿಗೆ ಮಾಡಿರುವುದು ವರದಿಯಾಗಿದೆ. ಪಿಎಸ್‌ಐ ನೇಮಕ ಹಗರಣದಲ್ಲಿ ಹಿರಿಯ ಐಪಿಎಸ್‌ ಅಧಿಕಾರಿಯೇ ಭಾಗಿಯಾಗಿದ್ದು, ಆ ಪ್ರಕರಣ ವಿಚಾರಣೆ ಹಂತದಲ್ಲಿದೆ. ಇವೆಲ್ಲ ಪ್ರಕರಣಗಳು ಗೃಹ ಇಲಾಖೆಯ ವೈಫಲ್ಯಕ್ಕೆ ಕನ್ನಡಿ ಹಿಡಿದಿವೆ. ಅಪರಾಧ ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿ ನೇರವಾಗಿ ಭಾಗಿಯಾಗುತ್ತಿರುವುದು ಆತಂಕಕಾರಿ. ಈ ಪ್ರಕರಣಗಳನ್ನು ಗಮನಿಸಿದರೆ, ಪೊಲೀಸ್‌ ತರಬೇತಿ ಕೇಂದ್ರಗಳಲ್ಲಿ ನಿಜವಾಗಿ ಏನು ಕಲಿಸಲಾಗುತ್ತಿದೆ ಎನ್ನುವ ಅನುಮಾನ ಕಾಡದಿರದು. ಸದ್ಯ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ‘ಬೇಲಿಯೇ ಎದ್ದು ಹೊಲ ಮೇಯುವ’ ಸ್ಥಿತಿ ಸೃಷ್ಟಿಯಾಗಿದೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎನ್ನುವುದೇ ಯಕ್ಷಪ್ರಶ್ನೆ.   

⇒ಚಂದ್ರಕುಮಾರ್ ಡಿ., ಬೆಂಗಳೂರು

ಅಗಲಿದ ಜನಪರ ಅಧಿಕಾರಿಗೆ ಶ್ರದ್ಧಾಂಜಲಿ

ಸರ್ಕಾರಿ ಅಧಿಕಾರಿಗಳು ಜನಮಾನಸದಲ್ಲಿ ಉಳಿಯಬೇಕಾದರೆ ಸಮಾಜಮುಖಿ ಕೆಲಸಗಳ ಮೂಲಕ ಗುರ್ತಿಸಿಕೊಳ್ಳಬೇಕು. ರಸ್ತೆ ಅಪಘಾತದಲ್ಲಿ ದುರಂತ ಸಾವು ಕಂಡ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಇದಕ್ಕೆ ನಿದರ್ಶನ. ದಾವಣಗೆರೆ ಜಿಲ್ಲಾಧಿಕಾರಿ ಆಗಿದ್ದಾಗ ಇತರ ಜಿಲ್ಲಾಧಿಕಾರಿಗಳಂತೆ ಸೇವೆ ಸಲ್ಲಿಸಿದ್ದರೆ ಅವರೊಬ್ಬ ಸಾಮಾನ್ಯ ಅಧಿಕಾರಿಯಾಗಿರುತ್ತಿದ್ದರು. ಬಡಕುಟುಂಬದಲ್ಲಿ ಜನಿಸಿದ್ದ ಅವರು, ಜವಾರಿ ಭಾಷೆ ಮೂಲಕವೇ ಸಾರ್ವಜನಿಕರಿಗೆ ಹತ್ತಿರವಾದರು. ಜಿಲ್ಲೆಯಲ್ಲಿ ಕೋವಿಡ್‌ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದು ಅವರ ಹೆಗ್ಗಳಿಕೆ. ಪ್ರೇರಣಾದಾಯಕ ಮಾತುಗಳಿಂದ ಯುವಜನರಿಗೆ ಸ್ಫೂರ್ತಿ ಆಗಿದ್ದವರನ್ನು ವಿಧಿ ಬಹುಬೇಗ ತನ್ನೆಡೆಗೆ ಕರೆದುಕೊಂಡಿದ್ದು ದೌರ್ಭಾಗ್ಯವೇ ಸರಿ.

⇒ತಿಮ್ಮೇಶ ಮುಸ್ಟೂರು, ಜಗಳೂರು

ಖಾಲಿ ಹುದ್ದೆಗಳನ್ನು ತುಂಬಲು ನಿರಾಸಕ್ತಿ

ರಾಜ್ಯದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಲೆಕ್ಕಪರಿಶೋಧನಾ ಇಲಾಖೆಯ ಎ.ಸಿ ಮತ್ತು ಎ.ಓ ಹುದ್ದೆ, ಅಪೆಕ್ಸ್ ಬ್ಯಾಂಕಿನ ಸಹಾಯಕರ ಹುದ್ದೆ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆದು 8–10 ತಿಂಗಳೇ ಕಳೆದರೂ ಅಂತಿಮ ಫಲಿತಾಂಶ ಪ್ರಕಟಿಸಿಲ್ಲ. ‘ಭರ್ತಿ’ ಇರುವ ಸಿ.ಎಂ ಹುದ್ದೆಯ ಹೋರಾಟದಲ್ಲಿ ತೋರುತ್ತಿರುವ ಆಸಕ್ತಿ, ಚರ್ಚೆ, ಆತುರ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ತೋರದಿರುವುದು ವಿಪರ್ಯಾಸ. ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಜಾರಿ ಹಾಗೂ ಅವುಗಳಿಗೆ ಅನುದಾನ ಹೊಂದಿಸುವುದರಲ್ಲಿಯೇ ಮುಳುಗಿದೆ. ಯುವಜನರ ಹಿತವನ್ನು ಕಡೆಗಣಿಸಿದೆ.

⇒ಎಸ್.ಎನ್. ರಮೇಶ್, ಮಂಡ್ಯ 

ಬೋಧನಾ ಅನುಭವಕ್ಕೆ ಅರ್ಹತೆ ಏನು?

ಹೈಕೋರ್ಟ್‌ ಆದೇಶದಂತೆ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ನಡೆಯುತ್ತಿರುವುದು ಸರಿಯಷ್ಟೆ. ಆದರೆ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ದಿಢೀರ್‌ ಆದೇಶ ಹೊರಡಿಸಿ, ಅಂಗವಿಕಲ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯ ನೀಡಿ ನೇಮಕಾತಿ ನಡೆಸುವಂತೆ ಸೂಚಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಹಾಗಾದರೆ, ಶೈಕ್ಷಣಿಕ ಅರ್ಹತೆಗಿಂತ ಅಂಗವಿಕಲತೆಯಷ್ಟೆ ಅರ್ಹತೆಯೇ? ಬೋಧನಾ ಅನುಭವಕ್ಕೆ ಯಾವುದೇ ಮಾನ್ಯತೆ ಇಲ್ಲವೇ? ಈ ರೀತಿಯ ನೇಮಕಾತಿಯನ್ನು ನ್ಯಾಯಸಮ್ಮತ ಎನ್ನಬಹುದೇ? ಮೂವತ್ತು ವರ್ಷಗಳ ಹಿಂದೆಯೇ ಯುಜಿಸಿ ನಿಯಮಗಳ ಪ್ರಕಾರ ಅರ್ಹತೆ ಪಡೆದಿರುವ ನೂರಾರು ಅಭ್ಯರ್ಥಿಗಳು, ಇತ್ತೀಚೆಗೆ ಶಿಕ್ಷಣ ಮುಗಿಸಿರುವ ಅಭ್ಯರ್ಥಿಗಳೊಂದಿಗೆ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಪೈಪೋಟಿ ನಡೆಸಬೇಕಿದೆ. ಇದು ಕರ್ನಾಟಕದಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಯು ಕೊಳೆತು ನಾರುತ್ತಿರುವುದರ ಸಂಕೇತ. 

⇒ರಾಜಶೇಖರ ಮೂರ್ತಿ, ಎಚ್.ಡಿ. ಕೋಟೆ 

ಜವರಾಯನ ಯಾಮಾರಿಸಲಾಗದು! 

ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುವ ಕೆಲವು ಸವಾರರು ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಣಿಗೆ ಬೀಳದಂತೆ ವಾಹನದ ಸಂಖ್ಯಾಫಲಕವನ್ನು ಬ್ಯಾಗ್, ದುಪ್ಪಟ ಅಥವಾ ಕೈಗಳಿಂದ ಮರೆಮಾಚಿ ಜಾಣತನ ಮೆರೆಯುತ್ತಿದ್ದಾರೆ. ಇಂತಹ ವಾಹನ ಸವಾರರು ಪೊಲೀಸರನ್ನು ಯಾಮಾರಿಸಬಹುದು; ಆದರೆ, ಜವರಾಯನನ್ನು ಯಾಮಾರಿಸಲಾಗದು!

 ಪಿ.ಜೆ. ರಾಘವೇಂದ್ರ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.