ವಾಚಕರ ವಾಣಿ
‘ಶಾಸ್ತ್ರ’ಕ್ಕಿಂತ ವೈಜ್ಞಾನಿಕ ಪದ ಬಳಕೆ ಸೂಕ್ತ
‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು; ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಎಂದು ಹೇಳಿದ್ದಾರೆ ಕುವೆಂಪು. ಆಧುನಿಕಯುಗದಲ್ಲಿ ಯುವಜನರು ಸೇರಿದಂತೆ ನಾಗರಿಕ ಸಮಾಜವು ಮನುಷ್ಯಸಹಜ ಸಂವೇದನಾ
ಶೀಲತೆ, ಮಾನವೀಯ ಮೌಲ್ಯ ಮತ್ತು ವೈಜ್ಞಾನಿಕ ವಿಚಾರಧಾರೆಗಳತ್ತ ಒಲವು ಬೆಳೆಸಿಕೊಳ್ಳಬೇಕು. ಆದರೆ, ಮೌಢ್ಯ ತುಂಬಿದ ಶಾಸ್ತ್ರಗಳಾಚರಣೆಯಲ್ಲಿ ಮುಳುಗಿ, ಬದುಕನ್ನು ಕಂದಾಚಾರ ಮತ್ತು ಬರಡು ಜಟಿಲತೆಯ ಪೇಲವ ಬಾಳ್ವೆಯಂತಾಗಲು ಮುಂದಡಿಯಿಡುತ್ತಿರುವುದು ದುರದೃಷ್ಟಕರ. ‘ಶಾಸ್ತ್ರ’ದ ಹೆಸರಿನಲ್ಲಿ ಮುಗ್ಧ ಜನತೆಯನ್ನು ಮೌಢ್ಯದ ಕೂಪಕ್ಕೆ ತಳ್ಳುವುದು ಹೆಚ್ಚುತ್ತಿದೆ. ಈ ದಿಸೆಯಲ್ಲಿ ಶಾಲಾಪಠ್ಯದಲ್ಲಿ ಬಳಕೆಯಲ್ಲಿರುವ ‘ಶಾಸ್ತ್ರ’ ಪದವನ್ನು ಸೂಕ್ತ ವೈಜ್ಞಾನಿಕ ಪದಗಳಿಂದ ಬಣ್ಣಿಸಿದರೆ ಉತ್ತಮವೆನಿಸುತ್ತದೆ.
⇒ಚಂದ್ರಪ್ಪ ಎಚ್., ವಿಜಯನಗರ
ಭಾಗವತರ ಹೇಳಿಕೆ: ಸ್ಪಷ್ಟತೆಯದ್ದೇ ಕೊರತೆ
ಆರ್‌ಎಸ್‌ಎಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಸಂಘವು
ಪಕ್ಷದ ವಿಶ್ವವಿದ್ಯಾಲಯದಂತೆ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ತೇರ್ಗಡೆ
ಗೊಂಡವರನ್ನು ಪಕ್ಷದ ಚಟುವಟಿಕೆಗಳಿಗೆ ವರ್ಗಾಯಿಸುತ್ತದೆ ಎಂಬುದು ಜನಜನಿತ. ಹೀಗಿದ್ದರೂ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್, ‘ಬಿಜೆಪಿಯನ್ನು ನೋಡಿ ಸಂಘವನ್ನು ಅರ್ಥಮಾಡಿಕೊಳ್ಳಲು ಬಯಸಿದರೆ ತಪ್ಪು ಮಾಡಿದಂತೆ’ ಎಂದು ಹೇಳಿರುವುದು ಹಾಸ್ಯಾಸ್ಪದ. ಇದು ಜನರನ್ನು ಮರುಳು ಮಾಡುವ ಪ್ರಯತ್ನವಷ್ಟೆ. ಭಾರತವು ಬಲಿಷ್ಠ ಸೇನೆ ಹೊಂದಿದೆ ಮತ್ತು ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರವಿದೆ. ಆದರೂ ಭಾಗವತರು, ‘ಭಾರತವು ಮತ್ತೆ ವಿದೇಶಿ ಶಕ್ತಿಯ ಹಿಡಿತಕ್ಕೆ ಬೀಳದಂತೆ ಸಂಘ ರಕ್ಷಿಸುತ್ತದೆ’ ಎಂದಿರುವುದು ಗೊಂದಲ ಸೃಷ್ಟಿಸುತ್ತದೆ. ಸಮಾಜವನ್ನು ಒಗ್ಗೂಡಿಸುವ ಹೊಣೆ ಹೊತ್ತಿರುವ ಅವರು ಸ್ಪಷ್ಟತೆ ಕಾಯ್ದುಕೊಳ್ಳದಿದ್ದರೆ ಹೇಗೆ?
⇒ಶಾಂತಕುಮಾರ್, ಸರ್ಜಾಪುರ
ದಿನಪತ್ರಿಕೆಗಳಿಂದ ರಾಷ್ಟ್ರೀಯ ಪ್ರಜ್ಞೆ ಸಾಧ್ಯ
ಶಾಲೆಗಳಲ್ಲಿ ದಿನಪತ್ರಿಕೆ ಓದುವುದರಿಂದ ವಿದ್ಯಾರ್ಥಿಗಳಿಗೆ ಪ್ರಾಪಂಚಿಕ ಅರಿವು, ಅರ್ಥಪೂರ್ಣ ವಿಚಾರ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ರಾಷ್ಟ್ರೀಯ ಪ್ರಜ್ಞೆ ಕುರಿತು ಮಾಹಿತಿ ದೊರೆಯುತ್ತದೆ. ಪಠ್ಯಪುಸ್ತಕದ ಅಧ್ಯಯನ ಬರೀ ಅಂಕಗಳಿಗೆ ಸೀಮಿತ. ಮಕ್ಕಳಿಂದ ದಿನಪತ್ರಿಕೆ ಓದಿಸುವುದರಿಂದ ಅವರು ಜೀವನದ ಪಾಠ ಕಲಿಯುತ್ತಾರೆ. ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುವುದರಲ್ಲಿ ಸಂದೇಹವೇ ಇಲ್ಲ. ಕೆಲವು ಶಾಲೆಗಳಲ್ಲಿ ಈ ಕಾರ್ಯ ನಡೆಯುತ್ತಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ದಿನಪತ್ರಿಕೆ ಓದಿಸುವ ಬಗ್ಗೆ ಶಿಕ್ಷಣ ಇಲಾಖೆಯು ಗಂಭೀರ ಚಿಂತನೆ ನಡೆಸಲಿ.
⇒ಎಚ್.ಎಸ್.ಟಿ. ಸ್ವಾಮಿ, ಚಿತ್ರದುರ್ಗ
ತರಬೇತಿ ವಿಳಂಬ: ವಿದ್ಯಾರ್ಥಿಗಳು ಅತಂತ್ರ
ಸಮಾಜ ಕಲ್ಯಾಣ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳಿಗೆ ಪೂರ್ವಭಾವಿ ತರಬೇತಿ ನೀಡಲಾಗುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ವರ್ಷದ ಮೇ 30ರಂದು ಕಲ್ಯಾಣ ಕರ್ನಾಟಕದ ಸ್ಪರ್ಧಾರ್ಥಿಗಳಿಗೆ ತರಬೇತಿಗಾಗಿ ಪರೀಕ್ಷೆ ನಡೆಸಿದೆ. ಫಲಿತಾಂಶ ಪ್ರಕಟಿಸಿದ ಬಳಿಕ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯೂ ನಡೆದಿದೆ. ಕೆಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಶುಲ್ಕವಾಗಿ ₹750 ಸಂದಾಯ ಮಾಡಿದ್ದಾರೆ. ಇದಕ್ಕೆ ಇಲಾಖೆಯಿಂದ ವಿನಾಯಿತಿ ನೀಡಿದರೂ ಅಭ್ಯರ್ಥಿಗಳಿಗೆ ಕೆಇಎ ಹಣ ಹಿಂದಿರುಗಿಸಿಲ್ಲ. ಮತ್ತೊಂದೆಡೆ ಇಂದಿಗೂ ತರಬೇತಿಯನ್ನು ಆರಂಭಿಸಿಲ್ಲ.
⇒ಸಂಜಯ್ ಪಟ್ಟಣಶೆಟ್ಟಿ, ಕುರುಗೋಡು
ಒಪಿಎಸ್ ಮರುಜಾರಿ: ವಿಳಂಬ ಆಗದಿರಲಿ
ತಮಿಳುನಾಡು ಸರ್ಕಾರವು ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಿರುವ ಸುದ್ದಿ ಓದಿ ಸಂತಸವಾಯಿತು. ಕರ್ನಾಟಕದಲ್ಲಿ 2006ರ ಏಪ್ರಿಲ್ 1ರಿಂದ ಹಳೆಯ ಪಿಂಚಣಿ ಯೋಜನೆಯನ್ನು ಹಿಂಪಡೆದು ಎನ್‌ಪಿಎಸ್ ಜಾರಿಗೊಳಿಸಲಾಗಿದೆ. ಈ ಯೋಜನೆಯು ಸರ್ಕಾರಿ ನೌಕರರ ನಿವೃತ್ತ ಜೀವನಕ್ಕೆ ಅಷ್ಟೊಂದು ಉಪಕಾರಿ ಆಗಿಲ್ಲ. ಅಧಿಕಾರಕ್ಕೆ ಬಂದರೆ ಒಪಿಎಸ್ ಮರುಜಾರಿಗೊಳಿಸುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪ್ರಕಟಿಸಿತ್ತು. ಒಪಿಎಸ್ ಮರುಜಾರಿ ಸಂಬಂಧ ಸರ್ಕಾರ ಸಮಿತಿ ರಚಿಸಿದೆ. ಈ ಸಮಿತಿಯು ವರದಿ ಸಲ್ಲಿಸಬೇಕಿದೆ. ಇದನ್ನು ಕೂಲಂಕಷವಾಗಿ ಪರಾಮರ್ಶಿಸಿ ವಿಳಂಬ ಮಾಡದೆ ಜಾರಿಗೊಳಿಸಬೇಕಿದೆ.
⇒ಚಂದ್ರಶೇಖರ ಇಟಗಿ, ಮುದ್ದೇಬಿಹಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.