ADVERTISEMENT

ಸಹೋದರ, ಸಹೋದರಿಯರನ್ನು ದೂಷಿಸದಿರಿ...

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 20:30 IST
Last Updated 27 ಮಾರ್ಚ್ 2020, 20:30 IST

ಕೊರೊನಾ–2 ವೈರಸ್‌ ಸೋಂಕಿಗೆ ಸಂಬಂಧಿಸಿದಂತೆ ಅನಿವಾಸಿ ಭಾರತೀಯರ (ಎನ್‌ಆರ್‌ಐ) ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುವುದನ್ನು ಸುದ್ದಿ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಭಾರತದಲ್ಲಿ ಈ ಸೋಂಕು ಹರಡಲು ಬರೀ ಎನ್‌ಆರ್‌ಐಗಳು ಕಾರಣರಲ್ಲ. ಅನೇಕ ಪ್ರವಾಸಿಗರು ಇಟಲಿಯಿಂದ ಭಾರತಕ್ಕೆ ಬಂದಿದ್ದರು ಮತ್ತು ಹಲವು ಭಾರತೀಯರು ಥಾಯ್ಲೆಂಡ್‌, ಸಿಂಗಪುರ, ವಿಯೆಟ್ನಾಂ, ಇಟಲಿ, ದುಬೈ ಮುಂತಾದೆಡೆ ಪ್ರವಾಸ ತೆರಳಿದ್ದರು. ಹೆಚ್ಚುಕಡಿಮೆ ಪ್ರಪಂಚದಾದ್ಯಂತ ಈ ಸೋಂಕು ಆವರಿಸಿದೆ.

ಪ್ರಸ್ತುತ ನಾನು ಜರ್ಮನಿಯಲ್ಲಿ ನೆಲೆಸಿರುವ ಸ್ಥಳದಲ್ಲಿ 150ಕ್ಕೂ ಹೆಚ್ಚು ಕನ್ನಡದ ಕುಟುಂಬಗಳಿವೆ ಮತ್ತು ಅವರೆಲ್ಲ ಆರೋಗ್ಯದಿಂದಿದ್ದಾರೆ. ಭಾರತಕ್ಕೆ ಹೋಗಿ ವೈರಸ್ ಹರಡಬೇಕೆಂಬ ಭಾವನೆ ಯಾರಿಗೂ ಇಲ್ಲ. ಅಧ್ಯಯನಕ್ಕಾಗಿ ಅಥವಾ ಕೆಲಸದ ಮೇಲೆ ನಾವು ವಿದೇಶಕ್ಕೆ ಬಂದಿದ್ದೇವೆ ಹಾಗೂ ಪ್ರವಾಹದಂತಹ ವಿಪತ್ತುಗಳ ಸಂದರ್ಭದಲ್ಲಿ, ಕರ್ನಾಟಕದಲ್ಲಿರುವ ನಮ್ಮ ಜನರಿಗೆ ಸಾಧ್ಯವಾದಷ್ಟೂ ನೆರವಾಗಿದ್ದೇವೆ. ನನ್ನನ್ನೂ ಒಳಗೊಂಡಂತೆ ಅನೇಕರು, ಶಿಕ್ಷಣ ಅಥವಾ ಆರೋಗ್ಯದ ವಿಷಯದಲ್ಲಿ ಕರ್ನಾಟಕದ ಮಕ್ಕಳಿಗೆ ನೆರವಾಗಲು ಲಾಭರಹಿತ ದತ್ತಿ ಸಂಸ್ಥೆಗಳನ್ನು ನಡೆಸುತ್ತಿದ್ದೇವೆ.

ನಮ್ಮ ಜನರಿಗೆ ನಾವು ಎಂದಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ನಾವು ಭಾರತೀಯರು ಮತ್ತು ಕನ್ನಡಿಗರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ವೈರಸ್‌ ಸೋಂಕುಪೀಡಿತರಾಗಿ ಭಾರತಕ್ಕೆ ಬಂದವರಲ್ಲಿ ಬಹುತೇಕರು ಕೇವಲ ಸಂಚಾರ ವೀಸಾ ಅಥವಾ ಪ್ರವಾಸಿ ವೀಸಾದ ಮೇಲೆ ಬಂದವರು. ಹೀಗಾಗಿ ಅವರು ವಿದೇಶದಲ್ಲಿ ಹೆಚ್ಚು ಸಮಯ ಇರಲು ಸಾಧ್ಯವಿಲ್ಲ. ಆದರೆ ಇದಕ್ಕಾಗಿ ನಿಮ್ಮ ಸಹೋದರ, ಸಹೋದರಿಯರನ್ನು ದಯಮಾಡಿ ದೂಷಿಸದಿರಿ. ನಮ್ಮ ಭಾರತ, ನಮ್ಮ ಕರ್ನಾಟಕದ ಜನ ಆರೋಗ್ಯದಿಂದ ಇರಬೇಕೆಂದು ನಾವು ಪ್ರಾರ್ಥಿಸುತ್ತೇವೆ. ಸರ್ಕಾರ ವಿಧಿಸುವ ನಿಯಮಗಳನ್ನು ಪಾಲಿಸಿ, ವೈರಸ್ ಅನ್ನು ನಿಯಂತ್ರಿಸಿ.

ADVERTISEMENT

ಅಜಮೀರ್‌ ಪಾಷ,ರೀಗನ್ಸ್‌ಬರ್ಗ್‌, ಬವೇರಿಯ ಸ್ಟೇಟ್‌,ಜರ್ಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.