ADVERTISEMENT

ರಾಮಾಯಣ ಕಾಲದಲ್ಲಿ ತಿರುಪತಿ ಇತ್ತೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 12 ಏಪ್ರಿಲ್ 2021, 20:32 IST
Last Updated 12 ಏಪ್ರಿಲ್ 2021, 20:32 IST

ತಿರುಪತಿಯನ್ನು ಭೂವೈಕುಂಠವನ್ನಾಗಿ ರೂಪಿಸಲು ವೇದ ಪಂಡಿತರು ಸ್ಥಳಪುರಾಣವನ್ನು ರಚಿಸುವ ಮೂಲಕ ಕ್ಷೇತ್ರಕ್ಕೆ ದಿವ್ಯತ್ವವನ್ನು ತಂದುಕೊಡಲಿ. ಆದರೆ ತಿರುಪತಿಯ ಅಂಜನಾದ್ರಿಯಲ್ಲಿ ಆಂಜನೇಯನು ಜನ್ಮಿಸಿದನು ಎಂದು ಹೇಳಿ ಪುರಾಣವನ್ನು ತಿರುಚುವ ಮತ್ತು ಅನಗತ್ಯ ವಿವಾದಗಳಿಗೆ ಎಡೆಮಾಡಿಕೊಡುವುದು ಸರಿಯಲ್ಲ.

ರಾಮಾಯಣ ರಚನೆಯ ಕಾಲದಲ್ಲಿ ತಿರುಪತಿ ಇತ್ತೇ ಎಂಬ ಪ್ರಶ್ನೆಯನ್ನು ಹುಡುಕುತ್ತಾ ಹೋದರೆ ಅಲ್ಲಿಯೇ ಉತ್ತರ ದೊರೆಯುತ್ತದೆ. ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೆ ರಾಮಾಯಣದಲ್ಲಿ ಉಕ್ತವಾಗಿರುವ ಭೌಗೋಳಿಕ ಸ್ಥಳಗಳ ವರ್ಣನೆಗಳು ಇಂದಿಗೂ ನಿತ್ಯ ಸತ್ಯವಾಗಿವೆ. ದಕ್ಷಿಣ ಭಾರತದಲ್ಲಿರುವ ಕಿಷ್ಕಿಂದೆ, ಪಂಪಾ ಸರೋವರ, ಶಬರಿ ಆಶ್ರಮ, ಅಂಜನಾದ್ರಿ, ವಾಲಿ-ಸುಗ್ರೀವರ ಪ್ರದೇಶಗಳು ರಾಮಾಯಣ ಕಾವ್ಯದಲ್ಲಿ ಉಲ್ಲೇಖವಾದ ಸ್ಥಳ ಗಳಿಗೆ ಸಾಕ್ಷಿಯಾಗಿವೆ. ಹೀಗಿದ್ದರೂ ತಿರುಪತಿಯ ಹೆಸರು ಮಾತ್ರ ಅಲ್ಲಿ ಎಲ್ಲಿಯೂ ಪ್ರಸ್ತಾಪವಾಗದಿರುವುದು ಇದಕ್ಕೆ ದೊರೆತ ಉತ್ತರ!

ತಿರುಪತಿ ಮತ್ತು ವೆಂಕಟರಮಣರ ಚರಿತ್ರೆಯು ವಿಷ್ಣು, ಪದ್ಮಾ, ಸ್ಕಂದ ಹಾಗೂ ಭಾಗವತ ಪುರಾಣಗಳಲ್ಲಿ ಪ್ರಸ್ತಾಪ ವಾಗಿರಬೇಕು. ಸತ್ಯವತಿ ಸುತ ವೇದವ್ಯಾಸರು ರಚಿಸಿದ ಭಾಗವತಾದಿ ಹದಿನೆಂಟು ಪುರಾಣಗಳ ಕಾಲವು ವಾಲ್ಮೀಕಿ ರಾಮಾಯಣ ಕಾವ್ಯದ ರಚನೆಯ ಕಾಲಕ್ಕಿಂತ ತದನಂತರದ್ದು ಎಂಬುದು ನಿರ್ವಿವಾದ! ವ್ಯಾಸರ ಪುರಾಣಗಳಲ್ಲಿ ಉಕ್ತವಾಗಿರುವ ಅದೆಷ್ಟೋ ಪುರಾಣ ಪ್ರಸಂಗಗಳು ರಾಮಾಯಣ ಕಾವ್ಯದಲ್ಲಿ ಪ್ರಸ್ತಾಪವಾಗಿವೆ. ಇಕ್ಷ್ವಾಕು ವಂಶ, ಸಗರ, ರಘು, ದಿಲೀಪ, ಭಗೀರಥ, ರಾಮ, ಪರಶುರಾಮ, ಗಂಗಾವತರಣ, ಶಿವಧನುಸ್ಸು ಇತ್ಯಾದಿ ವಿವರಗಳು ರಾಮಾಯಣದ ಪ್ರಾಚೀನತೆಗೆ ಸಾಕ್ಷಿಯೆನಿಸಿವೆ. ಇದಕ್ಕಿಂತ ಮಹತ್ವದ್ದೆಂದರೆ ರಾಮ ಭಕ್ತ, ಚಿರಂಜೀವಿ, ಮುಂದಿನ ಬ್ರಹ್ಮ ಪದವಿ ಪಡೆಯುವ, ಹನುಮ-ಭೀಮ-ಮುನಿ ಮೂರೂ ಅವತಾರಿಯಾಗಿ ಯುಗ ಯುಗಗಳಿಂದ ಸಾಗಿ ಬಂದು ಇಂದಿಗೂ ಪ್ರಾಣದೇವರೆಂದು ಪೂಜ್ಯನಾದ ಆಂಜನೇಯನನ್ನು ಸೃಷ್ಟಿಸಿದ ರಾಮಾಯಣ ಕಾವ್ಯ ಮತ್ತು ವಾಲ್ಮೀಕಿ ಪೂಜನೀಯರು.

ADVERTISEMENT

- ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.