ADVERTISEMENT

ವಾಚಕರ ವಾಣಿ: ವಿದ್ಯಾರ್ಥಿಗಳ ಆತ್ಮಾವಲೋಕನ ಅಗತ್ಯ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 21:13 IST
Last Updated 20 ಜೂನ್ 2021, 21:13 IST

ದ್ವಿತೀಯ ಪಿಯು ಪರೀಕ್ಷೆ ರದ್ದಾಗಿರುವುದರಿಂದ ಖುಷಿಯಾದ ವಿದ್ಯಾರ್ಥಿಯೊಬ್ಬ ತನ್ನ ಗುರುಗಳನ್ನು ಅಣಕಿಸುತ್ತ ಕುಣಿದಾಡಿದ ವಿಡಿಯೊವೊಂದು ಇತ್ತೀಚೆಗೆ ವಾಟ್ಸ್‌ಆ್ಯಪ್‌ನಲ್ಲಿ ಶೇರ್‌ ಆಗಿತ್ತು. ‘ನೀನೆಂದೂ ಪಿಯುಸಿ ತೇರ್ಗಡೆಯಾಗುವುದಿಲ್ಲ ಎಂದು ಗುರುಗಳು ಹೇಳಿದ್ದರು, ಆದರೆ ಇದೀಗ ಸರ್ಕಾರದ ನಿರ್ಧಾರದಿಂದ ಈ ವಿದ್ಯಾರ್ಥಿ ತೇರ್ಗಡೆಯಾಗಿದ್ದಾನೆ. ಹಾಗಾಗಿ, ಗುರುಗಳ ಮುಂದೆ ಕುಣಿದಾಡುತ್ತಿದ್ದಾನೆ’ ಎಂಬ ಒಕ್ಕಣೆ ಆ ವಿಡಿಯೊ ಜೊತೆಗಿತ್ತು. ವಿಡಿಯೊದ ಸತ್ಯಾಸತ್ಯತೆ ಏನೇ ಇರಲಿ, ವಿವಿಧ ಪರೀಕ್ಷೆಗಳು ರದ್ದಾಗಿರುವುದರಿಂದ ಹಲವು ವಿದ್ಯಾರ್ಥಿಗಳಿಗೆ ಸಂತಸವಾಗಿರುವುದಂತೂ ಗೊತ್ತಾಗುತ್ತಿದೆ.

ವಾಸ್ತವವಾಗಿ, ಈ ರೀತಿ ಪರೀಕ್ಷೆಗಳು ರದ್ದಾಗಿರುವುದಕ್ಕೆ ವಿದ್ಯಾರ್ಥಿ ಸಮೂಹ ಬೇಸರಪಡಬೇಕು. ಪರೀಕ್ಷೆ ಬೇಕೆ-ಬೇಡವೆ, ಪರೀಕ್ಷೆಯ ಸ್ವರೂಪ ಹೇಗಿರಬೇಕು ಎಂಬ ಚರ್ಚೆಯನ್ನು ಪಕ್ಕಕ್ಕಿಟ್ಟು ನೋಡಿದರೆ, ವಿದ್ಯಾರ್ಥಿಗಳು ಸ್ವತಃ ಇಡೀ ವರ್ಷ ಸಂಪಾದಿಸಿದ ಜ್ಞಾನವನ್ನು ಒರೆಗೆ ಹಚ್ಚಿ, ಗಳಿಸಿದ ವಿದ್ಯೆ, ಸಾಮಾನ್ಯ ಜ್ಞಾನ, ಕೌಶಲದ ಮೌಲ್ಯಮಾಪನ ಮಾಡಬೇಕಾಗಿದೆ. ಹೀಗಾದಾಗ ಮಾತ್ರ ವಿದ್ಯಾರ್ಥಿಗಳು ಪಡೆದುಕೊಂಡ ಪದವಿಗೂ ಅರ್ಥ ಬಂದಂತಾಗುತ್ತದೆ, ಗುರುಗಳು ಕಲಿಸಿದ್ದೂ ಸಾರ್ಥಕವಾಗುತ್ತದೆ.

-ಸುಘೋಷ ಸ. ನಿಗಳೆ,ಬೆಂಗಳೂರು

***************

ನಾಲಿಗೆಯ ಮೇಲೆ ಹಿಡಿತ ಇರಲಿ

ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್ ಅವರನ್ನು ಅರೆಹುಚ್ಚ, ಅವರಿಗೆ ಪೂರ್ಣ ಹುಚ್ಚು ಹಿಡಿದಿದೆ ಎಂದೆಲ್ಲ ಶಾಸಕ ಎಸ್.ಆರ್.ವಿಶ್ವನಾಥ್ ಟೀಕಿಸಿದ್ದಾರೆ. ಮನೆಯಲ್ಲಿ ಕೂತು ಟಿ.ವಿ ನೋಡುವ ಮಕ್ಕಳು ಇಂತಹ ಮಾತುಗಳನ್ನು ಕೇಳಿ, ತಾವೂ ಇದೇ ಧಾಟಿಯಲ್ಲಿ ಮಾತನಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಎಂಥಾ ರಾಜಕೀಯ ದ್ವೇಷವೇ ಇರಲಿ ಜನಪ್ರತಿನಿಧಿಗಳಿಗೆ ತಮ್ಮ ಮಾತಿನ ಮೇಲೆ ಹಿಡಿತ ಇರಬೇಕು. ಅದೂ ಅಲ್ಲದೆ ಟಿ.ವಿ ವಾಹಿನಿಗಳಲ್ಲಿ ಹೇಳಿದ್ದನ್ನೇ ಮತ್ತೆ ಮತ್ತೆ ಕೇಳಿಸುವುದರಿಂದ ಅದು ಮಕ್ಕಳ ಮನಸ್ಸಿಗೆ ಬೇಗ ನಾಟುತ್ತದೆ. ಜನಪ್ರತಿನಿಧಿಗಳು ಪರಸ್ಪರ ಟೀಕಿಸುವಾಗ ಸಮಾಜದ ಹಿತದೃಷ್ಟಿಯಿಂದ‌ ಇಂಥದ್ದನ್ನೆಲ್ಲ ಗಮನದಲ್ಲಿ ಇಡುವುದು ಒಳಿತು.

ADVERTISEMENT

- ಧನ್ವಂತರಿ‌,ಮಾನ್ವಿ

***********

ಹೊಟ್ಟೆಗಿಲ್ಲದ ಜುಟ್ಟಿಗೆ ಯೋಗದ ಗರಿ!

ಕೊರೊನಾ ತಂದೊಡ್ಡಿರುವ ಈಗಿನ ಸಂಕಷ್ಟದ ಸ್ಥಿತಿಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಯೋಗ ದಿನಾಚರಣೆ (ಜೂನ್‌ 21) ಸಲುವಾಗಿ, ‘ಎಲ್ಲಾ ಅಂಗನವಾಡಿಗಳಲ್ಲಿ ಮಕ್ಕಳಿಗೆ, ಕಿಶೋರಿಯರಿಗೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ವಿಶ್ವ ಯೋಗ ದಿನದಂದು ಸೂಚಿಸ ಲಾದ ಯೋಗದ ವಿಡಿಯೊ ತೋರಿಸಿ, ಅವರಿಂದ ಯೋಗ ಮಾಡಿಸಿ ವಿಡಿಯೊ, ಫೋಟೊಗಳನ್ನು ‘ಪೋಷಣ್ ಟ್ರಾಕರ್’ ನಲ್ಲಿ ದಾಖಲಿಸಬೇಕು. ಅವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‍ಲೋಡ್ ಮಾಡಬೇಕು’ ಎಂದು ತಿಳಿಸಿದೆ. ಇದೊಂದು ರೀತಿ ಹೊಟ್ಟೆಗಿಲ್ಲದ ಜುಟ್ಟಿಗೆ ಯೋಗದ ಗರಿಯ ವಿಡಂಬನೆ!

ಕೋವಿಡ್ ನೆಪದಲ್ಲಿ ಶಾಲೆ, ಅಂಗನವಾಡಿಗಳೆಲ್ಲ ಬಂದ್ ಆಗಿದ್ದು, ಪೌಷ್ಟಿಕ ಆಹಾರದ ಚೀಲಗಳು ಸಮರ್ಪಕವಾಗಿ ಮನೆಗೆ ಪೂರೈಕೆಯಾಗುತ್ತಿಲ್ಲ. ಭಾರತದಲ್ಲಿ ಆರು ವರ್ಷದೊಳಗಿನ ಲಕ್ಷಾಂತರ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ನಮ್ಮ ರಾಜ್ಯದಲ್ಲಿ ಆರು ವರ್ಷದೊಳಗಿನ 4.43 ಲಕ್ಷ ಅಪೌಷ್ಟಿಕ ಮಕ್ಕಳಿದ್ದಾರೆ. ಹೊಟ್ಟೆ ತುಂಬಿದವರು ದೇಹದ ಸೌಖ್ಯಕ್ಕೆ ಇಷ್ಟಪಟ್ಟು ಯೋಗ ಮಾಡುವುದಾದರೆ ಮಾಡಲಿ. ಆದರೆ ಹೊಟ್ಟೆಗಿಲ್ಲದವರ ಮೇಲೂ, ಕೇವಲ ಅಪೌಷ್ಟಿಕತೆ ನಿವಾರಣೆಗಾಗಿ ಉತ್ತಮ ಆಹಾರ ಕೊಡುವ ಕಾರಣಕ್ಕೆ ನೋಂದಾಯಿಸಿಕೊಂಡ ದುರ್ಬಲರಿಗೆಲ್ಲಾ ಹೀಗೆ ಬಲವಂತವಾಗಿ ಯೋಗವನ್ನು ಹೇರುವುದು ಎಷ್ಟು ಸರಿ? ಅಪೌಷ್ಟಿಕ ಮಕ್ಕಳು ಕೋವಿಡ್ ಮೂರನೆಯ ಅಲೆಯಲ್ಲಿ ಹೆಚ್ಚು ತೊಂದರೆಗೀಡಾಗಲಿದ್ದಾರೆ ಎಂದು ತಜ್ಞರು ಎಚ್ಚರಿಸುತ್ತಲೇ ಇರುವಾಗ, ಹೆಚ್ಚು ಪೌಷ್ಟಿಕವಾದ ಆಹಾರ ಪದಾರ್ಥಗಳು ನಿಯಮಿತವಾಗಿ ಅಂಗನವಾಡಿಗಳನ್ನು ತಲುಪುವಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆಯಾಗಬೇಕಾಗಿದೆ.

- ಶಾರದಾ ಗೋಪಾಲ,ಧಾರವಾಡ

**********

ಭರವಸೆಯಲ್ಲಿ ಜೀವಂತಿಕೆ ಇದೆಯೇ?

ಯಡಿಯೂರಪ್ಪ ಅವರ ಪರವಾಗಿ ವೀರಶೈವ ಮಠಾಧೀಶರ ಧರ್ಮ ಪರಿಷತ್‌ನ ಸ್ವಾಮೀಜಿಗಳು ನಡೆಸಿದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ, ಪರಿಷತ್‌ನ ಅಧ್ಯಕ್ಷರು, ‘ರಾಜಕಾರಣಿಗಳು ದಾರಿ ತಪ್ಪಿದಾಗ ಸನ್ಮಾರ್ಗದಲ್ಲಿ ನಡೆಯಿರಿ ಎಂದು ಸಂದೇಶ ನೀಡುವುದು ಸ್ವಾಮೀಜಿಗಳ ಜವಾಬ್ದಾರಿ’ ಎಂದಿರುವುದು ಗಮನಾರ್ಹ. ರಾಜಕಾರಣಿಗಳು ದಾರಿ ತಪ್ಪಿದಾಗೆಲ್ಲಾ ಸನ್ಮಾರ್ಗದಲ್ಲಿ ನಡೆಯುವಂತೆ ಮಠಾಧೀಶರು ಈ ಮೊದಲು ಎಂದಾದರೂ ಸಂದೇಶ ನೀಡಿದ ಉದಾಹರಣೆಗಳು ಇವೆಯೇ ಎಂಬ ಪ್ರಶ್ನೆ ಮೂಡುತ್ತದೆ. ಎಷ್ಟೋ ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ತೊಡಗಿ ಜೈಲು ಪಾಲಾದಾಗ, ಸಾರ್ವಜನಿಕರಿಗೆ ಅನ್ಯಾಯ ಮಾಡಿದಾಗ, ಗೋಮಾಳ, ರಾಜಕಾಲುವೆಗಳನ್ನು ಒತ್ತುವರಿ ಮಾಡಿದಾಗ, ಒಂದು ಸಮಾಜವನ್ನು ಇನ್ನೊಂದು ಸಮಾಜದ ವಿರುದ್ಧ ಎತ್ತಿಕಟ್ಟಿದಾಗಲೆಲ್ಲ ಅವರು ಎಂದೂ ಇಂತಹ ಸಂದೇಶ ನೀಡಿದ್ದನ್ನು ರಾಜ್ಯದ ಜನ ಕಂಡಿಲ್ಲ. ಯಡಿಯೂರಪ್ಪ ಅವರಿಗೆ ರಾಜಕೀಯ ಸಂದಿಗ್ಧತೆ ಉದ್ಭವವಾದ ಕೂಡಲೇ ಮಠಾಧೀಶರು ಜಾಗೃತರಾಗಿ ಈ ರೀತಿ ಸಂದೇಶ ನೀಡುವುದು ಸಾಮಾನ್ಯ ಪರಿಪಾಟವಾಗಿದೆ. ಧರ್ಮ ಪರಿಷತ್‌ನ ಅಧ್ಯಕ್ಷರು ಹೇಳಿರುವಂತೆ, ಇನ್ನು ಮುಂದೆ ದಾರಿ ತಪ್ಪುವ ನೇತಾರರಿಗೆ ದಾರಿ ತೋರಿಸುತ್ತಾರೆಂಬ ಭರವಸೆಯಲ್ಲಿ ಜೀವಂತಿಕೆಯಿದೆ ಎಂದು ತಿಳಿಯಲು ಮುಜುಗರವಾಗುತ್ತದೆ.

- ಸಿ.ಎಚ್.ಹನುಮಂತರಾಯ, ಡೆರಿಕ್ ಅನಿಲ್, ಸೂರ್ಯ ಮುಕುಂದರಾಜ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.