ADVERTISEMENT

ವನ್ಯಜೀವಿ ಮಂಡಲಿಯ ಜೆಸಿಬಿ ಯಂತ್ರಗಳು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 20:00 IST
Last Updated 22 ಮಾರ್ಚ್ 2020, 20:00 IST

ದಟ್ಟ ಅರಣ್ಯವನ್ನು ಸೀಳಿ ಸಾಗುವ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗಕ್ಕೆ ‘ವನ್ಯಜೀವಿ ಮಂಡಳಿ ಒಪ್ಪಿಗೆ’ ಎಂಬ ಸುದ್ದಿ ‘ವಿಶ್ವ ಅರಣ್ಯ ದಿನ’ದಂದೇ ಪ್ರಕಟವಾಗಿದೆ! ಈ ರೈಲು ಮಾರ್ಗ ಬೇಕೇ ಬೇಕೆಂದು ಒತ್ತಾಯಿಸಿದವರಲ್ಲಿ ಯಾರೊಬ್ಬರೂ ವಿಷಯತಜ್ಞರಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ, ಜಗದೀಶ ಶೆಟ್ಟರ್, ಶಿವರಾಮ ಹೆಬ್ಬಾರ್ ಮತ್ತು ಆರ್.ವಿ. ದೇಶಪಾಂಡೆ ಎಲ್ಲರೂ ಮುಂದಿನ ಚುನಾವಣೆಯವರೆಗೆ ಮಾತ್ರ ನೋಡಬಲ್ಲವರು.

ಈ ರೈಲುಮಾರ್ಗ ಬೇಡವೆಂದು ವಾದಿಸಿದವರೆಲ್ಲ ಅರಣ್ಯದಲ್ಲಿ ಓಡಾಡಿದವರು, ಜೀವಜಗತ್ತಿನ ಮಹತ್ವವನ್ನು ಅರಿತವರು ಮತ್ತು ನೂರಾರು ವರ್ಷಗಳ ಭವಿಷ್ಯದತ್ತ ನೋಡಬಲ್ಲವರು. ಮುಖ್ಯವಾಗಿ ಕಾಡಿನ ಜೀವಜಂತುಗಳ ಮತ್ತು ಇಂದಿನ ಮಕ್ಕಳ ಪರವಾಗಿ ಮಾತಾಡಿದವರು.

ಈ ಯೋಜನೆಯಿಂದ ರೈಲ್ವೆ ಇಲಾಖೆಗಂತೂ ಲಾಭವಿಲ್ಲ. ಏಕೆಂದರೆ ಈ ಮಾರ್ಗದ ಮೂಲಕ ಸರಕು ಸಾಗಣೆ ತೀರ ನಗಣ್ಯವಾಗಿದೆ; ಪ್ರಯಾಣಿಕರ ಸಂಖ್ಯೆಯೂ ಅಷ್ಟಕ್ಕಷ್ಟೆ; ಪ್ಲಾಟ್‍ಫಾರ್ಮ್‌ಗಳಲ್ಲಿ ಚಿಲ್ಲರೆ ವ್ಯಾಪಾರಿಗಳಿಗೂ ಲಾಭವಿಲ್ಲ. ಏಕೆಂದರೆ ಜನವಸತಿ ಮತ್ತು ನಿಲ್ದಾಣಗಳೂ ತೀರಾ ಕಡಿಮೆ.

ADVERTISEMENT

ನಿಸರ್ಗಕ್ಕಂತೂ ಒಂದು ಶಾಶ್ವತ ಆಘಾತವಾಗುತ್ತದೆ. ಲಕ್ಷಾಂತರ ಮರಗಳು ಹೋಗುತ್ತವೆ. ಅರಣ್ಯ ಭಗ್ನವಾಗುತ್ತದೆ. ವನ್ಯಜೀವಿಗಳಿಗೆ ಸಂಚಾರಕ್ಕೆ ಅಡೆತಡೆ ಉಂಟಾಗುತ್ತದೆ. ರಾಜಕಾರಣಿಗಳಿಗೆ ಈ ಯಾವುದೂ ಮಹತ್ವದ್ದೆಂದು ಅನಿಸಲಿಲ್ಲ.

ಲಾಭ ಯಾರಿಗೆ ಅಂತ ನೋಡಿದರೆ, ಅದು ರೈಲುಮಾರ್ಗದ ಬೃಹತ್ ಗುತ್ತಿಗೆದಾರರಿಗೆ. ಲಕ್ಷಾಂತರ ಮರಗಳನ್ನು ಕಡಿದು ಸಾಗಿಸಿ ಡೈನಮೈಟ್ ಸಿಡಿಸಿ, ಸುರಂಗ-ಸೇತುವೆ ಕಟ್ಟುವವರಿಗೆ; ಸಿಮೆಂಟ್-ಮರಳು-ಕಬ್ಬಿಣ ಸರಬರಾಜು ಮಾಡುವವರಿಗೆ ಮತ್ತು ಅದಕ್ಕೆಂದು ಭಾರಿ ಗಾತ್ರದ ವಾಹನಗಳನ್ನು ಮತ್ತು ಕ್ರೇನ್‍ಗಳನ್ನು ದುಡಿಮೆಗೆ ಹಚ್ಚುವವರಿಗೆ. ಆಮೇಲೆ ರೈಲು ಚಲನೆ ಆರಂಭವಾದನಂತರ ಅರಣ್ಯ ಉತ್ಪನ್ನಗಳನ್ನು ಹೊತ್ತೊಯ್ಯುವವರಿಗೆ ಲಾಭವಾಗುತ್ತದೆ.

ಯಾರ ಆಶೋತ್ತರಗಳ ಪೂರೈಕೆಗೆ ಇವರು ನಿಂತಿದ್ದಾರೆ? ಮೂಕ ನಿಸರ್ಗ ಏನಂದೀತು ಎಂಬುದನ್ನಂತೂ ಇವರು ಕೇಳಲಾರರು. ಮಕ್ಕಳನ್ನಂತೂ ಇವರು ಕೇಳುವುದಿಲ್ಲ. ತಜ್ಞರ ಮಾತನ್ನೇ ಕೇಳಲಿಲ್ಲ ಎಂದಮೇಲೆ ಇನ್ನು ಜನಸಾಮಾನ್ಯರು ಲೆಕ್ಕಕ್ಕಿಲ್ಲ ಬಿಡಿ. ಅಂತೂ ಇಡೀ ಪ್ರಜ್ಞಾವಂತ ಲೋಕವನ್ನೇ ಕಾಡಿನ ಕ್ಷುದ್ರಜೀವಿಗಳೆಂದು ಪರಿಗಣಿಸಿ ಬುಲ್‍ಡೋಜ್ ಮಾಡುವ ಧಾವಂತದಲ್ಲಿದೆಯೆ ಈಗಿನ ಪ್ರಭುತ್ವ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.