ADVERTISEMENT

ವಾಚಕರ ವಾಣಿ: ಚರ್ಚೆ ಬೇಡವಾದರೆ ಸಂಸತ್ ಯಾಕೆ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 30 ನವೆಂಬರ್ 2021, 19:30 IST
Last Updated 30 ನವೆಂಬರ್ 2021, 19:30 IST

ಕೃಷಿ ಕ್ಷೇತ್ರದ ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಮಸೂದೆಗೆ ಸಂಸತ್ತು ಆತುರದಲ್ಲಿ ಅನುಮೋದನೆಯ ಮುದ್ರೆ ಒತ್ತಿರುವುದು ಸರಿಯಲ್ಲ. ಕಾಯ್ದೆಗಳನ್ನು ವಾಪಸ್‌ ಪಡೆಯಲಾಗುವುದೆಂದು ಪ್ರಧಾನಿ ಪ್ರಕಟಿಸಿದ ಮೇಲೆ, ಅದಕ್ಕೆ ಸಂಬಂಧಿಸಿದ ಮಸೂದೆಯನ್ನು ಸಂಸತ್ತಿನಲ್ಲಿ ಅಧಿಕೃತವಾಗಿ ಅನುಮೋದಿಸುವುದು ಒಂದು ಔಪಚಾರಿಕ ಆಗಿತ್ತಷ್ಟೇ. ಹೀಗಿರುವಾಗ, ಅದಕ್ಕೂ ತರಾತುರಿಯಲ್ಲಿ ಒಪ್ಪಿಗೆ ಪಡೆಯುವುದು, ಚರ್ಚೆಗೆ ಅವಕಾಶ ನಿರಾಕರಿಸುವುದು ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಕನ್ನಡಿ. ದೇಶದ ಅನೇಕ ತುರ್ತು ವಿಷಯಗಳ ಬಗೆಗೆ ಸರ್ಕಾರದ ಗಮನ ಸೆಳೆದು, ಗಂಭೀರವಾದ ಚರ್ಚೆಗಳನ್ನು ನಡೆಸುವುದಕ್ಕಾಗಿಯೇ ಸಂಸತ್ತಿನ ಅಧಿವೇಶನ ಕರೆಯುವುದು.

ಇಂತಹ ಪ್ರಮುಖ ವಿಷಯದ ಮೇಲೆ ಚರ್ಚೆಗೆ ವಿರೋಧ ಪಕ್ಷಗಳ ಪ್ರಮುಖರಿಗೂ ಅಭಿಪ್ರಾಯ ಮಂಡನೆಗೆ ಅವಕಾಶ ಕೊಡದಿದ್ದರೆ ಸಂಸತ್ತಿನ ಅಗತ್ಯವಾದರೂ ಇದೆಯೇ? ಸಂಸತ್ತಿನ ಎಲ್ಲ ಸದಸ್ಯರೂ ಎಲ್ಲ ವಿಷಯಗಳಲ್ಲೂ ಪ್ರಬುದ್ಧರಲ್ಲದಿದ್ದರೂ ವಿಷಯಗಳ ಪರ–ವಿರುದ್ಧ ಭಿನ್ನ, ಭಿನ್ನ ಅಭಿಪ್ರಾಯಗಳ ವಾಗ್ಝರಿ ಸಂಸತ್ತಿಗೇ ಕೀರ್ತಿದಾಯಕ.

ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ದಾರಿದೀಪವಾಗಿರುವ ಇಂಗ್ಲೆಂಡಿನ ಎರಡೂ ಸದನಗಳ ಚರ್ಚೆಗಳು ಎಲ್ಲರಿಗೂ ಮಾದರಿ. ಅಲ್ಲಿನ ಚರ್ಚೆಗಳು, ಪ್ರಬುದ್ಧರ ವಿಷಯ ಮಂಡನೆಗಳು ಒಂದು ದಿಕ್ಸೂಚಿ. ಇಲ್ಲಿ, ಸಂಸತ್ತಿನಲ್ಲಿನ ಚರ್ಚೆಗಳಿಗೆ ವಿ.ಕೆ.ಕೃಷ್ಣ ಮೆನನ್, ಆಚಾರ್ಯ ಕೃಪಲಾನಿ, ಎನ್.ಜಿ.ರಂಗಾ, ಮೀನೂ ಮಸಾನಿ, ಲೋಹಿಯಾ, ಹೇಮ್ ಬರುವಾ, ಹಿರೇನ್ ಮುಖರ್ಜಿ, ವಾಜಪೇಯಿ ಅಂತಹವರುಗಳ ಕೊಡುಗೆ ಅಪಾರ. ಇದಕ್ಕೆ ಕಾರಣ, ಅವರು ಮಾತನಾಡುವುದಕ್ಕೆ ಸಿಕ್ಕ ಅವಕಾಶ. ಜೊತೆಗೆ, ಚರ್ಚೆಗಳೂ ಬರಲಿರುವ ಪೀಳಿಗೆಗೆ ಆದರ್ಶ. ಸಂಸತ್ತು ಮತ್ತು ವಿಧಾನಮಂಡಲಗಳು ಅನೇಕರ ವಿದ್ವತ್ತು ಪ್ರಕಾಶಿಸುವುದರ ದ್ಯೋತಕ. ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಮೆರುಗು ಕೊಡುವುದೇ ಶಾಸನಸಭೆಗಳ ಮುಕ್ತ, ಪ್ರಬುದ್ಧ ಚರ್ಚೆಗಳು. ಇವುಗಳಿಗೆ ಅವಕಾಶ ಇರದಿದ್ದರೆ ಸಂಸತ್ತಿನ ಕಲಾಪಗಳು ಬರಡು. ಇದನ್ನು ಸಂಸತ್ತಿನ ಹಿರಿಯರೇ ಗ್ರಹಿಸದಿರುವುದು ವಿಷಾದಕರ.

ADVERTISEMENT

–ಕೆ.ಎನ್.ಭಗವಾನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.