ADVERTISEMENT

ಚುರುಮುರಿ| 99 ವೆರೈಟಿ ದೋಸೆ

ಆನಂದ ಉಳಯ
Published 30 ಸೆಪ್ಟೆಂಬರ್ 2021, 19:30 IST
Last Updated 30 ಸೆಪ್ಟೆಂಬರ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ಕಾವಲಿ ಒಂದು, ದೋಸೆ ನೂರು ಮೈನಸ್ ಒಂದು...’ ಎಂದು ಪ್ರಾಸಬದ್ಧವಾಗಿ ಹೆಂಡತಿಯ ಮುಂದೆ ಹೇಳಿದಾಗ ಆಕೆ ಪ್ರಶ್ನಾರ್ಥಕವಾಗಿ ನೋಡಿದಳು. ‘ಅದೇ ತಳ್ಳೊಗಾಡೀಲಿ ದೋಸೆ ಮಾರೋನು 99 ವೆರೈಟಿ ದೋಸೆ ಹಾಕ್ತಾನೆ’ ಎಂದು ವಿವರಿಸಿದೆ.

‘ಮೊದಲು ಮಸಾಲೆ ದೋಸೆ ಒಂದೇ ಇತ್ತು. ಆಮೇಲೆ ಬೆಣ್ಣೆ ಮಸಾಲೆ, ನಂತರ ಸಾಗು ಮಸಾಲೆ ಹಾಗೇ ದೋಸೆ ಸಂತತಿ ಬೆಳೆದು ಈಗ 99 ಮುಟ್ಟಿದೆ’ ಎಂದು ಬಾಯಿಯಲ್ಲಿ ನೀರೂರಿಸಿಕೊಂಡಳು.

‘ವೆರೈಟಿ ಈಸ್ ದಿ ಸ್ಪೈಸ್ ಆಫ್ ಲೈಫ್’.

ADVERTISEMENT

‘ಹೌದ್ರೀ, ಹಿಂದೆ ಅಂಬಾಸಿಡರ್ ಕಾರೊಂದೇ ಇತ್ತು. ಪ್ರಧಾನಿಗಳೂ ಅದನ್ನೇ ಉಪಯೋಗಿಸುತ್ತಿದ್ದರು. ಈಗ ಪಂಚಾಯಿತಿ ಮೆಂಬರ್‌ಗೂ ಬೆಂಜ್ ಕಾರೇ ಬೇಕು’.

‘ದೇಶದಲ್ಲಿ 15 ಕಾರ್‌ ಫ್ಯಾಕ್ಟರಿಗಳೇ ಇದ್ದು ಹಲವಾರು ಮಾಡೆಲ್‍ಗಳು ರಸ್ತೆ ಗುಂಡಿಗಳ ಮೇಲೆ ಓಡಾಡ್ತಿವೆ. ಪಕ್ಕದವರು ಗಾಡಿ ಬದಲಾಯಿಸಿದರೆ ನಾವೂ ಬದಲಾಯಿಸಬೇಕು. ಪ್ರೆಸ್ಟೀಜ್ ಪ್ರಶ್ನೆ ನೋಡು’.

‘ಟೀವೀನೂ ಅಷ್ಟೆ. 80ರ ದಶಕದಲ್ಲಿ ಪ್ಲೇಟ್‍ಮೀಲ್ ತರಹ ಒಂದು ಚಾನೆಲ್, 4-5 ಬ್ರ್ಯಾಂಡ್ ಟೀವಿ ಇದ್ದವು. ಈಗ ದೊಡ್ಡ ಥಾಲಿ. ಸೆಟ್ ಆಯ್ಕೆಯೂ ಚಿಟ್ಟು ಹಿಡಿಸುವಷ್ಟಿದೆ’.

‘ಮತದಾರರಿಗೂ ಚಿಟ್ಟು ಹಿಡಿದಿದೆ. 1952ರಲ್ಲಿ 52 ಪಕ್ಷಗಳಿದ್ದು, ಈಗ 1,700 ಪಕ್ಷ
ಗಳಿವೆಯಂತೆ. ಜನಸೇವೆ ಮಾಡೋದಿಕ್ಕೆ ಎಷ್ಟು ಕಾತರ. ನನ್ನಂತಹ ಮತದಾರನಿಗೆ ಗೊಂದಲ. ಯಾರನ್ನು ಆಯ್ಕೆ ಮಾಡುವುದು? ಯಾರು ಸಾಚಾ? ಯಾರು ಬೋಗಸ್?’

‘ಗೊಂದಲ ಎಲ್ಲದರಲ್ಲೂ ಇದೆ. ದೋಸೆ ಆಯ್ಕೆಯಲ್ಲಿ ಸಹ. 99 ವೆರೈಟಿ ಇದ್ದರೆ ಯಾವುದನ್ನು ಹುಯ್ಯಲು ಹೇಳುವುದು. ನಾವು ತಿಂತಾ ಇದ್ದಾಗೆ ಪಕ್ಕದವನ ಪ್ಲೇಟ್ ನೋಡಿ ‘ಅಯ್ಯೋ ಆ ದೋಸೆ ಹೇಳಬೇಕಿತ್ತು’ ಎಂದೆನಿಸದೇ?’

‘ಅದಕ್ಕೇ ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿಗಳು ಹೇಳಿದ್ದು, ಎಲ್ಲಿ ಆಯ್ಕೆ ಇದೆಯೋ ಅಲ್ಲಿ ಟೆನ್ಷನ್ ಇದೆ ಅಂತ. ಏಳಿ, ನಾನು ಒಂದೇ ವೆರೈಟಿ ದೋಸೆ ಹುಯ್ಯೋದು’ ಎಂದು ವಾದಕ್ಕೆ ಮುಕ್ತಾಯ ಹಾಡಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.