ADVERTISEMENT

ಚುರುಮುರಿ| ಹಗಲಲ್ಲೇ ಬರಬೇಕೆ?

ಆನಂದ ಉಳಯ
Published 30 ಡಿಸೆಂಬರ್ 2021, 19:17 IST
Last Updated 30 ಡಿಸೆಂಬರ್ 2021, 19:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ಇನ್ನೊಂದು ಹೊಸ ವರ್ಷ ಬಂತಲ್ರೀ. ಹ್ಯಾಪಿ ನ್ಯೂ ಇಯರ್ ಅಂತ ಹೇಳಬೇಕು ಎಲ್ಲಾರಿಗೂ’ ಹೆಂಡತಿ ಉವಾಚ.

‘ಎರಡು ವರ್ಷದಿಂದ ಹೇಳ್ತಾನೆ ಇದೀವಿ. ವರ್ಷವೇನೋ ಹೊಸದು. ಹ್ಯಾಪಿ ಅಂತೂ ಆಗಲಿಲ್ಲ. ಈ ಸಲ ಹೇಗಿರುತ್ತೋ ನೋಡಬೇಕು’.

‘ಆದರೆ ಈ ಇಂಗ್ಲಿಷ್ ಹೊಸ ವರ್ಷ ಏಕೆ ನಡುರಾತ್ರೀಲೇ ಬರುತ್ತೆ ಪ್ರತೀ ಸಲಾನೂ?’

ADVERTISEMENT

‘ಏನು ಪ್ರಶ್ನೆ? ಅದೇನು ಹಾಡು ಹಗಲಲ್ಲೇ ಬರಬೇಕೆ?’

‘ಈಗ ನಮ್ಮ ಹೊಸ ವರ್ಷಗಳೆಲ್ಲ ಬೆಳಗಾದ ನಂತರವೇ ಬರ್ತಾ ಇಲ್ವೇ? ಉಗಾದಿ ನಮ್ಮ ಹೊಸ ವರ್ಷ ಅಲ್ವೇ? ಅದೇನು ರಾತ್ರಿ 12ಕ್ಕೆ ಬರುತ್ತೇನು? ಅದನ್ನು ಕರೆದುಕೊಂಡು ಬರೋದಿಕ್ಕೆ ಎಂಜಿ ರೋಡ್‍ಗೇ ಹೋಗಬೇಕೆ? ಬರೀ ಉಗಾದಿ ಯಾಕೆ, ನಮ್ಮಲ್ಲಿ 10ಕ್ಕೂ ಹೆಚ್ಚು ನ್ಯೂ ಇಯರ್‌ಗಳಿವೆ. ಅವು ಯಾವುವೂ ಮಿಡ್‌ನೈಟ್ ಎಂಟ್ರಿ ಕೊಡೋದಿಲ್ಲ’.

‘10ಕ್ಕೂ ಹೆಚ್ಚು ನ್ಯೂ ಇಯರ್‌ಗಳು?’

‘ಹೌದ್ರೀ, ಕಾಶ್ಮೀರದ ನವ್ರೆಹ್‍ದಿಂದ ಕನ್ಯಾಕುಮಾರಿಯ, ಅಂದರೆ ತಮಿಳುನಾಡಿನ ಪುತಂಡುವರೆಗೆ ಒಟ್ಟು 11 ತರಹ ನ್ಯೂ ಇಯರ್‌ಗಳಿವೆ. ಮಹಾರಾಷ್ಟ್ರದಲ್ಲಿ ಗುಡಿಪಾಡವಾ, ಪಂಜಾಬಿನಲ್ಲಿ ಬೈಸಾಖಿ, ಅಸ್ಸಾಂನಲ್ಲಿ ಬಿಹು, ಕೇರಳದಲ್ಲಿ ವಿಶು, ಬಂಗಾಳದಲ್ಲಿ ಪೊಹಲೆ ಬೈಶಾಕ್...’

‘ಅವು ಯಾವುವೂ ಜನವರಿ 1ನೇ ತಾರೀಖು ಬರೋದಿಲ್ಲ ಅಲ್ವೇ?’

‘ಇಲ್ಲ, ಎಲ್ಲಾ ಮಾರ್ಚ್‌- ಏಪ್ರಿಲ್, ಜೂನ್- ಜುಲೈ ಅಥವಾ ಅಕ್ಟೋಬರ್- ನವೆಂಬರ್‌ನಲ್ಲಿ ಬರುತ್ತವೆ. ಈ ಇಂಗ್ಲಿಷ್‍ದೇ ಜನವರಿ 1ನೇ ತಾರೀಖು ಫಿಕ್ಸ್‌ಡ್‌ ಎಂಟ್ರಿ. ಪ್ರತಿವರ್ಷ ನಾವು ಭಾರತೀಯರು ಎರಡೆರಡು ಹೊಸ ವರ್ಷ ಸೆಲೆಬ್ರೇಟ್ ಮಾಡ್ತೀವಿ. ಒಂದಕ್ಕೆ ಕಾಂಟಿನೆಂಟಲ್ ಮೆನು. ಇನ್ನೊಂದಕ್ಕೆ ಶುದ್ಧ ಭಾರತೀಯ ಮೆನು’.

‘ಆದರೆ ಕ್ಯಾಲೆಂಡರ್ ಮಾತ್ರ ಒಂದೇ. ಅದು ಇಂಗ್ಲಿಷ್ ಕ್ಯಾಲೆಂಡರ್’.

‘ಅದೇನೋ ಕರೆಕ್ಟ್. ನಮ್ಮ ಹೊಸ ವರ್ಷಗಳು ಊಟಕ್ಕುಂಟು ಲೆಕ್ಕಕ್ಕಿಲ್ಲ’.

‘ನನ್ನ ತರಹಾ ಅನ್ನು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.