ಬಳ್ಳಾರಿ: ‘ಎಲ್ಲರನ್ನೂ ನೋಡಿದ್ದೀರಲ್ಲ. ಇದೊಂದ್ ಸಲ ನಮಗೂ ಅಧಿಕಾರ ಕೊಟ್ಟು ನೋಡಿ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅರ್ಧ ತಮಾಷೆ, ಅರ್ಧ ಗಂಭೀರ ದನಿಯಲ್ಲಿ ನಕ್ಕರು.
ವಿಕಾಸ ಪರ್ವದ ಬಳಿಕ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಳ್ಳಾರಿ ನಗರ ಕ್ಷೇತ್ರದಲ್ಲಿ ಮುಸ್ಲಿಮರು ಹೆಚ್ಚಿರುವುದರಿಂದ ಇಕ್ಬಾಲ್ ಅಹ್ಮದ್ ಅವರಿಗೆ ಟಕೆಟ್ ನೀಡುವುದು ಅನಿವಾರ್ಯವಾಯಿತು’ ಎಂದರು.
‘ಇಕ್ಬಾಲ್ ಅಹ್ಮದ್ ಒಮ್ಮೆಯೂ ನಗರದ ಸಮಸ್ಯೆಗಳ ಕುರಿತು ಮಾತನಾಡಿಲ್ಲ. ಜನರೊಂದಿಗೆ ಬೆರೆತು ಓಡಾಡಿಲ್ಲ. ಈಗಿನ ಕಾಂಗ್ರೆಸ್ ಶಾಸಕ ಅನಿಲ್‌ಲಾಡ್ ಅವರಂತೆಯೇ ಇವರೂ ಜನರಿಂದ ದೂರ ಉಳಿದರೆ ಏನು ಪ್ರಯೋಜನ’ ಎಂದು ಸುದ್ದಿಗಾರರು ಪ್ರಶ್ನೆ ಎಸೆದರು.
ಅದಕ್ಕೆ ನಗುತ್ತಲೇ ಉತ್ತರಿಸಿದ ಕುಮಾರಸ್ವಾಮಿ, ‘ಎಲ್ಲರನ್ನೂ ನೋಡಿದ್ದೀರಲ್ಲ. ಇದೊಂದ್ ಸಲ ನಮ್ಮನ್ನೂ ನೋಡಿ. ನಗರ ಕ್ಷೇತ್ರ ಅಭಿವೃದ್ಧಿಯ ಹೊಣೆಯನ್ನು ನಾನೇ ಹೊರುತ್ತೇನೆ’ ಎಂದರು.
‘ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ಅವರೂ ಇದೇ ಮಾತುಗಳನ್ನು ಆಡಿದ್ದರು’ ಎಂದು ಪತ್ರಕರ್ತರು ನೆನಪಿಸಿದರು. ಅದಕ್ಕೆ ಕುಮಾರಸ್ವಾಮಿ ಪುನಃ ‘ಅವರನ್ನೂ ನೋಡಿದ್ದೀರಲ್ಲ. ನಮ್ಮನ್ನೂ ಒಮ್ಮೆ ನೋಡಿ’ ಎಂದು ಮತ್ತೆ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.