ADVERTISEMENT

ಕಣ್ ಹೊಡೀರಿ, ಕಂಪ್ಯೂಟರ್ ತೆರೀರಿ!

ತುರುವೇಕೆರೆ ಪ್ರಸಾದ್
Published 17 ನವೆಂಬರ್ 2012, 19:30 IST
Last Updated 17 ನವೆಂಬರ್ 2012, 19:30 IST

`ದೇಹಕೆ ಉಸಿರೇ ಸದಾ ಭಾರ ಇಲ್ಲ ಆಧಾರ~ ಎಂದು ದೀಕ್ಷಿತ ಕಮಲಳ ಹಾಲಿಡೇ ಇನ್‌ನಲ್ಲಿ ಕೂತ್ಕೊಂಡು ಕಿರುಲ್ತಿದ್ದ.

`ಸಾಕು ನಿಲ್ಸಲೇ! ಶಿವಪ್ಪ ಕಾಯೋ ತಂದೆನೋ, ಓ ಅಯ್ಯ ಅಮ್ಮಯ್ಯ ಧರ್ಮನೇ ತಾಯಿ ತಂದೆನೋ ಸಂತೇಲಿ ಹಾಡಿದ್ರೆ ನಾಕು ಕಾಸಾದ್ರು ಆಯ್ತಿತ್ತು~  ಛೇಡಿಸಿದಳು ಕಮಲಿ.
`ದಂಡ ಪಿಂಡ ಅನಿಸ್ಕೊಂಡು ದಮಡಿ ದುಡೀದೆ ಪಲ್ಲದ ಮೂಟೆ ತರ ಕೊಬ್ಬು ಬೆಳೆಸ್ಕಂಡ್ರೆ ದೇಹಕ್ಕೆ ಉಸಿರು ಸದಾ ಭಾರನೇ ಕಣಲೇ~ ಎಂದು ಮೂತಿ ತಿವಿದ ನಾಣಿ.

`ಲೇಯ್! ಇನ್ನೂ ಓಲ್ಡ್ ವರ್ಷನ್ನಲ್ಲೇ ಇದೀರಲ್ಲೋ! ಇದು ನ್ಯೂ ವರ್ಷನ್!  ನಾನು ಹೇಳ್ತಿರೋದು ಬೆಗ್ಗಿಂಗ್ ಸಾಂಗ್ ಅಲ್ರಲೇ!  ಇದು ಆಧಾರ ಗೀತೆ~ ಎಂದ ದೀಕ್ಷಿತ.
`ಹಂಗಂದ್ರೆ ಏನು?~

`ಎಲ್ಲೆಲ್ಲಿ ಕಾಮ ಹಾಕ್ಕೊಬೇಕೋ ಅಲ್ಲಿ ಹಾಕ್ಕಂಡ್ರೆ ನಿಮಗೆ ಸರಿಯಾಗಿ ಅರ್ಥ ಆಗುತ್ತೆ. ದೇಹಕೆ ಉಸಿರೇ ಸದಾ ಭಾರ, ಇಲ್ಲ ಆಧಾರ. ಇದು ನನ್ನೊಬ್ಬನಿಗೆ ಅನ್ವಯಿಸೋದಲ್ಲ ಕಣ್ರೋ! ನಿಮಗೆಲ್ಲಾ ಅನ್ವಯಿಸೋದೇ!~

`ಅದೇನು ಹೇಳ್ತಿದೀಯ ಸರಿಯಾಗಿ ಬೊಗಳೋ~
`ನೋಡ್ರೋ! ಇನ್ನು ಮೇಲೆ ಎಲ್ಲಕ್ಕೂ ಆಧಾರ್ ಕಾರ್ಡ್ ಬೇಕಂತೆ! ಆಧಾರ ಇಲ್ಲ ಅಂದ್ರೆ ದೇಹಕೆ ಉಸಿರು ಸದಾ ಭಾರವೇ!~

`ಓಹೋ! ನೀನು ಅದರ ಬಗ್ಗೆನಾ ಹೇಳ್ತಿರೋದು?~
`ಹ್ಞೂಂ ಆಧಾರ ಕಾರ್ಡ್ ಇಲ್ದೆ ಹುಲ್ಲುಕಡ್ಡಿನೂ ಅಲ್ಲಾಡೋ ಹಂಗಿಲ್ಲ. ಸಾಲ ತಗಳಕ್ಕೆ ಬೇಕು, ಬ್ಯಾಂಕ್ ಅಕೌಂಟ್ ಓಪನ್ ಮಾಡಕ್ಕೆ ಬೇಕು, ಉದ್ಯೋಗ ಖಾತ್ರಿ ಯೋಜನೆಗೆ ಬೇಕು~
`ಹೌದಂತೆ! ಎಲ್ಲದಕ್ಕೂ ಆಧಾರ್ ಕಾರ್ಡ್ ಬೇಕಂತೆ! ರೇಷನ್ ಕಾರ್ಡ್ ಮಾಡಿಸಕ್ಕೂ ಬೇಕಂತೆ~ ಎಂದಳು ಕಮಲ!

`ಸ್ಮಾರ್ಟ್ ಕಾರ್ಡ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಏನು ತಗಬೇಕು ಅಂದ್ರೂ ಆಧಾರ್ ಕಾರ್ಡ್ ಇದ್ರೇನೇ ಸಿಗೋದು~ `ಓಟು ಹಾಕಕ್ಕೆ, ಮಾಡಕ್ಕೆ, ಸಿಮ್ ತಗಳಕ್ಕೆ, ಟಿಕೆಟ್ ಬುಕ್ ಮಾಡಕ್ಕೆ ಎಲ್ಲದಕ್ಕೂ ಬೇಕಾಗಬಹುದು.~

`ಪಾಸ್‌ಪೋರ್ಟ್, ವೀಸಾಗೂ ಆಧಾರ್ ಕಾರ್ಡ್ ಕೇಳಬಹುದು, ತಿಥಿಕಾರ್ಡ್ ಪ್ರಿಂಟ್ ಹಾಕಕ್ಕೂ ಆಧಾರ್ ಕಾರ್ಡ್ ತೋರಿಸು ಅನ್ನೋ ಕಾಲ ಬರಬಹುದು. ಸರ್ವಂ ಆಧಾರ ಮಯಂ ಅನ್ನೋ ಹಾಗಾಗಿದೆ.~ 

  `ಉಡಿದಾರ, ಶಿವದಾರ, ಜನಿವಾರ
   ಯಾವುದಿರಲಿ ಬಿಡಲಿ
   ಜೇಬಲ್ಲಿರಲಿ
   ಆಧಾರ- 
ಅನ್ನೋ ಸ್ಥಿತಿ ತಲುಪಿದೀವಿ~

`ಎಲ್ಲಕ್ಕಿಂತ ಮುಖ್ಯವಾಗಿ ಇನ್ನು ಮೇಲೆ  ಮದುವೆಗೆ ವಧೂ ವರರ ಜಾತಕ ತೋರಿಸೋ ಬದಲು ಆಧಾರ್ ಕಾರ್ಡ್ ಇಟ್ಕೊಂಡೇ ಲಗ್ನ ಕಟ್ಟಬೇಕಾಗುತ್ತೇನೋ?~
`ಪ್ರೇಮಿಗಳಿಗಂತೂ ಆಧಾರ್ ಕಾರ್ಡ್ ಬೇಕೇ ಬೇಕು. ಕಣ್ ಹೊಡುದ್ರೇ ಎಲ್ಲಾ ಗಿಟ್ಟೋದು~
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು

ಆಧಾರ್ ಚೀಟಿ ಬೇಕುಕಂಡು ಹಿಡಿಯಲು ಮೇಲು ಫೀಮೇಲುಎಂದು ದೀಕ್ಷಿತ ಕಮಲಿ ಕಡೆ ನೋಡಿ ಕಣ್ಣು ಮಿಸುಕಿದ. ಯಾಕೋ! ತಲೆ ಗಿಲೆ ತಿರುಗ್ತಿದೀಯೇನೋ ನಿಂಗೆ!  ನಂಗೇ ಕಣ್ ಹೊಡೀತೀಯಾ? ನಿಂಬೆ ಚಾಯ್ ಕುಡುದ್ರೂ ಪಿತ್ಥ ಇಳಿದಿಲ್ವಾ?~ ಕಮ್ಲಿ ಜಾಡಿಸಿದಳು.

`ಥೂ! ಕಚಡಾ ನನ್ ಮಗನೇ! ನಿಂಗೇನೋ ಬಂತು ರೋಗ? ನಮ್ ಕಮಲಿಗೇ ಕಣ್ ಹೊಡೆಯೋದಾ?~  ನಾಣಿ ಗದರಿದ..ತಪ್ಪಾಯ್ತು, ಅಭ್ಯಾಸ ಬಲ, ಕಮಲನ್ನ  ನೋಡ್ತಾ ನೋಡ್ತಾ ಅಂಗೇ ಕಣ್ಣು ಅದುರಿಬಿಡ್ತು~ ದೀಕ್ಷಿತ ತಪ್ಪೊಪ್ಪಿಕೊಂಡ.

 `ಅಭ್ಯಾಸ ಬಲಾನಾ? ಅಂದ್ರೆ ಮೂರು ಹೊತ್ತೂ ಊರಲ್ಲಿರೋ ಹೆಣ್ ಮಕ್ಕಳಿಗೆಲ್ಲಾ ಕಣ್ ಹೊಡ್ಕಂಡು ತಿರುಗ್ತಿದೀಯ ಅನ್ನು~`ನಾನು ಮಾತ್ರ ಅಲ್ಲ, ಇನ್ನು ಮೇಲೆ ಕೆಲಸ ಆಗಬೇಕು ಎಂದ್ರೆ ಎಲ್ಲಾ ಕಣ್ ಹೊಡ್ಕಂಡೇ ತಿರುಗಬೇಕು~ 

 `ಲೇಯ್! ನೀನೇನಾದರೂ ಲೂಸ್ ಆಗಿದ್ದೀಯೋ ಹೇಗೆ? ಕಲ್ ಹೊಡುದ್ರೆ ಹಣ್ಣು ಬೀಳುತ್ತೆ, ಕಣ್ ಹೊಡುದ್ರೆ ಹಲ್ ಸೆಟ್ ಬೀಳುತ್ತೆ~ ಕಮ್ಲಿ ರಾಂಗಾದಳು.`ಅದೆಲ್ಲಾ ಹಳೇ ಕತೆ ! ಈಗ ಕಣ್ ಹೊಡುದ್ರೇ ಪಾಸ್‌ವರ್ಡ್ ಓಪನ್ ಆಗೋದು~
ಎಲ್ಲಾ ಮುಖ ಮುಖ ನೋಡಿಕೊಂಡರು.

`ಏನ್ರೋ ಎಲ್ಲಾ ಕಕವಗಳ ತರ ನೋಡ್ತಿದೀರಿ. ಸೌಲಭ್ಯ ಬೇಕು ಅಂದ್ರೆ ಆಧಾರ್ ಬೇಕು, ಆಧಾರ್ ಬೇಕು ಅಂದ್ರೆ ಕಣ್ ಹೊಡೆಯಕ್ಕೆ ಬರಬೇಕು. ಆಧಾರ್‌ಗೆ ಬಯೋಮೆಟ್ರಿಕ್ ವಿಧಾನದಲ್ಲಿ ಕಣ್ಣನ್ನ ಸ್ಕ್ಯಾನ್ ಮಾಡಲ್ಲವಾ? ಅದನ್ನ ಉಪಯೋಗಿಸಿಕೊಂಡು ಕಣ್ ಹೊಡುದ್ರೆ ಕಂಪ್ಯೂಟರ್ ಓಪನ್ ಆಗೋ ಹಂಗೆ ಮಾಡವ್ರಂತೆ~ 

 `ಕಣ್ ಹೊಡುದ್ರೆ ಹಾರ್ಟೇ ಓಪನ್ ಆಗುತ್ತೆ. ಇನ್ನು ಕಂಪ್ಯೂಟರ್ ಯಾವ ಮಹಾ ಬಿಡು~
`ಊರಿಗೆ ಬಂದೋಳು ನೀರಿಗೆ ಬರಲ್ಲವಾ ಅಂದಂಗೆ ಕಂಪ್ಯೂಟರ್‌ಗೆ ಬಂದದ್ದು ಪಾಮ್‌ಟಾಪ್‌ಗೆ ಬರಲ್ಲವಾ? ಕಣ್ ಹೊಡುದ್ರೆ ಅಂಗೈ ಮೇಲಿನ ಮಿನಿ, ಮೈಕ್ರೋ ಕಂಪ್ಯೂಟರ್‌ಗಳೂ ಓಪನ್ ಆಗುತ್ವೆ~

`ಕಂಪ್ಯೂಟರ್‌ಗೆ ಬಂದದ್ದು ಮೊಬೈಲ್‌ಗೆ ಬರದಿರುತ್ತಾ? ಇನ್ನು ಮೇಲೆ ಕಣ್ ಹೊಡುದ್ರೆ ಮೊಬೈಲ್‌ಗಳ ಪಾಸ್‌ವರ್ಡ್‌ಗಳೂ ಓಪನ್ ಆಗುತ್ತೆ ಅಷ್ಟೇ ಅಲ್ಲ, ಜೇಬಲ್ಲಿರೋ ಮೊಬೈಲ್, ಜೇಬು ಹಿಂದಿರೋ ಹಾರ್ಟ್ ಎರಡೂ ಓಪನ್ನಾಗುತ್ತೆ~ ದೀಕ್ಷಿತ ಖುಷಿಯಿಂದ ಬೀಗಿದ.

`ಇನ್ನು ಮೇಲೆ ಬೆಳಿಗ್ಗೆಯಿಂದ ಸಂಜೆ ತನಕ ಕಣ್ ಹೊಡೆಯೋದೇ ಕೆಲಸ. ಬ್ಯಾಂಕು, ಪೋಸ್ಟ್‌ಆಫೀಸ್, ರೇಷನ್ ಅಂಗಡಿ, ಟ್ಯಾಕ್ಸ್ ಆಫೀಸ್, ಎಲ್ಲ ಕಡೆ ಹೋಗೋದು, ಆಧಾರ್ ತೋರಿಸೋದು, ಕಂಪ್ಯೂಟರ್ ಮುಂದೆ ಕಣ್ ಹೊಡೆಯೋದು~

`ಎಲ್ಲ ಆ ರೆಂಜಲ್ಲಿ ಕಣ್ ಹೊಡುದ್ರೆ ಕಂಪ್ಯೂಟರ‌್ರೇ ಹ್ಯಾಂಗ್ ಆಗಿ ಹೋಗುತ್ತೆ~
`ಅಕಸ್ಮಾತ್ ಮಿಲ್ಕ್ ಡೈರಿಲಿ ಕಂಪ್ಯೂಟರ್ ಮುಂದೆ ಕುಳಿತ ಹುಡುಗಿಗೆ ಕಣ್ ಹೊಡುದ್ರೆ?~
`ಬಯೋ ಮೆಟ್ರಿಕ್ ಹೋಗಿ ಬಯ್ಯೋ ಮೆಟ್ರಿಕ್ ಆಗುತ್ತೆ. ಹುಡುಗಿ ರಾಂಗಾದ್ರೆ ಕಣ್ ಹೊಡೆದೋರೇ ಹ್ಯಾಂಗ್ ಮಾಡ್ಕೊಬೇಕಾಗುತ್ತೆ.
 
ನಾಳೆಯಿಂದ ಬೇರೆ ಯಾವ್ದಾರಾ ಟೀ ಅಂಗಡಿ ನೋಡ್ಕೊಳಿ.  ಇದು ಹಾಲಿಡೇ ಇನ್, ಪೋಲಿಡೇ ಇನ್ ಅಲ್ಲ! ನೀವು ಎಷ್ಟು ಕಣ್ ಹೊಡುದ್ರೂ ನನ್ನ ಕಾಫಿ ಡೇ ನಿಮಗೆ ಓಪನ್ ಆಗಲ್ಲ  ಎಂದು ಕಮಲಿ ಕಾಫಿ ಕಪ್ ಎತ್ತಿಕೊಂಡು ಹೋದ್ಲು.~   
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.