ADVERTISEMENT

ದೂಳು ಇಲ್ಲಿ ಪ್ರಗತಿಯ ಸಂಕೇತ

ಕೆ.ಎಸ್.ಗಿರೀಶ್
Published 5 ಮೇ 2018, 18:34 IST
Last Updated 5 ಮೇ 2018, 18:34 IST

ಚಾಮರಾಜನಗರ: ಕಾಡುಗಳ್ಳ ವೀರಪ್ಪನ್ ಭಯ ಮತ್ತು ನಗರಕ್ಕೆ ಬಂದರೆ ಸಿ.ಎಂ. ಕುರ್ಚಿ ತಪ್ಪುತ್ತದೆ ಎಂಬ ಮೂಢನಂಬಿಕೆಗಳಿಂದ ಹೊರಬಂದಿರುವ ಚಾಮರಾಜನಗರ ಜಿಲ್ಲೆ ಇದೀಗ ಮತ್ತೊಂದು ಕೌತುಕಕ್ಕೆ ಕಾರಣವಾಗಿದೆ. ಅದುವೇ ದೂಳು...

ದೂಳು ಎಂದರೆ ಅದು ಸಾಮಾನ್ಯವಲ್ಲ, ಅದಕ್ಕೂ ಈಗ ಮಹತ್ವ ಇದೆ ಎಂಬುದನ್ನು ಈ ನಗರ ಸಾಬೀತುಪಡಿಸಿದೆ. ಸಣ್ಣದೊಂದು ಗಾಳಿ ಬೀಸಿದರೂ ಮುಂದೆ ದಾರಿಯೇ ಕಾಣದಂತೆ ದೂಳು ಏಳುವುದರಿಂದ ರಸ್ತೆಗಳಲ್ಲಿ ವಾಹನದ ದೀಪ ಬೆಳಗಿಸಿಯೇ ಸಂಚರಿಸಬೇಕಾದ ಅನಿವಾರ್ಯತೆ ಇಲ್ಲಿದೆ. ಇದನ್ನೇ ರಾಜಕೀಯ ಪಕ್ಷಗಳು ಬಂಡವಾಳ ಮಾಡಿಕೊಂಡು ಮಾಸ್ಕ್‌ಗಳನ್ನು ಧರಿಸಿಕೊಂಡು ಪ್ರಚಾರಕ್ಕೆ ಇಳಿದಿವೆ.

‘ದೂಳಿರುವುದು ಪ್ರಗತಿಯ ಸಂಕೇತ. ಕಾಮಗಾರಿಗಳು ಅರ್ಧಕ್ಕೆ ಬಂದಿವೆ. ಈಗ ಮತ್ತೆ ನಮಗೆ ಮತ ನೀಡಿದರೆ ಕಾಮಗಾರಿ ಪೂರ್ಣಗೊಳಿಸಿ ದೂಳನ್ನು ಇಲ್ಲವಾಗಿಸುತ್ತೇವೆ’ ಎನ್ನುವುದು ಆಡಳಿತ ಪಕ್ಷದ ವಾದ.‘ಅವೈಜ್ಞಾನಿಕ ನಿರ್ಧಾರದಿಂದ ನಗರದ ಎಲ್ಲ ರಸ್ತೆಗಳನ್ನು ಒ‌ಮ್ಮೆಗೇ ಅಗೆದು ಹಾಕಿದ್ದರಿಂದ ದೂಳು ಹೆಚ್ಚಾಗಿದೆ. ದೂಳಿನ ಸಮಸ್ಯೆ ನಿವಾರಿಸಲು ನಮಗೆ ಮತ ಹಾಕಿ’ ಎನ್ನುವುದು ಪ್ರತಿಪಕ್ಷಗಳ ವಾದ.

ADVERTISEMENT

ಇವರಿಬ್ಬರ ನಡುವೆ ಮತದಾರ ಕಕ್ಕಾಬಿಕ್ಕಿಯಾಗಿ ಮೂಗು ಮುಚ್ಚಿಕೊಂಡು ರಸ್ತೆಗಳಲ್ಲಿ ಅಡ್ಡಾಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.