ADVERTISEMENT

ಪಂಚೇತಿ ಪರವ್ವಾ

ಪ್ರೊ.ಜಿ.ಎಚ್.ಹನ್ನೆರಡುಮಠ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ನಮ್ಮೂರಿನ ಪಂಚೇತಿ ಪರವ್ವ ಎಂಥಾಕಿ ಅಂದ್ರ `ಗೊಡ್ಡೆಮ್ಮಿ ಡುಬ್ಬಾ ಚಪ್ಪರಿಸಿ ಹಾಲು ಹಿಂಡಿಕೊಂಡು ಬರೂವಾಕಿ~ ಅಸನೇರಿ ಅಕಲವಂತಿ. ಆಕಿ ಬೆಲ್ಲದಂತೆ ಮಾತಾಡಿದರೆ ಒಲ್ಲದ ಗಂಡಸರೂ ಚಂಚೀ ಚೀಲ ಬಿಚ್ಚಿ ಎಲಿಅಡಕಿ- ಸುಣ್ಣ, ಕಾಚು ಕೊಟ್ಟು ತಲವಾರ ಮೀಸಿ ತಿರುವುತ್ತಿದ್ದರು. ಪಂಚೇತಿ ಪರವ್ವ ಎಂಥಾ ಚೂಟಿ ಅಂದ್ರ.... ಎಂಥಾ ಲಬಾಡ ಗಂಡ್ಸು ಬಂದ್ರೂ ಲಟ್ಟಣಿಗೀಲಿಂದ ಇಕ್ಕರಿಸೂ ಖಡಕ್ ಹೆಣ್ಣು! ನಮ್ಮೂರಾಗ ಅಳೂ ಕೂಸು ಸೈತೇಕ `ಪಂಚೇತಿ ಪರವ್ವಾ ಬಂದ್ಲೂ~ ಅಂದ್ರ ಸುಮ್ನೋಗತಿದ್ವು. ಅವಳು ನಮ್ಮೂರಿನ ಗ್ರಾಮದೇವತಿ.... ನಾಗಿಣಿ ಹೆಣ್ಣು!

 ಮಜಾ ಅಂದ್ರ ಅಕಿ ಗಂಡ ಹ್ಯಾಂಗೋ.... ಅಕೀ ಬಾಳೇ ಇನ್ಯಾಂಗೋ.... ಅದರ ಬಗ್ಗೆ ಅವಳಿಗೆ ದರಕಾರ ಇ್ಲ್ಲಲ. ಆ ಓಣಿಸುದ್ದಿ, ಊರಸುದ್ದಿ, ಯಾ ಮನಿಸ್ಯಾನ ಚಟಾ ಏನು... ಯಾ ಹೆಣ್ಣಿನ ಒಳಗೀನ ಪಟಾ ಏನು.... ಎಲ್ಲಾ ಎಲ್ಲಾ ಒಳಮುಚುಗಾ- ಹೊರಮುಚುಗಾ ಬಲ್ಲವಳು. ಆಕಿ ಗುಳೇದಗುಡ್ಡದ ಹಸರ ಚೌಕಾನಿ ಕುಬಸದಾಗ ಚಮಕಾಶಿಕೊಂತ ಬಂದ್ಲು ಅಂದ್ರ ಆ ಊರು, ಈ ಊರಿನ ಗೌಡ್ರೆಲ್ಲಾ ಗೌಡಕೀ ಬಿಟ್ಟು ಅಕಿ ಕೈಯಾಗಿನ ಚೌಡಿಕಿ ಆಗಿ ಟಿಂಟಿಂ ಅಂತಿದ್ರು!

ಪಂಚೇತಿ ಪರವ್ವಾ ಜೀವಕ್ಕ ಜೀವಾ ಕೊಡೂ ಪಂಚರಂಗಿ ಹೆಣ್ಣು. ಇಲಕಲ್ಲಿನ ತೋಪುತೆನಿ ಚಿಕ್ಕಿಪರಾಸಪೇಟಿ ಕಡ್ಡೀಸೀರಿ ಉಟ್ಲು ಅಂದ್ರ ಮುಗುಲು ಹರದ ಬಿದ್ದಂಗ ಲೆಕ್ಕಾ!

ಇಂಥಾದ್ರಾಗ ಆಕಿ ಉಳಕೊಂಡದ್ದಕ್ಕಿಂತ ಕಳಕೊಂಡದ್ದು ಜಾಸ್ತಿ. ಊರಿಗೆ ಉಪಕಾರಿ, ಮನೀಗೆ ಪರಾರಿ. ಪಂಚೇತಿ ಪರವ್ವಾ ಪ್ರಪಂಚದ ಪಂಚೇತೆಲ್ಲಾ ಮೈಮ್ಯೋಲೆ ಎಳಕೊಂಡು ಒಂದ ದಿವ್ಸ ಪರಾರಿ ಪೌ ಆದ್ಲು, ಯಾ ಕಡೆ ಹೋದ್ಲು, ಏನ ಸುದ್ದೀ.... ಒಂದೂ ಗೊತ್ತಿಲ್ಲಾ. ಅಕಿ ಹೊಟ್ಯಾಗಿನ ಸಂಗ್ಟಾ ಕಟ್ಟೀ ಏರಿ ಕೂಗ ಹಾಕ್ತು.

ಹುಂಚೀಕಟ್ಟಿ ಮ್ಯೋಲ ಪಂಚೇತಿ ಪರವ್ವನ ಹಂಚಗಲ ರೊಟ್ಟಿ ಊಟ ಹ್ಯಾಂಗ ಮರೀಲಿ? ಗೌಡನೂ ಅವಳ ಕುರುಂಕುರುಂ ರೊಟ್ಟಿ ತಿಂದು ಮೀಸೆ ಮೇಲೆ ಕೈ ಎಳೆಯುತ್ತಿದ್ದ. ಅವಳ ಪರಾತ ಅಗಲದ ಬಿಸೇ ರೊಟ್ಟಿ ಕೈತುಂಬ ಹಿಡಕೊಂಡು, ಅದರಲ್ಲಿ ಕಡ್ಲಿ ಉಸುಳಿ, ಎಣಗಾಯಿ, ಅಗಸಿಹಿಂಡಿ, ಕೆನಿಮೊಸರು, ಬಳ್ಳೊಳ್ಳಿಖಾರಾ, ಸೇಂಗಾ ಎಣ್ಣಿ, ಮೇಲೆ ಹಸೇ ಉಳ್ಳಾಗಡ್ಡಿ ಶಿವುಡು ಕಡಕೊಂತ ಉಣ್ಣುವಾಗ ಶಿವನೂ ಕದ್ದು ನೋಡುತ್ತಿದ್ದ! 

 ಸಿಕ್ಕಷ್ಟು ಶಿವಾ ಅನ್ನೂವಾಕಿ ಪರವ್ವಾ. ಕೆಲವರು ಕೈಕೊಟ್ಟು ಮೋಸಮಾಡಿ ಹೋದರೂ ಅವರ ಊರಿಗೆ ಮಳಿಬೆಳಿ ಆಗ್ಲಿ ಅಂತ ಹರಸುತ್ತಿದ್ದಳು. ಆ ದಿವ್ಸ ನಮ್ಮ ಹಳ್ಳಿ ಗೌಡಾ ಇಲೆಕ್ಶನ್ನಿಗೆ ನಿಂತು ಪಂಚೇತಿ ಪರವ್ವನಿಗೆ ಹೇಳಿಬಿಟ್ಟ- `ಬೇ ಪರಕ್ಕಾ,  ಈ ಊರಾಗ ಯಾರ ಬೇಕಾದೋರು ಬೇಕಾದಷ್ಟ ತಿನ್ಲಿ. ಅವ್ರೀಗೆ ಕೈಂ-ಕುಂಯ್ ಅನ್ಲಾರ‌್ದ ಉಣುಸು. ರೊಕ್ಕಾ ನಂದು. ಇಲೆಕ್ಷನ್ ಆದಮ್ಯೋಗ ಬಿಲ್ ಒಯ್ಯಿ....~

ಮತ್ತೇನು ಸತತ ಹದಿನೆಂಟು ದಿನ ಊರಂತೂರಿನ ಮುದೇದು- ಹರೇದು- ಹುಡೂರು- ಹುಪ್ಡಿ- ಎಲ್ಲಾವೂ ಪುಕ್ಕಟೆ ಕೂಳು ಬಕ್ಕರಿಸಿದ್ದೇ ಬಕ್ಕರಿಸಿದ್ದು. ಆದರೆ ಇಲೆಕ್ಶನ್ನಿನಲ್ಲಿ ಗೌಡ ಬಕ್ಖಬಾರ‌್ಲೇ ಬಿದ್ದು ಊರು ಬಿಟ್ಟ! ಇಡೀ ಊರಿಗೆ ಊಟ ಹಾಕಿದ ಪರವ್ವ ಬೂದಿ ಸೀಪಿದಳು. ಒಂದು ದಿನ ಅವಳು ರೊಟ್ಟಿ ಹಂಚು ಬೆನ್ನಿಗೆ ಡಬ್ಬು ಹಾಕೊಂಡು ಊರು ಬಿಟ್ಟಳು. ಈಗ ಇದ್ದಾಳೋ ಸತ್ತಾಳೋ ಅದೂ ಗೊತ್ತಿಲ್ಲ !

ನಾವು ಗರಡೀಮನಿ ಹುಡುಗೂರು ಪಾರ್ಟಿ ಇಲೆಕ್ಷನ್ನಿನ್ಯಾಗ ಪುಕ್ಕಟ ಬೆಂಗಳೂರು ತಲುಪಿದೆವು. ದಣೇರು ನಮ್ಮ ಕಿಸೇಕ ಚೂರಚಾರ ನೋಟ ತುರುಕಿ ಉಂಡಬರ‌್ರಿ ಅಂದರು. ನಮ್ಮ ಮೂಲಿಮನಿ ಬಸ್ಯಾ, ನಾನು, ಹನಿಮ್ಯೋ ಎಲ್ಲಾರೂ ನ್ಯೂ ಡೀಲಕ್ಸ್ ಸ್ಪೆಷಲ್ ರೊಟ್ಟೀ ಹೋಟೇಲಿಗೆ ಹೋದೆವು.

  `ಡಿಲಕ್ಸ್ ಅಂದ್ರೇನೂ?~ ಕೇಳಿದೆ. ಬಸ್ಯಾ ಹೇಳಿದ- ಡಿಲಕ್ಸ್ ಅಂದ್ರ ಬೇಕಾದಷ್ಟ ಕೂಳು ದಿಲ್‌ಖುಶ್ ಆಗಿ ತಿನಬೌದು.... ಸ್ಪೆಷಲ್ ಅಂದ್ರ ಹೆಚ್ಚಿಗೆ ಸ್ಪೆಷಲ್ ತಿಂದದ್ದಕ್ಕೆಲ್ಲಾ ರೊಕ್ಕಾ...~ ಚೀಟಿ ಮಾಡಿಸಿ ಒಳಹೊಕ್ಕೆವು ! ಇಲಿ ಮರಿಯಂತಾ ಚಿಕ್ಕ ರೊಟ್ಟಿಗಳು, ಹೆಣದ ಬೂದಿಯಂತಾ ಚಟ್ನಿಪುಡಿ, ನಿರ್ಜೀವ ಪಲ್ಯ.... ಥೂ ಅನಿಸಿತು. ಒಂದು ರೊಟ್ಟಿಯಲ್ಲಿ ಒಂದು ಮಾರು ಉದ್ದ ಕರೇ ಕೂದಲು ಬಂತು ! ಕೂದಲು ಇದ್ದ ರೊಟ್ಟಿ ಕಂಪು! ಲಕ್ಷ್ಮಿ ಇದ್ದಂತೆ! ಅದನ್ನು ಗೌರವದಿಂದ ತಿಂದೆ. ಪಕ್ಕದ ಕ್ವಾಣಿಯಲ್ಲಿ ನಾಲ್ವರು ಹೆಂಗಸರು ರೊಟ್ಟಿ ದಪದಪ ಬಡಿಯುತ್ತಿದ್ದ ಸಪ್ಪಳ ನಿದ್ದೆ ತರಿಸಿತು.

ಇಪ್ಪತ್ತು ರೊಟ್ಟಿ ತಿಂದರೂ ಸಾಕಾಗಲಿಲ್ಲ. ನಾನು ಸಿಟ್ಟಾಗಿ ನಾಲ್ಕು ಕರಿದ ಮೆಣಸಿನಕಾಯಿಗಳನ್ನು ಕರಕರ ತಿಂದು ನುಂಗಿದೆ. ಬ್ರಹ್ಮಾಂಡ ಖಾರ! ಖಾರದ ಉರತಾಪ ತಾಳಲಾರದೇ ಉಂಡಿ- ಸಿರಾ- ಪೇಡಾ-ಜಾಮೂನು ಗಂಗಾಳಗಟ್ಟಲೇ ತಿಂದೆ. ಮೇಲೆ ತುಪ್ಪಾ ಕುಡಿದೆ. ಬಿಲ್ಲು ಬ್ರಹ್ಮಾಂಡದ ಬ್ರಹ್ಮರಾಕ್ಷಸನಂತೆ ಬಂತು! ನಾಲ್ವರೂ ಊರು ಮುಟ್ಟುವ ಬಸ್ ಚಾರ್ಜ ಸಮೇತ ಎಲ್ಲಾ ರೊಕ್ಕ ಎಣಿಸಿ ಖಾಲೀಗಡಗಿ ಆಗಿ.... ಬೆಂಗ್ಳೂರಿಗೆ ಜೈ.... ಇಲೆಕ್ಷನ್ನಿಗೆ ಸೈ..... ಅನಕೊಂತ ನಡೆದೆವು. ಹೋಗುವಾಗ ಬಸಣ್ಣಿ ಹೇಳಿದ-  `ರೊಟ್ಟೀ ಮಾಡೂ ಹೆಂಗ್ಸೂರ‌್ನ ಅಷ್ಟ ಮಾತಾಡ್ಸಿಕೊಂಡ ಹೋಗೂನ ಬರ‌್ರಿ~ ಆ ಖಾನಾವಳಿಯ  ರೊಟ್ಟೀಸುಡೂ ಕ್ವಾಣಿಗೆ ಹೋದೆವು!

ಅಬ್ಬಬ್ಬಾ...ಈಗ ಆ ಹಾಳ ಹಳೇ ಕಾಲದ ರೊಟ್ಟಿ ತಟ್ಟುವವರೂ ಚೂಡಿದಾರದಲ್ಲಿ! ನ್ಯೂ ಹೇರ್ ಸ್ಟಾಯಿಲ್‌ದಲ್ಲಿ ಕಟ್-ಫಿಟ್-ನೆಟ್ ಆಗಿದ್ದಾರೆ! ಆ ಕೆಂಪು ಚೂಡಿ ಹುಡಿಗಿಯ ಡ್ರೆಸ್ಸಿಂಗ್ ಕೂದಲು ನೋಡಿ ...ಹಾಂ....ಇದೇ ಕೂದಲು ನನ್ನ ರೊಟ್ಟಿಯಲ್ಲಿ ಬಂದದ್ದು ಎಂದು ಪತ್ತೆ ಹಚ್ಚಿದೆ. ಖುಶಿ ಆತು. ಸಂಗಣ್ಣ ಅವಳಿಗೆ  `ಯಾವೂರೋರು ಬೇ?~ ಅಂತ ಮಾತಾಡಿಸಿದ. ಅವಳು ಅವನನ್ನು ಹುಳುಹುಳು ನೋಡಿ  `ಯಾಕಲಾ ದೊಡ್ಡಹೊಟ್ಟಿ ಸಂಗ್ಯಾ....ಗುರ್ತಾ-ಖೂನಾ ಸಿಗ್ಲಿಲ್ಲೇನಲಾ?~ ಅಂದಳು.

 ಸಂಗಣ್ಣ ಕವಕವ ಬಾಯಿ ತೆಗೆದು ಕಪಲಿ ಬಾವಿಯ ದೆವ್ವ ನಿಂತಂತೆ ನಿಂತ! ಅವಳು ರೊಟ್ಟಿಗೆ ಒರೆಸುವ ಹಸೇ ಹಿಟ್ಟಿನ ಬಟ್ಟೆ ಸಂಗಣ್ಣನ ಮುಖಕ್ಕೆ ಬೀಸಿ ಒಗೆದು ಹೇಳಿದಳು- `ನಾನ್ಯಾರು ಗೊತ್ತಾಗ್ಲಿಲ್ಲೇನಾ .... ನಾ ನಿಮ್ಮೂರಿನ ಪಂಚೇತಿ ಪರವ್ವಾ~!

ನಾವೆಲ್ಲ ಬತ್ಲೇ ಬರಮವ್ವ ನಿಂತಂತೆ ನಿಂತೆವು. ಅವಳೇ ಹೇಳಿದಳು- `ಅಲ್ಲೇ ಗೌಡಾ ಇಲೆಕ್ಸೆನ್ನಿನ್ಯಾಗ ಗುದ್ದಾ ತೋಡಿ ನನ್ನ ಮಣ್ಣ ಮುಚ್ಚೀದಾ..... ಪ್ಯಾಟೀ ಇಲೆಕ್ಷನ್ನು ಹಳ್ಳೀ ಹೊಕ್ತು.... ಹಳ್ಳಿ ಬಕ್ಕಬಾರ‌್ಲೇ ಬಿತ್ತು. ನೋಡು ನನ್ನ ಕತಿ ಏನಾತು! ಇಲ್ಲೇ  ಈ ಉಡುಪಿ ದಣೇರು ನನಗ ದಿನ್ನಾ ಹೊಟ್ಟಿ ತುಂಬ ಕೂಳ ಕೊಡತಾರು.... ಮ್ಯೋಲೆ ದಿನ್ನಾ ಐವತ್ತ ರೂಪಾಯಿ ಕೂಲಿ.... ಅದರ ಮ್ಯೋಲೆ ಮಕ್ಕೋಳಾಕ ಚಾಪಿ ಕೊಡತಾರು. ಈ ಶವಕ್ಕ ಇನ್ನೇನ ಬೇಕ್ಲಾ?

 ಶಿವಾ ಶಿವಾ ಅಂತೈತಿ ಈ ಬೆಂಗ್ಳೂರಾಗ ನನ್ನ ಜೀವಾ. ಈ ಪುರಮಾಸೀ ಪ್ಯಾಟಿ ಊರಾಗ ನಮ್ಮಂತಾ ಹಳ್ಳೀ ಊರೋರು ಹಾಸಾಕ ಹರಕು ತಟ್ಟು, ಹೊರಾಕ ಕರೇ ಕಂಬ್ಳಿ. ಶಿವಾ,ಶಿವಾ

ಅವಳು ನಕ್ಕಳು ! ಆದರೆ ಅವಳ ಸೆರಗಿನಲ್ಲಿ ಜಾರಿಬಿದ್ದ ಕಣ್ಣೀರ ಹನಿಯಲ್ಲಿ ಬ್ರಹ್ಮಾಂಡದಷ್ಟು ಕಥೆಗಳು ತುಂಬಿದ್ದವು. ಅವಳ ಕಣ್ಣಂಚಿನಲ್ಲಿ ಬಾನಂಚಿನ ಹಕ್ಕಿ ಕೂಗುತ್ತಿತ್ತು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.