ADVERTISEMENT

‘ದಲಿತ ಮುಖ್ಯಮಂತ್ರಿ’ ಬೇಡಿಕೆ ಯಾರದ್ದೋ ಕುತಂತ್ರ: ಸಿದ್ದರಾಮಯ್ಯ

ವಾರದ ಸಂದರ್ಶನ

ರವೀಂದ್ರ ಭಟ್ಟ
Published 14 ಮಾರ್ಚ್ 2015, 20:34 IST
Last Updated 14 ಮಾರ್ಚ್ 2015, 20:34 IST

ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಬೇಕು ಎಂಬ ಬೇಡಿಕೆಯ ಹಿಂದೆ ಯಾರದ್ದೋ ಕುತಂತ್ರ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪಷ್ಟ ನುಡಿ ಇದು. ಈ ಕುತಂತ್ರ ನಡೆಸುತ್ತಿರುವವರು ಯಾರು ಎನ್ನುವುದನ್ನು ಮಾತ್ರ ಅವರು ಬಾಯಿ ಬಿಟ್ಟು ಹೇಳಲ್ಲ. ದಲಿತ ಮುಖ್ಯಮಂತ್ರಿ ಬೇಡಿಕೆಗೂ ತಾವು ಮಂಡಿಸಿದ ಬಜೆಟ್‌ನಲ್ಲಿ ಪರಿಶಿಷ್ಟರಿಗೆ ಹೆಚ್ಚಿನ ಪಾಲು ನೀಡಿರುವುದಕ್ಕೂ ಸಂಬಂಧವೇ ಇಲ್ಲ ಎಂದು ಅವರು ಖಡಾಖಂಡಿತವಾಗಿ ಹೇಳುತ್ತಾರೆ.

ಮುಖ್ಯಮಂತ್ರಿಯಾಗಿ ಮೂರನೇ ಬಜೆಟ್‌ ಹಾಗೂ ಒಟ್ಟಾರೆ ತಮ್ಮ 10ನೇ ಬಜೆಟ್‌ ಮಂಡಿ ಸಿದ ಸಿದ್ದರಾಮಯ್ಯ ಅವರು ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ದಲಿತ ಮುಖ್ಯಮಂತ್ರಿ ಬೇಡಿಕೆಯ ಹಿನ್ನೆಯಲ್ಲಿಯೇ ನೀವು ಪರಿಶಿಷ್ಟ ವರ್ಗಕ್ಕೆ ಹೆಚ್ಚಿನ ಅನುದಾನ ನೀಡಿದ್ದೀರಿ ಎಂಬ ಆರೋಪ ಇದೆ. ಏನಂತೀರಿ?
ದಲಿತ ಮುಖ್ಯಮಂತ್ರಿ ವಿಚಾರ ಮುಗಿದ ಅಧ್ಯಾಯ. ಆ ಬೇಡಿಕೆ ಇಟ್ಟವರು ನಮ್ಮ ಪಕ್ಷದವರೇ ಅಲ್ಲ. ದಲಿತ ಸಂಘಟನೆಯ ಪ್ರಮುಖ ಮುಖಂಡರೂ ಅವರ ಜೊತೆ ಇಲ್ಲ. ರಾಜ್ಯದಲ್ಲಿ ದಲಿತರ ಜನಸಂಖ್ಯೆಗೆ ಅನುಗುಣವಾಗಿ ಸಂಪನ್ಮೂಲ ಒದಗಿಸಲು ಕಾಯ್ದೆ ಮಾಡಿದ್ದೇವೆ. ಅದರಿಂದಾಗಿ ಪರಿಶಿಷ್ಟರಿಗೆ ಹೆಚ್ಚಿನ ಹಣ ದೊರಕಿದೆ. ಕಳೆದ ವರ್ಷ ₨ 15 ಸಾವಿರ ಕೋಟಿ ಇದ್ದಿದ್ದು ಈ ಬಾರಿ ₨ 16236 ಕೋಟಿಗೆ ಏರಿದೆ. ಅವರ ಹಣವನ್ನು ಅವರಿಗೆ ಕೊಟ್ಟರೆ ರಾಜಕೀಯ ಎಂದರೆ ಹೇಗೆ?

ದಲಿತರ ಹಾಗೆ ಇತರರಿಗೂ ಜನಸಂಖ್ಯೆ ಆಧಾರದಲ್ಲಿಯೇ ನೆರವು ನೀಡಬೇಕಲ್ಲವೇ?
ಹೌದು. ಆದರೆ ಇನ್ನೂ ಹಿಂದುಳಿದ ವರ್ಗದವರಿಗೆ ಸೂಕ್ತವಾಗಿ ನೆರವು ನೀಡಲು ಆಗುತ್ತಿಲ್ಲ. ಅಲ್ಪಸಂಖ್ಯಾತರಿಗೂ ಅವರಿಗೆ ಸಿಗಬೇಕಾದಷ್ಟು ಸಿಗುತ್ತಿಲ್ಲ.

ಅರ್ಕಾವತಿ: ನನ್ನ ಪಾತ್ರ ಏನೂ ಇಲ್ಲ

ಅರ್ಕಾವತಿ ಬಡಾವಣೆಯ ವಿಷಯದಲ್ಲಿ ನನ್ನ ತಪ್ಪು ಏನೂ ಇಲ್ಲ. ಬಹುತೇಕ ಜಮೀನುಗಳನ್ನು ಹಿಂದಿನ ಸರ್ಕಾರದವರೇ ಕೈಬಿಟ್ಟಿದ್ದರು. ಹೈಕೋರ್ಟ್ ಆದೇಶದಂತೆ 1700 ಎಕರೆ ರಿ ಮಾಡಿಫೈಡ್‌ ಯೋಜನೆಯನ್ನೂ ತಯಾರಿಸಿದ್ದರು. ಈ ಫೈಲ್‌ ಜಗದೀಶ್‌ ಶೆಟ್ಟರ್‌ ಅವರ ಬಳಿಗೆ ಬಂದಾಗ ಚುನಾವಣಾ ನೀತಿ ಸಂಹಿತೆ ಇದೆ ಎಂಬ ಕಾರಣಕ್ಕೆ ಅವರು ಸಹಿ ಮಾಡಿರಲಿಲ್ಲ. ನ್ಯಾಯಾಂಗ ನಿಂದನೆ ಆಗುವುದನ್ನು ತಪ್ಪಿಸಲು ನಾನು ಸಹಿ ಮಾಡಿದೆ ಅಷ್ಟೆ.

ಕುಮಾರಸ್ವಾಮಿ ಮೇಲೂ ಆರೋಪ
ಕುಮಾರಸ್ವಾಮಿ ಮೇಲೂ ಆರೋಪವಿದೆ. ಆದರೆ ಸತ್ಯ ಹರಿಶ್ಚಂದ್ರನ ಹಾಗೆ ಮಾತನಾಡುತ್ತಾರೆ. ಅವರಿಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆ ಎಲ್ಲಿದೆ?

ADVERTISEMENT

ಅಹಿಂದ ಮುಖ್ಯಮಂತ್ರಿಯಾದ ನೀವು ಪ್ರತಿ ಬಾರಿ ಅಹಿಂದ ಪರ ಬಜೆಟ್‌ ಮಂಡಿಸುತ್ತಿಲ್ಲವೇ?
ಈ ಹಿಂದೆ ಅವರಿಗೆ ನೀಡಬೇಕಾದಷ್ಟನ್ನು ನೀಡುತ್ತಿರಲಿಲ್ಲ. ನಾನು ಮುಖ್ಯಮಂತ್ರಿಯಾದ ನಂತರ ಅವರಿಗೆ ನ್ಯಾಯ ಒದಗಿಸಲು ಯತ್ನಿಸುತ್ತಿದ್ದೇನೆ ಅಷ್ಟೆ. ನನ್ನ ಬಜೆಟ್‌ಗಳನ್ನು ಅಹಿಮದ ಬಜೆಟ್‌ ಎಂದು ಹೇಳುವುದರಲ್ಲಿ ಅರ್ಥವೇ ಇಲ್ಲ. ನಾನು ಎಲ್ಲ ಜನಾಂಗದ ಪರವಾದ ಬಜೆಟ್‌ ಮಂಡಿಸುತ್ತಿದ್ದೇನೆ.

ದಲಿತ ಮುಖ್ಯಮಂತ್ರಿ ವಿಷಯ ಮುಗಿದ ಅಧ್ಯಾಯ ಎಂದು ನೀವು ಹೇಳಿದರೂ ಆ ಬೇಡಿಕೆ ಏನೂ ನಿಂತಿಲ್ಲವಲ್ಲ?
ಅವೆಲ್ಲ ಯಾರೋ ಹಿಂದಿನಿಂದ ಮಾಡಿಸುತ್ತಿದ್ದಾರೆ ಅಷ್ಟೆ.

ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯಾಗಲು ಇನ್ನೂ ಕಾಲ ಪಕ್ವವಾಗಿಲ್ಲವೇ?
ದಲಿತರೊಬ್ಬರು ಮುಖ್ಯಮಂತ್ರಿಯಾಗಲೇ ಬೇಕು. ಅದು ನನ್ನ ಬಯಕೆ ಕೂಡ. ದಲಿತರೊಬ್ಬರು ಮುಖ್ಯಮಂತ್ರಿಯಾ ಗುವ ಅವಕಾಶ ಇರುವುದು ಕಾಂಗ್ರೆಸ್‌ ಪಕ್ಷದಲ್ಲಿ ಮಾತ್ರ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಂತಹ ಅವಕಾಶ ಬಂದಿತ್ತು. ಆದರೆ ಆಗ ಪಕ್ಷಕ್ಕೆ ಬಹುಮತ ಬರಲಿಲ್ಲ.

ಧರ್ಮಸಿಂಗ್‌ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಖರ್ಗೆ ಅವರನ್ನೇ ಮುಖ್ಯಮಂತ್ರಿ ಮಾಡಬಹುದಿತ್ತಲ್ಲ?
ಅಯ್ಯೋ, ಆಗ ಎಚ್‌.ಡಿ.ದೇವೇಗೌಡರು ಧರ್ಮಸಿಂಗ್‌ ಅವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದರಿಂದ ಖರ್ಗೆಗೆ ಅಂತಹ ಅವಕಾಶ ತಪ್ಪಿ ಹೋಯಿತು.

ಸಂಪುಟ ವಿಸ್ತರಣೆ ಯಾವಾಗ ಮಾಡ್ತೀರಿ?
ಬಜೆಟ್‌ ಅಧಿವೇಶನದ ನಂತರ ಸಂಪುಟ ವಿಸ್ತರಣೆ ಮಾಡುತ್ತೇನೆ.

ಆರ್ಥಿಕ ಸ್ಥಿತಿ ಚೆನ್ನಾಗಿದೆ
ರಾಜ್ಯದ ಆರ್ಥಿಕ ಸ್ಥಿತಿ ಚೆನ್ನಾಗಿದೆ. ತೆರಿಗೆ ಸಂಗ್ರಹದಲ್ಲಿಯೂ ನಾವು ಮುಂದೆ ಇದ್ದೇವೆ. ಕೇಂದ್ರದ ನೆರವು ಕಡಿತ, ಪೆಟ್ರೋಲ್‌, ಡೀಸೆಲ್‌ ಬೆಲೆ ಕಡಿತದಿಂದ ತೆರಿಗೆ ಸಂಗ್ರಹ ಕಡಿಮೆ ಆಯಿತು. ಕೇಂದ್ರದ ನೆರವೂ ಕಡಿಮೆಯಾಗಿದ್ದರಿಂದ ಒಟ್ಟಾರೆ ಈ ಬಾರಿ ₨ 4 ಸಾವಿರ ಕೋಟಿ ಕಡಿಮೆ ಆಯಿತು. ಆದರೆ ರಾಜ್ಯದಲ್ಲಿ ಆರ್ಥಿಕ ಶಿಸ್ತು ಚೆನ್ನಾಗಿಯೇ ಇದೆ.

ಗೃಹ ಮಂಡಳಿ ಅಕ್ರಮ ತನಿಖೆ‌
ಕರ್ನಾಟಕ ಗೃಹ ಮಂಡಳಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಸಿಎಜಿ ವರದಿ ಹೇಳಿದೆ. ಈ ವರದಿಯ ಆಧಾರದಲ್ಲಿಯೇ ಯಾವುದೇ ಕ್ರಮ ಕೈಗೊಳ್ಳಲು ಆಗಲ್ಲ. ಸಿಎಜಿ ವರದಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಪರಿಶೀಲಿಸುತ್ತಿದೆ. ಅದರ ವರದಿಯಂತೆ ತನಿಖೆ ನಡೆಸಲಾಗುತ್ತದೆ.

ಪರಮೇಶ್ವರ್‌ ಅವರು ಸಂಪುಟ ಸೇರುತ್ತಾರಾ?
ಅದೆಲ್ಲ ಈಗ ಹೇಳಲಾಗದು. ಎಲ್ಲ ಹೈಕಮಾಂಡ್‌ಗೆ ಬಿಟ್ಟಿದ್ದು.

ಪರಮೇಶ್ವರ್‌ ಸಂಪುಟ ಸೇರುವುದು ಮಾತ್ರ ಹೈಕಮಾಂಡ್‌ಗೆ ಬಿಟ್ಟಿದ್ದಾ?
ಇಲ್ಲ ಇಲ್ಲ. ಯಾರನ್ನು ಕೈಬಿಡಬೇಕು, ಯಾರನ್ನು ಸೇರಿಸಿ ಕೊಳ್ಳಬೇಕು ಎನ್ನುವುದು ಎಲ್ಲಾ ಹೈಕಮಾಂಡ್‌ಗೆ ಬಿಟ್ಟಿದ್ದು.

ಸಂಪುಟದಲ್ಲಿ ಈಗ ಇರುವ ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರಾ?
ಕೆಲವರು ಮಾಡುತ್ತಿದ್ದಾರೆ. ಇನ್ನು ಕೆಲವರು ಮಾಡುತ್ತಿಲ್ಲ.

ಕೇವಲ ಸಂಪುಟ ವಿಸ್ತರಣೆಯಾ? ಅಥವಾ ಸಂಪುಟ ಪುನರ್‌ರಚನೆಯಾ?
ಎರಡೂ ಆಗಬಹುದು. ಈಗಲೇ ಎಲ್ಲ ಹೇಳಲು ಆಗುತ್ತೇನ್ರಿ

ನೀವು ಕೆಲವೇ ಸಚಿವರ ಮಾತನ್ನು ಕೇಳುತ್ತೀರಂತೆ ಹೌದೇ?
ಹಾಗೇನೂ ಇಲ್ಲ. ಎಲ್ಲ ಸಚಿವರಿಗೂ ನಾನು ಸ್ವಾತಂತ್ರ್ಯ ನೀಡಿದ್ದೇನೆ. ಅವರ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ.

ಆದರೂ ಕೆಲವರು ನಿಮಗೆ ಹೆಚ್ಚು ಆಪ್ತರಲ್ಲವೇ?
ಕೆಲವರು ಆಪ್ತರಿದ್ದಾರೆ ನಿಜ. ಮಹದೇವಪ್ಪ, ಮಹದೇವ ಪ್ರಸಾದ್‌, ಶ್ರೀನಿವಾಸ ಪ್ರಸಾದ್‌ ಎಲ್ಲಾ ಮೊದಲಿಂದಲೂ ನನ್ನ ಜೊತೆಗೇ ಇದ್ದರು. ಈಗಲೂ ಇದ್ದಾರೆ. ಅದರಲ್ಲಿ ತಪ್ಪೇನು. ಆದರೆ ಅವರು ಹೇಳಿದಂತೆ ನಾನು ಕೇಳುತ್ತೇನೆ ಎನ್ನುವುದು ಸುಳ್ಳು. ಯಾವುದೇ ನಿರ್ಧಾರ ಕೈಗೊಳ್ಳುವಾಗ ನಾನು ಸ್ವತಂತ್ರವಾಗಿಯೇ ನಿರ್ಧಾರ ಕೈಗೊಳ್ಳುತ್ತೇನೆ.

ಗೌಡರ ವಿರುದ್ಧ ಮುನಿಸು ಯಾಕೆ?

2004ರಲ್ಲಿ ಕಾಂಗ್ರೆಸ್‌ ಜೊತೆ ಸೇರಿ ಸರ್ಕಾರ ರಚಿಸುವ ಸಂದರ್ಭ ಬಂದಾಗ ಕಾಂಗ್ರೆಸ್‌ ಪಕ್ಷದವರು ನಿಮ್ಮಲ್ಲಿಯೇ ಯಾರಾದರೂ ಮುಖ್ಯಮಂತ್ರಿಯಾಗಲಿ. ನಾವು ಬೆಂಬಲಿಸುತ್ತೇವೆ ಎಂದಿದ್ದರು. ಆದರೆ ಅದಕ್ಕೆ ದೇವೇಗೌಡರು ಒಪ್ಪಲಿಲ್ಲ. ಸರ್ಕಾರ ರಚನೆ ಬಗ್ಗೆ ಕಾಂಗ್ರೆಸ್‌ ಜೊತೆ ಮಾತುಕತೆ ನಡೆಯುತ್ತಿದ್ದಾಗ ನಾನೂ ಇದ್ದೆ. ಎಂ.ಪಿ.ಪ್ರಕಾಶ್‌, ಪಿ.ಜಿ.ಆರ್‌.ಸಿಂಧ್ಯಾ, ಸಿ.ಎಂ.ಇಬ್ರಾಹಿಂ, ಶರತ್‌ ಪವಾರ್, ಪ್ರಣವ್‌ ಮುಖರ್ಜಿ ಇದ್ದರು. ಕಾಂಗ್ರೆಸ್‌ನವರು ಜೆಡಿಎಸ್‌ನಲ್ಲಿಯೇ ಯಾರಾದರೂ ಮುಖ್ಯಮಂತ್ರಿಯಾಗಲಿ. ನಾವು ಬೆಂಬಲಿಸುತ್ತೇವೆ ಎಂದರು. ಅದಕ್ಕೆ ದೇವೇಗೌಡರು ಒಪ್ಪಲಿಲ್ಲ. ತಕ್ಷಣವೇ ನಾನು ದೇವೇಗೌಡರನ್ನು ಯಾಕೆ ಎಂದು ಪ್ರಶ್ನೆ ಮಾಡಿದೆ. ‘ಇಲ್ಲ ನಿನಗೆ ಗೊತ್ತಾಗಲ್ಲ ಸಿದ್ರಾಮಣ್ಣ. ಆ ಮೇಲೆ ಎಲ್ಲ ಹೇಳ್ತೀನಿ ಅಂದ್ರು’. ಆ ಮೇಲೆ ನಾನು ಕೇಳಿದ್ದಕ್ಕೆ ‘ಎಸ್‌.ಎಂ.ಕೃಷ್ಣ ಅವರ ವಿರುದ್ಧ ನಾವು ರಾಜ್ಯಪಾಲರಿಗೆ ದೂರು ನೀಡಿದ್ದೆವು. ಈಗ ನಮ್ಮವರೇ ಮುಖ್ಯಮಂತ್ರಿಯಾದರೆ ಅವರನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಕಾಂಗ್ರೆಸ್‌ನವರೇ ಮುಖ್ಯಮಂತ್ರಿಯಾಗಲಿ, ನಮಗೆ ಉಪಮುಖ್ಯಮಂತ್ರಿ ಸ್ಥಾನ ಸಾಕು’ ಎಂದರು ದೇವೇಗೌಡರು. ನಾನು ಅದನ್ನು ಪ್ರತಿಭಟಿಸಿದೆ. ಧರ್ಮಸಿಂಗ್‌ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಅವರು ಮೊದಲೇ ನಿರ್ಧರಿಸಿ ಬಿಟ್ಟಿದ್ದರು. ನನಗೆ ಮುಖ್ಯಮಂತ್ರಿ ಸ್ಥಾನ ಸಿಗಬಾರದು ಎಂಬುದೂ ಅವರಲ್ಲಿ ಇತ್ತು. ಹೇಳೋದು ಒಂದು ಮಾಡೋದು ಒಂದು. ಇದರಲ್ಲಿ ದೇವೇಗೌಡ ಕುಟುಂಬ ಎತ್ತಿದ ಕೈ.

ಇನ್ನು ಮುಂದೆ ಚುನಾವಣಾ ರಾಜಕೀಯದಿಂದ ದೂರ ಇರುವುದಾಗಿ ಹೇಳಿದ್ದ ನೀವು ಈಗ ನಿಮ್ಮ ನಿಲುವನ್ನು ಬದಲಾಯಿಸಿದ್ದು ಯಾಕೆ?
ಚುನಾವಣಾ ರಾಜಕೀಯವನ್ನು ನೋಡಿ ಬೇಸರದಿಂದ ಹಾಗೆ ಹೇಳಿದ್ದು ನಿಜ. ಆದರೆ ಈ ಬಿಜೆಪಿಯವರು ಕರ್ನಾಟಕವನ್ನು ಕಾಂಗ್ರೆಸ್‌ ಮುಕ್ತ  ಮಾಡುತ್ತೇವೆ ಎಂದಿದ್ದಾರಲ್ಲ. ಅದಕ್ಕೇ ಮುಂದಿನ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಅವರ ಸವಾಲನ್ನು ಸ್ವೀಕರಿಸುವ ಎಂದುಕೊಂಡು ನನ್ನ ನಿಲುವನ್ನು ಬದಲಾಯಿಸಿದ್ದೇನೆ.

ನಿಮ್ಮ ನಿಲುವಿನಲ್ಲಿ ಬದಲಾವಣೆಯಾದರೆ ನಿಮ್ಮ ಮಗನ ರಾಜಕೀಯ ಭವಿಷ್ಯ ಏನು?
ನಾನು ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ನಂತರ ನೀನು ರಾಜಕೀಯಕ್ಕೆ ಬಾ ಎಂದು ಹೇಳಿದ್ದೆ.

ಅಂದರೆ ಈಗ ಆತ ರಾಜಕೀಯದಲ್ಲಿ ಇಲ್ಲವಾ?
ಅಯ್ಯೋ ಇದ್ದಾನೆ, ಇದ್ದಾನೆ. ಕಳೆದ 10 ವರ್ಷದಿಂದಲೂ ರಾಜಕೀಯದಲ್ಲಿದ್ದಾನೆ. ಕಳೆದ ಬಾರಿಯೇ ಆತ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ. ನಾನೇ ಬೇಡ ಎಂದೆ.

ಈಗ ನೀವು ಇನ್ನೊಂದು ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಿದ್ದರಿಂದ ಆತ ಇನ್ನೂ 5 ವರ್ಷ ಕಾಯಬೇಕಾ?
ಮುಂದಿನ ಬಾರಿ ನಾನು ಚುನಾವಣೆಗೆ ಸ್ಪರ್ಧಿಸಿದರೆ ಆತ ಕಾಯುವುದು ಅನಿವಾರ್ಯ.

ಮುಖ್ಯಮಂತ್ರಿ ಮಗನಾಗಿ ರಾಕೇಶ್‌ ಸಿದ್ದರಾಮಯ್ಯ ನಡವಳಿಕೆ ಹೇಗಿದೆ?
ಇಲ್ಲ. ಮುಖ್ಯಮಂತ್ರಿ ಕಾರ್ಯನಿರ್ವಹಣೆಯಲ್ಲಿ ಆತ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಆ ದೃಷ್ಟಿಯಲ್ಲಿ ನಾನು ಪುಣ್ಯವಂತ. ನನ್ನ ಕುಟುಂಬದ ಯಾರೂ ಮುಖ್ಯಮಂತ್ರಿ ಕಚೇರಿ, ಇತರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಯಾವಾಗಲೂ ಮಾಡಿಲ್ಲ. ನನಗೆ ಅಗತ್ಯ ಇದ್ದ ಸಂದರ್ಭದಲ್ಲಿ ಕೂಡ ಅವರು ದೂರವೇ ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.