ADVERTISEMENT

‘ಬಂಗಾರದ ಮನುಷ್ಯ’ ಫೆಲ್ಪ್ಸ್‌

ವ್ಯಕ್ತಿ

ಕೆ.ಓಂಕಾರ ಮೂರ್ತಿ
Published 13 ಆಗಸ್ಟ್ 2016, 19:30 IST
Last Updated 13 ಆಗಸ್ಟ್ 2016, 19:30 IST
‘ಬಂಗಾರದ ಮನುಷ್ಯ’  ಫೆಲ್ಪ್ಸ್‌
‘ಬಂಗಾರದ ಮನುಷ್ಯ’ ಫೆಲ್ಪ್ಸ್‌   

ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ 22 ಚಿನ್ನ, 3 ಬೆಳ್ಳಿ, 2 ಕಂಚಿನ ಪದಕ!

ಇದು ಯಾವುದೋ ದೇಶವೊಂದರ ಸಾಧನೆ ಅಲ್ಲ. ಬದಲಾಗಿ ಒಬ್ಬ ವ್ಯಕ್ತಿ ಜಯಿಸಿರುವ ಪದಕಗಳ ಪಟ್ಟಿ. ‘ಬಂಗಾರದ ಮನುಷ್ಯ’, ‘ಚಿನ್ನದ ಮೀನು’ ಎಂದೆಲ್ಲಾ ಕರೆಸಿಕೊಳ್ಳುವ ಅಮೆರಿಕದ ಈಜುಪಟು ಮೈಕಲ್‌ ಫೆಲ್ಪ್ಸ್‌ ಅವರೇ ಈ ಚಾರಿತ್ರಿಕ ಸಾಧನೆಯ ಒಡೆಯ.

ನೂರಾರು ವರ್ಷಗಳಿಂದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಕ್ರೀಡಾಪಟುಗಳು ಇದುವರೆಗೆ ಗೆದ್ದಿರುವ ಎಲ್ಲಾ ಪದಕಗಳನ್ನು ಒಟ್ಟುಗೂಡಿಸಿದರೂ ಫೆಲ್ಪ್ಸ್‌ ಅವರನ್ನು ಹಿಂದಿಕ್ಕಲು ಸಾಧ್ಯವಾಗುವುದಿಲ್ಲ! 120 ಕೋಟಿ ಜನಸಂಖ್ಯೆಯ ಭಾರತಕ್ಕೆ ಈಜು ವಿಭಾಗದಲ್ಲಿ ಒಂದೂ ಪದಕ ಸಿಕ್ಕಿಲ್ಲ ಬಿಡಿ. ಫೆಲ್ಪ್ಸ್‌ ಅವರ ಸಾಧನೆಯನ್ನು ಕಟ್ಟಿಕೊಡಲು ಇದಿಷ್ಟೇ ಸಾಕು.

ಒಂದೂವರೆ ದಶಕದಿಂದ ಈಜುಕೊಳದಲ್ಲಿ ಜಾದೂ ಮಾಡುತ್ತಿರುವ ಅಮೆರಿಕದ ಈಜುಪಟು ರಿಯೊ ಒಲಿಂಪಿಕ್ಸ್‌ನಲ್ಲೂ ತಮ್ಮ ಯಶೋಗಾಥೆ ಮುಂದುವರಿಸಿದ್ದಾರೆ. ನಾಲ್ಕು ಸ್ವರ್ಣ ಹಾಗೂ ಒಂದು ಬೆಳ್ಳಿ ಪದಕಕ್ಕೆ ಇಲ್ಲಿ ಕೊರಳೊಡ್ಡಿದ್ದಾರೆ. ಇತ್ತ ಭಾರತ ಪದಕ ಜಯಿಸಲು ಇನ್ನೂ ತಿಣುಕಾಡುತ್ತಲೇ ಇದೆ. ಫೆಲ್ಪ್ಸ್‌ ಪಾಲಿಗೆ ಇದು ಐದನೇ ಒಲಿಂಪಿಕ್ಸ್‌. ದೇಶದ ಧ್ವಜ ಹಿಡಿದು ತಂಡ ಮುನ್ನಡೆಸುವ ಸೌಭಾಗ್ಯವೂ ಅವರಿಗೆ ಒಲಿದಿದೆ.

ಫೆಲ್ಪ್ಸ್‌ ಅವರದ್ದು ಅಮೆರಿಕದ ಬಾಲ್ಟಿಮೋರ್. ಇವರ ತಾಯಿ ಶಾಲಾ ಶಿಕ್ಷಕಿ. ತಂದೆ ಭದ್ರತಾ ಅಧಿಕಾರಿ. ಪೋಷಕರು ಬೇರ್ಪಟ್ಟಾಗ ಇವರಿಗೆ ಕೇವಲ 9 ವರ್ಷ. ಹರ್ನಿಯಾ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಷ್ಟೇ ಅಲ್ಲ; ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಇವರನ್ನು ಶಾಲೆಯಿಂದ ಹೊರಹಾಕಲಾಗಿತ್ತು. ಆಗ ಅಕ್ಕಂದಿರು ಈಜು ಕಲಿಯಲು ಅಕಾಡೆಮಿಯೊಂದಕ್ಕೆ ಸೇರಿಸಿದರು.

ಈಜುಕೊಳಕ್ಕೆ ಮೊದಲ ಬಾರಿ ಇಳಿದಿದ್ದ ಇವರಿಗೆ ಮುಖವನ್ನು ನೀರಿನೊಳಗೆ ಮುಳುಗಿಸಲು ಭಯ. ಅದಕ್ಕೆ ತರಬೇತುದಾರ ನೀಡಿದ್ದು ಹಿಮ್ಮುಖ ಚಲನೆಯ ಪಾಠ. ಈ ಪಾಠವೇ ಅವರ ಪಾಲಿಗೆ ಮುಂದೆ ವರದಾನವಾಗುತ್ತದೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಅಲ್ಲಿಂದ ಫೆಲ್ಪ್ಸ್‌ ಜೀವನ ಬದಲಾಯಿತು. 10ನೇ ವಯಸ್ಸಿನಲ್ಲೇ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. 15ನೇ ವಯಸ್ಸಿನಲ್ಲಿ ಸಿಡ್ನಿ ಒಲಿಂಪಿಕ್ಸ್‌ಗೆ (2000) ಅರ್ಹತೆ ಗಿಟ್ಟಿಸಿದರು.

ಆದರೆ, 200 ಮೀಟರ್‌ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದು ಬರಿಗೈಲಿ ಮರಳಿದರು. ಸಹೋದರಿಯರೂ ಉತ್ತಮ ಈಜುಪಟುಗಳು. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕನಸು ಕಾಣುತ್ತಿದ್ದರು. ಆದರೆ, ಅವರಿಗೆ ಸಾಧ್ಯವಾಗಲಿಲ್ಲ. ಅವರ ಕನಸನ್ನು ನನಸು ಮಾಡಿದ್ದು ಫೆಲ್ಪ್ಸ್‌. ನಂತರದ ದಿನಗಳಲ್ಲಿ ಯಶಸ್ಸು ಸಿಗುತ್ತಿದ್ದಂತೆ ಚೇಷ್ಟೆಗಳೂ ಹೆಚ್ಚಾದವು. ಕುಡಿದು ಜಗಳವಾಡಿ, ಅಡ್ಡಾದಿಡ್ಡಿ ವಾಹನ ಚಲಾಯಿಸಿ ಹಲವು ಬಾರಿ ಜೈಲು ಸೇರಿದ್ದಾರೆ. ಅದಕ್ಕಾಗಿ ದೇಶದ ಈಜು ಸಂಸ್ಥೆಯಿಂದ ಅಮಾನತು ಶಿಕ್ಷೆಯನ್ನೂ ಎದುರಿಸಿದ್ದಾರೆ.

2004ರ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಚೊಚ್ಚಿಲ ಚಿನ್ನ ಗೆದ್ದಾಗ ಅವರಿಗೆ 18 ವರ್ಷ. ಈ ಅಸಾಧಾರಣ ಪ್ರತಿಭೆಯ ಅಬ್ಬರಕ್ಕೆ ಈಜು ದಂತಕತೆ ಆಸ್ಟ್ರೇಲಿಯಾದ ಇಯಾನ್‌ ಥೋರ್ಪ್‌ ಕೂಡ ಬೆವತು ಹೋಗಿದ್ದರು. ಅಂದಹಾಗೆ, ಫೆಲ್ಪ್ಸ್‌ ಚಿಕ್ಕಂದಿನಿಂದ ಆರಾಧಿಸುತ್ತಿದ್ದುದು ಇದೇ ಥೋರ್ಪ್‌ ಅವರನ್ನು. ‘ಫೆಲ್ಪ್ಸ್‌ ಹೆಚ್ಚು ಪದಕಗಳನ್ನು ಗೆಲ್ಲಲಾರರು’ ಎಂದು ಥೋರ್ಪ್‌ ಒಮ್ಮೆ ಮೂದಲಿಸಿದ್ದರು.

ಆ ಮಾತನ್ನು ಸವಾಲಾಗಿ ಸ್ವೀಕರಿಸಿ ಈ ಹಂತಕ್ಕೆ ಬಂದು ನಿಂತಿದ್ದಾರೆ. ನೀರಿಗಿಳಿದರೆ ಪದಕ ಖಚಿತ ಎಂಬ ಭಾವನೆ ಮೂಡಿಸಿರುವ ಇವರಿಗೆ ಈಗ 31 ವರ್ಷ. ಈ ಅವಧಿಯಲ್ಲಿ ಅವರು ನಡೆದು ಬಂದ ಹಾದಿಯೇ ಅದ್ಭುತ. ಒಲಿಂಪಿಕ್ಸ್‌ ಇತಿಹಾಸದ ಶ್ರೇಷ್ಠ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ; ಒಂದೇ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಪದಕ ಜಯಿಸಿದ ಕ್ರೀಡಾಪಟು. 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ 8 ಚಿನ್ನದ ಪದಕಗಳಿಗೆ ಮುತ್ತಿಕ್ಕಿದ್ದರು.

ತಮ್ಮ ದೇಶದವರೇ ಆದ ಮಾರ್ಕ್‌ ಸ್ಪಿಟ್ಜ್‌ (ಮ್ಯೂನಿಕ್‌ ಒಲಿಂಪಿಕ್ಸ್‌; 7 ಚಿನ್ನ) ದಾಖಲೆ ಅಳಿಸಿ ಹಾಕಿದ್ದರು. ಒಲಿಂಪಿಕ್ಸ್‌ ಸಂಘಟಕರ ಪ್ರಕಾರ ಕ್ರಿಸ್ತಪೂರ್ವ 152ರಲ್ಲಿ ರೋಡ್ಸ್‌ನ ಲಿಯೋನಿಡಾಸ್ ನಿರ್ಮಿಸಿದ್ದ ದಾಖಲೆಯೂ ಪತನಗೊಂಡಿದೆಯಂತೆ!

ಫೆಲ್ಪ್ಸ್‌ ದೇಹ ಸ್ವರೂಪ ಈಜು ಸ್ಪರ್ಧೆಗೆ ಹೇಳಿ ಮಾಡಿಸಿದಂತಿದೆ. ಚಿಕ್ಕ ಕಾಲುಗಳು, ಉದ್ದ ಕೈ ಹೊಂದಿದ್ದಾರೆ. ಕೈಗಳನ್ನು ವಿಸ್ತರಿಸಿ ನಿಂತಾಗ ಅವುಗಳ ನಡುವಿನ ಅಂತರವೇ 6.7 ಅಡಿ. ಆದರೆ, ಇವರ ಎತ್ತರ 6.4 ಅಡಿ. ವಿಜ್ಞಾನಿಗಳು ಕೂಡ ಇವರ ದೇಹ ವಿಶ್ಲೇಷಣೆಯಲ್ಲಿ ತೊಡಗಿದ್ದಾರೆ.

ಯಾವತ್ತಿಗೂ ಸೋಲನ್ನು ಒಪ್ಪಿಕೊಳ್ಳದ ಮನೋಭಾವ ಫೆಲ್ಪ್ಸ್‌ ಅವರದ್ದು. 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಆರು, 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಎಂಟು ಮತ್ತು 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ನಾಲ್ಕು ಸ್ವರ್ಣ ಪದಕ ಜಯಿಸಿದ್ದಾರೆ. ಆ ಬಳಿಕ ನಿವೃತ್ತಿಯನ್ನೂ ಪ್ರಕಟಿಸಿದ್ದರು. ಆದರೆ, ಈಜುಕೊಳದಿಂದ ದೂರ ಉಳಿಯಲು ಅವರ ಮನಸ್ಸು ಒಪ್ಪಲಿಲ್ಲ. ಮತ್ತೆ ಚಿನ್ನದ ಬೇಟೆಗಿಳಿದರು.

ಸತತ ನಾಲ್ಕು ಒಲಿಂಪಿಕ್ ಕೂಟಗಳಲ್ಲಿ 200 ಮೀಟರ್‌ ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಲಾಂಗ್‌ಜಂಪ್‌ ಸ್ಪರ್ಧಿ ಕಾರ್ಲ್‌ ಲೂಯಿಸ್‌ ಹಾಗೂ ಡಿಸ್ಕಸ್‌ ಎಸೆತಗಾರ ಆಲ್‌ ಓರೆಟರ್‌ ಜೊತೆ ದಾಖಲೆ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಒಬ್ಬ ಮನುಷ್ಯ ನಿತ್ಯ 2,200ರಿಂದ 2,700 ಕ್ಯಾಲೊರಿ ಆಹಾರ ಸೇವಿಸುತ್ತಾನೆ. ಆದರೆ, ಈಜು ಆರಂಭಿಸಿದ ದಿನಗಳಲ್ಲಿ ಫೆಲ್ಪ್ಸ್‌ ನಿತ್ಯ 12,000 ಕ್ಯಾಲೊರಿ ಆಹಾರ ಸೇವಿಸುತ್ತಿದ್ದರು. ಈಜುಕೊಳದಲ್ಲಿ 6 ಗಂಟೆ ಅಭ್ಯಾಸ ನಡೆಸಿ ಅದನ್ನು ಜೀರ್ಣಿಸಿಕೊಳ್ಳುವ ಕಲೆಯನ್ನೂ ಕರಗತ ಮಾಡಿಕೊಂಡಿದ್ದರು.

ಈಗ ಅದು 3,539 ಕ್ಯಾಲೊರಿಗೆ ಬಂದು ನಿಂತಿದೆ. ಅವರ ಪತ್ನಿ ನಿಕೋಲ್ ಜಾನ್ಸನ್‌. ಈಕೆ ಅಮೆರಿಕದ ಖ್ಯಾತ ರೂಪದರ್ಶಿ. ಇವರಿಗೆ ಮೂರು ತಿಂಗಳ ಹಿಂದೆಯಷ್ಟೇ ಗಂಡು ಮಗು ಜನಿಸಿದೆ. ರಿಯೊದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಬಳಿಕ ಫೆಲ್ಪ್ಸ್‌ ತಮ್ಮ ಮಗುವಿಗೆ ಮುತ್ತನ್ನಿಟ್ಟರು.

‘22 ಚಿನ್ನದ ಪದಕ ಜಯಿಸಿದ್ದೇನೆ. ಆದರೆ, ಪ್ರತಿ ಬಾರಿ ಪದಕಕ್ಕೆ ಕೊರಳೊಡ್ಡುವ ಸಂದರ್ಭದಲ್ಲಿ ನುಡಿಸುವ ಅಮೆರಿಕದ ರಾಷ್ಟ್ರಗೀತೆ ನನ್ನನ್ನು ಮತ್ತಷ್ಟು ಭಾವುಕನನ್ನಾಗಿಸುತ್ತದೆ. ಮತ್ತಷ್ಟು ಸಾಧನೆ ಮಾಡಬೇಕೆಂಬ ಸ್ಫೂರ್ತಿ ತುಂಬುತ್ತದೆ. ಎಲ್ಲಾ ಕ್ರೀಡಾಪಟುಗಳಂತೆ ನನಗೂ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕನಸು ಇತ್ತು. ಆದರೆ, ಆ ಕನಸು ನನ್ನನ್ನು ಇಲ್ಲಿಗೆ ತಂದು ನಿಲ್ಲಿಸುತ್ತದೆ ಎಂದು ಭಾವಿಸಿರಲಿಲ್ಲ’ ಎಂದು ನುಡಿದಿದ್ದಾರೆ ಫೆಲ್ಪ್ಸ್‌.

2012ರ ಒಲಿಂಪಿಕ್ಸ್‌ನಲ್ಲಿ 200 ಮೀಟರ್‌ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಅವರು ದಕ್ಷಿಣ ಆಫ್ರಿಕಾದ ಚಡ್‌ ಲೆ ಕ್ಲಾಸ್‌ ಎದುರು ಪರಾಭವಗೊಂಡಿದ್ದರು. ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿದ್ದ ಫೆಲ್ಪ್ಸ್‌ ಈ ಬಾರಿ ಗೆದ್ದೇ ಬಿಟ್ಟರು. ಅವರಲ್ಲಿ ಗೆಲುವಿನ ತುಡಿತ ಎಷ್ಟಿದೆ ಎಂಬುದಕ್ಕೆ ಇದೇ ಸಾಕ್ಷಿ. ವಿದಾಯ ಹೇಳಿದ್ದ ಇವರು ಸೇಡು ತೀರಿಸಿಕೊಳ್ಳಲೆಂದೇ ಮತ್ತೆ ಕಣಕ್ಕಿಳಿದರು ಎಂಬ ಮಾತೂ ಇದೆ. ರಿಯೊದಲ್ಲಿ ಪಾಲ್ಗೊಂಡ ಈಜುಪಟುಗಳಲ್ಲಿ ಅತಿ ಹೆಚ್ಚು ವಯಸ್ಸಿನವರು ಫೆಲ್ಪ್ಸ್‌.

ಚಿಕ್ಕಂದಿನಲ್ಲಿ ಸಮಸ್ಯೆ ಅನುಭವಿಸಿದ್ದ ಅವರು ‘ಮೈಕಲ್‌ ಫೆಲ್ಪ್ಸ್‌ ಪ್ರತಿಷ್ಠಾನ’ದ ಮೂಲಕ ಜಗತ್ತಿನ ವಿವಿಧೆಡೆ ಮಾನಸಿಕ ತೊಂದರೆಯುಳ್ಳ ಮಕ್ಕಳ ಈಜು ಕಲಿಕೆಗೆ ಒತ್ತು ನೀಡುತ್ತಿದ್ದಾರೆ. ಮೈಸೂರಿನಲ್ಲೂ ಈಜು ಸಂಸ್ಥೆಯೊಂದಿಗೆ ಫೆಲ್ಪ್ಸ್‌ ಪ್ರತಿಷ್ಠಾನ ಒಪ್ಪಂದ ಮಾಡಿಕೊಂಡಿದೆ. ಅದೇನೇ ಇರಲಿ, ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟು ಫೆಲ್ಪ್ಸ್‌ ಅವರು ರಿಯೊ ಒಲಿಂಪಿಕ್ಸ್‌ ಬಳಿಕ ಸ್ಪರ್ಧೆಗೆ ವಿದಾಯ ಹೇಳಲಿದ್ದಾರೆ. ಇಂಥ ಈಜುಗಾರ ಮತ್ತೆ ಉದಯಿಸುತ್ತಾರೆಯೇ ಎಂಬ ಪ್ರಶ್ನೆಯನ್ನೂ ಕ್ರೀಡಾಭಿಮಾನಿಗಳ ಮುಂದಿಟ್ಟು ಹೋಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT