ADVERTISEMENT

ಗಂಡನ ಹೆಸರು ಬದಲಿಸಿದ್ದು ಯಾಕೆ?

ಮಲ್ಲೇಶ್ ನಾಯಕನಹಟ್ಟಿ
Published 20 ಜನವರಿ 2018, 19:30 IST
Last Updated 20 ಜನವರಿ 2018, 19:30 IST

ಯಾದಗಿರಿ: ಮೌನ ಗೌರಿಯರಂತೆ ಇರುತ್ತಿದ್ದ, ಜಿಲ್ಲಾ ಪಂಚಾಯಿತಿಯ 11 ಮಂದಿ ಸದಸ್ಯೆಯರು ಶುಕ್ರವಾರ ಸಾಮಾನ್ಯ ಸಭೆಯಲ್ಲಿ ಏಕಾಏಕಿ ಸಿಇಒ ಮತ್ತು ಅಧ್ಯಕ್ಷರ ವಿರುದ್ಧ ಗುಡುಗಲು ಶುರು ಮಾಡಿದರು. ಪ್ರತಿ ಬಾರಿ ಸಾಮಾನ್ಯ ಸಭೆಯಲ್ಲಿ ಹೀರೊಗಳಾಗುತ್ತಿದ್ದ ಪುರುಷ ಸದಸ್ಯರು ಅವಾಕ್ಕಾಗಿ ತಣ್ಣಗೆ ಕುಳಿತಿದ್ದರು.

‘ಅಲ್ರೀ... ನಾವ್‌ ಎಷ್ಟ್‌ ಅಂತ ನಿಮ್ಮನ್ನ ಕೇಳೋದು. ಇಲ್ಲಿಗೆ ಎರಡ್‌ ವರ್ಷ ಆತ್‌ ಅಲ್ರಿ... ಒಂದ್‌ ಸಾಲಿಗೂ ಸುಣ್ಣಬಣ್ಣ ಬಳೀಲಿಲ್ಲ. ದುರಸ್ತಿನೂ ಮಾಡಿಸ್ಲಿಲ್ಲ. ಮಂದಿ ನಡುರಸ್ತ್ಯಾಗ ನಿಲ್ಸಿ ಕೇಳಾಕತ್ತಾರ. ನಾವ್‌ ಏನ್‌ ಹೇಳ್ಬೇಕು ಹೇಳಿ?’ ಎಂದು ಸದಸ್ಯೆಯರು ಆರ್ಭಟಿಸಿದರು.

ಸದಸ್ಯೆಯರ ಅಬ್ಬರಕ್ಕೆ ಬೆಚ್ಚಿ ಬಿದ್ದ ಅಧಿಕಾರಿಗಳು, ಸಿಇಒ ಅವರನ್ನು ದಿಟ್ಟಿಸತೊಡಗಿದ್ದರು.

ADVERTISEMENT

ಜಿಲ್ಲಾ ಪಂಚಾಯಿತಿ ಅಧ್ಯಕ್ಷರೂ ದಿಢೀರ್ ಬಂದ ಸುನಾಮಿಗೆ ಬೆಚ್ಚಿಬಿದ್ದಂತೆ ಕುಳಿತಿದ್ದರು.

ಅಷ್ಟರಲ್ಲಿ ಮೇಲೆದ್ದ ಮತ್ತೊಬ್ಬ ಸದಸ್ಯೆ, ‘ಸಿಇಒ ಅವರೆ, ನನಗೆ ನೀವು ಮದುವೆ ಮಾಡಿಸಿದ್ದೀರೋ ಅಥವಾ ನಮ್ಮಪ್ಪ ಅಮ್ಮ ಮಾಡಿಸಿದ್ದಾರೋ’ ಎಂದು ಪ್ರಶ್ನೆ ಎಸೆದರು. ಇಂಥಾ ಗಂಭೀರ ಚರ್ಚೆಯಲ್ಲಿ ಈ ಅನುಮಾನ ಇವರಿಗೇಕೆ ಬಂತು ಎಂದು ಇಡೀ ಸಭೆ ಸದಸ್ಯೆಯತ್ತ ಮುಖ ತಿರುಗಿಸಿತು.

‘ಇಲ್‌ ನೋಡ್ರಿ... ಜಿಲ್ಲಾ ಪಂಚಾಯಿತಿಯಿಂದ ನನ್ನ ವಿಳಾಸಕ್ಕೆ ಬರುವ ಪತ್ರದ ಮೇಲೆ ನಮ್ಮ ಯಜಮಾನರ ಹೆಸರು ಬದಲಾಗಿದೆ. ನನ್ನ ಗಂಡನ ಹೆಸರು ಬದಲಾಯಿಸಲು ನಿಮಗೆ ಅಧಿಕಾರ ಕೊಟ್ಟವರು ಯಾರು? ಏನ್‌ ತಮಾಷೆ ಮಾಡುತ್ತಿದ್ದೀರಾ’ ಎಂದು ಸದಸ್ಯೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆ ಇಡೀ ಸಭೆ ಗೊಳ್‌ ಎಂದು ನಗೆಗಡಲಲ್ಲಿ ತೇಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.