ADVERTISEMENT

ಹಾದರದ ನೆಪದಲ್ಲಿ ಖಾಕಿಯ ಕ್ರೌರ್ಯ

ಬಿ.ಟಿ.ವೆಂಕಟೇಶ್
Published 27 ಜನವರಿ 2018, 19:30 IST
Last Updated 27 ಜನವರಿ 2018, 19:30 IST
ಹಾದರದ ನೆಪದಲ್ಲಿ ಖಾಕಿಯ ಕ್ರೌರ್ಯ
ಹಾದರದ ನೆಪದಲ್ಲಿ ಖಾಕಿಯ ಕ್ರೌರ್ಯ   

ಕ್ರಿಶ್ಚಿಯನ್‌ ಹಾಗೂ ಅತ್ಯಂತ ಮೂಲಭೂತವಾದಿ ಹಿಂದೂ ನೈತಿಕತೆಯನ್ನು ಅಂಟಿಸಿಕೊಂಡಿರುವ ನಮ್ಮ ಗತಕಾಲದ ಬ್ರಿಟಿಷ್‌ ಕಾನೂನುಗಳಿಗೆ ಬಲಿಯಾಗುವ ಬಹುಪಾಲು ಜನರು ಬಡವರೇ. ಮನುಷ್ಯನ ಹಸಿವು ಮತ್ತು ಅವಶ್ಯಕತೆ ಯಾವ ಕಾನೂನನ್ನೂ ಪರಿಗಣಿಸುವುದಿಲ್ಲ...!

ಯಾವುದೊ ಹಳ್ಳಿಯಿಂದ ಬಂದು ಪಟ್ಟಣ ಸೇರಿ ಕೂಲಿ–ನಾಲಿ ಮಾಡುವ ಹೆಣ್ಣುಮಕ್ಕಳಿಗೆ ಎಷ್ಟೋ ಬಾರಿ ವೇಶ್ಯಾವಾಟಿಕೆ ಅವಲಂಬಿಸುವ ಅನಿವಾರ್ಯತೆ ಉಂಟಾಗುತ್ತದೆ. ಇಂಥವರಿಗೆ ಇದೊಂದು ಆರ್ಥಿಕ ಪರ್ಯಾಯವೂ ಹೌದು. ಆದರೆ, ಲೈಂಗಿಕ ಶೋಷಣೆ ತಪ್ಪಿಸುವ ಹಾಗೂ ಅನೈತಿಕ ದೇಹ ವ್ಯಾಪಾರ ಪ್ರತಿಬಂಧಿಸುವ ಕಾಯ್ದೆಯ ಹೆಸರಿನಲ್ಲಿ ನಮ್ಮ ಪೊಲೀಸ್‌ ವ್ಯವಸ್ಥೆ ಈ ಅಮಾಯಕರ ಮೇಲೆ ನಡೆಸುವ ದಬ್ಬಾಳಿಕೆಗೆ ಕೊನೆಯೇ ಇಲ್ಲ.

ಇಂತಹುದೊಂದು ಉದಾಹರಣೆಗೆ ಸಾಕ್ಷಿಯಾದ 20 ವರ್ಷಗಳ ಹಿಂದಿನ ಪ್ರಕರಣ ನನ್ನನ್ನು ಈಗಲೂ ಅಣಕಿಸುತ್ತದೆ. ಎಂದಿನಂತೆ ಆವತ್ತೂ ಆಫೀಸಿನಲ್ಲಿ ಫೈಲು, ಪುಸ್ತಕಗಳ ಮಧ್ಯೆ ಮುಳುಗಿದ್ದೆ. ಬೆಳಗಿನ 9 ಗಂಟೆ ಸಮಯ. ಮುಂಬೈ ಗೆಳೆಯ ಗ್ರೋವರ್‌ನ ಸಹೋದ್ಯೋಗಿ ವಕೀಲೆ ಶ್ರೇಯಾ ಪಿನಾಕಿ ಧಡಧಡನೆ ಒಳಬಂದಳು. ‘ಸರ್‌, ಒಬ್ಬ ಬಡ ಹೆಣ್ಣುಮಗಳನ್ನು ಪೊಲೀಸರು ವೇಶ್ಯಾವಾಟಿಕೆಯ ಕೇಸಿನಲ್ಲಿ ಜೈಲಿಗೆ ತಳ್ಳಿದ್ದಾರೆ. ಆಕೆಗೊಂದು ಜಾಮೀನು ಅರ್ಜಿ ಹಾಕಬೇಕು. ದಯವಿಟ್ಟು ನೀವೇ ತಯಾರು ಮಾಡಿಕೊಡಬೇಕು’ ಎಂದು ವಿನಂತಿಸಿದಳು.

ADVERTISEMENT

ಬೆಂಗಳೂರಿನ ವಿಚಾರಣಾ ಕೋರ್ಟ್‌ಗಳಲ್ಲಿ ದಿನವೂ ಇಂತಹ ನೂರಾರು ಜಾಮೀನು ಅರ್ಜಿಸಲ್ಲಿಕೆಯಾಗುತ್ತವೆ. ಇವಕ್ಕೆಲ್ಲಾ  ಡ್ರಾಫ್ಟಿಂಗ್‌ ಅವಶ್ಯಕತೆಯೇ ಇರುವುದಿಲ್ಲ. ಟೈಪಿಸ್ಟ್‌ಗಳಿಗೆ ಆರೋಪಿಯ ಹೆಸರು, ವಯಸ್ಸು, ವಿಳಾಸ ಕ್ರೈಂ ನಂಬರ್, ಪೊಲೀಸ್ ಠಾಣೆ, ಯಾವ ಕಲಂಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂಬುದನ್ನು ಹೇಳಿದರೆ ಸಾಕು. ಐದು ನಿಮಿಷದಲ್ಲಿ ಅರ್ಜಿ ರೆಡಿ ಮಾಡಿಕೊಡುತ್ತಾರೆ. ಶ್ರೇಯಾ ವೃತ್ತಿಗೆ ಹೊಸ ಹುಡುಗಿ. ಹೀಗಾಗಿ ನಾನೇ ಅರ್ಜಿಯ ಉಕ್ತಲೇಖನ ನೀಡಿದೆ.

ಜಾಮೀನು ಅರ್ಜಿ ತೆಗೆದುಕೊಂಡು ಹೋದ ಶ್ರೇಯಾ, ನಾಲ್ಕು ದಿನಗಳ ನಂತರ ಕಚೇರಿಗೆ ಬಂದಾಗ ಅವಳ ಮುಖ ಸಪ್ಪಗಾಗಿತ್ತು. ಏನೋ ಎಡವಟ್ಟಾಗಿರ
ಬೇಕು ಎಂದುಕೊಳ್ಳುತ್ತಲೇ, ‘ಏನಾಯಿತು’ ಎಂದೆ. ‘ಸರ್‌, ಜಾಮೀನೇನೊ ಸಿಕ್ಕಿದೆ. ಆದರೆ, ಶ್ಯೂರಿಟಿ ಸಮಸ್ಯೆ ಎದುರಾಗಿದೆ’ ಎಂದಳು. ‘ಕ್ಯಾಷ್‌ ಶ್ಯೂರಿಟಿ ಅರ್ಜಿ ಹಾಕಬೇಕಿತ್ತು’ ಎಂದೆ. ‘ಹಾಕಿದ್ದೆ ಸರ್‌. ಆದರೆ, ನ್ಯಾಯಾಧೀಶರು ಹತ್ತು ಸಾವಿರ ರೂಪಾಯಿ ಕಟ್ಟಬೇಕು ಎಂದರು. ಕಮ್ಮಿ ಮಾಡಲು ಸಾಧ್ಯವೇ ಇಲ್ಲ ಎಂದೂ ಹೇಳಿದ್ದಾರೆ...’ ಎಂದು ಅರ್ಧಕ್ಕೇ ಮಾತು ನಿಲ್ಲಿಸಿದಳು.

ಸಾಮಾನ್ಯವಾಗಿ ವೇಶ್ಯಾವೃತ್ತಿಯ ಕೇಸುಗಳಲ್ಲಿ ಆರೋಪಿಗಳ ಗೆಳೆಯರು, ಪಿಂಪ್‌ಗಳು (ತಲೆಹಿಡುಕರು) ಶ್ಯೂರಿಟಿ ಒದಗಿಸುವ ವ್ಯವಸ್ಥೆ ಮಾಡುತ್ತಾರೆ. ಈ ಪ್ರಕರಣದ ಆರೋಪಿಗೆ ಹಣ ಕಟ್ಟಲು ಸಾಧ್ಯವಿಲ್ಲವೇ ಎಂದು ಯೋಚಿಸಿದ ನನಗೆ, ಒಂದು ಸಲ ಕೇಸಿನ ವಿವರ ಏನಿದೆ ಕಣ್ಣಾಡಿಸೋಣ ಎನಿಸಿತು.

ಕಡತಗಳನ್ನು ತರಿಸಿಕೊಂಡು ನೋಡಿದರೆ ಆಶ್ಚರ್ಯ. ದೂರು ದಾಖಲಿಸಿಕೊಂಡ ಒಂದೇ ವಾರದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ಅದರ ಒಕ್ಕಣೆ ಹೀಗಿತ್ತು: ಚಂದ್ರಾ ಲೇಔಟ್‌ನ ಒಂದು ಗುಡಿಸಲಿನಲ್ಲಿ ವೇಶ್ಯಾವೃತ್ತಿ ನಡೆಸುತ್ತಿರುವ ಬಗ್ಗೆ ಬಲ್ಲ ಮೂಲಗಳಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಠಾಣೆಯ ಒಬ್ಬ ಸಬ್‌ ಇನ್‌ಸ್ಪೆಕ್ಟರ್, ಒಬ್ಬ ಎಚ್‌.ಸಿ, ಇಬ್ಬರು ಪಿ.ಸಿಗಳು ಸ್ಥಳಕ್ಕೆ ಹೋಗಿ ನೋಡಲಾಗಿ ನಿರ್ಜನ ಪ್ರದೇಶದ ಒಂದು ದಿಣ್ಣೆಯ ಮೇಲಿದ್ದ ಗುಡಿಸಲಿನಲ್ಲಿ ಮಂದವಾದ ಬೆಳಕು (ಬುಡ್ಡಿ ದೀಪ) ಇದ್ದ ಗುಡಿಸಲನ್ನು ಸುತ್ತುವರೆದು ಪಿ.ಸಿ.ನಂ... ಅವರನ್ನು ಕಳುಹಿಸಲಾಗಿ, ಗುಡಿಸಲಿನ ಸಂದಿಯಿಂದ ನೋಡಲಾಗಿ 30ರಿಂದ 35ರ ಪ್ರಾಯದ ನಡುವಿನ ಒಂದು ಹೆಣ್ಣು, ಒಂದು ಗಂಡು ಅರೆಬೆತ್ತಲಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದು, ಸದರಿ ಪಿ.ಸಿಯವರು ಇಷಾರೆ ಮಾಡಲಾಗಿ, ಬಾಗಿಲನ್ನು ಬಡಿದು ಕರೆಯಲಾಗಿ ಇಬ್ಬರು ಆಚೆ ಬಂದಿದ್ದು ಒಬ್ಬ ವ್ಯಕ್ತಿ ಕತ್ತಲಲ್ಲಿ ಓಡಿ ಹೋಗಿದ್ದು, ಹೆಸರು ಕೇಳಲಾಗಿ ಹೆಣ್ಣುಮಗಳ ಹೆಸರು ಚಂದ್ರಮ್ಮನೆಂದೂ, ಗಂಡಸು ರಾಮಪ್ಪನೆಂದೂ ವಿಜಯನಗರದ ಬಸ್‌ಸ್ಟ್ಯಾಂಡಿನ ಹತ್ತಿರ ರಾತ್ರಿಗೆ ಇನ್ನೂರು ರೂಪಾಯಿಯಂತೆ ವ್ಯವಹಾರ ಕುದುರಿಸಿಕೊಂಡು ಇಲ್ಲಿಗೆ ಬಂದಿದ್ದು ಎಂದು ಹೇಳಲಾಗಿ, ಇಬ್ಬರ ಮೇಲೂ ದಸ್ತಗಿರಿ ನೋಟಿಸ್‌ ಜಾರಿ ಮಾಡಿ ಓಡಿ ಹೋದ ವ್ಯಕ್ತಿಯ ಬಗ್ಗೆ ಕೇಳಲಾಗಿ, ‘ಈ ಗುಡಿಸಿಲಿನ ಓನರ್‌ ವೆಂಕಟಮ್ಮ ಎಂದು ತಿಳಿದು ಬಂದಿದ್ದು, ಸದರಿಯವರನ್ನು ದಸ್ತಗಿರಿ ಮಾಡಿ ಪಂಚರನ್ನು ಕರೆದುಕೊಂಡು ರಾತ್ರಿ... ಗಂಟೆಯಿಂದ ...ವರೆಗೆ ಸ್ಥಳ ಪಂಚನಾಮೆಯನ್ನು ಮಾಡಿ...

ಓದುತ್ತಾ ಹೋದಂತೆ ನನ್ನ ಮನಸ್ಸಿಗೆ ಪಿಚ್ಚೆನಿಸಿತು. ಶ್ರೇಯಾಳ ಬಳಿ ಹೆಚ್ಚಿನ ವಿವರಗಳೂ ಇರಲಿಲ್ಲ. ಈಕೆಯೊ ಮರಾಠಿ, ಇಂಗ್ಲಿಷ್, ಹಿಂದಿ ಬಲ್ಲವಳು. ಮುಂಬೈಗೆ ಸೇರಿದ ಪ್ರಮುಖ ವಕೀಲರೊಬ್ಬರ ಬೆಂಗಳೂರಿನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದವಳು. ವಕೀಲಿಕೆಯಲ್ಲಿ ಇನ್ನೂ ಆರು ತಿಂಗಳ ಅನುಭವ. ಆದರೆ, ಎಲ್ಲಿಲ್ಲದ ಹುಮ್ಮಸ್ಸು. ಮಾನವ ಹಕ್ಕುಗಳ ಕಾರ್ಯಕರ್ತೆ ಕೂಡಾ. ದೇಶದ ತುಂಬೆಲ್ಲಾ ಸುತ್ತಾಡುತ್ತಾ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ಕೈಗೆತ್ತಿಕೊಂಡು ನೊಂದವರಿಗೆ ನ್ಯಾಯ ಒದಗಿಸುವ ಪರೋಪಕಾರಿ ಕೆಲಸಗಳನ್ನು ಮಾಡುವ ಚೂಟಿ ಹುಡುಗಿ.

ಹೀಗೇ ಒಂದು ದಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಮಹಿಳಾ ಕೈದಿಗಳನ್ನು ಆಕೆ ಮಾತನಾಡಿಸಿದಾಗ ಸಿಕ್ಕ ಕೇಸೇ ಚಂದ್ರಮ್ಮನದು.

ದೋಷಾರೋಪ ಪಟ್ಟಿ ನೋಡಿದ ಮೇಲೆ ಗೊತ್ತಾಗಿದ್ದೇನೆಂದರೆ; ಚಂದ್ರಮ್ಮ ಆಂಧ್ರದ ರಾಯಲ ಸೀಮೆಯ ಒಂದು ಕುಗ್ರಾಮದವಳು. ಈಕೆಗೆ ಅನ್ಯಾಯವಾಗಿದೆ ಎಂಬುದನ್ನು ಅರಿಯಲು ನನಗೆ ಬಹಳ ಹೊತ್ತು ಬೇಕಾಗಲಿಲ್ಲ. ಮರುದಿನ ಕೇಸು ಅಡ್ವಾನ್ಸ್‌ ಮಾಡಿಸುವಂತೆ ಶ್ರೇಯಾಳಿಗೆ ತಿಳಿಸಿ ಕೋರ್ಟ್‌ಗೆ ಹಾಜರಾದೆ.

ವಿಚಾರಣೆ ವೇಳೆ, ‘ಇನ್ನೂರು ರೂಪಾಯಿಗೆ ಗಿರಾಕಿಯನ್ನು ಕರೆದುಕೊಂಡು ಬಂದು ಗುಡಿಸಿಲಿನಲ್ಲಿ ದಂಧೆ ನಡೆಸುತ್ತಿದ್ದ ಚಂದ್ರಮ್ಮ ಶ್ಯೂರಿಟಿ ನೀಡಲು ಹತ್ತು ಸಾವಿರ ರೂಪಾಯಿಗಳನ್ನು ಎಲ್ಲಿಂದ ತರುತ್ತಾಳೆ ಸ್ವಾಮಿ’ ಎಂದು ನ್ಯಾಯಾಧೀಶರಿಗೆ ಪ್ರಶ್ನಿಸಿದೆ. ‘ಇಂಥವರಿಗೆಲ್ಲಾ ದೊಡ್ಡಮೊತ್ತದ ಷರತ್ತುಬದ್ಧ ಜಾಮೀನು ಅದೆಷ್ಟು ಕ್ರೂರ’ ಎಂಬುದನ್ನೂ ವಿವರಿಸಿದೆ. ಆದರೆ, ನ್ಯಾಯಾಧೀಶರು, ‘ಇವಳನ್ನು ಹೀಗೆಯೇ ಬಿಟ್ಟರೆ ನಾಳೆ ಪ್ರಕರಣಕ್ಕೆ ಹಾಜರಾಗದೆ ತಪ್ಪಿಸಿಕೊಂಡು ಹೋಗಬಹುದು’ ಎಂಬ ಆತಂಕ ವ್ಯಕ್ತಪಡಿಸಿದರು.

‘ಸ್ಥಿತಿವಂತ ಹಾಗೂ ಬಡ ಆರೋಪಿಗೆ ಇರುವ ವ್ಯತ್ಯಾಸವನ್ನು ನ್ಯಾಯಾಧೀಶರಿಗೆ ಎಳೆಎಳೆಯಾಗಿ ಬಿಡಿಸಿಟ್ಟೆ. ಅನೈತಿಕವಾಗಿ ದೇಹವನ್ನು ವ್ಯಾಪಾರಕ್ಕೆ ಒಡ್ಡುವ ತಡೆ ಕಾಯ್ದೆಯು 1950ರ ಮೇ 9ರಂದು ನ್ಯೂಯಾರ್ಕ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಒಪ್ಪಂದದ ಫಲಶ್ರುತಿ. ವಾಣಿಜ್ಯ ಉದ್ದೇಶಗಳಿಗೆ ಲೈಂಗಿಕ ಶೋಷಣೆ ನಡೆದರೆ ಅದನ್ನು ನಿಯಂತ್ರಿಸುವುದು ಈ ಕಾನೂನಿನ ಉದ್ದೇಶ. ಆದಾಗ್ಯೂ ವೇಶ್ಯಾವಾಟಿಕೆ ಅಪರಾಧವಲ್ಲ. ಇದನ್ನು ಕಾನೂನುಬದ್ಧ ಸ್ಥಳದಲ್ಲಿ ನಡೆಸಬೇಕು. ಸಾರ್ವಜನಿಕ ಸ್ಥಳಗಳಿಂದ 200 ಮೀಟರ್‌ ವ್ಯಾಪ್ತಿಯೊಳಗೆ ನಡೆದಿದ್ದರೆ ಮಾತ್ರ ಕಾನೂನು ಬಾಹಿರ’ ಎಂಬುದನ್ನೆಲ್ಲಾ ಮನವರಿಕೆ ಮಾಡಿಕೊಟ್ಟೆ. ಕಡೆಗೂ ನ್ಯಾಯಾಧೀಶರು ನನ್ನ ವಾದ ಮನ್ನಿಸಿದರು.ವೈಯಕ್ತಿಕ ಬಾಂಡ್‌ ಮೇಲೆ ಜಾಮೀನು ನೀಡುತ್ತಿದ್ದಂತೆಯೇ ಶ್ರೇಯಾ ಮಗುವಿನಂತೆ ಸಂಭ್ರಮಿಸಿದಳು. ಚಂದ್ರಮ್ಮನನ್ನು ಜೈಲಿನಿಂದ ಹೊರಗೆ ಕರೆತಂದ ಮೇಲೆ ಆಕೆಯ ಊರು–ಕೇರಿ, ಏನು–ಎತ್ತ ಎಲ್ಲ ವಿಚಾರಿಸಿದೆ.

‘ಪೀಲೇರು ಕಮ ಮಾಮಿಡಿ ಪಲ್ಲಿ’ ಎಂದಳು. ಆಂಧ್ರದ ಚಿತ್ತೂರು ಜಿಲ್ಲೆಯ ಪೀಲೇರು ಮಂಡಲಂನ ಮಾಮಿಡಿಪಲ್ಲಿ ಹೊಲೆಯರ ಹಟ್ಟಿಯ ಚಂದ್ರಮ್ಮ ತನ್ನನ್ನು ತಾನು ಕರೆದುಕೊಳ್ಳುತ್ತಿದ್ದುದೇ ‘ಸೇಂದ್ರಿ’ ಅಂತಾ. ನಡುವಯಸ್ಸಿನ ಕಪ್ಪುವರ್ಣದ ಈ ಚೂಪು ಮೂಗಿನ ಸುಂದರಿಗೆ ಮೂವರು ಪುಟ್ಟ ಗಂಡು ಮಕ್ಕಳು. ಗಂಡ ಈಕೆಯನ್ನು ತೊರೆದು ಪಟ್ಟಣ ಸೇರಿ ವರ್ಷಗಳೇ ಕಳೆದಿದ್ದವು. ಮುಕ್ಕಿ ತಿನ್ನುವ ದಾರಿದ್ರ್ಯದಿಂದ ಹೊರಬರಲು ಚಂದ್ರಮ್ಮ ಕೂಡಾ ಪಟ್ಟಣ ಅರಸುತ್ತಾ ಬಂದದ್ದು ಬೆಂಗಳೂರೆಂಬ ಮಹಾನಗರಿಗೆ. ದಿಕ್ಕು ದೆಸೆಯಿಲ್ಲದೆ ಬೆಂಗಳೂರಿಗೆ ಬಂದ ಸೇಂದ್ರಿಗೆ ಚಂದ್ರಾ ಲೇ ಔಟ್‌ನಲ್ಲಿ ಕಟ್ಟಡದ ಕೂಲಿ ಕೆಲಸ ಕೈ ಹಿಡಿದಿತ್ತು. ಕಾಮಗಾರಿ ಕಟ್ಟಡದ ಸಮೀಪವೇ ಇದ್ದ ಹಣ್ಣಣ್ಣು ಮುದುಕಿ ವೆಂಕಟಮ್ಮನ ಗುಡಿಸಲು ಸೂರಿನ ಚಿಂತೆ ದೂರ ಮಾಡಿತ್ತು. ಕಟ್ಟಡ ಕೆಲಸದ ಜೊತೆಗಾರ್ತಿ ಕಮಲಮ್ಮ ಸೇಂದ್ರಿಯನ್ನು ದಂಧೆಗೆ ಇಳಿಯಲು ಪ್ರೇರೇಪಿಸಿದ್ದಳು.

ವಯೋಸಹಜ ಕುರುಡತನದಿಂದ ಬಳಲುತ್ತಿದ್ದ ವೆಂಕಟಮ್ಮ, ಸೇಂದ್ರಿಯ ದಂಧೆಗೆ ಯಾವತ್ತೂ ತಕರಾರೂ ಮಾಡಿರಲಿಲ್ಲ. ಒಂದು ರೀತಿ ಹೇಳಿ ಕರೆಸಿದಂತೆ ವೆಂಕಟಮ್ಮನಿಗೆ ಸೇಂದ್ರಿ ಆಸರೆಯಾಗಿ ನಿಂತಿದ್ದಳು. ಹಗಲು ಹೊತ್ತಿನಲ್ಲಿ ಕಟ್ಟಡ ಕಾರ್ಮಿಕಳ ಕೆಲಸ. ಬಿಡುವಿನ ವೇಳೆಯಲ್ಲಿ ದೇಹದ ವ್ಯಾಪಾರ. ಎರಡು ತಿಂಗಳಿನಿಂದ ಆರಂಭಿಸಿದ್ದ ದಂಧೆಗೆ ದಿನಕ್ಕೆ ಅರವತ್ತರಿಂದ ನೂರು ರೂಪಾಯಿವರೆಗೆ ಸಿಗುತ್ತಿತ್ತು. ದಂಧೆಯ ಸೂಕ್ಷ್ಮಗಳೇ ಗೊತ್ತಿಲ್ಲದ ಸೇಂದ್ರಿ ತನ್ನ ಅಮಾಯಕತೆ ಅವುಚಿಕೊಂಡೇ ಬದುಕಿನ ಬಂಡಿ ಸಾಗಿಸುತ್ತಿದ್ದಳು. ತನ್ನ ಮತ್ತು ಮಕ್ಕಳ ಎರಡು ಹೊತ್ತಿನ ಊಟಕ್ಕೆ ಯಾವ ತೊಂದರೆಯೂ ಇಲ್ಲವಲ್ಲಾ ಎಂಬುದೇ ಆಕೆಯ ಪಾಲಿನ ಸಮಾಧಾನ ಮತ್ತು ಸಡಗರವಾಗಿತ್ತು.

ಆವತ್ತು ಪೊಲೀಸರು ಕಾನೂನು ಪಾಲನೆಯ ಗರ್ವದಲ್ಲಿ ಗುಡಿಸಲಿನ ಮೇಲೆ ದಾಳಿ ನಡೆಸಿ ಸೇಂದ್ರಿಯನ್ನು ಜೈಲಿಗೆ ತಳ್ಳಿದ್ದು ನೋಡುಗರ ಕಣ್ಣಿಗೆ ವೇಶ್ಯಾವಾಟಿಕೆಯೇ ಮಹಾಪರಾಧ ಎನಿಸುವಂತಿತ್ತು..! ಆದರೆ, ಪ್ರಕರಣದಲ್ಲಿ, ‘ಸಾಕಷ್ಟು ಪುರಾವೆಗಳಿಲ್ಲದ ಕಾರಣ ಗಿರಾಕಿ ರಾಮಪ್ಪ ಹಾಗೂ ವೆಂಕಟಮ್ಮನನ್ನು ಕೈಬಿಡಲಾಗಿದೆ’ ಎಂದು ತಿಳಿಸುವ ಮೂಲಕ ಸೇಂದ್ರಿಯನ್ನು ಜೈಲಿಗೆ ತಳ್ಳಿದ್ದ ಪೊಲೀಸರು ಅಬಲೆಯ ಮೇಲೆ ತಮ್ಮ ದರ್ಪ ಮೆರೆದಿದ್ದರು. ಸೇಂದ್ರಿ ಜೈಲಿನಲ್ಲಿದ್ದ ದಿನಗಳಲ್ಲಿ ಆಕೆಯ ಮೂರು ಮಕ್ಕಳು ಮತ್ತಾರೋ ಕೂಲಿ ಕೆಲಸದವರ ಮನೆಯಲ್ಲಿ ಆಶ್ರಯ ಪಡೆದಿದ್ದವು.

ಈ ಪ್ರಕರಣದಲ್ಲಿ ನನ್ನನ್ನು ಕಾಡಿದ್ದು ವ್ಯವಸ್ಥೆಯ ಕ್ರೌರ್ಯ. ಯಾವುದೋ ಹಳ್ಳಿಯಿಂದ ಬಂದಂತಹ, ಹೇಗೊ ತನಗೆ ತಿಳಿದಂತಹ ದಂಧೆಯಲ್ಲಿ ಬದುಕು ಕಂಡುಕೊಂಡಂತಹ, ಸೇಂದ್ರಿಯನ್ನು ನಮ್ಮ ಸಮಾಜ ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲವಲ್ಲಾ, ನಮ್ಮ ಕಾನೂನು, ಚೌಕಟ್ಟು, ವ್ಯವಸ್ಥೆ, ಶಿಸ್ತು ಇವಕ್ಕೆಲ್ಲಾ ಸೇಂದ್ರಿಯ ಬಲಿ ಕೇಳುವ ನಾವು ಎಷ್ಟು ಕ್ರೂರಿಗಳಲ್ಲವೇ... ಎಂದು ವ್ಯಥೆಯಾಗಿತ್ತು.

ಎರಡು ವರ್ಷಗಳವರೆಗೆ ನಡೆದ ಕೇಸಿನ ವಿಚಾರಣೆಯಲ್ಲಿ ಸೇಂದ್ರಿಯ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿತ್ತು. ಸೂಕ್ತ ಸಾಕ್ಷ್ಯ ಮತ್ತು ದಾಖಲಾತಿಗಳ ಕೊರತೆಯಿಂದ ಸೇಂದ್ರಿ ಬಿಡುಗಡೆಯಾಗಿದ್ದಳು. ಬದುಕಿನ ಪಾಠ ಎಂಬಂತೆ ಈ ಎರಡು ವರ್ಷಗಳ ಅವಧಿಯಲ್ಲಿ ಸೇಂದ್ರಿ ದಂಧೆಯ ಸೂಕ್ಷ್ಮಗಳನ್ನು ಕರಗತ ಮಾಡಿಕೊಂಡಿದ್ದಳು. ಅವಳ ಅಮಾಯಕತೆ ಮತ್ತು ನಗುವಿನಲ್ಲಿ ಬಿಂದಾಸ್‌ ಬದಲಾವಣೆ ಆಗಿತ್ತು. ಸುಲಲಿತ ಕನ್ನಡವನ್ನೂ ಕಲಿತಿದ್ದಳು. ಮಕ್ಕಳನ್ನು ಶಾಲೆಗೂ ಸೇರಿಸಿದ್ದಳು. ವಾಸಕ್ಕೆ ಕಾಂಕ್ರೀಟಿನ ಮನೆಯೊಂದನ್ನು ಬಾಡಿಗೆಗೆ ಹಿಡಿದಿದ್ದಳು! ಸೇಂದ್ರಿ ಗಟ್ಟಿಗಿತ್ತಿಯಾಗಿದ್ದಳು...!!

ಹೆಸರುಗಳನ್ನು ಬದಲಾಯಿಸಲಾಗಿದೆ

ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.