ADVERTISEMENT

ಇಂದಿರಾ ಗಾಂಧಿಯಿಂದ ವಾಜಪೇಯಿವರೆಗೆ...

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 8:35 IST
Last Updated 8 ಜನವರಿ 2011, 8:35 IST

ಇಂದಿರಾಗಾಂಧಿ
ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಹೋರಾಡುತ್ತಿದ್ದ ಜಾರ್ಜ್ ಫರ್ನಾಂಡಿಸ್ ಅವರನ್ನು ಬರೋಡಾ ಡೈನಮೇಟ್ ಪ್ರಕರಣದಲ್ಲಿ ರಾಜದ್ರೋಹಕ್ಕಾಗಿ ಸಿಬಿಐ ಆರೋಪಿಯನ್ನಾಗಿ ಮಾಡಿತು.

ಸೊಸೆ ಮೇನಕಾ ಗಾಂಧಿಯ ತಾಯಿ ಅಮೇತಶ್ವರ ಆನಂದ್ ಅವರ ಜತೆ ಜಗಳವಾಡಿದ ಏಕೈಕ ಕಾರಣಕ್ಕೆ ಸಿಬಿಐ ಜವಳಿ ಆಯೋಗದ ಆಯುಕ್ತರ ಕಚೇರಿ ಮೇಲೆ ದಾಳಿ ನಡೆಸಿ ಹತ್ತು ಅಧಿಕಾರಿಗಳನ್ನು ಬಂಧಿಸಿತ್ತು.
 

ಮೊರಾರ್ಜಿ ದೇಸಾಯಿ
ಜನತಾ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾಡಿದ ಮೊದಲ ಕೆಲಸ ಜಾರ್ಜ್ ವಿರುದ್ಧದ ಮೊಕದ್ದಮೆಯನ್ನು ವಾಪಸು ಪಡೆದದ್ದು, ಎರಡನೇ ಕೆಲಸ- ಇಂದಿರಾಗಾಂಧಿ ಮತ್ತು ಅವರ ಬೆಂಬಲಿಗರ ವಿರುದ್ಧ ತನಿಖೆಗೆ ಸಿಬಿಐಯನ್ನು ಛೂ ಬಿಟ್ಟದ್ದು. ಸಂಜಯ್‌ಗಾಂಧಿ ವಿರುದ್ಧದ ‘ಕಿಸ್ಸಾ ಕುರ್ಸಿ ಕಾ’ ಪ್ರಕರಣವೊಂದನ್ನು ಹೊರತುಪಡಿಸಿದರೆ ಇಂದಿರಾಗಾಂಧಿ ಮತ್ತು ಪರಿವಾರದ ವಿರುದ್ಧದ ಯಾವ ಮೊಕದ್ದಮೆಗಳೂ ವಿಚಾರಣಾ ಹಂತಕ್ಕೂ ಬರಲಿಲ್ಲ.
 
ರಾಜೀವ್‌ಗಾಂಧಿ
ಬೋಪೋರ್ಸ್ ಪ್ರಕರಣದ ಆರೋಪಿ ಕ್ವಟ್ರೋಚಿ ದೆಹಲಿಯಲ್ಲಿಯೇ ನೆಲೆಸಿದ್ದರೂ  ಸಿಬಿಐ ಕನಿಷ್ಠ ವಿಚಾರಣೆಗೆ ಕರೆಸಿಕೊಳ್ಳಲಿಲ್ಲ. ವಿರೋಧಪಕ್ಷಗಳ ಆರೋಪದ ಪ್ರಕಾರ ಕ್ವಟ್ರೋಚಿ ದೇಶ ಬಿಟ್ಟು ಓಡಿಹೋಗಲು ನೆರವಾಗಿದ್ದು ಸಿಬಿಐ. ಅಂದು ತಪ್ಪಿಸಿಕೊಂಡ ಕ್ವಟ್ರೋಚಿ ಇಂದಿಗೂ ಸಿಕ್ಕಿಲ್ಲ. ವಿ.ಪಿ.ಸಿಂಗ್ ವಿರುದ್ಧದ ಫೇರ್‌ಫ್ಯಾಕ್ಸ್ ಹಗರಣ, ಚಂದ್ರಸ್ವಾಮಿಯ ವಿದೇಶಿ ಹಣದ ಗೋಲ್‌ಮಾಲ್, ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ವಿರುದ್ಧ ಅಧಿಕೃತ ರಹಸ್ಯ ಕಾಯಿದೆಯ ಉಲ್ಲಂಘನೆಯ ಆರೋಪದ ತನಿಖೆಗಳು ರಾಜೀವ್ ಮತ್ತು ಸಿಬಿಐ ಕೂಡಿ ಮಾಡಿದ ಸಾಹಸಗಳಲ್ಲಿ ಕೆಲವು.

ವಿ.ಪಿ.ಸಿಂಗ್
ಬೊಫೋರ್ಸ್ ಫಿರಂಗಿ ಮತು ಎಚ್‌ಡಿಡಬ್ಲ್ಯು ಸಬ್‌ಮೆರೀನ್ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಮೂಲಕ ರಾಜೀವ್‌ಗಾಂಧಿ ವಿರುದ್ಧ ಸೇಡು ತೀರಿಸಿಕೊಂಡರು. ಸೇಂಟ್ ಕಿಟ್ಸ್ ಪ್ರಕರಣದಲ್ಲಿ ಪಿ.ವಿ.ನರಸಿಂಹರಾವ್ ಅವರಿಗೆ ಆಪ್ತರಾಗಿದ್ದ ಚಂದ್ರಸ್ವಾಮಿ ಬಗ್ಗೆ ತನಿಖೆ.

ADVERTISEMENT

ಪಿ.ವಿ.ನರಸಿಂಹರಾವ್
ಎಲ್ಲೋ ಮೂಲೆಯಲ್ಲಿ ಬಿದ್ದಿದ್ದ ಜೈನ್ ಹವಾಲ ಡೈರಿಗೆ ಜೀವತುಂಬಿದವರೇ ಪಿವಿಎನ್ ಎಂಬ ಆರೋಪ ಇದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್  ಜೈನ್ ಹವಾಲ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಆದೇಶ ನೀಡಿತ್ತು. ರಾಜಕೀಯ ಕ್ಷೇತ್ರದ ಘಟಾನುಘಟಿಗಳಾದ ಎಲ್.ಕೆ. ಅಡ್ವಾಣಿ, ಅರ್ಜುನ್‌ಸಿಂಗ್, ಮಾಧವರಾವ್ ಸಿಂಧಿಯಾ, ಕಮಲ್‌ನಾಥ್ ಸೇರಿದಂತೆ 115 ಹೆಸರುಗಳು ಜೈನ್ ಹವಾಲ ಡೈರಿಯಲ್ಲಿ ಕಾಣಿಸಿಕೊಂಡಿದ್ದವು. ಈ ಮೂಲಕ ನರಸಿಂಹರಾವ್ ಅವರು ಒಂದೇ ಏಟಿಗೆ ತನ್ನೆಲ್ಲಾ ರಾಜಕೀಯ ವಿರೋಧಿಗಳನ್ನು ಕಟ್ಟಿಹಾಕಿದ್ದರು. ಮುಂದೊಂದು ದಿನ ಆರೋಪಿಗಳೆಲ್ಲರನ್ನೂ ದೆಹಲಿ ಹೈಕೋರ್ಟ್ ಖುಲಾಸೆಗೊಳಿಸಿತ್ತು.

ಎಚ್.ಡಿ.ದೇವೇಗೌಡ
ಎಚ್.ಡಿ. ದೇವೇಗೌಡರು ಸಿಬಿಐ ಅಸ್ತ್ರದ ದೌರ್ಬಲ್ಯಕ್ಕೆ ಬೀಳದೆ ಹೋಗಿದ್ದರೆ ಇನ್ನಷ್ಟು ಕಾಲ ಪ್ರಧಾನಿ ಪಟ್ಟದಲ್ಲಿ ಮುಂದುವರಿ ಯುತ್ತಿದ್ದರೋ ಏನೋ? ಮೂಗುದಾರ ಹಾಕಿ ಎಳೆಯುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಅವರನ್ನು ಮಣಿಸಲು ಗೌಡರು ಸಿಬಿಐ ಬಳಸಿಕೊಂಡರು. ಆದಾಯ ಮೀರಿದ ಆಸ್ತಿಯ ತನಿಖೆಯ ಜತೆಯಲ್ಲಿ ಎಂದೋ ನಡೆದು ಹೋಗಿದ್ದ ಅವರ ಸಹಾಯಕನ ಕೊಲೆ ಆರೋಪದ ತನಿಖೆಗೂ ಸಿಬಿಐ ಜೀವ ನೀಡಿತು. ಗೌಡರ ತಾಳಕ್ಕೆ ತಕ್ಕಂತೆ ಕುಣಿದವರು ಆಗಿನ ಸಿಬಿಐ ನಿರ್ದೇಶಕ ಜೋಗಿಂದರ್‌ಸಿಂಗ್. ಅಷ್ಟೇ ಸಾಕಿತ್ತು, ‘ಮುದುಕ ಅವಸರದಲ್ಲಿರುವ ಹಾಗಿದೆ’ ಎಂದು ಗೊಣಗಿದ ಕೇಸರಿ ಕಾಂಗ್ರೆಸ್ ಬೆಂಬಲ ಹಿಂತೆಗೆದುಕೊಂಡೇ ಬಿಟ್ಟರು.

ಅಟಲ ಬಿಹಾರಿ ವಾಜಪೇಯಿ
2002ರ ಜೂನ್ ತಿಂಗಳ ಮೊದಲ ವಾರದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ದೆಹಲಿಯ ತೆಹೆಲ್ಕಾ ಕಚೇರಿಯ ಮೇಲೆ ದಾಳಿ ನಡೆಸಿ ಅದರ ವರದಿಗಾರ ಕುಮಾರ್ ಬಾದಲ್ ಅವರನ್ನು ಬಂಧಿಸಿತ್ತು. ಶಹರಾನಪುರದಲ್ಲಿ ಮೂರು ಚಿರತೆಗಳನ್ನು ಕೊಂದುಹಾಕಿದ್ದಾನೆ ಎಂಬುದು ಆ ವರದಿಗಾರನ ವಿರುದ್ದದ ಆರೋಪ.  ಸಿಬಿಐನಲ್ಲಿ ಹಠಾತ್ತನೆ ಹುಟ್ಟಿಕೊಂಡ ಈ ಚಿರತೆ ಪ್ರೀತಿಗೆ ಕಾರಣ? ಈ ದಾಳಿ ನಡೆದ ದಿನವೇ ತೆಹೆಲ್ಕಾ ಮುಖ್ಯಸ್ಥ ತರುಣ್ ತೇಜಪಾಲ್ ಅವರು ವೆಂಕಟಸ್ವಾಮಿ ಆಯೋಗದ ಮುಂದೆ ಹಾಜರಾಗಬೇಕಾಗಿತ್ತು. ಕುಟುಕು ಕಾರ್ಯಾಚರಣೆ ಮೂಲಕ ಬಿಜೆಪಿ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಮತ್ತು ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ತರುಣ್ ತೇಜಪಾಲ್ ಹಗರಣದಲ್ಲಿ ಸಿಲುಕಿಸಿದ್ದರು.  ಆ ಹಗರಣದ ತನಿಖೆಗಾಗಿಯೇ ವೆಂಕಟಸ್ವಾಮಿ ಆಯೋಗವನ್ನು ಕೇಂದ್ರ ಸರ್ಕಾರ ನೇಮಿಸಿದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.