ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಇತ್ತೀಚೆಗೆ 3 ಬಾರಿ ವಿಡಿಯೋ ಸಂವಾದ ನಡೆಸಿದರು. `ಕುಡಿಯುವ ನೀರಿನ ಪರಿಸ್ಥಿತಿ ಹೇಗಿದೆ?~ ಎಂದು ಅವರು ಕೇಳಿದಾಗ ಪ್ರತಿಬಾರಿ ಅಧಿಕಾರಿಗಳು ನೀಡಿದ್ದ ಸಿದ್ಧ ಉತ್ತರ: ` ಸಮಸ್ಯೆ ಏನಿಲ್ಲ ಸರ್, ಎಲ್ಲ ಚೆನ್ನಾಗಿದೆ~. ಆದರೆ ಅಧಿಕಾರಿಗಳು ಹೇಳುವುದಕ್ಕೂ ವಾಸ್ತವ ಸ್ಥಿತಿಗೂ ವ್ಯತ್ಯಾಸವಿದೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ಬರಗಾಲದ ಛಾಯೆ ಆವರಿಸಿದೆ. ಕುಡಿಯುವ ನೀರಿನ ಬವಣೆ ಉಲ್ಭಣಿಸಿದೆ. ಕೊಡ ನೀರಿಗೂ ಪರದಾಡುವ ಸ್ಥಿತಿ ಇದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಎಲ್ಲ ಸೂಚನೆಗಳು ಸ್ಪಷ್ಟವಾಗಿವೆ.
ಬೇಸಿಗೆಯಲ್ಲಿ ನೀರಿನ ಸಮಸ್ಯೆ ಸಹಜ. ಆದರೆ ಈ ಬಾರಿ ಈಗಾಗಲೇ 123 ತಾಲ್ಲೂಕುಗಳು ಬರಗಾಲಕ್ಕೆ ತುತ್ತಾಗಿರುವುದರಿಂದ ಫೆಬ್ರುವರಿಯಿಂದಲೇ ನೀರಿನ ಹಾಹಾಕಾರ ಶುರುವಾಗಿದೆ. ಇದನ್ನು ಅರ್ಥಮಾಡಿಕೊಳ್ಳುವ ಕಾಳಜಿ ಸಚಿವರಿಗಾಗಲಿ, ಅಧಿಕಾರಿಗಳಿಗಾಗಲಿ ಇಲ್ಲ.
ಮೇಲಿನವರು ಕೇಳಿದರೆ ಅವರದು ಸದಾ `ಎಲ್ಲವೂ ಸರಿಯಾಗಿದೆ~ ಎಂಬ ಕಾಟಾಚಾರದ ಉತ್ತರ. ಪರಿಹಾರ ಕಾರ್ಯಗಳ ಉಸ್ತುವಾರಿ ನೋಡಬೇಕಾದ ಚುನಾಯಿತ ಪ್ರತಿನಿಧಿಗಳಾದ ಸಚಿವರು, ಶಾಸಕರೇ ನಿರ್ಲಕ್ಷ್ಯ ವಹಿಸಿರುವುದರಿಂದ ಕೆಳ ಹಂತದ ಅಧಿಕಾರಿಗಳು ಹೇಳಿದ್ದನ್ನೇ ಕೇಳಿಕೊಂಡು `ಎಲ್ಲವೂ ಸರಿಯಾಗಿದೆ~ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಕೆಲ ಅಧಿಕಾರಿಗಳಿಗೆ ಈಗಲೂ ಸಮಸ್ಯೆಯ ಗಂಭೀರತೆ ಅರ್ಥವಾಗಿಲ್ಲ. ಇದೆಲ್ಲ ಸಹಜ ಎಂಬಂತೆ ಆರಾಮವಾಗಿದ್ದಾರೆ. `ಸಮಸ್ಯೆ ನಿವಾರಣೆಗೆ ಸರ್ಕಾರ ಏನು ಕ್ರಮಕೈಗೊಂಡಿದೆ?~ ಎಂದು ಪ್ರಶ್ನಿಸಿದಾಗ, `ಎಲ್ಲೂ ಸಮಸ್ಯೆ ಇಲ್ಲ. ನೀರಿಲ್ಲದೆ ಜನರು ಸತ್ತಿರುವ ಒಂದು ಉದಾಹರಣೆ ಇಲ್ಲ~ ಎಂದು ಅಧಿಕಾರಿಯೊಬ್ಬರು ಬೇಜವಾಬ್ದಾರಿಯ ಉತ್ತರ ನೀಡಿದರು.
ಸರ್ಕಾರವೇನೋ ಬರ ಪರಿಹಾರ ಕಾರ್ಯಗಳಿಗೆ ಇದುವರೆಗೆ 364.72 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿಗಳ ಬಳಿ ಇನ್ನೂ 175.48 ಕೋಟಿ ರೂಪಾಯಿ ಹಣವಿದೆ. ಸದ್ಯಕ್ಕೆ ಯಾವ ಜಿಲ್ಲೆಯಲ್ಲಿಯೂ ಹಣದ ಕೊರತೆ ಇಲ್ಲ. ಸಮಸ್ಯೆಯ ನಿರ್ವಹಣೆಯಲ್ಲಿನ ವೈಫಲ್ಯವೇ ಈಗಿನ ಹಾಹಾಕಾರಕ್ಕೆ ಪ್ರಮುಖ ಕಾರಣ.
ನದಿ ಮೂಲಗಳು ಇರುವ ಪ್ರದೇಶಗಳಲ್ಲಿ ನೀರಿನ ಪೂರೈಕೆಗೆ ತೊಂದರೆ ಇಲ್ಲ, ಆದರೆ ಕೊಳವೆ ಬಾವಿಗಳನ್ನೇ ಅವಲಂಬಿಸಿರುವ ಜಿಲ್ಲೆಗಳಲ್ಲಿ ಜಲಕ್ಷಾಮ ಉಂಟಾಗಿದೆ. ಕೆಲವೆಡೆ ನೀರಿದ್ದರೂ, ಪೂರೈಕೆಯಲ್ಲಿನ ಅವ್ಯವಸ್ಥೆಯಿಂದಾಗಿ ಸಮಸ್ಯೆಯಾಗಿದೆ.
ಇದರ ಜೊತೆಗೆ ವಿದ್ಯುತ್ ಕಣ್ಣಾಮುಚ್ಚಾಲೆ ಮುಂದುವರಿದಿದೆ. ಕೊಳವೆ ಬಾವಿಗಳು ಬತ್ತಿ ಹೋಗಿರುವುದರಿಂದ ಖಾಸಗಿ ಕೊಳವೆ ಬಾವಿಗಳನ್ನು ಸರ್ಕಾರ ವಶಕ್ಕೆ ಪಡೆದು, ಅವುಗಳ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಅಷ್ಟೇ ಅಲ್ಲದೆ ರಾಜಧಾನಿ ಬೆಂಗಳೂರು ಸೇರಿದಂತೆ ನಗರ-ಪಟ್ಟಣ ಪ್ರದೇಶಗಳಲ್ಲೂ ಜನ ನೀರಿಗಾಗಿ ಪರದಾಡುತ್ತಿದ್ದಾರೆ. ಸರ್ಕಾರವೇ ನೀಡುವ ಮಾಹಿತಿ ಪ್ರಕಾರ 4,853 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಸದ್ಯ 296 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಉಳಿದ ಗ್ರಾಮಗಳಲ್ಲಿ ನೀರೇ ಇಲ್ಲ.
ಕಳೆದ ವರ್ಷ ಮುಂಗಾರು-ಹಿಂಗಾರು ಮಳೆಯ ಕೊರತೆಯಿಂದಾಗಿ ಕೆರೆಗಳು ಭರ್ತಿಯಾಗಲಿಲ್ಲ. ಅಲ್ಲದೆ ಜಲಾಶಯಗಳೂ ಪೂರ್ಣ ಪ್ರಮಾಣದಲ್ಲಿ ತುಂಬಲಿಲ್ಲ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಬರುವ 3,475 ಕೆರೆಗಳ ಪೈಕಿ 1,242 ಕೆರೆಗಳಿಗೆ ನೀರು ಬಂದಿಲ್ಲ. 1294 ಕೆರೆಗಳಲ್ಲಿ ಶೇ 50ಕ್ಕಿಂತ ಕಡಿಮೆ ನೀರು ಸಂಗ್ರಹವಾಗಿತ್ತು.
ಕೇವಲ 195 ಕೆರೆಗಳು ಮಾತ್ರ ಪೂರ್ತಿ ಭರ್ತಿಯಾಗಿದ್ದವು. ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಬತ್ತಿ ಹೋಗುತ್ತಿರುವ ಕೊಳವೆ ಬಾವಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸದಾಗಿ ಕೊಳವೆಬಾವಿ ಕೊರೆಸಿದರೂ ಎಷ್ಟು ದಿನ ನೀರು ಲಭ್ಯವಾಗುತ್ತದೆ ಎಂಬ ಖಾತರಿ ಇಲ್ಲ. ಹೀಗಾಗಿ ಕುಡಿಯುವ ನೀರಿನ ಪೂರೈಕೆ ದೃಷ್ಟಿಯಿಂದ 5,655 ಕೊಳವೆಬಾವಿ ಕೊರೆಸಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ಹತ್ತು ಸಚಿವರ ಕ್ಷೇತ್ರಗಳೇ ಬರಗಾಲಕ್ಕೆ ತುತ್ತಾಗಿವೆ. ಕನಿಷ್ಠ ಪಕ್ಷ ಅವರ ಕ್ಷೇತ್ರಗಳಲ್ಲಿಯಾದರೂ ಬರ ಪರಿಹಾರ ಕಾರ್ಯಗಳ ಮೇಲ್ವಿಚಾರಣೆಯನ್ನು ಸಚಿವರು ಮಾಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಂತೂ ಜಿಲ್ಲೆಗಳಿಗೆ ಭೇಟಿ ನೀಡುತ್ತಿಲ್ಲ.
ಬರಪೀಡಿತ ತಾಲ್ಲೂಕುಗಳ ಘೋಷಣೆಯಾಗಿ ನಾಲ್ಕು ತಿಂಗಳಾದರೂ, ಇದುವರೆಗೂ ಸುಮ್ಮನಿದ್ದ ಸಚಿವರು ಟೀಕೆಗಳು ಬಂದ ನಂತರ ಈಗ ಜಿಲ್ಲೆಗಳಿಗೆ ಭೇಟಿ ನೀಡಲು ಮುಂದಾಗಿದ್ದಾರೆ.
ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಈಗಾಗಲೇ ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಿದೆ. ಕುಡಿಯುವ ನೀರಿನ ಸಮಸ್ಯೆಗಳಿಗೆ ಸ್ಪಂದಿಸಲು ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ. ಜಿಲ್ಲಾಧಿಕಾರಿಗಳಿಂದ ಬರುವ ಬೇಡಿಕೆಯನ್ನು ಆಧರಿಸಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ.
ಕೇಂದ್ರದ ನೆರವು: ಕಳೆದ ನವೆಂಬರ್‌ನಲ್ಲಿಯೇ 2600 ಕೋಟಿ ರೂಪಾಯಿ ನೆರವು ಕೋರಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಕೇಂದ್ರದ ತಂಡ ರಾಜ್ಯಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ ನಂತರ ವರದಿಯನ್ನೂ ಸಲ್ಲಿಸಿದೆ. ಆದರೆ ಇದುವರೆಗೆ ಹಣ ಬಿಡುಗಡೆಯಾಗಿಲ್ಲ.
ಪ್ರಕೃತಿ ವಿಕೋಪ ನಿಧಿಯಿಂದ ಕೇಂದ್ರ ಸರ್ಕಾರ 126.76 ಕೋಟಿ ರೂಪಾಯಿ ನೀಡಿರುವುದು ಬಿಟ್ಟರೆ, ರಾಜ್ಯಕ್ಕೆ ವಿಶೇಷ ನೆರವು ನೀಡಿಲ್ಲ. ಕೇಂದ್ರದ ಮೇಲೆ ಒತ್ತಡ ಹೇರುವ, ಕನಿಷ್ಠ ಪಕ್ಷ, ನಿಯೋಗವನ್ನು ತೆಗೆದುಕೊಂಡು ಹೋಗಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವೂ ಆಗಿಲ್ಲ.
ಕುಡಿಯುವ ನೀರಿಗೆ ಅನುದಾನ
ರಾಜ್ಯದಲ್ಲಿನ ಒಟ್ಟು ಗ್ರಾಮೀಣ ಜನವಸತಿಗಳು 59,630 ನಳ ನೀರು ಸರಬರಾಜು ಯೋಜನೆಗಳು 25,000 ಕಿರು ನೀರು ಸರಬರಾಜು ಯೋಜನೆಗಳು 35,000 ಕೈಪಂಪು ಕೊಳವೆಬಾವಿ ಯೋಜನೆಗಳು 2.20 ಲಕ್ಷ |
2011-12ನೇ ಸಾಲಿನಲ್ಲಿ ರಾಜ್ಯ ಮತ್ತು ಕೇಂದ್ರ ವಲಯದಲ್ಲಿ ಕುಡಿಯುವ ನೀರಿನ ವಿವಿಧ ಯೋಜನೆಗಳ ಅನುಷ್ಠಾನಕ್ಕೆ 1500 ಕೋಟಿ ರೂಪಾಯಿ ಮೊತ್ತದ ಕ್ರಿಯಾ ಯೋಜನೆ ರೂಪಿಸಲಾಗಿತ್ತು.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಒಟ್ಟು 27,765 ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದುವರೆಗೆ 1,424 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಕಳೆದ ಮಾರ್ಚ್‌ವರೆಗೆ 906 ಕೋಟಿ ರೂಪಾಯಿ ವೆಚ್ಚವಾಗಿದೆ.
ಇದಲ್ಲದೆ 13ನೇ ಹಣಕಾಸು ಯೋಜನೆಯಡಿ 75 ಕೋಟಿ ರೂಪಾಯಿ ವಿಶೇಷ ಅನುದಾನ ಲಭ್ಯವಾಗಿದ್ದು, ಫ್ಲೋರೈಡ್ ಇರುವ ಕಡೆ ನೀರು ಶುದ್ಧೀಕರಣ ಘಟಕಗಳ ಸ್ಥಾಪನೆಯ ಕಾಮಗಾರಿಗಳನ್ನು ಆರಂಭಿಸಲಾಗಿದೆ.
ಬಹುಗ್ರಾಮ ಯೋಜನೆಯಡಿ ಸಮಸ್ಯಾತ್ಮಕ ಜನವಸತಿಗಳಿಗೆ ಶಾಶ್ವತ ಮತ್ತು ಸುರಕ್ಷಿತವಾದ ಕುಡಿಯುವ ನೀರು ಪೂರೈಸಲು ರೂಪಿಸಿರುವ 2,590 ಕೋಟಿ ರೂಪಾಯಿ ಮೊತ್ತದ ಯೋಜನೆಗೆ ಕಳೆದ ಅಕ್ಟೋಬರ್‌ನಲ್ಲಿ ಅನುಮೋದನೆ ನೀಡಲಾಗಿದ್ದು, 23 ಜಿಲ್ಲೆಗಳ 4112 ಜನವಸತಿಗಳಿಗೆ ಇದರಿಂದ ಅನುಕೂಲವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.