ADVERTISEMENT

ಪೊಲೀಸರ ನೆರಳಲ್ಲೇ ವ್ಯವಹಾರ!

ರಾಜೇಶ್ ರೈ ಚಟ್ಲ
Published 31 ಮಾರ್ಚ್ 2017, 19:08 IST
Last Updated 31 ಮಾರ್ಚ್ 2017, 19:08 IST
ಪೊಲೀಸರ ನೆರಳಲ್ಲೇ ವ್ಯವಹಾರ!
ಪೊಲೀಸರ ನೆರಳಲ್ಲೇ ವ್ಯವಹಾರ!   

ಮಾಂಸಪ್ರಿಯರ ಸ್ವಾದ ತಣಿಸಲು ಬೆರಳೆಣಿಕೆಯ ಕಸಾಯಿಖಾನೆಗಳಷ್ಟೇ ಕರ್ನಾಟಕದಲ್ಲಿವೆ. ಪಟ್ಟಣ ಪ್ರದೇಶಗಳನ್ನು ಕೇಂದ್ರೀಕರಿಸಿರುವ ಇವು, ಸಾಂಪ್ರದಾಯಿಕ ಶೈಲಿಯಲ್ಲಿ ಕಾರ್ಯ ಎಸಗುತ್ತಿವೆ. ಜನಸಂಖ್ಯೆಗೆ ಅನುಗುಣವಾಗಿ ಮಾಂಸ ಪೂರೈಸಲು ಸೀಮಿತ ಸಂಖ್ಯೆಯಲ್ಲಿರುವ ಕಸಾಯಿಖಾನೆಗಳಿಗೆ ಸಾಧ್ಯವಾಗದ ಕಾರಣಕ್ಕೆ ಹಲವು ಮನೆಗಳು ಈಗ ಕಸಾಯಿಖಾನೆಗಳಾಗಿ ಬದಲಾಗಿವೆ. ಶೆಡ್‌ಗಳನ್ನೇ ವಧಾಗಾರವಾಗಿ ಪರಿವರ್ತಿಸಿ ಮಾಂಸ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಿದೆ.

‘ಅನಧಿಕೃತವಾಗಿ ಪ್ರಾಣಿಗಳನ್ನು ಕಡಿದು ಮಾಂಸ ಮಾರಾಟ ಮಾಡುವ ವ್ಯವಹಾರಕ್ಕೆ ವ್ಯವಸ್ಥೆಯ ಬೆಂಬಲವೂ ಇದೆ. ಕಾನೂನು ಪಾಲನೆ ನೆಪದಲ್ಲಿ ಅಧಿಕಾರಿಗಳು ದಾಳಿ ನಡೆಸಿದಾಗ ಅನಧಿಕೃತ ಎಂದು ದಾಖಲಾಗುತ್ತದೆ. ಬಹುತೇಕ ಕಡೆಗಳಲ್ಲಿ ಪೊಲೀಸರ ನೆರಳಿನಲ್ಲೇ ನಡೆಯುವ ‘ಅಧಿಕೃತ’ ವ್ಯವಹಾರವಿದು’ ಎನ್ನುತ್ತಾರೆ ರಾಜ್ಯ ಮಾಂಸ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಲಿ ಹಸನ್‌.

ಕಸಾಯಿಖಾನೆಗಳಿಂದ ಬೇಡಿಕೆ  ಪ್ರಮಾಣದಷ್ಟು ಮಾಂಸ ಪೂರೈಕೆ ಸಾಧ್ಯವಾಗುತ್ತಿಲ್ಲ. ಹೀಗಿದ್ದಾಗ ಮಾಂಸ ಎಲ್ಲಿಂದ ಲಭ್ಯವಾಗಬೇಕು ಎನ್ನುವ ಅವರ ಪ್ರಶ್ನೆ, ಅನಧಿಕೃತ ಕಸಾಯಿಖಾನೆಗಳು ಸಾಕಷ್ಟಿವೆ ಎಂಬುದನ್ನು ಬಿಂಬಿಸುತ್ತದೆ.

ADVERTISEMENT

‘13 ವರ್ಷ ದಾಟಿದ ಎತ್ತು, ಎಮ್ಮೆ, ಕೋಣ ಹಾಗೂ ಹಾಲು ಕೊಡಲಾಗದ ಗೊಡ್ಡು ಹಸುವನ್ನು ವಧಿಸುವ ಮೊದಲು ಪಶು ವೈದ್ಯರು ತಪಾಸಣೆ ನಡೆಸುತ್ತಾರೆ. ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಮೊದಲು ಗುರುತು ಹಾಕಿದ ಪ್ರಾಣಿಯನ್ನು ಮರುದಿನ ಬೆಳಿಗ್ಗೆ ಕಡಿಯಲಾಗುತ್ತದೆ. ವೈದ್ಯರು ಮತ್ತೆ ಬಂದು  ಮಾಂಸ ಮಾರಾಟಕ್ಕೆ ಯೋಗ್ಯ ಎಂದು ದೃಢೀಕರಿಸಿ ಮೊಹರು ಹಾಕಿದ ಬಳಿಕ ಅದು ಅಂಗಡಿಗಳಿಗೆ ಪೂರೈಕೆಯಾಗುತ್ತದೆ. ಆದರೆ, ಅನಧಿಕೃತವಾಗಿ ಕಡಿಯಲಾಗುವ ಪ್ರಾಣಿಗಳಿಗೆ ಈ ನಿಯಮಗಳು ಬಾಧಕವಲ್ಲ’ ಎನ್ನುತ್ತಾರೆ ಹಸನ್‌.

‘ಪರವಾನಗಿ ಹೊಂದಿದ ಕಸಾಯಿಖಾನೆಗಳಿಗೆ ಪ್ರಾಣಿಗಳ ಸಾಗಣೆ ಮತ್ತೊಂದು ಸಮಸ್ಯೆ. ದೊಡ್ಡ ವಾಹನದಲ್ಲಿ ಆರು ಜಾನುವಾರುಗಳ ಸಾಗಣೆಗೆ ಮಾತ್ರ ಅನುಮತಿ ಇದೆ. 14 ಜಾನುವಾರುಗಳ ಸಾಗಣೆಗೆ ಅವಕಾಶ ಮಾಡಿಕೊಡಬೇಕು ಎಂಬುದು ನಮ್ಮ ಬೇಡಿಕೆ. ಜಾನುವಾರು ಸಂತೆ ಏರ್ಪಡಿಸಿದರೆ ಖರೀದಿಸಲು ಅನುಕೂಲವಾಗುತ್ತದೆ. ಇದರಿಂದ ಅಕ್ರಮ ಸಾಗಣೆ ನಿಲ್ಲಿಸಲು ಸಾಧ್ಯ’ ಎಂದೂ ಹೇಳುತ್ತಾರೆ.

‘ಸದ್ಯ ದನದ ಮಾಂಸ ಕೆ.ಜಿ.ಗೆ ₹ 200 ದರದಲ್ಲಿ ಮಾರಾಟವಾಗುತ್ತದೆ. ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸಿ ಮಾಂಸ ಮಾಡಿ ಮಾರಾಟಕ್ಕೆ ಅಂಗಡಿಗೆ ತರುವಷ್ಟರಲ್ಲಿ ಕೆ.ಜಿ.ಗೆ ₹ 179ರಿಂದ ₹ 180 ವೆಚ್ಚ ತಗಲುತ್ತದೆ. ಹೀಗಾಗಿ ಇದು ದೊಡ್ಡ ಲಾಭದ ವ್ಯವಹಾರ ಏನಲ್ಲ. ಅನೇಕರು ಪೂರ್ವಜರ ವ್ಯವಹಾರ ಮುಂದುವರಿಸಿಕೊಂಡು ಬರುತ್ತಿದ್ದಾರೆ’ ಎನ್ನುತ್ತಾರೆ ಹಸನ್‌.

ರಾಜಧಾನಿ ಬೆಂಗಳೂರಿನ ಮಾಂಸ ಬೇಡಿಕೆ ಪೂರೈಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಯಾಂತ್ರೀಕೃತ ಕಸಾಯಿಖಾನೆ ನಿರ್ಮಿಸುತ್ತಿದೆ. ಅದರ ಬೆನ್ನಲ್ಲೇ ವಿರೋಧಿ ಹೋರಾಟವೂ ನಡೆಯುತ್ತಿದೆ. ಕಾರ್ಯ ನಿರ್ವಹಿಸುವ ಚೆನ್ನೈಯ ಕಂಪೆನಿಗೆ 13 ವರ್ಷ ಅವಧಿಗೆ ಅಂದಾಜು ₹ 257 ಕೋಟಿ ನೀಡಲು ಒಪ್ಪಂದವೂ ಆಗಿದೆ. ಆದರೆ, ಗುತ್ತಿಗೆ ವಹಿಸಿಕೊಂಡ ಕಂಪೆನಿ ಮತ್ತು ಬಿಬಿಎಂಪಿ ನಡುವಿನ ಹಣಕಾಸು ವಿವಾದ  ಹೈಕೋರ್ಟ್‌ನಲ್ಲಿದೆ.

‘ಭಾರಿ ಸಾಮರ್ಥ್ಯದ ಯಂತ್ರಗಳನ್ನು ಅಳವಡಿಸುವುದರಿಂದ ಹೆಚ್ಚು ಕಾರ್ಮಿಕರ ಅಗತ್ಯವಿಲ್ಲ. ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸುವ ವ್ಯವಸ್ಥೆ ಅಳವಡಿಸುವುದರಿಂದ ಸುತ್ತಮುತ್ತಲಿನ ಪ್ರದೇಶಕ್ಕೆ ತೊಂದರೆ ಇಲ್ಲ. ಅಕ್ರಮ ಕಸಾಯಿಖಾನೆಗಳಿಗೂ ಕಡಿವಾಣ ಹಾಕಬಹುದು ಎಂಬ ಉದ್ದೇಶದಿಂದ ಈ ಬೃಹತ್‌ ಕಸಾಯಿಖಾನೆ ಆರಂಭಿಸಲಾಗುತ್ತಿದೆ. ಶುಚಿತ್ವ ಹಾಗೂ ಆರೋಗ್ಯಕರ ಮಾಂಸ ಉತ್ಪಾದನೆಗೆ ಇದರಿಂದ ಒತ್ತು ನೀಡಲು ಸಾಧ್ಯ’ ಎನ್ನುವ ವಿಶ್ವಾಸ ಬಿಬಿಎಂಪಿ ಜಂಟಿ ಆಯುಕ್ತ (ಆರೋಗ್ಯ) ಸರ್ಫಾಜ್‌ ಖಾನ್‌ ಅವರದ್ದು.

ಶಿವಾಜಿನಗರ ವ್ಯಾಪ್ತಿಯಲ್ಲಿ ಬ್ರಿಟಿಷರ ಕಾಲದಿಂದಲೂ ಸಾಂಪ್ರದಾಯಿಕ ಶೈಲಿಯ ಮೂರು ಕಸಾಯಿಖಾನೆಗಳಿವೆ. ಅವುಗಳನ್ನು ಸ್ಥಳಾಂತರಿಸಿ ಹಾರೋಹಳ್ಳಿಯಲ್ಲಿ ಆಧುನಿಕ ಕಸಾಯಿಖಾನೆ ನಿರ್ಮಿಸುವುದು ಉದ್ದೇಶ. ಇಲ್ಲಿ 40 ಎಕರೆ ಜಾಗದಲ್ಲಿ ಪ್ರತ್ಯೇಕ ಮೂರು ಶೆಡ್‌ಗಳನ್ನು ನಿರ್ಮಿಸಿ ಪ್ರಾಣಿಗಳನ್ನು ಕೊಲ್ಲುವ ವ್ಯವಸ್ಥೆ ಮಾಡಲಾಗುವುದು. ಕುರಿ, ಆಡುಗಳಿಗೆ ಒಂದು, ಹಂದಿಗಳಿಗೆ ಮತ್ತೊಂದು, ಎತ್ತು, ಎಮ್ಮೆ, ಕೋಣಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಗುತ್ತಿಗೆದಾರ  ಕಂಪೆನಿ ಸದ್ಯ ಒಂದೇ ಶೆಡ್‌ನಲ್ಲಿ ಕಸಾಯಿಖಾನೆ ನಡೆಸುತ್ತಿದೆ. ಅದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಅಷ್ಟು ದೂರ ಪ್ರಾಣಿಗಳನ್ನು ಕೊಂಡೊಯ್ದು ಮಾಂಸ ಸಂಸ್ಕರಿಸಿ ತರುವುದು ಕಷ್ಟ ಎನ್ನುವ ಅಭಿಪ್ರಾಯವೂ ಜನರಲ್ಲಿದೆ’  ಎಂದೂ ಅವರು ವಿವರಿಸುತ್ತಾರೆ.

‘ಬೆಂಗಳೂರಿನಲ್ಲಿ ಅನಧಿಕೃತವಾಗಿ ಸಾವಿರಕ್ಕೂ ಹೆಚ್ಚು ಕಸಾಯಿಖಾನೆಗಳಿವೆ. ಪರವಾನಗಿ ಇಲ್ಲದೆ ನಡೆಯುವ ಕಸಾಯಿಖಾನೆಗಳಿಂದ ಪರಿಸರಕ್ಕೆ ಹಾನಿ. ಇಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಪ್ರಾಣಿಗಳ ಹತ್ಯೆ ನಡೆಯುತ್ತದೆ. ಇದನ್ನು ನಿಯಂತ್ರಿಸುವುದೂ ದೊಡ್ಡ ಸವಾಲು’ ಎನ್ನುತ್ತಾರೆ ಬಿಬಿಎಂಪಿ ಪರ ವಕೀಲ ಕೆ.ಎನ್‌. ಪುಟ್ಟೇಗೌಡ.
‘ಹುಬ್ಬಳ್ಳಿ ಮತ್ತು ಧಾರವಾಡದಲ್ಲಿನ ಕಸಾಯಿಖಾನೆಗಳನ್ನು  ಮೂರು ವರ್ಷಕ್ಕೊಮ್ಮೆ ಟೆಂಡರ್‌ ನೀಡಲಾಗುತ್ತದೆ. ಪ್ರತಿದಿನ ಸರಾಸರಿ ನೂರು ಪ್ರಾಣಿಗಳನ್ನು ಇಲ್ಲಿ ವಧಿಸಲಾಗುತ್ತದೆ. ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆಯೂ ಇದೆ. ನಗರ ವ್ಯಾಪ್ತಿಯಲ್ಲಿರುವ ಅನಧಿಕೃತ ಕಸಾಯಿಖಾನೆಗಳ ಮಾಹಿತಿ ಇಲ್ಲ. ಸುತ್ತಲಿನ 5 ತಾಲ್ಲೂಕುಗಳಿಗೆ (ಧಾರವಾಡ ಜಿಲ್ಲೆ) ಅಗತ್ಯವಾದ ಮಾಂಸ ಪೂರೈಕೆ ಈ ಕಸಾಯಿಖಾನೆಗಳಿಂದ ಸಾಧ್ಯವೂ ಇಲ್ಲ. ಈ ಸ್ಥಿತಿ ರಾಜ್ಯದ ಇತರೆಡೆಗಳಲ್ಲೂ ಇದೆ’ ಎನ್ನುತ್ತಾರೆ ಹುಬ್ಬಳ್ಳಿ–ಧಾರವಾಡ ಮಹಾನಗರಪಾಲಿಕೆಯ ಪಶುವೈದ್ಯ ಡಾ. ಸಾಲಿ ಗೌಡರ.

*

45 ಸಿಎಂಸಿ ಮತ್ತು 5 ನಗರಪಾಲಿಕೆಗಳಲ್ಲಿ ಕಸಾಯಿಖಾನೆ ನಿರ್ಮಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.

ಈ ಪೈಕಿ, ಭೂಮಿ ಲಭ್ಯ ಇರುವ 9 ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿಸ್ಕೃತ ಯೋಜನಾ ವರದಿ ಸಿದ್ಧವಾಗಿದೆ

ಅವುಗಳೆಂದರೆ: ಹಾವೇರಿ, ದಾವಣಗೆರೆ, ಮಡಿಕೇರಿ, ಉಡುಪಿ, ಕೊಪ್ಪಳ, ಗದಗ, ರಾಣೆಬೆನ್ನೂರು, ಹುಬ್ಬಳ್ಳಿ–ಧಾರವಾಡ, ಬಳ್ಳಾರಿ

**

ಉಸ್ತುವಾರಿಗೆ ಸಮಿತಿ

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ನಿರ್ದೇಶನದಂತೆ ಕಸಾಯಿಖಾನೆಗಳ ನಿರ್ಮಾಣದ ಉಸ್ತುವಾರಿಗೆ ‘ರಾಜ್ಯ ಮಟ್ಟದ ಕಸಾಯಿಖಾನೆ ಸಮಿತಿ’ಯನ್ನು ರಾಜ್ಯ ಸರ್ಕಾರ 2012ರಲ್ಲಿ ರಚಿಸಿದೆ.

1960ರ ಪ್ರಾಣಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ ರಚಿಸಲಾದ ನಿಯಮಗಳ ಪಾಲನೆಯನ್ನು ಈ ಸಮಿತಿ  ಪರಿಶೀಲಿಸುತ್ತದೆ. ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಈ ಸಮಿತಿಯ ಅಧ್ಯಕ್ಷ. ಸ್ಥಳೀಯ ಸಂಸ್ಥೆಗಳಲ್ಲಿರುವ ಕಸಾಯಿಖಾನೆಗಳ ಸ್ಥಿತಿಗತಿ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು, ಆಹಾರ ಸುರಕ್ಷಾ ನಿರೀಕ್ಷಕರಿಂದ ವರದಿ ತರಿಸಿಕೊಳ್ಳಬೇಕು.

ಜನವಸತಿ ಪ್ರದೇಶಗಳಲ್ಲಿರುವ ಹಳೆ ಕಸಾಯಿಖಾನೆಗಳನ್ನು ಸ್ಥಳಾಂತರಿಸುವ ಜೊತೆಗೆ ಆಧುನೀಕರಿಸಿ ನಿರ್ಮಿಸಲು ಶಿಫಾರಸು ಮಾಡಬೇಕು. ತ್ಯಾಜ್ಯ ವಿಲೇವಾರಿ, ಸ್ವಚ್ಛತೆ, ಪ್ರಾಣಿ ದೌರ್ಜನ್ಯ ತಡೆ ಬಗ್ಗೆ ನಿಗಾ ವಹಿಸಬೇಕು. ಇವೆಲ್ಲಕ್ಕೆ ಸಂಬಂಧಿಸಿದ  ವಿವರವಾದ ವರದಿಯನ್ನು ಕೇಂದ್ರ ಸಮಿತಿಗೆ ಕಳುಹಿಸಬೇಕು. ಈ ಸಮಿತಿ ಅನುಮತಿ ನೀಡಿದ ಬಳಿಕವಷ್ಟೇ ಸ್ಥಳೀಯ ಸಂಸ್ಥೆಗಳಲ್ಲಿ ಕಸಾಯಿಖಾನೆ ನಿರ್ಮಿಸಲು ಸಾಧ್ಯ. ಕಾನೂನುಬಾಹಿರ ಕಸಾಯಿಖಾನೆಗಳನ್ನು ತಡೆಯುವ ಹೊಣೆಯೂ ಈ ಸಮಿತಿಗೆ ಇದೆ.

**

ಆರಂಭಕ್ಕೆ ವಿಳಂಬವೇಕೆ?

ಹೊಸಪೇಟೆ, ಚಿತ್ರದುರ್ಗ, ಮೈಸೂರು ಮತ್ತು ಚಾಮರಾಜನಗರದಲ್ಲಿ ಅತ್ಯಾಧುನಿಕ ಸೌಕರ್ಯ­ಗಳ ಸುಸಜ್ಜಿತ ಕಸಾಯಿಖಾನೆಗಳ ನಿರ್ಮಾಣಕ್ಕೆ ಕೇಂದ್ರ ಆಹಾರ ಸಂಸ್ಕರಣಾ ಉದ್ಯಮ ಸಚಿವಾಲಯ 2014ರಲ್ಲಿ ಮಂಜೂರಾತಿ ನೀಡಿದೆ. ಆದರೆ, ಎರಡು ವರ್ಷ ಗತಿಸಿದರೂ ಹೊಸಪೇಟೆ ಹೊರತುಪಡಿಸಿ ಉಳಿದ ಕಡೆಗಳಲ್ಲಿ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿಲ್ಲ. ಈ ಕಸಾಯಿಖಾನೆಗಳ ನಿರ್ಮಾಣಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರಾಕ್ಷೇಪಣಾ ಪತ್ರ ನೀಡಿದೆ.

ಮೈಸೂರು, ಚಿತ್ರದುರ್ಗದ ಕಸಾಯಿಖಾನೆಗಳ ನಿರ್ಮಾಣಕ್ಕೆ ಟೆಂಡರ್‌ ಆಹ್ವಾನಿಸಲಾಗಿದೆ. ಮೈಸೂರಿನ ಕಸಾಯಿಖಾನೆಯನ್ನು ಚೆನ್ನೈನ ಅಬಾಟ್ಟೈರ್‌ ಎಂಬ ಸಂಸ್ಥೆ ವಹಿಸಿಕೊಂಡಿದೆ. ಆದರೆ, ಚಾಮರಾಜನಗರದಲ್ಲಿ ನಿರ್ಮಾಣಕ್ಕೆ ರಾಜ್ಯಮಟ್ಟದ ತಾಂತ್ರಿಕ ಸಮಿತಿ ಇನ್ನಷ್ಟೇ ಹಸಿರು ನಿಶಾನೆ ನೀಡಬೇಕಿದೆ. ಈ ಎಲ್ಲ ಕಾರಣಗಳಿಂದ ಕಸಾಯಿಖಾನೆಗಳ ನಿರ್ಮಾಣ ವಿಳಂಬವಾಗುತ್ತಿದೆ ಎನ್ನುವ ಸಮರ್ಥನೆ ಪೌರಾಡಳಿತ ಇಲಾಖೆಯದ್ದು.

*

-ರಾಜೇಶ್‌ ರೈ ಚಟ್ಲ,

ಪ್ರಜಾವಾಣಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.