ADVERTISEMENT

`ಪೊಲೀಸ್' ಎಂಬ `ಕವಚ'ದ ಒಳಗೆ...

ಡಾ.ಕೆ.ಎಸ್.ಪವಿತ್ರ, ಮನೋವೈದ್ಯೆ
Published 1 ಫೆಬ್ರುವರಿ 2013, 19:59 IST
Last Updated 1 ಫೆಬ್ರುವರಿ 2013, 19:59 IST

ಜನವರಿ 18- ಮಹಿಳಾ ಕಾನ್‌ಸ್ಟೆಬಲ್ ಒಬ್ಬರ ಠಾಣೆಯೊಳಗೆಯೇ ನಡೆದ ಆತ್ಮಹತ್ಯೆ, ಜನವರಿ 24 - ನಾಗಾಲ್ಯಾಂಡ್ ಸುರಕ್ಷಾಪಡೆಯ ಯುವ ಪೋಲೀಸ್, ಚಾಣಕ್ಯಪುರಿಯಲ್ಲಿ ಠಾಣೆಯಲ್ಲೇ ನೇಣು ಬಿಗಿದುಕೊಂಡಿದ್ದು,  ಜನವರಿ 27- 30 ಘಂಟೆಗಳ ದೀರ್ಘ ಅವಧಿಯ ಕೆಲಸದ ನಂತರ ಕೇಳಿದ ರಜೆ ಕೊಡದಿದ್ದಾಗ ಮೇಲಧಿಕಾರಿಯನ್ನು  ಗುಂಡು ಹೊಡೆದು ಕಾನ್‌ಸ್ಟೆಬಲ್ ಕೊಂದ ಘಟನೆ. ಹತ್ತು ದಿನಗಳಲ್ಲಿ ನಮ್ಮ ಗಮನಕ್ಕೆ  ಬಂದ ಪೋಲೀಸ್ ಸಾವುಗಳು ಇವು.

ಮೇಲಿನ ಘಟನೆಗಳು ಪೊಲೀಸ್ ಇಲಾಖೆ, ಸಮಾಜ ಮತ್ತು ಮನೋವೈದ್ಯಕೀಯ ಜಗತ್ತು  ಗಂಭೀರ ಚಿಂತನೆ ನಡೆಸಲೇಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳುತ್ತವೆ. ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಸಂಶೋಧನೆಗಳು ಪೋಲೀಸರ ವ್ಯಕ್ತಿತ್ವ - ಆರೋಗ್ಯಗಳ ಬಗ್ಗೆ ನಡೆದಿವೆ. ಆದರೆ ಅವು ಪ್ರಾಯೋಗಿಕವಾಗಿ ಅನುಷ್ಠಾನವಾಗಿಲ್ಲ.

ಪೊಲೀಸರಿಗಾಗಿ ನಡೆಯುವ ಮಾನಸಿಕ ಆರೋಗ್ಯ ಶಿಬಿರಗಳಲ್ಲಿ ವಿಷಯ ಆರಂಭಿಸುವಾಗ ನಾನು ಮೊದಲು ಕೇಳುವ  ಪ್ರಶ್ನೆ “ಪೊಲೀಸ್ ಕೆಲಸದಲ್ಲಿ ನಿಮ್ಮ ಜೀವಕ್ಕೆ ಅಪಾಯ ಬರುವ ಸಾಧ್ಯತೆ ಯಾರಿಂದ  ಹೆಚ್ಚು?”.  ಅದಕ್ಕೆ  ಬರುವ ಉತ್ತರಗಳು ಹಲವಾರು.  “ಕಳ್ಳರು - ಭಯೋತ್ಪಾದಕರು - ಅಪಘಾತಗಳು - ಆಕಸ್ಮಿಕಗಳು ಇತ್ಯಾದಿ ಇತ್ಯಾದಿ''. ಆದರೆ ಅದೆಲ್ಲಕ್ಕಿಂತ ಹೆಚ್ಚಿನ ಸಾಧ್ಯತೆ  “ಸ್ವತಃ ತನ್ನಿಂದ'' ಎನ್ನುವುದು. ಅಂದರೆ ಅದು ಅತಿಯಾದ ಔದ್ಯೋಗಿಕ ಮಾನಸಿಕ  ಒತ್ತಡದಿಂದ, ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನೂ, ಒತ್ತಡದಿಂದ ಬೇರೆ ಬೇರೆ ರೀತಿಯ  ದೈಹಿಕ - ಮಾನಸಿಕ ಅನಾರೋಗ್ಯಕ್ಕೆ  ತುತ್ತಾಗಿ  ಪರೋಕ್ಷವಾಗಿ ಆಯುಷ್ಯ ಕಡಿಮೆಯಾಗುವುದನ್ನೂ  ಸೂಚಿಸುತ್ತದೆ.

ಪೊಲೀಸ್ ಎಂದಾಕ್ಷಣ ನಾವೆಲ್ಲರೂ ಕಲ್ಪಿಸಿಕೊಳ್ಳುವುದು ಗಟ್ಟಿಮುಟ್ಟಾದ, ಗಿರಿಜಾ ಮೀಸೆಯ, ಕಳ್ಳರನ್ನು ಹಿಡಿಯುವ, ಕ್ರೌರ್ಯವೇ ಮೈತುಂಬಿರುವ ವ್ಯಕ್ತಿತ್ವ. ಈ ವ್ಯಕ್ತಿತ್ವದ ಪರಿಕಲ್ಪನೆ ನಮ್ಮಂಥಹ ಸಾಮಾನ್ಯರದಷ್ಟೇ ಅಲ್ಲ. ಸ್ವತಃ ಪೊಲೀಸರೂ ತಾವೆಂದರೆ ಹೀಗೇ ಇರಬೇಕು ಎಂಬ 'Cop Culture' ಪೊಲೀಸ್ ಸಂಸ್ಕೃತಿಗೆ ಬದ್ಧರಾಗಿದ್ದಾರೆ. ಸಾಮಾನ್ಯ ಒಬ್ಬರೇ ಏನನ್ನೂ ಎದುರಿಸುವಂತಿರಬೇಕು, ಸಹಾಯ ಕೇಳುವುದೇ ಅವಮಾನ,  ಕ್ರೌರ್ಯ, ದರ್ಪ ಧ್ವನಿ ದೇಹದ ಚಲನವಲನಗಳಲ್ಲಿ ಕಂಡುಬಂದಾಗ ಮಾತ್ರ ಅಪರಾಧ ನಿಯಂತ್ರಣ, ಕಾನೂನು ಪಾಲನೆ ಸಾಧ್ಯ ಎಂಬಂತಹ ನಂಬಿಕೆಗಳು ಸಮಾಜದಲ್ಲಿ ಪೊಲೀಸರಲ್ಲಿ ಹಾಸುಹೊಕ್ಕಾಗಿದೆ.

ಈ ಪೊಲೀಸ್ ಕವಚದ ಒಳಗಿರುವುದೂ ಒಬ್ಬ    `ಮನುಷ್ಯನೇ ಎಂಬುದನ್ನು  ಪೊಲೀಸರೂ, ಸಮಾಜ ಎರಡೂ ಮರೆಯುವ ಸಾಧ್ಯತೆ ಇಂದು ಹೆಚ್ಚಾಗುತ್ತಿದೆ. ಪೊಲೀಸ್ ವೃತ್ತಿಯಲ್ಲಿ ಆತ್ಮಹತ್ಯೆ - ಖಿನ್ನತೆಗಳು ಸಾಮಾನ್ಯ ಜನತೆಗಿಂತ ಕನಿಷ್ಠ  ನಾಲ್ಕು ಪಟ್ಟು ಹೆಚ್ಚು ಎನ್ನುವುದನ್ನು  ಅಮೆರಿಕಾದಲ್ಲಿ ನಡೆದ ಅಧ್ಯಯನಗಳು ಖಚಿತಪಡಿಸಿವೆ. ಅಂದರೆ  `ಪೋಲೀಸ್' ಆಗಿರುವುದರಿಂದಲೇ ತನ್ನ  ಮಾನಸಿಕ - ದೈಹಿಕ ಆರೋಗ್ಯಕ್ಕೆ ಹಲವು ಅಪಾಯಗಳನ್ನು ಪೊಲೀಸರು ಎದುರಿಸುತ್ತಾರೆ.

ಪೊಲೀಸ್ ವೃತ್ತಿಯಲ್ಲಿ ಆಗಾಗ್ಗೆ ನೋಡುವ ಅಪರಾಧ, ಕೊಲೆ, ಆತ್ಮಹತ್ಯೆ, ಅಪಘಾತದ ದೃಶ್ಯಗಳು ಎರಡು ರೀತಿಯಲ್ಲಿ ಮನಸ್ಸನ್ನು  ಘಾಸಿಗೊಳಿಸಬಲ್ಲವು. ಒಂದು ಆಘಾತಾನಂತರದ ಒತ್ತಡದ ಸ್ಥಿತಿ - Post Traumatic stress disorder.ಇನ್ನೊಂದು ಮತ್ತೆ ಮತ್ತೆ ಅವುಗಳನ್ನು ನೋಡಿ ಸೂಕ್ಷ್ಮಸಂವೇದನೆ, ಮರುಕ ಪಡುವ, ಆಘಾತವಾಗುವ ಶಕ್ತಿಯನ್ನೇ ಮನಸ್ಸು ಕಳೆದುಕೊಳ್ಳುವ ಅಪಾಯ. ಇವುಗಳ ಜೊತೆಗೆ ರಾಜಕೀಯ ಒತ್ತಡ, ಅಪ್ರಾಮಾಣಿಕ ಜನ / ಅಧಿಕಾರಿಗಳೊಂದಿಗೆ ವ್ಯವಹರಿಸಬೇಕಾದ, ಅವರೊಂದಿಗೆ ಕೆಲಸ ಮಾಡಬೇಕಾದ ಅನಿವಾರ್ಯತೆ. ಪರಿಸ್ಥಿತಿಯ ಕೈಗೊಂಬೆಗಳಾಗಿ ತಮಗಿಷ್ಟವಿರದ ಕೆಲಸ ಮಾಡಲೇಬೇಕಾದ ಒತ್ತಡದಿಂದ ಹತಾಶೆ, ಖಿನ್ನತೆ ತಲೆದೋರುವುದು ಸಹಜವೇ.

ಇವುಗಳ ಜೊತೆಗೇ, ಪೊಲೀಸ್ ಕೆಲಸದಲ್ಲಿ ಅವಿಭಾಜ್ಯ ಅಂಗವಾದ ನೈಟ್ ಶಿಫ್ಟ್‌ಗಳು ನಿದ್ರಾಹೀನತೆಯನ್ನು ಪ್ರಚೋದಿಸುತ್ತವೆ. ರಾಷ್ಟ್ರೀಯ ಉತ್ಸವ, ಗಲಭೆ,  ದೊಡ್ಡ ವ್ಯಕ್ತಿಗಳ ರಕ್ಷಣೆ, ಹೋಗುವಿಕೆ - ಬರುವಿಕೆಗಾಗಿ ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಂತು ಕಾಯಬೇಕಾದ ಶ್ರಮ, ಹಲವು ದೈಹಿಕ ಮಾನಸಿಕ  ಸಮಸ್ಯೆಗಳನ್ನು ತಂದೊಡ್ಡುತ್ತದೆ. ಧೂಮಪಾನ, ಮದ್ಯವ್ಯಸನ ಪೊಲೀಸರಲ್ಲಿ ಸಾಮಾನ್ಯ ಜನರಿಗಿಂತ ಹೆಚ್ಚು ಎನ್ನುವುದನ್ನು ಅಧ್ಯಯನಗಳು ಸ್ಪಷ್ಟಪಡಿಸಿವೆ. ರಾತ್ರಿಪಾಳಿ, ಧೈರ್ಯಕ್ಕಾಗಿ ಮದ್ಯಸೇವನೆ, ಒತ್ತಡ ಮರೆಯಲು ಧೂಮಪಾನ ಇದರ ಕಾರಣಗಳು. ಪೊಲೀಸ್ ಕೆಲಸದ ಬೇರೆ ಬೇರೆ ವರ್ಗಗಳಲ್ಲಿ  ಮಾನಸಿಕ ಒತ್ತಡಗಳು ಭಿನ್ನ ಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಮೇಲಧಿಕಾರಿಗಳಲ್ಲಿ ರಾಜಕೀಯ ಒತ್ತಡ, ತಕ್ಷಣಕ್ಕೆ ಪರಿಸ್ಥಿತಿಯನ್ನು ನಿಯಂತ್ರಿಸಬೇಕಾದ ಹೊಣೆ, ಪತ್ರಕರ್ತರಿಗೆ ಉತ್ತರ ನೀಡಬೇಕಾದ ರೀತಿ ಇವು ಒತ್ತಡ ತರುತ್ತವೆ.

ಅದೇ ಇತರ ವರ್ಗದ ಅಧಿಕಾರಿಗಳಲ್ಲಿ, ಮೇಲಧಿಕಾರಿಗಳ ಒತ್ತಡಗಳು, ಸುಲಭವಾಗಿ ರಜೆ ಸಿಗದಿರುವುದು ಇವು ಹೆಚ್ಚು. ವ್ಯಕ್ತಿತ್ವದ ದೃಷ್ಟಿಯಿಂದ ಸಮಾಜ ಆರೋಪಿಸುವ ಗಟ್ಟಿ - ಕ್ರೂರ ಪೊಲೀಸ್ ಒಳಗೆ ನಿಜವಾಗಿ ನೋಡಿದರೆ ಆತ್ಮಗೌರವಕ್ಕೆ ಧಕ್ಕೆಯಾಗಿರಬಹುದಾದ (Low Self esteem) ಖಿನ್ನ ವ್ಯಕ್ತಿಯೊಬ್ಬನಿರಲು ಸಾಧ್ಯವಿದೆ.

ಮಹಿಳಾ ಪೊಲೀಸ್ ಅಧಿಕಾರಿಗಳ ಪರಿಸ್ಥಿತಿ ಇನ್ನೂ ಕಷ್ಟಕರ. ಪೊಲೀಸ್ ಕೆಲಸ ಇಂದಿಗೂ  `ಪುರುಷ ಕ್ಷೇತ್ರ'ವಾಗಿಯೇ ಪರಿಗಣಿಸಲ್ಪಟ್ಟಿದೆ. ಹಾಗಾಗಿ ದಕ್ಷ ಮಹಿಳಾ ಪೊಲೀಸರಿಗೂ ಸಹೋದ್ಯೋಗಿಗಳಿಂದ, ಕುಟುಂಬದಿಂದ ಸಹಕಾರ ಸುಲಭ ಸಾಧ್ಯವಾಗಿಲ್ಲ. ಜೊತೆಗೇ ರಾತ್ರಿಪಾಳಿ, ತುರ್ತುಕಾರ್ಯ, ಅಪರಾಧಿಗಳೊಂದಿಗೆ ವ್ಯವಹರಿಸುವಾಗ ಉಂಟಾಗಬಹುದಾದ ತೊಂದರೆಗಳು, ಇವುಗಳ ಜೊತೆಗೆ ಮನೆ, ಮಕ್ಕಳು, ಸಂಸಾರವನ್ನೂ  ನಿರ್ವಹಿಸುವುದು ಬೇರೆ ವೃತ್ತಿಪರ ಮಹಿಳೆಯರಿಗಿಂತ ಕಷ್ಟಕರವೇ.

ಕೌಟುಂಬಿಕ ಸಮಸ್ಯೆಗಳೂ ಪೊಲೀಸರಲ್ಲಿ ಸಾಮಾನ್ಯ ಜನತೆಗಿಂತಲೂ ಹೆಚ್ಚು. ಮನೆಗೆ ಬಂದು ಬಟ್ಟೆ ಬದಲಾಯಿಸಿದರೂ ಮಾನಸಿಕವಾಗಿ ಪೊಲೀಸ್ ಅಂಗಿ ಕಳಚದ ಅಧಿಕಾರಿಗಳೇ ಹೆಚ್ಚು. ಮೇಲಧಿಕಾರಿಗಳಲ್ಲಿ ದರ್ಪ, ಕೋಪ, ಒತ್ತಡ; ಕೆಳಗಿನ ಅಧಿಕಾರಿಗಳಲ್ಲಿ ಹೆದರಿಕೆ , ಒತ್ತಡ ವ್ಯಕ್ತಿತ್ವದ ಅವಿಭಾಜ್ಯ ಅಂಗದಂತೆ ಹೊಂದಿಕೊಂಡು ಕ್ರಮೇಣ ಮನೆಯ ಜನರಲ್ಲಿ ಮಾತನಾಡುವಾಗಲೂ ಇವು ತಲೆದೋರಲಾರಂಭಿಸುತ್ತದೆ. ಅಧ್ಯಯನಗಳನ್ನು ಮಾಡುವುದು, ಪ್ರಕಟಿಸುವುದು, ಲೇಖನಗಳನ್ನು ಬರೆಯುವುದು ಇಷ್ಟೇ ಪೊಲೀಸ್ ವೃತ್ತಿಯ ಸಮಸ್ಯೆಗಳನ್ನು ಪರಿಹರಿಸಲು ಸಾಕೆ? ಹಾಗೆಯೇ ಪೊಲೀಸ್ ವೃತ್ತಿಗೆ ಹೋದರೇ ಸಮಸ್ಯೆ ಬರಬಹುದೆಂದು ಹೆದರಿ ಪೊಲೀಸ್ ವೃತ್ತಿಗೆ ಯುವಜನರು ಹೋಗದಿರಬೇಕೆ ?ಖಂಡಿತ ಇಲ್ಲ .

ಸರ್ಕಾರ - ನ್ಯಾಯಾಂಗಗಳು ಪೊಲೀಸರಿಗಾಗಿ ಒತ್ತಡ ನಿರ್ವಹಣೆ ಶಿಬಿರ, ಮದ್ಯವ್ಯಸನ ಚಿಕಿತ್ಸಾ ಶಿಬಿರಗಳನ್ನು ನಡೆಸುವ ಯೋಜನೆಯ ಆದೇಶಗಳನ್ನು ಹೊರಡಿಸಿವೆ. ಅವು ಆಗಾಗ ನಡೆಯುತ್ತಲೂ ಇದೆ. ಆದರೆ ಅವುಗಳ ಪ್ರಾಯೋಗಿಕ ಬಳಕೆ - ಯಶಸ್ಸಿನ ಪರಿಶೀಲನೆಯ ಅಗತ್ಯವಿದೆ.

ಜೊತೆಗೇ ಪೊಲೀಸ್ ವೃತ್ತಿಯ ಅನುಭವಗಳನ್ನು ಹೇಗೆ ಪ್ರತ್ಯೇಕವಾದ ರೀತಿಯಲ್ಲಿ, ಧನಾತ್ಮಕವಾಗಿ ನೋಡುವ ರೀತಿ ಸಾಧ್ಯ ಎಂಬುದರ ಬಗೆಗೂ ವಿದ್ಯಾಭ್ಯಾಸದ ಅಗತ್ಯವಿದೆ. ಆಘಾತ - ಅಪಘಾತಗಳ ನಂತರವೂ, ಕ್ರೌರ್ಯ, ವೀಕ್ಷಣೆಯ ಅನುಭವದ ನಂತರವೂ ಆಗಬಹುದಾದ ಆಘಾತಾನಂತರದ ಬೆಳವಣಿಗೆ  ‘Post Traumatic Growth' ಪೊಲೀಸರನ್ನು ಒತ್ತಡಗಳ ನಡುವೆಯೂ ಮಾನಸಿಕ - ದೈಹಿಕವಾಗಿ ಸಬಲರನ್ನಾಗಿ ಮಾಡಬಲ್ಲದು.

ಹಾಗೆಯೇ ಒತ್ತಡದಿಂದ ಉಂಟಾಗುವ ಋಣಾತ್ಮಕ ಪರಿಣಾಮಗಳ ಅರಿವು, ಗುರುತಿಸುವಿಕೆ, ಹಿಂಜರಿಯದೇ ಶೀಘ್ರ ಚಿಕಿತ್ಸೆ ಪೊಲೀಸ್ ಆತ್ಮಹತ್ಯೆಗಳನ್ನು ತಡೆಗಟ್ಟಬಲ್ಲವು. ಸಾರ್ವಜನಿಕವಾಗಿಯೂ ಪೊಲೀಸ್ ಬಗೆಗಿನ ಧೋರಣೆ ಬದಲಾವಣೆ ಅಗತ್ಯವಿದೆ. ಕಾನೂನು ಪಾಲನೆಯನ್ನು, ಕನಿಷ್ಠ ಸಂಚಾರಿ ವ್ಯವಸ್ಥೆಯಲ್ಲಿನ ನಿಯಮಗಳನ್ನು ವೈಯಕ್ತಿಕ ಜವಾಬ್ದಾರಿಯಿಂದ ಅನುಸರಿಸುವುದು, ಪೊಲೀಸರಿಗೆ ಲಂಚ ನೀಡಿ ಹೇಗಾದರೂ ಪಾರಾಗೋಣ ಎಂಬ ಧೋರಣೆಬದಿಗಿಟ್ಟು ತಪ್ಪು ಮಾಡದಿರುವುದು, ತಪ್ಪಿದ್ದರೆ ದಂಡ ಕಟ್ಟುವುದು ಇಂಥ ಸಣ್ಣ ಬದಲಾವಣೆಗಳೂ  ಪೊಲೀಸರ ಮೇಲಿನ ಒತ್ತಡ ಬಹಳಷ್ಟು ಕಡಿಮೆ ಮಾಡಬಲ್ಲವು. ಪೊಲೀಸ್ ತರಬೇತಿಯಲ್ಲಿ ಈಗಾಗಲೇ ಅಡಕವಾಗಿರುವ ಒತ್ತಡ ನಿರ್ವಹಣೆಯ, ಮನೋವೈಜ್ಞಾನಿಕ ಅಂಶಗಳ ಪ್ರಾಯೋಗಿಕ ತರಬೇತಿಯನ್ನು ಬಲಪಡಿಸುವುದು ಉಪಯುಕ್ತ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.