ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಸಬ್ಸಿಡಿ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ (ಡಿಸಿಟಿ) ಯೋಜನೆ ಮೈಸೂರು ಜಿಲ್ಲೆಯಲ್ಲಿ ಜ.1 ರಿಂದ ಅನುಷ್ಠಾನಗೊಂಡಿದೆ. ಎಲ್ಲ ಯೋಜನೆಗಳಂತೆ ಇದಕ್ಕೂ ಆರಂಭದಲ್ಲಿ ಅಪಸ್ವರ, ವಿಘ್ನ ಎದುರಾಗಿದೆ. `ಆಧಾರ್ ಕಾರ್ಡ್' ಹೊಂದಿರುವ ಫಲಾನುಭವಿಗಳಿಗೆ ಸಮೀಪದ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆಯುವಂತೆ ಸೂಚಿಸಲಾಗಿದೆ. ಆದರೆ, ಶೇ 55 ರಷ್ಟು ಜನರಿಗೆ ಇದುವರೆಗೂ ಆಧಾರ್ ಸಂಖ್ಯೆ ಕಾರ್ಡ್ ತಲುಪಿಲ್ಲ. ಇದು ನೇರ ನಗದು ವರ್ಗಾವಣೆಯ ಯಶಸ್ಸಿಗೆ ತೊಡಕಾಗಿ ಪರಿಣಮಿಸಿದೆ.
 
 ಎರಡನೇ ಬಹು ದೊಡ್ಡ ಸಮಸ್ಯೆ ಎಂದರೆ ಬ್ಯಾಂಕ್ ಖಾತೆ ತೆರೆಯುವುದು. ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಈ ಬಗ್ಗೆ ಸೂಚನಾ ಫಲಕ ಅಳವಡಿಸಲಾಗಿದೆ. `ಜೀರೋ ಬ್ಯಾಲನ್ಸ್'ನಲ್ಲಿ ಫಲಾನುಭವಿಗಳ ಖಾತೆ ತೆರೆಯಲು ಅನುವು ಮಾಡಿಕೊಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರಿಂದಾಗಿ ಎಲ್ಲ ಬ್ಯಾಂಕುಗಳ ಮುಂದೆ ಈಗ ಸರತಿ ಸಾಲು ಎದ್ದು ಕಾಣುತ್ತಿದೆ. ಆದರೆ, ದೈನಂದಿನ ವ್ಯವಹಾರ ಹಾಗೂ ಜಂಜಾಟಗಳಿಂದ ಬೇಸತ್ತಿರುವ ಬ್ಯಾಂಕ್ ಸಿಬ್ಬಂದಿ, ಫಲಾನುಭವಿಗಳಿಗೆ `ಜೀರೋ ಬ್ಯಾಲನ್ಸ್'ನಲ್ಲಿ ಖಾತೆ ತೆರೆಯಲು `ಕ್ಯಾತೆ' ತೆಗೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
 
 ಜ. 1ರಿಂದ ಇದುವರೆಗೆ 300 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 93 ಫಲಾನುಭವಿಗಳಿಗೆ ಜನನಿ ಸುರಕ್ಷಾ ಯೋಜನೆಯಡಿ ಹಣ ವರ್ಗಾವಣೆ ಮಾಡಲಾಗಿದೆ. ಶಿಕ್ಷಣ ಇಲಾಖೆಯ ವಿವಿಧ ಯೋಜನೆಗಳ 8 ವಿದ್ಯಾರ್ಥಿ ವೇತನಗಳಿಗೆ ಸಂಬಂಧಿಸಿದಂತೆ `ನೇರ ನಗದು ವರ್ಗಾವಣೆ' ಮಾಡಲಾಗಿದೆ.
 
 ಆದಾಗ್ಯೂ, ಜಿಲ್ಲಾಡಳಿತ ಹಾಗೂ ಬ್ಯಾಂಕ್ ಸಿಬ್ಬಂದಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಪರದಾಡುವಂತಾಗಿದೆ. `ಆಧಾರ್ ಕಾರ್ಡ್ ತಲುಪದೇ ಇರುವುದರಿಂದ ಸಾಕಷ್ಟು ಗೊಂದಲ ಉಂಟಾಗಿದೆ. ಜಿಲ್ಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ 1.68 ಲಕ್ಷ, ಉದ್ಯೋಗ ಖಾತರಿ ಯೋಜನೆಯಡಿ 1.59 ಲಕ್ಷ ಸೇರಿದಂತೆ ಒಟ್ಟು 3.59 ಲಕ್ಷ ಫಲಾನುಭವಿಗಳು ಇದ್ದಾರೆ. ಆದರೆ, ಎಲ್ಲರಿಗೂ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಈ ಮುಂಚೆ ನಿಗದಿತ ಸಮಯಕ್ಕೆ ಹಣ ಕೈಸೇರುತ್ತಿತ್ತು. ಈಗ ಕನ್ನಡಿಯೊಳಗಿನ ಗಂಟಿನಂತಾಗಿದೆ' ಎಂದು ಹೆಸರು ಹೇಳಲು ಇಚ್ಛಿಸದ ಜನಪ್ರತಿನಿಧಿಯೊಬ್ಬರು ದೂರಿದ್ದಾರೆ.
 
 ಆದರೆ, ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಹೇಳುವುದೇ ಬೇರೆ. `ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಸಬ್ಸಿಡಿ ಹಣ ಆನ್‌ಲೈನ್‌ನಲ್ಲೇ ಫಲಾನುಭವಿಗಳ ಖಾತೆಗೆ ಜಮಾ ಆಗುವುದರಿಂದ ಬ್ಯಾಂಕುಗಳಿಗೆ ಸಮಸ್ಯೆ ಏನಿಲ್ಲ. ಆದಾಗ್ಯೂ, ಆರಂಭದಲ್ಲಿ ಒಂದಿಷ್ಟು `ಹೊರೆ' ಆಗಬಹುದು. ಮುಂಚೆ ಫಲಾನುಭವಿಗಳ ಹೆಸರಿನಲ್ಲಿ ಚೆಕ್ ಕಳುಹಿಸುತ್ತಿದ್ದರು. ಇದರಿಂದಾಗಿ ಬ್ಯಾಂಕುಗಳಿಗೆ ಹೊರೆ ಆಗುತ್ತಿತ್ತು. ಈಗ ಆ ಪರಿಸ್ಥಿತಿ ಇಲ್ಲ. ಇನ್ನು, 2 ರಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಬ್ಯಾಂಕುಗಳಿಲ್ಲದ ಗ್ರಾಮಗಳಲ್ಲಿ 179 ವ್ಯಾವಹಾರಿಕ ಪ್ರತಿನಿಧಿಗಳನ್ನು (ಬಿಸಿನೆಸ್ ಕರೆಸ್ಪಾಂಡೆಂಟ್ಸ್) ನೇಮಕ ಮಾಡಲಾಗಿದ್ದು, ಇನ್ನೂ 150 ಮಂದಿಯನ್ನು  ನೇಮಕ ಮಾಡಬೇಕಿದೆ. ಫಲಾನುಭವಿಗಳಿಗೆ ಬ್ಯಾಂಕ್ ವತಿಯಿಂದ `ಸ್ಮಾರ್ಟ್ ಕಾರ್ಡ್' ವಿತರಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳು ಸಹಕಾರ ನೀಡುತ್ತಿದ್ದು, ವಿದೇಶಿ ಬ್ಯಾಂಕುಗಳಲ್ಲೂ ಖಾತೆ ತೆರೆಯುವ ಬಗ್ಗೆ ಚಿಂತನೆ ನಡೆದಿದೆ' ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ಬಿ.ಚಿನ್ನಪ್ಪ ಹೇಳುತ್ತಾರೆ. `ಫಲಾನುಭವಿಗಳಿಗೆ ಜೀರೋ ಬ್ಯಾಲನ್ಸ್‌ನಲ್ಲಿ ಖಾತೆ ತೆರೆಯಲು ಅವಕಾಶ ಕಲ್ಪಿಸುವುದು ಬ್ಯಾಂಕಿನ ಕರ್ತವ್ಯ. ಆರಂಭದಲ್ಲಿ ಹೊರೆಯಾದರೂ, ಮುಂಬರುವ ದಿನಗಳಲ್ಲಿ ಉತ್ತಮ ವ್ಯವಹಾರ ನಿರೀಕ್ಷಿಸಬಹುದು. ಫಲಾನುಭವಿಗಳು ಮಕ್ಕಳ ಶಿಕ್ಷಣಕ್ಕೆ, ಮನೆ ಕಟ್ಟಲು ಹಾಗೂ ಮದುವೆಗೆ ಹಣಕಾಸಿನ ಸಹಾಯ ಪಡೆಯಬಹುದು. ಆಗ, ಬ್ಯಾಂಕುಗಳಿಗೆ ಲಾಭವಾಗಬಹುದು. ಸದ್ಯ, ಲಾಭ-ನಷ್ಟದ ಲೆಕ್ಕಾಚಾರಕ್ಕಿಂತ ಸಾರ್ವಜನಿಕರಿಗೆ ಸೇವೆ ನೀಡುವುದು ಆದ್ಯ ಕರ್ತವ್ಯ' ಎಂದು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (ಐಓಬಿ) ವ್ಯವಸ್ಥಾಪಕ ಸೂರ್ಯ ನಾರಾಯಣರಾವ್ ಅಭಿಪ್ರಾಯಪಡುತ್ತಾರೆ.
  
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.