ಬೆಂಗಳೂರಿನ ವಾಣಿವಿಲಾಸ ಹಾಗೂ ಮೈಸೂರಿನ ಚೆಲುವಾಂಬ ಆಸ್ಪತ್ರೆಗಳಲ್ಲಿ ಈಚೆಗೆ ಕೆಲವೇ ದಿನಗಳ ಅಂತರದಲ್ಲಿ ಕ್ರಮವಾಗಿ 8 ಹಾಗೂ 6 ಬಾಣಂತಿಯರು ಸಾವಿಗೀಡಾಗಿದ್ದಾರೆ. ಅತ್ಯಾಧುನಿಕ ಸೌಲಭ್ಯಗಳ ನಡುವೆಯೂ ಜನನ ಪ್ರಕ್ರಿಯೆಯು ತಾಯಿ ಅಥವಾ ಶಿಶುವಿನ ಪ್ರಾಣಕ್ಕೇ ಎರವಾಗುವ ಸ್ಥಿತಿ ಆಘಾತಕಾರಿ. ಮಾತೃ– ಶಿಶು ಮರಣ ಪ್ರಮಾಣ ತಗ್ಗಿಸುವ ವಿಶ್ವಸಂಸ್ಥೆಯ 2015ರ ಗುರಿ ಸಾಧನೆಗೆ ನಾವಿನ್ನೂ ಕ್ರಮಿಸಬೇಕಾಗಿರುವ ಹಾದಿ ಬಹಳಷ್ಟಿದೆ. ವೈದ್ಯ ಲೋಕಕ್ಕೆ ಸವಾಲೊಡ್ಡುವ ಈ ಸಮಸ್ಯೆಗಿರುವ ಸೂಕ್ತ ಪರಿಹಾರಗಳನ್ನು ಇಲ್ಲಿನ ಲೇಖನಗಳು ಚರ್ಚಿಸಿವೆ.
ವೈದ್ಯಕೀಯ ಕ್ಷೇತ್ರ ಸಂಶೋಧನೆಗಳಿಂದ ತುಂಬಿ ತುಳುಕುತ್ತಿದೆ. ಹೊಸ ಹೊಸ ಔಷಧಿಗಳು, ಚುಚ್ಚುಮದ್ದು, ತಂತ್ರಜ್ಞಾನಗಳ ನೆರವಿನಿಂದ ಕಾಲು ಕಳೆದುಕೊಂಡವರಿಗೆ ಕೃತಕ ಕಾಲು, ಅಂಧರಿಗೆ ದೃಷ್ಟಿ, ಮಕ್ಕಳಿಲ್ಲದಿರುವವರಿಗೆ ಮಕ್ಕಳು, ಹೃದಯದ ಕಸಿ ಹೀಗೆ ಎಲ್ಲವೂ ಇಂದು ಸಾಧ್ಯ. ಏಡ್ಸ್, ಕ್ಯಾನ್ಸರ್, ಮಧುಮೇಹ, ಲಕ್ವ ಯಾವುದೂ ಇಂದು ಪ್ರಾಣಾಪಾಯದ ಕಾಯಿಲೆಗಳಾಗಿ ಉಳಿದಿಲ್ಲ. ಆದರೆ ಗರ್ಭಿಣಿಯರ– ನವಜಾತ ಶಿಶುಗಳ ವಿಷಯದಲ್ಲಿ ಮಾತ್ರ ಇದು ನಿಜವಲ್ಲ!
ಅಂದರೆ ನೀವು ಈ ಲೇಖನ ಓದಿ ಮುಗಿಸುವ ‘2 ನಿಮಿಷ’ಗಳಲ್ಲಿ ಒಬ್ಬ ತಾಯಿ ಮರಣ ಹೊಂದಿರುತ್ತಾಳೆ. ರಾಷ್ಟ್ರ ಮಟ್ಟದಲ್ಲಿ ಪ್ರತಿ 24 ನವಜಾತ ಶಿಶುಗಳಲ್ಲಿ ಒಂದು ಶಿಶು, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ 22 ಶಿಶುಗಳಲ್ಲಿ ಒಂದು ತನ್ನ ಒಂದು ವರ್ಷದ ಹುಟ್ಟುಹಬ್ಬಕ್ಕೆ ಮುನ್ನವೇ ಸಾವನ್ನಪ್ಪುತ್ತದೆ. ಕಡುಬಡತನ, ಅಪೌಷ್ಟಿಕತೆಯಿಂದ ಲಕ್ಷಾಂತರ ತಾಯಂದಿರು, ಶಿಶುಗಳು ನರಳುತ್ತಿರುವುದು ಕಟುವಾಸ್ತವ. ಅಂದರೆ ಅವರಿಬ್ಬರೂ ಜಾತಿ, ಧರ್ಮದ ಭೇದವಿಲ್ಲದೆ ಸಾಯುತ್ತಲೇ ಇದ್ದಾರೆ.
ಎಷ್ಟೋ ರಾಜಕೀಯ ಆಗುಹೋಗುಗಳು, ಜಾತಿ-ಧರ್ಮದ ಗೊಂದಲಗಳು, ಪ್ರಚಲಿತ ವಿದ್ಯಮಾನಗಳಂತಹ ವಿಷಯಗಳ ಮಧ್ಯೆ ಈಗ ಈ ಚರ್ಚೆ ಏತಕ್ಕೆ ಎಂಬ ಪ್ರಶ್ನೆ ಸಹಜ. ವಿಶ್ವಸಂಸ್ಥೆ ತಾಯಂದಿರ ಆರೋಗ್ಯ ಸುಧಾರಣೆಗಾಗಿ 2015ರ ವೇಳೆಗೆ ಇಡೀ ಜಗತ್ತಿಗೆ ಕೆಲವು ಮುಖ್ಯ ಗುರಿಗಳನ್ನು ನಿಗದಿಪಡಿಸಿತ್ತು. ಈಗ 2015 ಮುಗಿಯುತ್ತಲಿದೆ. ಆದರೆ ‘ತಾಯಿ’ಯ ಆರೋಗ್ಯ ಸುಧಾರಿಸಿಲ್ಲ! ಅಂದರೆ ತಾಯಂದಿರ ಆರೋಗ್ಯದ ಮುಖ್ಯ ಅಭಿವ್ಯಕ್ತಿಯಾದ ‘ಮಾತೃಮರಣ ಅನುಪಾತದ ಇಳಿಕೆ’ಯ ಗುರಿಯನ್ನು ಜಗತ್ತಿನ ದೇಶಗಳು (ಅಮೆರಿಕವನ್ನೂ ಒಳಗೊಂಡು) ಸಾಧಿಸಿಲ್ಲ. ಪ್ರತಿದಿನ ವಿಶ್ವದಲ್ಲಿ 800 ‘ಮಾತೆ’ಯರು ತಮ್ಮ ಮಕ್ಕಳನ್ನು ಬಿಟ್ಟು ಅಥವಾ ತಮ್ಮ ನವಜಾತ ಶಿಶುವಿನೊಂದಿಗೆ ಮರಣವನ್ನಪ್ಪುತ್ತಿದ್ದಾರೆ.
ಇವಿಷ್ಟೇ ಅಲ್ಲ, ಮಾತೃ ಮರಣ ಮತ್ತು ನವಜಾತ ಶಿಶು ಮರಣ ಇವೆರಡೂ ಕೇವಲ ಅಂಕಿ-ಸಂಖ್ಯೆಗಳಲ್ಲ. ಬದಲಾಗಿ ಅವು ದೇಶದ ಪ್ರಗತಿಗೆ ಸಂಬಂಧಿಸಿದಂತೆ ಮೂರು ಮುಖ್ಯ ಅಂಶಗಳನ್ನು ಸಂಕೇತಿಸುತ್ತವೆ. ಮೊದಲನೆಯದು, ದೇಶದ ಅಥವಾ ಒಂದು ಸಮಾಜದ ಆರ್ಥಿಕ ಸ್ಥಿತಿ, ಬಡತನದ ಮಟ್ಟ; ಎರಡನೆಯದು, ಲಭ್ಯವಿರುವ ಆರೋಗ್ಯ ಸೇವೆಗಳು ಮತ್ತು ಅವುಗಳ ಗುಣಮಟ್ಟ; ಮೂರನೆಯದು, ಸಮಾಜದ ಒಟ್ಟು ಆರೋಗ್ಯದ ಗುಣಮಟ್ಟ. ಅಂದರೆ ಭಾರತ ಯಾವುದೇ ರೀತಿಯ ತಾಂತ್ರಿಕ ಪ್ರಗತಿ, ಆರ್ಥಿಕ ಉನ್ನತಿ, ಸಾಮಾಜಿಕ ಬೆಳವಣಿಗೆಗಳನ್ನು ಸಾಧಿಸಿದರೂ ನಮ್ಮ ‘ಮಾತೃಮರಣ- ಶಿಶುಮರಣ’ಗಳ ಅನುಪಾತವನ್ನು ಕನಿಷ್ಠ ಮಟ್ಟಕ್ಕೆ ತರದೆ ನಾವು ‘ಮುಂದುವರಿದ’ವರಾಗಲು ಸಾಧ್ಯವಿಲ್ಲ.
ಈಗ ಮಾತೃಮರಣದ ಕಾರಣಗಳನ್ನು ಸ್ವಲ್ಪ ವಿವರವಾಗಿ ಗಮನಿಸೋಣ. ಬಾಲಕಿಯರ ಆರೋಗ್ಯ, ಪೌಷ್ಟಿಕತೆಯಿಂದಲೇ ನಾವು ಇದನ್ನು ಆರಂಭಿಸಬೇಕಾಗುತ್ತದೆ. ಬಾಲಕಿಯರಿಗೆ ವಿದ್ಯಾಭ್ಯಾಸಕ್ಕೆ ಪೂರಕವಾದ ಸೌಲಭ್ಯ ಕೊರತೆ, ಆಹಾರದಲ್ಲಿ ಅಸಮಾನತೆ, ರಕ್ತಹೀನತೆ, ಶೇಕಡ 50ರಷ್ಟು ಜನರ ಮದುವೆ 18 ವರ್ಷಕ್ಕೆ ಮುನ್ನವೇ ನಡೆಯುವುದು, ಇವೆಲ್ಲ ಇಂದಿಗೂ ನಾಗರಿಕ ಸಮಾಜದಲ್ಲಿ ನಡೆಯುತ್ತಿರುವಂಥವು. ಇವುಗಳ ಪರಿಣಾಮ? ಆರೋಗ್ಯದ ಬಗ್ಗೆ ಅಜ್ಞಾನ, ಗರ್ಭನಿರೋಧಕಗಳ ಬಳಕೆಯ ಬಗೆಗಿನ ಜ್ಞಾನ- ನಿರ್ಧಾರಗಳಿಗೆ ಅಡೆತಡೆ, ಆರ್ಥಿಕ-ಸಾಮಾಜಿಕ ಸಬಲತೆಯ ಕೊರತೆ.
ಮೈ-ಮನ ಪ್ರಬುದ್ಧವಾಗದ 18ರ ‘ಬಾಲಕಿ’ಯರು ಮಾತೃಮರಣಕ್ಕೆ ಒಳಗಾಗುವ ಸಾಧ್ಯತೆ ಬೇರೆ ಮಹಿಳೆಯರಿಗಿಂತ ಎರಡು ಪಟ್ಟು ಹೆಚ್ಚು. ಅದೇ ‘15’ರ ಒಳಗಿನ ಹುಡುಗಿಯರು ಈ ಅಪಾಯಕ್ಕೆ ಒಳಗಾಗುವ ಸಾಧ್ಯತೆ 5 ಪಟ್ಟು ಹೆಚ್ಚು. ರಕ್ತಹೀನತೆ, ಅಪ್ರಬುದ್ಧ ದೇಹ, ಸ್ವತಃ ಶಾಲೆಗೆ ಹೋಗಿ ವಿದ್ಯಾವಂತೆಯಾದರೂ, ದುಡಿದು ಮನೆ ಸಾಗಿಸುವ ಅವಿದ್ಯಾವಂತ ಪುರುಷನ ಅಥವಾ ಕುಟುಂಬದ ಇತರ ಸದಸ್ಯರ ನಿರ್ಧಾರಗಳನ್ನು ಒಪ್ಪಿಕೊಳ್ಳಬೇಕಾದ ಅಸಹಾಯಕ ಸ್ಥಿತಿ ಈ ಹೆಣ್ಣು ಮಕ್ಕಳನ್ನು ಕಾಡುತ್ತದೆ.
ಮಾತೃಮರಣದ ಇನ್ನೊಂದು ಮುಖ್ಯ ಕಾರಣ ಸರಿಯಾದ ಸ್ಥಳದಲ್ಲಿ, ಸರಿಯಾದ ರೀತಿಯಲ್ಲಿ ಹೆರಿಗೆಯಾಗದಿರುವುದು. ಕೌಶಲಯುತವಾದ ಆರೈಕೆಯಲ್ಲಿ ನಡೆಯುವ ಹೆರಿಗೆಗಳ ಸಂಖ್ಯೆ ಇಂದು ಗಣನೀಯವಾಗಿ ಏರಿದೆ. ಅಂದರೆ ತರಬೇತಿ ಹೊಂದಿದ ದಾದಿಯರಿಂದ ಇಲ್ಲವೇ ಆಸ್ಪತ್ರೆಯಲ್ಲಿ ನಡೆಯುವ ಹೆರಿಗೆಗಳ ಸಂಖ್ಯೆ ಇಂದು ಒಟ್ಟು ಹೆರಿಗೆಗಳ ಅರ್ಧದಷ್ಟು. ಇದು ‘ಪ್ರಗತಿ’ ಎಂದು ಸಮಾಧಾನ ಪಟ್ಟುಕೊಳ್ಳಬಹುದಾದರೂ ‘ಹೆಮ್ಮೆ’ ಪಡುವಂತಿಲ್ಲ. ದಿನಗೂಲಿ ಪಡೆದು, ಶ್ರಮಜೀವಿಗಳಾಗಿ ದಿನನಿತ್ಯ ದುಡಿಯುವ ಅಸಂಖ್ಯಾತ ಹೆಣ್ಣು ಮಕ್ಕಳಿಗೆ ಆಸ್ಪತ್ರೆಯೆಂದರೆ ಮೈಲಿಗಳ ದೂರ, ಸಾವಿರಾರು ರೂಪಾಯಿ ಖರ್ಚು. ಪರಿಣಾಮ ವೈದ್ಯಕೀಯ ಪರೀಕ್ಷೆ, ತಪಾಸಣೆ ಅಲಭ್ಯ. ಸರ್ಕಾರದ ‘ಜನನಿ ಶಿಶು ಸುರಕ್ಷಾ’ದಂಥ ಯೋಜನೆಗಳು ತಾಯಿಗೆ ದುಡ್ಡು ನೀಡುವ, ಮನೆಯ ಹಿರಿಯ ಮಹಿಳೆಯರಿಗೇ ತರಬೇತಿ ನೀಡುವಂಥ ಪದ್ಧತಿಗಳನ್ನು ಜಾರಿಗೆ ತಂದಿವೆಯಾದರೂ ಅವುಗಳ ಸಫಲತೆ ಸಂಪೂರ್ಣವಾಗಿಲ್ಲ.
ಇನ್ನು ವೈದ್ಯಕೀಯ ಕಾರಣಗಳು. ರಕ್ತಸ್ರಾವ, ಸೋಂಕು ಮತ್ತು ರಕ್ತಹೀನತೆ, ಅಗತ್ಯವಿರದೆ ಕೆಲವೊಮ್ಮೆ ವೈದ್ಯರು ಮಾಡುವ, ಬಹಳಷ್ಟು ಸಾರಿ ಕುಟುಂಬದವರು ಅಥವಾ ಸ್ವತಃ ಸ್ತ್ರೀ ಕೇಳುವ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾತೃಮರಣದ ಕಾರಣಗಳು. ಗಮನಾರ್ಹವಾದುದೆಂದರೆ ಇವೆಲ್ಲವೂ ಸುಲಭವಾಗಿ ತಡೆಗಟ್ಟಬಲ್ಲ ಅಂಶಗಳು. ಮಕ್ಕಳ ನಡುವೆ ಕನಿಷ್ಠ ಮೂರು ವರ್ಷಗಳ ಅಂತರ, ಗರ್ಭಿಣಿಯ ಆಹಾರದಲ್ಲಿ ಸರಿಯಾದ ಪೌಷ್ಟಿಕಾಂಶ, ಗರ್ಭದ ಅವಧಿಯುದ್ದಕ್ಕೂ ಕಾಲಕಾಲಕ್ಕೆ ತಪಾಸಣೆ, ಕಡ್ಡಾಯವಾಗಿ ಗರ್ಭಿಣಿ ರಕ್ತಪುಷ್ಟಿ ನೀಡುವ ಕಬ್ಬಿಣಾಂಶದ ಮಾತ್ರೆಗಳು ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸುವುದು, ಹೆರಿಗೆಯ ನಂತರ ಸೋಂಕು ತಡೆ ಔಷಧಿಗಳು, ಆ್ಯಂಟಿಬಯೊಟಿಕ್‌ಗಳು, ಸುರಕ್ಷಿತ ಹೆರಿಗೆ ಇವು ಪ್ರತಿ ಕುಟುಂಬವೂ ಅರಿತಿರಬೇಕಾದ ಅಂಶಗಳು.
ಶಿಶು ಮರಣದತ್ತ ಗಮನಹರಿಸಿದರೆ ಮೇಲೆ ಹೇಳಿದ ‘ಮಾತೃಮರಣ’ದ ಕಾರಣಗಳೆಲ್ಲವೂ ‘ಶಿಶುಮರಣ’ಕ್ಕೂ ಅನ್ವಯಿಸುತ್ತವೆ. ಸ್ವತಃ ರಕ್ತಹೀನತೆಯಿಂದ, ಅಪೌಷ್ಟಿಕತೆಯಿಂದ ನರಳುವ ಎಳೇ ವಯಸ್ಸಿನ ತಾಯಿ ಆರೋಗ್ಯವಂತ ಮಗುವಿಗೆ ಹೇಗೆ ಜನ್ಮ ನೀಡಿಯಾಳು? ಪರಿಣಾಮ, ಶಿಶುವಿನ ಹುಟ್ಟು ತೂಕ ಕಡಿಮೆಯಿರುವುದು, ಪೂರ್ಣ ಗರ್ಭಾವಸ್ಥೆಗೆ ಮೊದಲೇ ಮಗು ಹೊರಬರುವುದು, ಹುಟ್ಟುವಾಗ ಆಮ್ಲಜನಕದ ಕೊರತೆ ಮತ್ತು ಸೋಂಕು ಉಂಟಾಗುವುದು ಹುಟ್ಟಿನ ಸಮಯದಲ್ಲಾಗುವ ಶಿಶು ಮರಣದ ಪ್ರಮುಖ ಕಾರಣಗಳು. ನಂತರ ಒಂದು ವರ್ಷದ ವಯಸ್ಸಿನ ಅವಧಿಯಲ್ಲಿ ಶ್ವಾಸಕೋಶದ ಸೋಂಕು, ಅತಿಸಾರ, ಅಪೌಷ್ಟಿಕತೆಯಿಂದ ಸಾವಿರಾರು ಶಿಶುಗಳು ಕಣ್ಮರೆಯಾಗುತ್ತವೆ.
ವಿಶ್ವ ಆರೋಗ್ಯ ಸಂಸ್ಥೆ 90ರ ದಶಕದಲ್ಲಿ ‘ಸರ್ವರಿಗೆ ಆರೋಗ್ಯ- 2000ದ ವೇಳೆಗೆ’ ಎಂಬ ಆರೋಗ್ಯ ಗುರಿಯನ್ನು ಗೊತ್ತುಪಡಿಸಿತ್ತು. ಈಗ ಮತ್ತೆ 2030ರ ವೇಳೆಗೆ ಹಲವು ಗುರಿಗಳನ್ನು ನಿಗದಿಪಡಿಸಲಿದೆ. ಭಾರತದಲ್ಲಿ ಈ ಗುರಿಗಳ ಸಾಧನೆಗಾಗಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ನಿಜ, ಆದರೆ ಈ ಯೋಜನೆಗಳ ಬಳಕೆ ಮತ್ತು ಯಶಸ್ಸಿನ ಪ್ರಮಾಣದ ಬಗೆಗೆ ಪ್ರಾಮಾಣಿಕ ಮೌಲ್ಯಮಾಪನ ನಡೆಯಬೇಕಿದೆ. ‘ನಾವೆಲ್ಲಿ ತಪ್ಪಿದ್ದೇವೆ’ ಎಂಬುದನ್ನು ವೈದ್ಯರೂ ಒಳಗೊಂಡಂತೆ ಸಮಾಜದ ಪ್ರತಿ ಸ್ತರದ, ಪ್ರತಿ ಕ್ಷೇತ್ರದ ಎಲ್ಲರೂ ಆತ್ಮಪರಿಶೀಲನೆ ಮಾಡಬೇಕಿದೆ.
ಇಂಥ ಮೌಲ್ಯಮಾಪನಗಳೂ ಆಗಾಗ ನಡೆಯುತ್ತವೆ. ಆದರೆ ಎಷ್ಟೋ ಮಾತೃ-ಶಿಶು ಮರಣಗಳು ದಾಖಲೆಗಳ ಹಿಡಿತಕ್ಕೆ ಸಿಕ್ಕುವುದಿಲ್ಲ. ಅವರ ಸಾವುಗಳು ಎಲ್ಲೂ, ಯಾವ ಕಾರಣವನ್ನೂ ಉಳಿಸದೆ ಮಾಯವಾಗಿಬಿಡುತ್ತವೆ. ಕಾರಣವನ್ನೇ ತಿಳಿಯದೆ ಪರಿಹಾರ ಹುಡುಕುವುದಾದರೂ ಹೇಗೆ?. ಮಾತೃ ಮತ್ತು ಶಿಶುಮರಣ ವಿಚಾರಣೆ ಮತ್ತು ಪ್ರತಿಕ್ರಿಯೆ (The maternal and prenatal death inquiry and response- MAPEDIR) ಈ ಕಾರಣಗಳನ್ನು, ಕುಟುಂಬದ, ತಾಯಂದಿರ ನೋವುಗಳನ್ನು ದಾಖಲಿಸುವ ಪ್ರಯತ್ನ ಮಾಡುತ್ತದೆ. ಆಸ್ಪತ್ರೆಯ ದಾಖಲೆಗಳು ದಾಖಲಿಸುವುದು ಸಾವಿನ ಜೈವಿಕ ಕಾರಣಗಳನ್ನು ಮಾತ್ರ. ಆದರೆ MAPEDIR ಸಾಮಾಜಿಕ ಆರ್ಥಿಕ ಕಾರಣಗಳು, ಜೀವ ರಕ್ಷಣೆಗೆ ತಡೆಯಾದ ಕಾರಣಗಳು, ಸಾವು ಉಂಟಾದ ಸಂದರ್ಭ ಎಲ್ಲವನ್ನೂ ಮಾತನಾಡುವ ಅವಕಾಶ ನೀಡುತ್ತದೆ.
ಪರಿಹಾರಗಳನ್ನು ಸೂಚಿಸುವ ಸಲಹೆಗಳನ್ನು ಸ್ವಾಗತಿಸುತ್ತದೆ. ಅಂದರೆ ಸಾವು ಉಂಟಾಗಿದ್ದು, ಕುಟುಂಬ ನಿರ್ಧಾರ ತೆಗೆದುಕೊಳ್ಳುವಲ್ಲಿ ತಡ ಮಾಡಿದ್ದು/ ಸಾರಿಗೆಯ ವ್ಯವಸ್ಥೆಯಿಲ್ಲದ್ದು/ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ತತ್‌ಕ್ಷಣ ಸಿಗದೇ ಹೋದದ್ದು- ಹೀಗೆ ಯಾವುದರಿಂದ ಎಂಬುದನ್ನು ಗುರುತಿಸುತ್ತದೆ. ಈ ಸಮಸ್ಯೆಗಳಿಗೆ ಅನುಸಾರವಾಗಿ ಪಶ್ಚಿಮ ಬಂಗಾಳದಲ್ಲಿ ಮಾಡಲಾದ ಸಾರಿಗೆ ವ್ಯವಸ್ಥೆಯ ಶಿಫಾರಸು, ರಾಜಸ್ತಾನದಲ್ಲಿ ಮಾಡಿದ ಪ್ರಸೂತಿ ಸಹಾಯವಾಣಿ ಸಫಲವೂ ಆಗಿವೆ. ಹಾಗೆಯೇ ನವಜಾತ ಶಿಶುವನ್ನು ಬೆಚ್ಚಗಿಡುವ ಸರಳ ‘ಕವಚ’ದಂಥ ತಂತ್ರಗಳು ಶಿಶುಮರಣದ ಇಳಿಕೆಗೆ ಮುಖ್ಯವಾಗುತ್ತವೆ.
ಇಂದಿನ ಗೊಂದಲಮಯ ಸಾಮಾಜಿಕ ಪರಿಸ್ಥಿತಿಯಲ್ಲಿ ಮಹಿಳೆಯ ಆರೋಗ್ಯದ ಸಮಸ್ಯೆಗಳು ಅಲಕ್ಷ್ಯಕ್ಕೆ ಒಳಗಾಗುವ ಅಪಾಯ ಹಿಂದೆಂದಿಗಿಂತ ಹೆಚ್ಚು. ಆದರೆ ‘ತಾಯಿ’ಯನ್ನು ಭಾವನಾತ್ಮಕ ತಾಯ್ತನದ ಪಟ್ಟದಲ್ಲಷ್ಟೇ ಇರಿಸದೆ, ಆರೋಗ್ಯದ ದೃಷ್ಟಿಯಿಂದ ನೋಡುವುದು ಅಗತ್ಯ. ಒಬ್ಬ ತಾಯಿಯ ಮರಣ ಇಡೀ ಕುಟುಂಬ-ಸಮಾಜಕ್ಕೆ ತರಬಹುದಾದ ಸಮಸ್ಯೆಗಳು ಅನೇಕ. ನವಜಾತ ಶಿಶುವಿನ ದೃಷ್ಟಿಯಿಂದ ಮಾತೃ ಮರಣ ದೈಹಿಕ-ಮಾನಸಿಕ-ಭಾವನಾತ್ಮಕ ಅನಾರೋಗ್ಯಗಳನ್ನೇ ತಂದಿಡುತ್ತದೆ. ಮಾನವೀಯತೆಯಿಂದ ನೋಡಿದರಂತೂ ಮಾತೃಮರಣ- ಶಿಶುಮರಣಗಳೆರಡೂ ಬದುಕುವ ಹಕ್ಕನ್ನೇ ಕಸಿದುಕೊಳ್ಳುವ ದೊಡ್ಡ ಸಾಮಾಜಿಕ ಅನ್ಯಾಯ.
ಲಾಭ ಹಿಂತಿರುಗಿಸುವ ಕ್ಷೇತ್ರ!
ವಿಶ್ವಬ್ಯಾಂಕ್‌ನ ಪ್ರಮುಖ ಆರ್ಥಿಕ ತಜ್ಞ ಲ್ಯಾರಿ ಸಮ್ಮರ್ಸ್ ‘ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಂಡವಾಳ ಹೂಡಿಕೆಯಲ್ಲಿ ಅತಿ ಹೆಚ್ಚು ಲಾಭ ಹಿಂತಿರುಗಿಸಬಹುದಾದ ಕ್ಷೇತ್ರ ಬಾಲಕಿಯರ ವಿದ್ಯಾಭ್ಯಾಸ’ ಎಂದಿರುವುದು ಗಮನಾರ್ಹ. ಬಾಲಕಿಯರಿಗೆ ತಪ್ಪದೇ ವಿದ್ಯಾಭ್ಯಾಸ ನೀಡುವುದು, ಅವರ ಮದುವೆಯನ್ನು 18 ವಯಸ್ಸಿಗಿಂತ ಮುಂದೂಡುವುದು, ಪ್ರಬುದ್ಧ ವಯಸ್ಸಿನಲ್ಲಿ ಮಕ್ಕಳನ್ನು ಪಡೆಯುವುದು, ಎರಡು ಮಕ್ಕಳಿಗೆ ಸೀಮಿತಗೊಳಿಸುವುದು, ಆ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡುವುದು ಎಲ್ಲವೂ ‘ಅನಕ್ಷರತೆ- ಅಜ್ಞಾನ- ಅನಾರೋಗ್ಯ- ಬಡತನ’ ಎಂಬ ವಿಷ ವರ್ತುಲವನ್ನು (Vicious cycle) ಸುಖ ವರ್ತುಲವಾಗಿ (Virtuous circle) ಬದಲಿಸಬಲ್ಲವು.
ಬದಲಾಯ್ತು ಸಂಶೋಧನೆ
ವಿಶ್ವದ ಬಹುರಾಷ್ಟ್ರೀಯ ಕಂಪೆನಿಯೊಂದು ವಿವಿಧ ರೋಗನಿರೋಧಕ ಲಸಿಕೆಗಳನ್ನು ಕಂಡುಹಿಡಿಯಲು ಲಕ್ಷಗಟ್ಟಲೆ ಹಣವನ್ನು ಸಂಶೋಧನೆಗಾಗಿ ವ್ಯಯಿಸುತ್ತಿತ್ತು. ಈಗ ಅವುಗಳನ್ನು ಕೈಬಿಟ್ಟು ತಾಯಂದಿರ ನಡವಳಿಕೆ-ಒತ್ತಡಗಳ ಮಾನವಿಕ ವಿಷಯಗಳ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಏಕೆ? ಎಷ್ಟು ರೋಗನಿರೋಧಕಗಳನ್ನು ಕಂಡುಹಿಡಿದರೂ, ತಾಯಿ ತನ್ನ ಮಗುವಿಗೆ ಅದನ್ನು ಕೊಡಿಸಬೇಕೆಂದು ನಿರ್ಧರಿಸದಿದ್ದರೆ? ಇದು ಮಾತೃಮರಣ-ಶಿಶುಮರಣಗಳಿಗೂ ಅನ್ವಯಿಸುತ್ತದೆ.
ಯೋಜನೆಗಳು, ಆರೈಕೆಯ ಬಗೆಗಿನ ಅರಿವು, ತಮ್ಮ ಹಕ್ಕುಗಳ ಬಗೆಗಿನ ತಿಳಿವಳಿಕೆ, ವಿದ್ಯಾಭ್ಯಾಸ, ‘ಅಮ್ಮ’ಂದಿರನ್ನು, ‘ಹುಡುಗಿ’ಯರನ್ನು ತಲುಪಲೇಬೇಕಾದ ತುರ್ತು ಇಂದು ಭಾರತಕ್ಕಿದೆ. ಹಾಗೆ ತಲುಪಲು, ಮಹಿಳೆಯರ ಬಗ್ಗೆ ನಮ್ಮ ರೂಢಿಗತ ಧೋರಣೆಗಳನ್ನು ‘ಆರೋಗ್ಯ’ದ ಸಲುವಾಗಿಯಾದರೂ ಬದಲಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕಿದೆ. ಉತ್ಸಾಹಿ ಯುವ ಜನಾಂಗ, ಮಾಧ್ಯಮಗಳು, ತಂತ್ರಜ್ಞಾನ ಎಲ್ಲವೂ ಶೀಘ್ರ ಬದಲಾವಣೆಗಳನ್ನು ಸಾಧ್ಯವಾಗಿಸಿ ತೋರಿಸಬೇಕು. ಜಗತ್ತಿನ ಚಿಕ್ಕ ರಾಷ್ಟ್ರಗಳು ಅಜ್ಞಾನ, ಬಡತನದ ನಡುವೆಯೂ ಈ ನಿಟ್ಟಿನಲ್ಲಿ ಮಾಡಿರುವ ದೊಡ್ಡ ಬದಲಾವಣೆಗಳತ್ತ ಗಮನ ಹರಿಸಬೇಕು. ಹಾಗಾಗದೇ ಹೋದರೆ ಇಂಥ ‘ಮಾತೃಮರಣದ’ ಚರ್ಚೆಗಳು 2030ರ ವೇಳೆಗೂ ನಡೆಯುತ್ತಲೇ ಇರುತ್ತವೆ!
***
ವರದಿ ಬರಬೇಕಷ್ಟೆ...
ಬೆಂಗಳೂರಿನ ವಾಣಿ ವಿಲಾಸ ಮತ್ತು ಮೈಸೂರಿನ ಚೆಲುವಾಂಬ ಆಸ್ಪತ್ರೆಗಳಲ್ಲಿ ಕಳೆದ ತಿಂಗಳು ಸಂಭವಿಸಿರುವ ಬಾಣಂತಿಯರ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ವರದಿ ನೀಡಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. 15 ದಿನಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಿದ್ದೇನೆ. ವರದಿ ಬಂದ ನಂತರವೇ ಸಾವಿನ ಕಾರಣ ತಿಳಿಯಲಿದೆ.
-ಡಾ. ಶರಣ ಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.