ADVERTISEMENT

ಯಶಸ್ಸು ತಪ್ಪಲಿಲ್ಲ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST

ಅಣ್ಣ,ಅಕ್ಕ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದರಿಂದ ನಾನೂ ಬೇಲೂರಿನ ಹೊಯ್ಸಳ ಶಾಲೆಗೆ ಇಷ್ಟಪಟ್ಟು ಸೇರಿದ್ದೆ. ಎಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ್ದರಿಂದ ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಳ್ಳಲು ನಿರ್ಧರಿಸಿದೆ.
 
ಚಿಕ್ಕಮಗಳೂರಿನ  ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪ್ರವೇಶ ಸಿಕ್ಕಿತು. ಪಿಯು ಸೇರಿದ ಮೊದಲ ದಿನವೇ ಎಲ್‌ಕೆಜಿಯಿಂದ ಎ ಬಿ ಸಿ ಡಿ ಕಲಿತವರ ಮುಂದೆ ಕನ್ನಡ ಮಾಧ್ಯಮದಲ್ಲಿ ಕಲಿತವರ ಪ್ರತಾಪ ನಡೆಯದು ಎನಿಸಲಾರಂಭಿಸಿತು. 

 ಕಾಫಿ  ಪ್ಲಾಂಟರ್‌ಗಳ ಮಕ್ಕಳ ಅರಳು ಹುರಿದಂಥ ಇಂಗ್ಲಿಷ್ ಸಂಭಾಷಣೆ ನಮ್ಮ ಸ್ಥೈರ್ಯ ಕುಗ್ಗಿಸುತ್ತಿತ್ತು. ಇಂಗ್ಲಿಷಿನಲ್ಲಿ ಹೇಳುತ್ತಿದ್ದ ಪಾಠಗಳು ತಲೆಗೆ ಇಳಿಯುತ್ತಿರಲಿಲ್ಲ. 20 ದಿನಗಳಲ್ಲಿ ಕಾಲೇಜು ಉಸಿರುಗಟ್ಟಿಸತೊಡಗಿತು.

ನನ್ನ ಕಷ್ಟ ಅಮ್ಮನಲ್ಲಿ ಹೇಳಿಕೊಂಡು `ಆ ಕಾಲೇಜಿಗೆ ಹೋಗುವುದಿಲ್ಲ. ನಂಗೆ ಸೈನ್ಸ್ ಬೇಡ~ ಎಂದು ಹಠ ಹಿಡಿದೆ. ಬೇಲೂರಿನ ಸರ್ಕಾರಿ ಜೂನಿಯರ್ ಕಾಲೇಜಿಗೆ ಟಿ.ಸಿ. ಹಿಡಿದು ಹೋದೆ.
 
ಅಲ್ಲಿನ  ಪ್ರಾಂಶುಪಾಲರಾದ ರಾಜಮ್ಮ `ಪ್ರವೇಶ ಕೊಡ್ತಿನಿ. ಆದರೆ  ಸೈನ್ಸ್ ಸೇರಬೇಕು ಅಂದರು. ನಮ್ಮಲ್ಲೂ ನಿನ್ನಂತಹ ಗ್ರಾಮೀಣ ವಿದ್ಯಾರ್ಥಿಗಳು ವಿಜ್ಞಾನ ಓದುತ್ತಿದ್ದಾರೆ~ ಎಂದು ಕಡ್ಡಿಮುರಿದಂತೆ ಹೇಳಿದರು. 

 ಅಲ್ಲಿ ವಿಜ್ಞಾನ ಆಯ್ದುಕೊಂಡೆ. ಎರಡು ವರ್ಷ ಕಳೆದಿದ್ದೇ ಗೊತ್ತಾಗಲಿಲ್ಲ. ಸಿಇಟಿ ಬರೆದೆ. ಫಲಿತಾಂಶ ಬಂದಾಗ ಕನ್ನಡ ಮತ್ತು ಇಂಗ್ಲಿಷ್ ಹೊರತುಪಡಿಸಿ ಎಲ್ಲ ವಿಷಯಗಳಲ್ಲೂ ಫೇಲ್. ಆಗ ಅಮ್ಮ `ವರ್ಷ ವ್ಯರ್ಥವಾದರೂ ಪರವಾಗಿಲ್ಲ, ಮತ್ತೆ ಪರೀಕ್ಷೆ ಕಟ್ಟಿ ಪಾಸು ಮಾಡು~ ಎಂದು ಆತ್ಮವಿಶ್ವಾಸ ತುಂಬಿದರು.

ಸ್ನೇಹಿತರು ಆರ್ಟ್ಸ್ ಓದಲು ಸಲಹೆ ನೀಡಿದರು. ಇಟ್ಟ ಹೆಜ್ಜೆ ಹಿಂದಿಡುವ ಮನಸು ಬರಲಿಲ್ಲ.
ನಾಲ್ಕು ವಿಷಯಗಳನ್ನು ಪಾಸು ಮಾಡಲು ಎರಡು ವರ್ಷ ಬೇಕಾದವು. ಮೂರು ಪ್ರಯತ್ನಗಳಾದರೂ  ಕೆಮಿಸ್ಟ್ರಿಯಲ್ಲಿ 30 ಅಂಕಗಳ ಗಡಿ ಮುಟ್ಟಲು ಆಗಲಿಲ್ಲ.
 

ಓದು ಬಿಟ್ಟು ಬೇಸಾಯ ನೋಡಿಕೊಳ್ಳಲು ಒಂದು ವರ್ಷ ಮನೆಯಲ್ಲಿ ಉಳಿದೆ.  ಓದಿಗಿಂತ ಬೇಸಾಯ ಕಷ್ಟ ಅನಿಸಿತು. ಮತ್ತೆ ಪರೀಕ್ಷೆ ಕಟ್ಟಿ ಕೆಮಿಸ್ಟ್ರಿ ಬೆನ್ನು ಹತ್ತಿದೆ. ಪರೀಕ್ಷೆಗೆ ಇಪ್ಪತ್ತು ದಿನ ಇದ್ದಾಗ ಮೈಸೂರಿಗೆ ಹೋದೆ.
 

ಕಗ್ಗಂಟಾಗಿದ್ದ ಕೆಮಿಸ್ಟ್ರಿಯನ್ನು ಉಪನ್ಯಾಸಕ ನರಸೇಗೌಡರು ಹದಿನೈದೇ ದಿನಗಳಲ್ಲಿ ಅರ್ಥ ಮಾಡಿಸಿದರು. ಫಲಿತಾಂಶ ಬಂದಾಗ ನಂಗೆ 80ಅಂಕ!

ಯುವರಾಜ ಕಾಲೇಜಿನಲ್ಲಿ ಬಿಎಸ್‌ಸಿಗೆ ಸೇರಿಕೊಂಡೆ. ಮೂರು ವರ್ಷವೂ ಉನ್ನತ ಶ್ರೇಣಿ. ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಪಿಜಿ ಸೆಂಟರ್‌ನಲ್ಲಿ ಕೆಮಿಸ್ಟ್ರಿ ಎಂಎಸ್‌ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ(ಓ ಗ್ರೇಡ್) ತೇರ್ಗಡೆಯಾದೆ.
 

ADVERTISEMENT

ಬಿಇ.ಡಿ ಕೋರ್ಸ್‌ಗೆ ಪ್ರವೇಶ ಪರೀಕ್ಷೆ ಬರೆದೆ. ಚಿಕ್ಕಮಗಳೂರಿನ ಎಂ.ಎಲ್.ಎಂ.ಎನ್ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಸೀಟು ಸಿಕ್ಕಿತು. ಆಂಗ್ಲ ಮಾಧ್ಯಮದಲ್ಲೇ ಬಿಇ.ಡಿ ಕೋರ್ಸ್‌ನಲ್ಲೂ ಉನ್ನತ ಶ್ರೇಣಿಯಲ್ಲಿ ಪಾಸಾದೆ. ಸಿಬಿಎಸ್‌ಸಿ ಪಠ್ಯಕ್ರಮದ ಆಂಗ್ಲಮಾಧ್ಯಮ ಶಾಲೆಯಲ್ಲಿ ಕೆಮಿಸ್ಟ್ರಿ, ಬಯಾಲಜಿ ಬೋಧಿಸಲು ಅವಕಾಶ ಸಿಕ್ಕಿತು.

ಶಾಲೆಯಲ್ಲಿ ಬೋಧಿಸುತ್ತಲೇ ಮೊರಾರ್ಜಿ ವಸತಿ ಶಾಲೆಗಳ ನೇಮಕಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡೆ. ಈಗ ಪ್ರಾಂಶುಪಾಲ, ಸಮಾಜ ವಿಜ್ಞಾನ ಶಿಕ್ಷಕ, ವಾರ್ಡನ್ ಹೀಗೆ ಮೂರು ಹುದ್ದೆಗಳಿಗೂ ಆಯ್ಕೆಯಾಗಿದ್ದೇನೆ.
 
ಪ್ರಾಂಶುಪಾಲ ಹುದ್ದೆ ಆಯ್ಕೆ ಪಟ್ಟಿಯಲ್ಲಿ ರಾಜ್ಯಕ್ಕೆ 6ನೇ ರ‌್ಯಾಂಕ್. ಈಗ ಕೆಎಎಸ್ ಪರೀಕ್ಷೆ ಬರೆಯುವ ಆತ್ಮವಿಶ್ವಾಸ ಬಂದಿದೆ.

ಐನ್‌ಸ್ಟೀನ್‌ನ ಕ್ವಾಂಟಮ್ ಥಿಯರಿ, ಡಾಲ್ಟನ್‌ನ ಆಟೋಮಿಕ್ ಥಿಯರಿ, ಮೆಂಡಲಿವ್‌ನ ಆಧುನಿಕ ಆವರ್ತಕ ಕೋಸ್ಟಕವನ್ನು ಇಂಗ್ಲಿಷಿನಲ್ಲಿ ಎಷ್ಟು ಸುಲಭವಾಗಿ ಅರ್ಥಮಾಡಿಕೊಂಡೆನೋ ಅಷ್ಟೇ ಸುಲಭವಾಗಿ  ಹಳೆಗನ್ನಡದ ಶಬ್ದಮಣಿ ದರ್ಪಣ, ಕಾವ್ಯಮೀಮಾಂಸೆ ಕೂಡ ಅರ್ಥ ಮಾಡಿಕೊಳ್ಳುತ್ತೇನೆ.
 

ಪಾಲ್ ಕೋಯಲೋನ `ದಿ ಆಲ್ ಕೆಮಿಸ್ಟ್~ನಷ್ಟೆ ತೇಜಸ್ವಿಯವರ ಕೃತಿಗಳು ನನ್ನನ್ನು ಸೆಳೆಯುತ್ತವೆ. ಇಂಗ್ಲಿಷ್ ಬಗ್ಗೆ ಈಗ ಅಳುಕೇ ಇಲ್ಲ. ಪ್ರೌಢಶಾಲೆವರೆಗೆ ಕನ್ನಡ ಮಾಧ್ಯಮದಲ್ಲಿ ಓದದಿದ್ದರೆ ಕನ್ನಡದಲ್ಲಿ ಆಲೋಚಿಸಲು ಆಗುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.