ವಾಸ್ತವಿಕತೆಯ ಪ್ರತಿಬಿಂಬ’ ಎಂದೇ ನಂಬಲಾದ ‘ರಿಯಾಲಿಟಿ ಷೋ’ ಮಾಧ್ಯಮ ಜಗತ್ತನ್ನು ಬಲವಾಗಿ ಆಕ್ರಮಿಸಿದೆ. ಮಾಧ್ಯಮದ ಮೂಲಕ ಮನಸ್ಸನ್ನೂ! ಯಾವುದೇ ಟಿ.ವಿ. ವಾಹಿನಿಯಲ್ಲಿಯೂ ಪ್ರತಿದಿನದ ಯಾವುದಾದರೊಂದು ಕಾಲದಲ್ಲಿ ಈ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಅಂದರೆ ಅವುಗಳ ಟಿ.ಆರ್.ಪಿ. ಅಷ್ಟು ಹೆಚ್ಚು!
ಮಾಧ್ಯಮಗಳಲ್ಲಿ ವಿಶೇಷವಾಗಿ ಟಿ.ವಿ.ಯಲ್ಲಿ ಪ್ರಸಾರವಾಗುವ ಕಾರ್ಯ ಕ್ರಮಗಳು ನೈಜ ಜೀವನಕ್ಕೆ ದೂರ, ಎಂಬ ಅಪವಾದವನ್ನು ಬದಿಗಿರಿಸಿ ಬಂದಂಥವು ಈ ‘ರಿಯಾಲಿಟಿ ಷೋ’ ಗಳು. ಇಲ್ಲಿಯ ವಾಸ್ತವ ಏನೆಂದರೆ ಇವು ಹಸ್ತಪ್ರತಿ ಆಧರಿಸಿ, ನಿರ್ದೇಶಕನ ಸೂಚನೆ ಅನುಸಾರವಾಗಿ ‘ನಾಟಕ’ವಾಗುವುದಿಲ್ಲ. ಬದಲಿಗೆ ‘ಹಸಿ-ಹಸಿ’ ಯಾಗಿಯೇ ಮನುಷ್ಯರ ‘ಪಾತ್ರಗಳು’ ಹಾಗೂ ಮನಸ್ಸು ಬಯಲಾ ಗುವುದು. ಮಕ್ಕಳ ಹಾಡಿನ ಸ್ಪರ್ಧೆಗಳಿರಬಹುದು, ಒಂದೇ ಮನೆಯಲ್ಲಿ ಒಟ್ಟುಗೂಡಿದ ‘ಗೃಹಬಂಧನ’ದ ಕಾರ್ಯಕ್ರಮವಿರಬಹುದು ಎಲ್ಲವೂ ಮನುಷ್ಯನ ಭಾವನೆಗಳನ್ನು ದುಡಿಸಿಕೊಳ್ಳುವುದರ ಮೇಲೆಯೇ ನಿಂತಿರುವ ಕಾರ್ಯಕ್ರಮಗಳು. ಗೆಲ್ಲುವ ಸ್ಪರ್ಧಿ, ಸೋಲುವ ಸ್ಪರ್ಧಿ, ಅವರ ಪ್ರತಿಕ್ರಿಯೆಗಳು, ಕಾರ್ಯಕ್ರಮ ನೋಡುವವರ ಮನಃಸ್ಥಿತಿ ಈ ಎಲ್ಲವೂ ಇಲ್ಲಿ ಮುಖ್ಯವಾಗುತ್ತವೆ.
ಮನೋವೈಜ್ಞಾನಿಕವಾಗಿ ಈ ಕಾರ್ಯಕ್ರಮಗಳ ವಿಶ್ಲೇಷಣೆ ನಡೆಸಿದಾಗ ಅವು ಹೊರಚೆಲ್ಲುವ ಸತ್ಯಗಳು ಕಾರ್ಯಕ್ರಮ ನಿರ್ಮಾಪಕರು, ಕಲಾವಿದರು, ಸದಾ ಟಿ.ವಿ.ಗೆ ಅಂಟಿ ಕುಳಿತುಕೊಳ್ಳುವ ಯುವ ಜನತೆ-ಮಕ್ಕಳಿಗೆ ‘ಕಹಿ’ ಎನಿಸುವ ಸಾಧ್ಯತೆ ಖಂಡಿತ.
ಮನುಷ್ಯನ ಸಾಮರ್ಥ್ಯಗಳಿಗೆ ಕೆಲವು ಮಿತಿಗಳಿವೆ. ಉದಾಹರಣೆಗೆ ಮರೆವು. ನಾವು ಯಾವುದನ್ನೂ ಮರೆಯುವ ‘ಶಕ್ತಿ’ಯೇ ಇಲ್ಲದಿದ್ದರೆ ಜೀವನ ಸುಲಭವಿತ್ತೆ? ಹಾಗೆಯೇ ನಮ್ಮ ಎದುರಿನವರ ಮನಸ್ಸನ್ನು ಪೂರ್ತಿಯಾಗಿ ತಿಳಿಯಲಾಗದ ಅಸಮರ್ಥತೆ. ಮಾನವನ ಮನಸ್ಸಿನಲ್ಲಿ ಕ್ಷಣಕ್ಕೊಮ್ಮೆ ಹಾದುಹೋಗಬಹುದಾದ ಎಲ್ಲ ಯೋಚನೆಗಳನ್ನು ಎದುರಿಗಿರುವವರು ತಿಳಿದುಬಿಡುವಂತಿದ್ದರೆ ಯೋಚಿಸುವ ವನಾಗಲೀ, ಎದುರಿಗೆ ಇರುವವನಾಗಲೀ ನೆಮ್ಮದಿಯಿಂದ ಜೀವಿಸಲು ಸಾಧ್ಯವೇ? ಬೇಕಾದ ಬಟ್ಟೆ ಹಾಕಿಕೊಂಡು ಸುರಕ್ಷಿತವಾಗಿ ನಿಲ್ಲುವುದಕ್ಕೂ, ಎಲ್ಲರ ಮುಂದೆ ಬೆತ್ತಲಾಗುವ ಮುಜುಗರಕ್ಕೂ ಇರುವ ವ್ಯತ್ಯಾಸ.
ಮನುಷ್ಯನ ‘ಆದಿಮ’ ಪ್ರವೃತ್ತಿ ಈ ಎಲ್ಲ ‘ನಿಗೂಢತೆ’ಯ ಬಗೆಗೂ ಅಗಾಧ ಕುತೂಹಲ ಹೊಂದಿರುತ್ತದೆ. ಮತ್ತೆಮತ್ತೆ ಇವುಗಳನ್ನು ಶೋಧಿಸುವ, ಹೊರಗೆಳೆಯುವ ಆಕರ್ಷಣೆ ಮನಸ್ಸನ್ನು ಹಿಡಿದಿಡುತ್ತದೆ. ಈ ಪ್ರವೃತ್ತಿಯೇ ನಮ್ಮ ‘ರಿಯಾಲಿಟಿ ಷೋ’ ಗಳ ಟಿ.ಆರ್.ಪಿ. ಹೆಚ್ಚುವ ಪ್ರಮುಖ ಕಾರಣ.
ಒಂದು ಸೂಕ್ಷ್ಮ ಭಾವನೆಯನ್ನು ನೋಟದಲ್ಲಷ್ಟೇ ಹೊರಹಾಕುವ ನಟಿ-ನಟನ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಸಮಯ-, ಸಹನೆ-, ಬೌದ್ಧಿಕ- ಭಾವನಾತ್ಮಕತೆ ಎಲ್ಲವೂ ಅಗತ್ಯ. ಪ್ರಸ್ತುತ ಯುವ ಜನರಲ್ಲಿ ಇವುಗಳಿಗೆ ಅವಕಾಶವಿಲ್ಲ. ಇವೆಲ್ಲವೂ ಇರುವವರಲ್ಲಿ ಸಾಮಾಜಿಕ ಬದ್ಧತೆಯ ಕೊರತೆ. ‘ಸ್ವಲ್ಪ ಮಜಾಕ್ಕೆ’ ನೋಡಿದರಾಯಿತು. ‘ರಿಯಾಲಿಟಿ’ ಅಂದ್ರೆನೂ ಅದೂ ನಾಟಕನೇ’ ಎಂಬ ಮನೋಭಾವ. ಇವೆಲ್ಲದರಿಂದ ಇಂದಿನ ರಿಯಾಲಿಟಿ ಷೋಗಳು ‘ಭಾವನೆಗಳ ವೈಭವೀಕರಣ’ವಾಗಿ ಮನುಷ್ಯನ ಸೂಕ್ಷ್ಮ ಸಂವೇದನೆಯನ್ನೇ ಇಲ್ಲವಾಗಿಸುತ್ತಿವೆ. ‘ದೈಹಿಕ ಸೌಂದರ್ಯ’ಕ್ಕೆ ಎಲ್ಲಿಲ್ಲದ ಒತ್ತು ನೀಡಿ ತಪ್ಪು-, ಅನಾರೋಗ್ಯಕರ ಸೌಂದರ್ಯ ಪ್ರಜ್ಞೆಯನ್ನು ಹುಟ್ಟು ಹಾಕುತ್ತಿದೆ.
ರಿಯಾಲಿಟಿ ಷೋಗಳ ಇನ್ನೊಂದು ಆಯಾಮ ಮನೆಯ-ಮನಸ್ಸಿನ- ನೋವನ್ನು ವೈಭವೀಕರಿಸಿ, ಅನರ್ಹ ವ್ಯಕ್ತಿಗಳು, ಮನಸ್ಸಿಗೆ ಬಂದ ಹೇಳಿಕೆಗಳನ್ನು- ಸಲಹೆಗಳನ್ನು ನೀಡುವುದು. ಇವು ‘ಸಾಮಾಜಿಕ ಮಾದರಿ’ ಗಳನ್ನು ಯುವಜನರಲ್ಲಿ ಹುಟ್ಟು ಹಾಕುತ್ತವೆ. ‘ದಾಂಪತ್ಯ’ದ ಮಾದರಿಯನ್ನು ತಂದೆ-ತಾಯಿಗಳನ್ನು ನೋಡಿ ಕಲಿಯಬೇಕಾದ ‘ಯುವ ಮನಸ್ಸು’ ರಿಯಾಲಿಟಿ ಷೋ ಮೂಲಕ ‘ಕಾಲ್ಪನಿಕ- ತಪ್ಪು’ ಮಾದರಿಗಳನ್ನು ತನ್ನದಾಗಿಸಿ ಕೊಳ್ಳುತ್ತದೆ.
‘ರಿಯಾಲಿಟಿ ಷೋ’ಗಳು ಇರುವುದೇ ಮನರಂಜನೆಗಾಗಿ, ಅವುಗಳನ್ನು ಗಂಭೀರವಾಗಿ ಪರಿಗಣಿಸುವುದೇ ತಪ್ಪು ಎನ್ನುವವರಿದ್ದಾರೆ. ಆದರೆ ಮಾಧ್ಯಮಗಳು ತಲುಪುವುದು ಲಕ್ಷಾಂತರ ಜನರನ್ನು, ಅದೂ ಪರಿಣಾಮಕಾರಿಯಾಗಿ, ಏಕಕಾಲದಲ್ಲಿ. ನಮಗೆ ಇಷ್ಟವಿರಲೀ, ಬಿಡಲೀ, ಅವು ‘ಮನಸ್ಸು’ ಗಳನ್ನು ಆಳವಾಗಿಯೇ ಪ್ರಭಾವಗೊಳಿಸುತ್ತವೆ. ನಡವಳಿಕೆಯ ಮೇಲೆ ಪರಿಣಾಮ ಬೀರುತ್ತವೆ. ನಿಜವಾಗಿ ‘ರಿಯಾಲಿಟಿ ಷೋ’ ‘ರಿಯಲ್’ ಆಗಿತ್ತೋ ಇಲ್ಲವೋ, ಜೀವನದಲ್ಲಿ ಆ ನಡವಳಿಕೆಗಳು ನಿಜವಾಗುತ್ತವೆ. ಕ್ರೌರ್ಯ, -ಅಸೂಯೆ, -ದ್ವೇಷ ಮೊದಲಾದ ಋಣಾತ್ಮಕ ಭಾವನೆಗಳ ಬಗ್ಗೆ ‘ಬೇಡ’ ಎನ್ನುವ ಪ್ರವೃತ್ತಿ ದೂರವಾಗಿ ಅವು ‘ಸಹಜ’ ಎಂಬ ಭಾವ ತಲೆದೋರುತ್ತದೆ. ಅವು ಹೆಚ್ಚುತ್ತವೆ!
‘ರಿಯಾಲಿಟಿ ಷೋ’ಗಳಲ್ಲಿ ಸ್ಪರ್ಧಿಸುವ ಮಕ್ಕಳಲ್ಲಿ ಮಾನಸಿಕ ಸಮಸ್ಯೆಗಳ ಬಗ್ಗೆ ಇಂದು ಹಲವು ವೈಜ್ಞಾನಿಕ ಅಧ್ಯಯನಗಳು ನಡೆಯುತ್ತಿವೆ. ಆ ಮಕ್ಕಳು, ಅವರ ತಂದೆ-ತಾಯಿಗಳಲ್ಲಿ ಅತಿಯಾದ ಒತ್ತಡ, ಮಕ್ಕಳಲ್ಲಿ ಕಲಿಕೆಯ ಸಮಸ್ಯೆಗಳು, ಆತ್ಮವಿಶ್ವಾಸದ ಕೊರತೆ, ಸಹಜ ಬಾಲ್ಯವಿಲ್ಲದಿರುವುದು ಈ ಎಲ್ಲವೂ ಈಗಾಗಲೇ ಕಂಡುಬಂದಿವೆ. ಬಹು ಪ್ರತಿಭೆಯಿದ್ದರೂ ಈ ಮಕ್ಕಳು ವರುಷ ಕಳೆದಂತೆ ತಮ್ಮ ಸಾಧನೆಗಳಲ್ಲಿ ಹಿಂದೆ ಬೀಳುವುದು ಸಾಮಾನ್ಯವಾಗಿ ಕಂಡುಬಂದಿರುವ ಸಂಗತಿ
‘ರಿಯಾಲಿಟಿ ಷೋ’ಗಳ ಮೇಲೆ ಮನೋವೈಜ್ಞಾನಿಕ ದೃಷ್ಟಿಯಿಂದ ನಿರ್ಬಂಧ ಹೇರಬೇಕೆ? ಸಾಧ್ಯವೂ ಇಲ್ಲ. ಅಗತ್ಯವೂ ಇಲ್ಲ. ಮನಸ್ಸಿನ ಮೂಲಭೂತ ಅಗತ್ಯಗಳಾದ ಪರಸ್ಪರ ಸಂವಹನ, ನಮ್ಮ ಬಗೆಗಿನ ಒಳ್ಳೆಯ- ಕೆಟ್ಟ ಗುಣಗಳ ಅರಿವು, ಸಾಮಾಜಿಕ ಸಂಬಂಧಗಳು ಇವುಗಳ ಬಗೆಗಿನ ವಿದ್ಯಾಭ್ಯಾಸಕ್ಕೆ ‘ರಿಯಾಲಿಟಿ ಷೋ’ಗಳು ಉತ್ತಮ ಸಾಧನಗಳು. ಸ್ಪರ್ಧಿಗಳ ನೋವು-, ನಲಿವು ನಮ್ಮ ಜೀವನದಲ್ಲಿಯೂ ನಡೆಯಬಹುದಾದ ಘಟನೆಗಳು. -ಭಾವನೆಗಳು, ಹಾಗೆಯೇ ಎಷ್ಟೋ ತೊಡಕುಗಳನ್ನು ಮೀರಿ ಗೆಲ್ಲುವ ಸ್ಪರ್ಧಿ ಹಲವರಿಗೆ ಮಾದರಿಯೂ ಆಗಬಲ್ಲ.
ಅಂದರೆ ‘ರಿಯಾಲಿಟಿ ಷೋ’ಗಳನ್ನು ನೋಡುವ ಪ್ರೇಕ್ಷಕರು ಕಲಿಯಬೇಕಾದ್ದು ‘ಏನು ಮಾಡಬೇಕು, ಯಾವುದನ್ನು ಮಾಡಬಾರದು?’ ಎಂಬುದನ್ನು. ಮನರಂಜನೆಯೇ ಆದರೂ ಮನಸ್ಸಿಗೆ ಆರೋಗ್ಯಕರವಾದದ್ದನ್ನು, ನೆಮ್ಮದಿ ತರುವಂಥದನ್ನು ಮಾತ್ರ ಹೇಗೆ ಸ್ವೀಕರಿಸಬೇಕು ಎಂಬುದರ ಅರಿವು ಪ್ರೇಕ್ಷಕನಿಗೆ ಇಂದು ಹಿಂದೆಂದಿಗಿಂತ ಹೆಚ್ಚು ಅಗತ್ಯ. ಎಷ್ಟರವರೆಗೆ ‘ರಿಯಾಲಿಟಿ ಷೋ’ ನೈಜ, ಯಾವ ಮಿತಿಯ ಮೇಲೆ ಟಿ.ವಿ.ಯನ್ನು ಆರಿಸಿ ನಮ್ಮ ನೈಜಜೀವನಕ್ಕೆ ಮರಳುವುದು ಕ್ಷೇಮ ಎಂಬುದನ್ನು ನಾವೆಲ್ಲರೂ ಕಲಿಯಲೇಬೇಕಾಗಿದೆ.
(ಲೇಖಕರು ಮನೋವೈದ್ಯೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.