ADVERTISEMENT

ಶ್ರೇಷ್ಠತೆಯ ವ್ಯಸನ ಅಥವಾ...

ಆರಿಫ್ ರಾಜಾ
Published 25 ಜನವರಿ 2013, 19:59 IST
Last Updated 25 ಜನವರಿ 2013, 19:59 IST

ಸಾಹಿತ್ಯ ಶ್ರೇಷ್ಠತೆಯ ವ್ಯಸನ ಏನೆಲ್ಲಾ ಮಾಡಿಸಬಹುದೆಂಬುದಕ್ಕೆ `ಧಾರವಾಡದ ಸಾಹಿತ್ಯ ಉತ್ಸವ' ಇತ್ತೀಚಿನ ತಾಜಾ ಉದಾಹರಣೆ.
`ಸಾಹಿತ್ಯ  ಸಂಭ್ರಮ'ದಲ್ಲಿ ಎಲಿಟಿಸಂ ಧೋರಣೆಯಿದೆ. ಪದೇ ಪದೇ ಕನ್ನಡದ ಸಾಹಿತ್ಯಕ ಸಂದರ್ಭದಲ್ಲಿ ಎದ್ದೇಳುತ್ತಿರುವ ಇಂತಹ ವಿವಾದಗಳನ್ನು ಇನ್ನಷ್ಟು ಗಂಭೀರವಾದ ಸಂವಾದವಾಗಿಸಿ ಪರೀಕ್ಷಿಸಬೇಕಾದ ಜರೂರಿ ಯುವಕರ ಮುಂದಿದೆ.

ಬಂಡಾಯ ಪಂಥದ ಆಶಯವನ್ನು ಒಪ್ಪಿಯೂ ಅದರ ವಾಚ್ಯಗುಣವನ್ನು ಅಮಾನತ್ತಿನಲ್ಲಿರಿಸುವ, ನವ್ಯದ ಕಸುಬುಗಾರಿಕೆಯನ್ನು ಅನುಸರಿಸಿಯೂ ಅದರ ವ್ಯಕ್ತಿಗತ ಸಾಹಿತ್ಯಕ ನಿಲುವನ್ನು ನಿರಾಕರಿಸುವ ನಮ್ಮಂತಹ ಹೊಸಕಾಲದ ಬರಹಗಾರರ ತಾತ್ವಿಕತೆ ಈ ನೆವದಲ್ಲಾದರೂ ಪ್ರಕಟಗೊಳ್ಳಬೇಕಿದೆ.

ಚಂಪಾರಂತಹ ಹಿರಿಯರು ಉತ್ಸವದಲ್ಲಿ ಭಾಗವಹಿಸಿ ಬರುತ್ತೇನೆನ್ನುವುದು, ಕೆ.ವಿ.ತಿರುಮಲೇಶ ರಂತವರು ಸಾರಾಸಗಟಾಗಿ ತಿರಸ್ಕರಿಸಿರುವುದರ ಭಯಂಕರ ವೈರುಧ್ಯದ ಸಂಕೀರ್ಣತೆ ಅರ್ಥಮಾಡಿಕೊಳ್ಳಬೇಕು. ನನಗೆ ಒಟ್ಟಾರೆ ಅನ್ನಿಸುವುದು ವರ್ತಮಾನದ ಕನ್ನಡ ಸಾಹಿತ್ಯದ ಧೋರಣೆಗಳು ಬದಲಾಗುತ್ತಿವೆ. ಹೊಸ ಗಾಳಿ ಬೀಸುತ್ತಿದೆ. ನಾವು ಸರಿಯಾಗಿ ಗಮನಿಸುತ್ತಿಲ್ಲ.

ಈಗ ಮಾಡಬೇಕಾಗಿರುವುದು ಸ್ವೀಕರಿಸುವ ತಿರಸ್ಕರಿಸುವ ಸರಳ ಕ್ರಿಯೆಯ ಬದಲು ಹೊಸಬರು ಈ ಇವತ್ತಿನ ಹೊಸ ಟ್ರೆಂಡ್‌ನ ಸಾಮಾನ್ಯ ಗುಣಲಕ್ಷಣಗಳನ್ನು(ಪಂಥಾತೀತತೆ!?) ಕ್ರೋಢೀಕರಿಸಿ ನವಸಾಹಿತ್ಯಕ ಪಂಥದ ಉದಯವನ್ನು ಸಾರಬೇಕಾಗಿರುವುದು.
ಇಂಗ್ಲಿಷ್ ಮೀಡಿಯಾ ಹಾಗೂ ಬೂಕರಿನಂತಹ ಹೆಸರಿನ ಪ್ರಶಸ್ತಿಗಳ ಮೂಲಭೂತ ತಂತ್ರವಾಗಿರುವ ಗಿಮಿಕ್ ಎಲ್ಲಾ ಕಡೆ ಹಬ್ಬುತ್ತಿರುವುದು ಕಳವಳಕಾರಿ ಸಂಗತಿ.

ADVERTISEMENT

ಸಾಹಿತ್ಯ ಸೇವೆಯಲ್ಲೂ ದುಡ್ಡಿದ್ದವರು ಥೈಲಿ ಹಿಡಿದು ಬಂದು ತಮ್ಮ ಬೇಳೆ ಕಾಳು ಬೇಯಿಸಿಕೊಂಡು ಹೋಗಬಹುದಾದರೆ ಇದೊಂದು ರೀತಿ ಮತ್ತೆ ಆಸ್ಥಾನ ಕವಿ-ಕಲಾವಿದರನ್ನು ಸೃಷ್ಟಿಸುವ ಖಾಸಗಿ ಪ್ರಭುತ್ವದ (ಬಂಡವಾಳಗಾರರ) ಪುರಾತನ ಗುಲಾಮಗಿರಿಯ ನವ ಅವತರಿಣಿಕೆಯಾಗುವ ಅಪಾಯ ಬಹುದೂರವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.