
ರಾಜಕೀಯ ಎಂದರೇ ಕೊಳಕು. ಸಭ್ಯ ವ್ಯಕ್ತಿಗಳಿಗೆ ರಾಜಕೀಯ ಸಲ್ಲದು ಎಂಬಂತಹ ಸಿನಿಕತನದ ಮನಸ್ಥಿತಿ ಸರ್ವವ್ಯಾಪಿ. ಇಂತಹ ಸನ್ನಿವೇಶದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಜನಪರ ಹೋರಾಟಗಳ ಧ್ವನಿಗಳಾಗಿರುವ ಅನೇಕ ವ್ಯಕ್ತಿಗಳು ಈ ಬಾರಿ ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ರಾಜಕೀಯದ ಹೊಸ ಧ್ವನಿಗಳಾಗಲು ಹೊರಟಿರುವುದು ವಿಶೇಷ. ಅವರ ಹೊಸ ಆಶಯ, ರಾಜಕಾರಣದಲ್ಲೊಂದು ಹೊಸ ಮಾರ್ಗ ತೆರೆಯಬಲ್ಲುದೆ?
ಹೌದು, ರಾಜಕೀಯ ಪ್ರವೇಶ ನನ್ನ ಹೊಸ ಅವತಾರ. ಆದರೆ, ಹೋರಾಟಗಾರ್ತಿಯ ಪಾತ್ರವನ್ನೇನೂ ನಾನು ಬಿಟ್ಟುಕೊಟ್ಟಿಲ್ಲ. ಈ ಹೊಸ ಅವತಾರವನ್ನು ಹೋರಾಟದ ಮತ್ತೊಂದು ಮಜಲು ಎನ್ನಲು ಅಡ್ಡಿಯಿಲ್ಲ. ಮಿತಿಮೀರಿದ ಭ್ರಷ್ಟಾಚಾರ, ಹೆಚ್ಚಿರುವ ಸ್ವಜನ ಪಕ್ಷಪಾತ, ಗೊತ್ತು–ಗುರಿ ಇಲ್ಲದ ಯೋಜನೆ, ಅಸ್ಪಷ್ಟ ನೀತಿ ನಿರೂಪಣೆ, ಹೆಜ್ಜೆ–ಹೆಜ್ಜೆಗೂ ಮುಗ್ಗರಿಸುವ ಆಡಳಿತ... ಅಯ್ಯೋ ಇಂತಹ ಸಾಲು–ಸಾಲು ಗೋಳು ನೋಡಿ ಸಾಕಾಗಿದೆ; ತಲೆ ಚಿಟ್ಟು ಹಿಡಿದಿದೆ. ಸೈರಣೆ ಶಕ್ತಿ ಕುಂದಿಹೋಗಿದ್ದು ನಮಗೆಲ್ಲ ಬದಲಾವಣೆ ಅತ್ಯಗತ್ಯವಾಗಿ ಬೇಕಾಗಿದೆ. ಬಯಸಿದ ಬದಲಾವಣೆ ತರಲು ನಾವೂ ಈ ರಾಜಕೀಯ ಆಂದೋಲನದ ಭಾಗವಾಗಬೇಕಿದೆ. ನಾನು ಚುನಾವಣಾ ಕಣಕ್ಕೆ ಧುಮುಕಲು ಇದೇ ಕಾರಣ.
ಕಳೆದ ಮೂರೂವರೆ ದಶಕಗಳಿಂದ ಮಕ್ಕಳ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದೇನೆ. ಇಷ್ಟೊಂದು ಸುದೀರ್ಘ ಕಾಲದ ಹೋರಾಟದ ನಡುವೆಯೂ ಸಮಸ್ಯೆಗಳು ಹಾಗೇ ಉಳಿದಿವೆ. ಮಕ್ಕಳ ಅಭಿವೃದ್ಧಿ ಸೂಚ್ಯಂಕ ಪಾತಾಳ ಕಂಡಿದೆ. ಬಾಲ್ಯ ವಿವಾಹ ನಿಂತಿಲ್ಲ, ಶಿಶು ಮರಣ ತಗ್ಗಿಲ್ಲ, ಭ್ರೂಣಹತ್ಯೆಗೆ ತೆರೆ ಬಿದ್ದಿಲ್ಲ, ಪೌಷ್ಟಿಕಾಂಶ ಕೊರತೆಯ ಪಿಡುಗು ಬಿಟ್ಟಿಲ್ಲ, ಶಿಕ್ಷಣದ ಕಗ್ಗಂಟುಗಳನ್ನೂ ಬಿಡಿಸಲಾಗಿಲ್ಲ.
‘ಮಕ್ಕಳೇ ದೇಶದ ಆಸ್ತಿ’ ಎನ್ನುವುದು ಸವಕಲು ಹೇಳಿಕೆಯಾಗಿದೆಯೇ ಹೊರತು ಮಕ್ಕಳ ಅಭಿವೃದ್ಧಿಗೂ, ರಾಜಕೀಯ ಪಕ್ಷಗಳಿಗೂ ಸಂಬಂಧವೇ ಇಲ್ಲವಾಗಿದೆ. ರಾಜಕೀಯ ವ್ಯಕ್ತಿಯಾಗಿ ನಾನು ಮಾಡುತ್ತಿರುವ ಪೊಳ್ಳು ಆರೋಪವಿದು ಎಂಬ ಭಾವನೆಯನ್ನು ಯಾರೂ ತಂದುಕೊಳ್ಳಬಾರದು. ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿ, ಭಾರತೀಯ ಮಕ್ಕಳ ಕಲ್ಯಾಣ ಪರಿಷತ್ತಿನ ಉಪಾಧ್ಯಕ್ಷೆಯಾಗಿ ನಾನು ಪಡೆದಿರುವ ಅನುಭವದ ಆಧಾರದ ಮೇಲೆ ಈ ಮಾತು ಹೇಳುತ್ತಿದ್ದೇನೆ.
ದೇಶದ ಮುಂಚೂಣಿ ರಾಜಕೀಯ ಪಕ್ಷಗಳಿಗೆ ಸಮಸ್ಯೆಗಳು ಬಗೆಹರಿಯುವುದು ಬೇಕಿಲ್ಲ. ಅಸ್ಪಷ್ಟವಾದ ನೀತಿಗಳು, ಫಲಾನುಭವಿಗಳನ್ನು ತಲುಪದ ಯೋಜನೆಗಳೇ ಇದಕ್ಕೆ ಕಾರಣ. ಆಯೋಗಗಳಿಗೆ ವಿಷಯ ತಜ್ಞರನ್ನು ನೇಮಕ ಮಾಡಿದರೆ ಅವರು ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಯತ್ನಿಸುತ್ತಾರೆ. ಆದರೆ, ಈಗಿನ ಸನ್ನಿವೇಶದಲ್ಲಿ ಆಯೋಗಗಳೆಲ್ಲ ರಾಜಕೀಯ ನಿರಾಶ್ರಿತರ ತಾಣಗಳಾಗಿವೆ. ಇಂತಹ ವ್ಯಕ್ತಿಗಳು ಸದಸ್ಯರಾದರೆ ಏನು ಪ್ರಯೋಜನ? ಆಯೋಗದ ಹೆಸರಿನಲ್ಲಿ ‘ಅಧ್ಯಯನ ಪ್ರವಾಸ’ ಮಾಡುವುದು, ಸಂಬಳ, ಸಾರಿಗೆ ಭತ್ಯೆ ಪಡೆಯುವುದು ಇಷ್ಟೇ ಅವರ ಕೆಲಸ. ಯೋಜನೆಗಳ ನಿರ್ವಹಣಾ ಪ್ರಾಧಿಕಾರಗಳೆಲ್ಲ ಇಂತಹ ಏಟುಗಳಿಂದ ಜಖಂಗೊಂಡು ಮೂಲೆ ಸೇರಿರುವ ಪರಿ ಇದು.

ದೇಶದ ಅಭಿವೃದ್ಧಿ ನಕ್ಷೆ ಹೇಗಿರಬೇಕು ಎಂಬ ಕಲ್ಪನೆಯೇ ಈಗಿನ ಸಂಸದರಿಗಿಲ್ಲ. ಇಲ್ಲದಿದ್ದರೆ ಸಿಕ್ಕ ಐದು ವರ್ಷಗಳ ಅವಧಿಯನ್ನು ಪ್ರಗತಿಗೆ ಪೂರಕವಾಗಿ ಉಪಯೋಗ ಮಾಡುತ್ತಿದ್ದರು. ಮಕ್ಕಳ ಸಮಸ್ಯೆಗಳ ಕುರಿತಂತೆ ಸದನದಲ್ಲಿ ಯಾರೂ ಗಂಭೀರವಾದ ಪ್ರಶ್ನೆಗಳನ್ನೇ ಕೇಳುವುದಿಲ್ಲ. ಸಮಸ್ಯೆ ಆಳಕ್ಕೆ ಇಳಿದು ನೋಡುವಂತಹ, ತಲಸ್ಪರ್ಶಿ ನೋಟ ಬೀರುವಂತಹ, ಅದಕ್ಕೊಂದು ಶಾಶ್ವತ ಪರಿಹಾರ ಒದಗಿಸುವಂತಹ ಪ್ರಯತ್ನಗಳು ನಡೆದ ಉದಾಹರಣೆಗಳೇ ಇಲ್ಲ.
ಸಾಮಾಜಿಕ ಸಮಸ್ಯೆ ಕುರಿತಂತೆ ಆಳವಾಗಿ ಅಧ್ಯಯನ ನಡೆಸಿ, ಅದಕ್ಕೆ ಪರಿಹಾರ ಒದಗಿಸಲು ಕಾನೂನು ಸಮರವನ್ನೂ ನಡೆಸಿ, ಅಪಾರ ಅನುಭವ ಗಳಿಸಿದ ನಮ್ಮಂಥವರೇ ಅಲ್ಲವೆ ಸಂಸತ್‌ಗೆ ಹೋಗಬೇಕಿರುವುದು. ಹೋರಾಟದ ದನಿ ಸಂಸತ್ತಿನ ಬಲಾಢ್ಯ ಗೋಡೆಗಳನ್ನು ದಾಟಿಕೊಂಡು ಒಳಗೆ ಕುಳಿತವರನ್ನು ತಲುಪುತ್ತಿಲ್ಲ. ಹೀಗಾಗಿ ಒಳಗೆ ಕುಳಿತು ನಿರ್ಣಯ ಕೈಗೊಳ್ಳುವವರು ನಾವೇ ಆಗಬೇಕಿದೆ.
ರಾಜಕೀಯ ಶುದ್ಧೀಕರಣಕ್ಕೆ ಮುಂದಾಗಿ ತತ್ವಾದರ್ಶದ ದೀಪ ಹಿಡಿದು ಹೊರಟಿರುವ ಆಮ್ ಆದ್ಮಿ ಪಕ್ಷ ಇದೇ ಕಾರಣದಿಂದ ನನ್ನ ಗಮನಸೆಳೆದಿದೆ. ಎಎಪಿ ರಾಜಕೀಯವಾಗಿ ಮಗು ಎಂಬ ಕುಹಕ ಕೇಳಿಬಂದಿದೆ. ಅದು ಮಗುವಾಗಿರುವ ಕಾರಣದಿಂದಲೇ ಮುಗ್ಧವಾಗಿದೆ. ವಯಸ್ಸಾದ ಉಳಿದ ಪಕ್ಷಗಳ ಮುಖಕ್ಕೆ ಕೆಸರು ಮೆತ್ತಿದರೆ, ಎಎಪಿ ಮುದ್ದು–ಮುದ್ದಾಗಿ ಕಂಗೊಳಿಸುತ್ತಿದೆ. ಇದುವರೆಗೆ ಅನುಭವಿಸಿದ ವಂಚನೆಯಿಂದ ಒಳ–ಒಳಗೆ ಕುದಿದು ಹೋಗಿರುವ ಮಧ್ಯಮ ವರ್ಗದ ಅಪಾರ ಮತದಾರರು ಆ ಮಗುವನ್ನು ಎತ್ತಿಕೊಳ್ಳಲಿದ್ದಾರೆ; ಅಪ್ಪಿಕೊಳ್ಳಲಿದ್ದಾರೆ. ಉಳಿದವರಿಗೆ ಜಾತಿಬಲ, ತೋಳ್ಬಲ, ಹಣಬಲಗಳಿದ್ದರೆ ನಮಗೆ ಜನರ ಪ್ರೀತಿಯೇ ಶ್ರೀರಕ್ಷೆ.
(ಬೆಂಗಳೂರು ದಕ್ಷಿಣ ಕ್ಷೇತ್ರದ ಎಎಪಿ ಅಭ್ಯರ್ಥಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.