ADVERTISEMENT

ಭೀಮನ ಅಮಾವಾಸ್ಯೆ: ಆದರ್ಶ ದಾಂಪತ್ಯದ ಹಬ್ಬ

ಇಂದು ಭೀಮನ ಅಮಾವಾಸ್ಯೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2023, 20:28 IST
Last Updated 16 ಜುಲೈ 2023, 20:28 IST
ಶಿವಪಾರ್ವತಿ
ಶಿವಪಾರ್ವತಿ   

–ನವೀನ ಗಂಗೋತ್ರಿ

ಆಷಾಢ ಮಾಸವೆನ್ನುವುದು ದಕ್ಷಿಣ ಭಾರತದಲ್ಲಿ ಚಾಂದ್ರಮಾನ ಪದ್ಧತಿಯನ್ನು ಅನುಸರಿಸುವ ಗೃಹಸ್ಥರು ತಮ್ಮ ಮನೆಯಲ್ಲಿ ಹೆಚ್ಚಿನ ದೇವತಾಕಾರ್ಯಗಳನ್ನು ಕೈಗೊಳ್ಳದಿರುವ ಒಂದು ಮಾಸ. ಆಷಾಢಶುದ್ಧ ಏಕಾದಶಿ ಮತ್ತು ಪೂರ್ಣಿಮೆಯನ್ನು ಕ್ರಮವಾಗಿ ಪ್ರಥಮೈಕಾದಶಿ ಮತ್ತು ವ್ಯಾಸಪೂರ್ಣಿಮೆಯನ್ನಾಗಿ ಆಚರಿಸಿದ ಬಳಿಕ ಆಷಾಢಮಾಸದಲ್ಲಿ ಉಳಿದಿರುವ ದೊಡ್ಡ ಹಬ್ಬವೆಂದರೆ ಅದು ಆಷಾಢ ಅಮಾವಾಸ್ಯೆ. ಈ ಅಮಾವಸ್ಯೆಯನ್ನು ಭೀಮನ ಅಮಾವಸ್ಯೆ ಎಂದು ಗುರುತಿಸುವುದು ರೂಢಿ. ಕರ್ನಾಟಕದ ಬೇರೆ ಬೇರೆ ಭಾಗದಲ್ಲಿ ಇದನ್ನೇ ಅಳಿಯನ ಅಮಾವಸ್ಯೆ, ಕೊಡೆ ಅಮಾವಾಸ್ಯೆ ಎಂದೆಲ್ಲ ಕರೆಯುವುದಿದೆ.

ಭಾರತೀಯ ಗೃಹಸ್ಥರಿಗೆ ಆದರ್ಶಪ್ರಾಯವಾದ ಒಂದು ದೇವತಾಕುಟುಂಬವೆಂದರೆ ಅದು ಶಿವ ಮತ್ತು ಪಾರ್ವತಿಯರದ್ದು. ಇಬ್ಬರು ಮುದ್ದಾದ ಮಕ್ಕಳನ್ನು ಪಡೆದ ಶಿವ ಮತ್ತು ಪಾರ್ವತಿಯರು ಕುಟುಂಬಜೀವನದ ಆದರ್ಶ ದೇವತೆಗಳು. ತ್ರಿಮೂರ್ತಿಗಳಲ್ಲಿ ಕುಟುಂಬದ ವಿಚಾರ ಬಂದಾಗ ಇಷ್ಟು ಪೂರ್ಣವೆನ್ನಿಸುವ ಇನ್ನೊಂದು ಕುಟುಂಬ ಇಲ್ಲ. ಬಹುತೇಕ ನಮ್ಮ ಹಬ್ಬಗಳು ಶಿವ ಮತ್ತು ವಿಷ್ಣುವಿನ ಸುತ್ತಮುತ್ತ ಹೆಣೆದುಕೊಂಡಿರುವುದು ವಿದಿತವೇ. ಆಷಾಢದ ಅಮಾವಸ್ಯೆ ಕೂಡ ಶಿವ ಮತ್ತು ಪಾರ್ವತಿಯರಿಗೆ ಸಂಬಂಧಿಸಿದ ಕಥೆಯನ್ನು ಒಳಗೊಳ್ಳುತ್ತದೆ. ಸತಿಪತಿಯರು ಈ ದಿನದಂದು ಶಿವ ಮತ್ತು ಪಾರ್ವತಿಯರನ್ನು ಅರ್ಚಿಸಿ ಫಲಪ್ರದವಾದ ಕುಟುಂಬಜೀವನಕ್ಕಾಗಿ ಪ್ರಾರ್ಥಿಸುತ್ತಾರೆ.

ADVERTISEMENT

ಸತಿಪತಿಯರು ಮಾತ್ರವಲ್ಲದೆ ಮದುವೆಯಾಗದ ಹೆಣ್ಣುಮಕ್ಕಳು ತಮ್ಮ ಮನೆಯ ತಂದೆ, ಅಣ್ಣ, ತಮ್ಮ ಇತ್ಯಾದಿ ಪುರುಷಸದಸ್ಯರ ದೀರ್ಘ ಬಾಳ್ವೆ ಮತ್ತು ಶ್ರೇಯಸ್ಸಿಗಾಗಿ ಈ ದಿನದಂದು ಪ್ರಾರ್ಥಿಸುವುದು ಇದೆ. ಅವಿವಾಹಿತ ಹೆಂಗಳೆಯರು ಒಳ್ಳೆಯ ಜೀವನಸಂಗಾತಿಗಾಗಿಯೂ ಈ ಹಬ್ಬವನ್ನು ಆಚರಿಸುವುದು ಸಂಪ್ರದಾಯ. ಈ ಹಬ್ಬದಲ್ಲಿ ಸ್ಥಾನೀಯವಾಗಿ ಆಚರಣೆಯಲ್ಲಿ ಭಿನ್ನತೆ ಇರಬಹುದಾದರೂ ಮುಖ್ಯವಾಗಿ ಶಿವ ಮತ್ತು ಪಾರ್ವತಿಯರನ್ನು ಪೂಜಿಸುವುದು ಎಲ್ಲೆಡೆ ಸಾಮಾನ್ಯವಾದ ಆಚರಣೆ.
ಮದುವೆಯಾದ ಹೊಸದರಲ್ಲಿ ಆಷಾಢ ಮಾಸದಲ್ಲಿ ಹೆಂಡತಿಯನ್ನು ತವರಿಗೆ ಕಳುಹಿಸುವುದು ಒಂದು ರೂಢಿ. ಅಂದರೆ ಅದೊಂದು ಮಾಸ ಪರ್ಯಂತ ನವದಂಪತಿಗಳು ಪರಸ್ಪರ ಸನಿಹವಿರುವುದಿಲ್ಲ. ಆಷಾಢದ ಕೊನೆಯ ದಿನದಂದು ಅಳಿಯ ತನ್ನ ಹೆಂಡತಿಯನ್ನು ಮರಳಿ ಕರೆತರಲು ಮಾವನ ಮನೆಗೆ ಬರುತ್ತಾನೆ. ಮಾವ ತನ್ನ ಅಳಿಯನನ್ನು ಆದರಾಭಿಮಾನದಿಂದ ಬರಮಾಡಿಕೊಂಡು ಮರುದಿನ ಮಗಳನ್ನು ಅಳಿಯನೊಟ್ಟಿಗೆ ಕಳುಹಿಸಿಕೊಡುತ್ತಾನೆ. ಉತ್ತರ ಕನ್ನಡದ ಕೆಲವು ಸಮುದಾಯಗಳಲ್ಲಿ ಈ ಹಬ್ಬವನ್ನು ‘ಕೊಡೆ ಅಮಾವಸ್ಯೆ’ ಎನ್ನುವುದೂ ಇದೆ. ಕಾರಣವಿಷ್ಟೆ, ಉತ್ತರಕನ್ನಡದಲ್ಲಿ ಆಷಾಢವೆಂದರೆ ತೀವ್ರ ಮಳೆಗಾಲದ ಹೊತ್ತು. ಆ ಸಮಯದಲ್ಲಿ ಮಾವನ ಮನೆಗೆ ಬಂದ ಅಳಿಯನಿಗೆ ಕೊಡೆಯನ್ನಿತ್ತು ಮಾವ ಸತ್ಕರಿಸುತ್ತಾನೆ. ಸಂಪ್ರದಾಯಸ್ಥ ಕುಟುಂಬಗಳು ಪ್ರತಿವರ್ಷವೂ ತಪ್ಪದೆ ಅಳಿಯನ ಅಮಾವಸ್ಯೆಗೆ ಬರುವಂತೆ ಅಳಿಯನಿಗೆ ಆಮಂತ್ರಣ ಕೊಡುವುದು ಇವತ್ತಿಗೂ ರೂಢಿಯಲ್ಲಿದೆ.

‘ಜ್ಯೋತಿರ್ಭೀಮೇಶ್ವರ ವ್ರತ’ ಎಂದು ಕರೆಸಿಕೊಳ್ಳುವ ಈ ವ್ರತದಲ್ಲಿ ಬರುವ ‘ಭೀಮ’ ಎನ್ನುವ ಹೆಸರಿಗೂ ಪಂಚಪಾಂಡವರಲ್ಲಿ ಮಧ್ಯಮಪಾಂಡವನೆನಿಸಿಕೊಂಡ ಭೀಮನಿಗೂ ಸಾಕ್ಷಾತ್ ಸಂಬಂಧ ಇದ್ದಂತೆ ತೋರುವುದಿಲ್ಲ. ಭೀಮೇಶ್ವರ ಎನ್ನುವ ಹೆಸರಿನ ಶಿವ ದೇವಾಲಯಗಳೂ ನಮ್ಮ ನಾಡಿನಲ್ಲಿ ಸಾಕಷ್ಟು ಇವೆಯಾದ್ದರಿಂದ ಈ ವ್ರತದದಲ್ಲಿ ಭೀಮನೆಂದು ಕರೆಸಿಕೊಳ್ಳುವ ಅಧಿದೇವತೆ ಶಿವನೇ ಎಂಬುದು ಖಚಿತ. ಸ್ಕಂದಪುರಾಣದಲ್ಲಿ ಈ ವ್ರತದ ಕುರಿತಾದ ಉಲ್ಲೇಖ ಸಿಗುತ್ತದೆ.

ಸತಿಪತಿಯರ ನಡುವಿನ ನಂಟು ಮತ್ತು ಪರಸ್ಪರ ಶ್ರೇಯಃಕಾಂಕ್ಷೆಯನ್ನು ಉದ್ದೀಪಿಸುವ ಈ ಹಬ್ಬ ನಮ್ಮ ಕಾಲದಲ್ಲಿ ಪತಿಪತ್ನಿಯರ ಸೌಹಾರ್ದವನ್ನು ಗಟ್ಟಿಗೊಳಿಸುವುದಕ್ಕಾಗಿ ಇರುವ ಸಾಂಪ್ರದಾಯಿಕ ಪ್ರಕಲ್ಪವಾಗಿ ಬಲು ಮುಖ್ಯವೆನ್ನಿಸಿಕೊಳ್ಳುತ್ತದೆ. ಆದರ್ಶ ವೈವಾಹಿಕ ಬದುಕಿನ ಉದಾಹರಣೆಯಾಗಿ ಶಿವ–ಪಾರ್ವತಿಯರನ್ನು ನೆನೆದುಕೊಳ್ಳುವ ಹೊತ್ತು ಸಹ ಇದು ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.