ADVERTISEMENT

ಬಿಸಿಲಿನ ಮೇಲಾಟ ಎಳನೀರು ಮಾರಾಟ

ಎಸ್‌.ಸಂಪತ್‌
Published 11 ಮಾರ್ಚ್ 2019, 19:45 IST
Last Updated 11 ಮಾರ್ಚ್ 2019, 19:45 IST
ರಾಜರಾಜೇಶ್ವರಿ ನಗರದಲ್ಲಿ ಎಳನೀರು ಮಾರಾಟ
ರಾಜರಾಜೇಶ್ವರಿ ನಗರದಲ್ಲಿ ಎಳನೀರು ಮಾರಾಟ   

ಅರ್ಧ ಕಿ.ಮೀ ಗಿಂತ ಕಡಿಮೆ ಉದ್ದದ ರಸ್ತೆಯ ಎರಡೂ ಬದಿಯಲ್ಲಿ ಪಾದಚಾರಿ ಮಾರ್ಗಕ್ಕೆ ಅಂಟಿಕೊಂಡು 14 ಕಡೆ ಎಳನೀರು ಮಾರಾಟ ನಡೆಯುತ್ತಿದೆ. ತಿಂಗಳ ಹಿಂದೆ ಇಲ್ಲಿ ಎಂಟು ಕಡೆಯಷ್ಟೇ ಎಳನೀರು ಮಾರಾಟ ನಡೆಯುತ್ತಿತ್ತು.

ಇದು ರಾಜರಾಜೇಶ್ವರಿ ನಗರದ ಕೆಂಚೇನಹಳ್ಳಿ ಮುಖ್ಯ ರಸ್ತೆಯ ಚಿತ್ರಣ. ಇಲ್ಲಿನ ಪೆಟ್ರೋಲ್‌ ಬಂಕ್‌ ವೃತ್ತದಿಂದ ಜಯಣ್ಣ ವೃತ್ತದವರೆಗಿನ ಅರ್ಧ ಕಿ.ಮೀ ಅಂತರದಲ್ಲಿ ಎಲ್ಲಿ ನೋಡಿದರೂ ಎಳನೀರು ಮಾರಟಗಾರರೇ ಕಾಣುತ್ತಾರೆ. ಪಾದಚಾರಿ ಮಾರ್ಗದಲ್ಲಿ ಅಂದಾಜು 100ರಿಂದ 150 ಅಡಿಗೊಂದು ಕಡೆ ಎಳನೀರು ವ್ಯಾಪಾರ ನಡೆಯುತ್ತಿದೆ.

ಇದು ಬೇಸಿಗೆ ‘ಎಫೆಕ್ಟ್‌’! ಹೆಚ್ಚುತ್ತಿರುವ ಧಗೆ, ಬಿಸಿಲಿನ ಝಳದಿಂದಾಗಿ ದೇಹವನ್ನು ತಂಪಾಗಿಟ್ಟುಕೊಳ್ಳಲು ಬಹುತೇಕರು ಎಳನೀರಿನ ಮೊರೆ ಹೋಗುತ್ತಿರುವುದರಿಂದ ಎಳನೀರು ವ್ಯಾಪಾರಿಗಳಿಗೆ ಇದೀಗ ಸುಗ್ಗಿ.

ADVERTISEMENT

ಇಲ್ಲಿ ದಿನಕ್ಕೆ 100 ಎಳನೀರಿನಿಂದ 500 ಎಳನೀರು ಮಾರುವ ವ್ಯಾಪಾರಿಗಳೂ ಇದ್ದಾರೆ. ಎಳನೀರು ವ್ಯಾಪಾರಿಗಳ ನಡುವೆಯೇ ಸ್ಪರ್ಧೆ ಏರ್ಪಟ್ಟಿದೆ. ಇಲ್ಲಿರುವ ಬಹುತೇಕ ವ್ಯಾಪಾರಿಗಳು ಮಂಡ್ಯ, ಮದ್ದೂರು, ಮಳವಳ್ಳಿ, ಕೆ.ಆರ್‌. ಪೇಟೆ ಭಾಗದವರು. ಹಾಗಾಗಿ ಅವರಲ್ಲಿ ಆರೋಗ್ಯಕರ ಸ್ಪರ್ಧೆಯಿದೆ. ಎಲ್ಲರೂ ಒಬ್ಬರನ್ನೊಬ್ಬರು ಬಲ್ಲರು. ಅವರಲ್ಲಿ ಕೆಲವರು ಸಂಬಂಧಿಕರೂ ಇದ್ದಾರೆ. ಎಲ್ಲರ ಬಳಿಯೂ ಎಳನೀರಿನ ಬೆಲೆ ಒಂದೇ.

ಬೇಸಿಗೆ ಕಾಲದಲ್ಲಿ ಎಳನೀರು ವ್ಯಾಪಾರಕ್ಕೆ ಬರುವ ಕೆಲ ವ್ಯಾಪಾರಿಗಳು ಮಳೆಗಾಲ ಆರಂಭವಾಗುತ್ತಿದ್ದಂತೆ ಇಲ್ಲಿಂದ ಮಾಯವಾಗುತ್ತಾರೆ. ಮೂರು, ನಾಲ್ಕು ತಿಂಗಳು ವಹಿವಾಟು ನಡೆಸುವ ಅವರು ಮತ್ತೆ ಇಲ್ಲಿಗೆ ಬರುವುದು ಮುಂದಿನ ಬೇಸಿಗೆಗೆ. ಕೆಲವರು ಪಾದಚಾರಿ ಮಾರ್ಗದಲ್ಲಿ ಕಾಫಿ, ಟೀ ಅಂಗಡಿ ಜೊತೆ ಬೀಡಿ, ಸಿಗರೇಟು, ಗುಟ್ಕಾ ಇಟ್ಟುಕೊಂಡಿದ್ದಾರೆ. ಅವುಗಳ ಜತೆಗೆ ಎಳನೀರು ಕೂಡ ಸೇರಿಸಿಕೊಂಡಿದ್ದಾರೆ.

ಬೆಳಿಗ್ಗೆ, ಸಂಜೆ ವಾಯುವಿಹಾರಕ್ಕೆ ಹೋಗುವವರು, ಪಾದಚಾರಿಗಳು, ಸಮೀಪದ ಅಂಗಡಿ, ಕಚೇರಿಗಳ ಕೆಲಸಗಾರರೇ ಗ್ರಾಹಕರು.

ಸ್ವಂತ ಉದ್ಯೋಗ

ಇಲ್ಲಿ ನಾಲ್ಕರಿಂದ ಐದು ವರ್ಷಗಳಿಂದ ಎಳನೀರು ಮಾರುತ್ತಿರುವ ಕೆ.ಆರ್‌.ಪೇಟೆಯ ನವೀನ್‌ ಎಂಜಿನಿಯರಿಂಗ್‌ ವ್ಯಾಸಂಗವನ್ನೂ ಅರ್ಧಕ್ಕೆ ಮೊಟಕುಗೊಳಿಸಿರುವಾತ. ‘10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದೆ. ಪಿಯುಸಿ (ಪಿಸಿಎಂಬಿ) ಶೇ 53ರಷ್ಟು ಅಂಕ ಪಡೆದು ಪಾಸಾದೆ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮಾಡುತ್ತಿದ್ದ ಪಾಠ ನನಗೆ ಅರ್ಥವೇ ಆಗುತ್ತಿರಲಿಲ್ಲ. ಇಷ್ಟೆಲ್ಲ ಓದಿ ಬೇರೆಯವರ ಬಳಿ ಕೆಲಸಕ್ಕೆ ಹೋಗುವ ಬದಲು ಸ್ವಂತ ಉದ್ಯೋಗವೆಂದು ರಾಜರಾಜೇಶ್ವರಿ ನಗರದಲ್ಲಿ ಎಳನೀರು ಮಾರಾಟ ಮಾಡುತ್ತಿದ್ದೇನೆ’ ಎನ್ನುತ್ತಾರೆ ಯುವಕ ನವೀನ್‌.

‘ಇಲ್ಲಿ ವ್ಯಾಪಾರ ಆರಂಭಿಸಿದಾಗ ಕೇವಲ ಮೂರು ಕಡೆಯಷ್ಟೇ ಎಳನೀರು ಸಿಗುತ್ತಿತ್ತು. ಆದರೀಗ 14 ಕಡೆ ಸಿಗುತ್ತಿದೆ. ನಮ್ಮಲ್ಲೂ ಕಾಂಪಿಟೇಷನ್‌ ಹೆಚ್ಚಾಗಿದೆ. ಇಷ್ಟೆಲ್ಲ ಇದ್ದರೂ ಗಿರಾಕಿಗಳು ನನ್ನನ್ನೇ ಹುಡುಕಿಕೊಂಡು ಬರುತ್ತಾರೆ. ಇದರಿಂದ ನಾನು ಎರಡರಿಂದ ಮೂರು ದಿನಕ್ಕೆ ಸಾವಿರ ಎಳನೀರು ಮಾರಲು ಸಾಧ್ಯವಾಗಿದೆ. ಮದ್ದೂರಿನ ಎಳನೀರು ಮಂಡಿಯಿಂದ ಎಳನೀರು ತರುತ್ತೇನೆ. ಬೇಸಿಗೆ ಕಾಲದಲ್ಲಿ ತಿಂಗಳಿಗೆ 30ರಿಂದ 40 ಸಾವಿರ ಲಾಭ ಮಾಡಿಕೊಳ್ಳುತ್ತೇನೆ. ಬೇರೆ ಅವಧಿಯಲ್ಲಿ ಅದರ ಅರ್ಧದಷ್ಟು ಆಗುತ್ತದೆ’ ಎಂದು ಅವರು ಹೇಳುತ್ತಾರೆ.

‘ಜನರ ಆರೋಗ್ಯ ಕಾಳಜಿ ನಮಗೆ ಅನುಕೂಲ’

‘ಜನರು ಪೆಪ್ಸಿ, ಕೋಲಾ ಕುಡಿಯುವುದು ಕಡಿಮೆ ಮಾಡಿ ಎಳನೀರು ಕುಡಿಯಲು ಮುಂದಾಗಿರುವುದು ನಮ್ಮ ಸೌಭಾಗ್ಯ. ಅವರ ಆರೋಗ್ಯ ಕಾಳಜಿಯಿಂದಾಗಿ ನಮಗೆ ವ್ಯಾಪಾರವೂ ವೃದ್ಧಿಯಾಗುತ್ತಿದೆ. ಈಬಾರಿ ಮಾರ್ಚ್‌ ಆರಂಭದಲ್ಲಿಯೇ ಬಿಸಿಲು ಹೆಚ್ಚಾಗಿದೆ. ಸೂರ್ಯ ಹೆಚ್ಚು ಪ್ರಖರವಾದಷ್ಟು ನಮ್ಮ ವ್ಯಾಪಾರವೂ ಹೆಚ್ಚಾಗುತ್ತದೆ. ಅದರ ಜತೆಗೆ ಇನ್ನೇನು ಲೋಕಸಭಾ ಚುನಾವಣೆಯೂ ಬಂದಿದೆ. ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರ ಸಭೆ, ಸಮಾರಂಭ, ಪ್ರಚಾರ, ರ‍್ಯಾಲಿಗಳಲ್ಲಿ ಬಳಲಿದವರು ಎಳನೀರು ಕುಡಿಯಲು ಬರುತ್ತಾರೆ. ಇದೆಲ್ಲ ನಮ್ಮಂಥ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ’ ಎನ್ನುವುದು ಅವರ ವಿವರಣೆ. ಸದ್ಯ ಒಂದು ಎಳನೀರಿನ ಬೆಲೆ ₹ 30 ಇದೆ. ಏಪ್ರಿಲ್‌ ನಂತರ ಎಳನೀರಿನ ಪೂರೈಕೆ ಕಡಿಮೆ ಆಗಿ ₹ 5ರಿಂದ ₹ 10ರಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುವುದು ಅವರ ಆಶಾಭಾವನೆ.

ಹೊಟ್ಟೆಪಾಡು ಸ್ವಾಮಿ:

ಇಲ್ಲಿ ವರ್ಷದಿಂದ ಎಳನೀರು ಮಾರುತ್ತಿರುವ ವರಲಕ್ಷ್ಮಿ ಮದ್ದೂರಿನವರು.ಯಾವ ಗಂಡಸಿಗೂ ಕಡಿಮೆ ಇಲ್ಲದಂತೆ ಅವರು ಮಚ್ಚಿನಿಂದ ಎಳನೀರು ಕೊಚ್ಚುತ್ತಾರೆ.‘ಹೊಟ್ಟೆ ಪಾಡಿಗಾಗಿ ನಾನು ಎಳನೀರು ಮಾರಲು ಬಂದಿದ್ದೇನೆ. ನನ್ನ ಬಳಿ ದಿನಕ್ಕೆ 80ರಿಂದ 100 ಎಳನೀರು ಮಾರಾಟವಾಗುತ್ತದೆ. ಈಗ ಬೇಸಿಗೆ ಆರಂಭವಾಯಿತಲ್ಲ. ಇನ್ನು ಮುಂದೆ ಹೆಚ್ಚು ವ್ಯಾಪಾರ ಆಗಬಹುದು’ ಎನ್ನುತ್ತಾರೆ ವರಲಕ್ಷ್ಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.