ADVERTISEMENT

ತಂದೆ-ತಾಯಿಗಳ ಕಷ್ಟ ಮಕ್ಕಳಿಗೆ ಗ್ಯಾರಂಟಿ

ನರಸಿಂಹರಾಜು ಕೆ., ತುಮಕೂರು.
Published 10 ಮಾರ್ಚ್ 2013, 19:59 IST
Last Updated 10 ಮಾರ್ಚ್ 2013, 19:59 IST

ಗ್ರಾಮ ನಗರವೆನ್ನದೆ ಪ್ರತಿಯೊಬ್ಬ ಭಾರತೀಯನಿಗೂ ವಿಭಿನ್ನ ರೀತಿಯಲ್ಲಿ ಜಾತಿಯ ಅನುಭವವಾಗುತ್ತಿದೆ. ಜಾತಿಯ ಬಿಲಗಳಾದ ಗ್ರಾಮಗಳಲ್ಲಿ ಹುಟ್ಟು, ಅಸ್ಪೃಶ್ಯತೆ, ಕೆಲವು ಸಾಮಾಜಿಕ ಸೌಲಭ್ಯಗಳು ಮತ್ತು ನಿರ್ಬಂಧಗಳೊಂದಿಗೆ ನಮಗೆ ನಮ್ಮ ಜಾತಿ ಯಾವುದು ಎಂದು ತಿಳಿದು ನಿರ್ದಿಷ್ಟ ಜಾತಿಗೆ ಸೇರಿದ್ದೇವೆಂಬುದು ಅರಿವಾಗುತ್ತದೆ.

ನಗರಗಳಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ದಾಖಲಾಗುವಾಗ, ಪರೀಕ್ಷೆ ತೆಗೆದುಕೊಳ್ಳುವಾಗ ನಾವು ಪಾವತಿಸುವ ದುಬಾರಿ ಅಥವಾ ಕಡಿಮೆ ಶುಲ್ಕಗಳು, ವರ್ಗಾವಣೆ ಪತ್ರ, ಹಲವು ಸೌಲಭ್ಯಗಳು ಮತ್ತು ಜಾತಿಸಂಘಟನೆಗಳು ಅವುಗಳ ಕಾರ್ಯಕ್ರಮಗಳು, ಸಮಾವೇಶಗಳ ಮೂಲಕ ತಮ್ಮ ಜಾತಿಗಳು ತಿಳಿಯುತ್ತವೆ.

ಸಂಸ್ಕೃತೀಕರಣ ಪರಿಕಲ್ಪನೆಯನ್ನು ಮಂಡಿಸಿದ ಸಮಾಜಶಾಸ್ತ್ರಜ್ಞ ಎಂ.ಎನ್. ಶ್ರೀನಿವಾಸ್ ಅವರು `ರಿಲಿಜಿಯಸ್ ಸೊಸೈಟಿ ಅಮಾಂಗ್ ದಿ ಕೂರ್ಗ್ ಆಫ್ ಸೌತ್ ಇಂಡಿಯಾ' (1952)  ಎಂಬ ಕೃತಿಯಲ್ಲಿ ಜಾತಿಯಲ್ಲಿ ಮೇಲ್ಮುಖ ಚಲನೆಗೆ ಅವಕಾಶವಿದೆಯೆಂಬುದನ್ನು ನಿರೂಪಿಸಿದ್ದಾರೆ. ಕೊಡವರು  ಅಮ್ಮ ಕೊಡವರಾಗಿ, ಗೊಂಡರು  ರಾಜಗೊಂಡರಾಗಿ ಬದಲಾಗಿರುವುದನ್ನು ಗಮನಿಸಬಹುದು.

ಸಂಸ್ಕೃತೀಕರಣದ ಮೂಲಕ ಪಾಶ್ಚ್ಯಾತೀಕರಣಗೊಂಡು  ಸ್ವಾತಂತ್ರ್ಯ, ಸಮಾನತೆ, ಜಾತ್ಯತೀತತೆ  ಮುಂತಾದ ತತ್ವಗಳನ್ನು ಅಳವಡಿಸಿಕೊಂಡು ಜಾತಿಮುಕ್ತ ಸಮಾಜವನ್ನು ನಿರ್ಮಿಸಬಹುದು ಎಂಬ ಆಶಯ ಅವರದಾಗಿತ್ತು. ಸಂಸ್ಕೃತೀಕರಣವು ಜಾತಿಯಲ್ಲಿನ ಆಂತರಿಕ ಚಲನೆಯೇ ಹೊರತು ಜಾತಿ ಬದಲಾವಣೆಯಲ್ಲ. ಹಾಗಾಗಿ ನಮ್ಮ ಪೂರ್ವಜರು ಬೇರೆ ಜಾತಿಗೆ ಸೇರಿರುವುದಿಲ್ಲ ಎನ್ನಬಹುದು.

ಆದರೆ ಅಂತರ್ಜಾತಿಯ ವಿವಾಹದಿಂದ ಜನಿಸುವ ಮಕ್ಕಳ ತಂದೆ ತಾಯಿಯರು ವಿಭಿನ್ನ ಜಾತಿಗೆ ಸೇರಿರುತ್ತಾರೆ. ಸಂಸ್ಕೃತೀಕರಣ ಪ್ರಕ್ರಿಯೆಯು ಸಾಕಷ್ಟು ಬದಲಾವಣೆ ತಂದರೂ ಎಲ್ಲಾ ಜಾತಿ ಉಪಜಾತಿಗಳ ನಡುವೆ ವೈವಾಹಿಕವಾಗಿ, ವ್ಯವಹಾರಿಕವಾಗಿ ಸಮ ಸಂಬಂಧಗಳು ಏರ್ಪಟ್ಟಿಲ್ಲ.

ಅಸ್ಪೃಶ್ಯರು ಬ್ರಾಹ್ಮಣರನ್ನು ಸ್ಪರ್ಶಿಸಿದರೆ, ದೇವಸ್ಥಾನಗಳಿಗೆ ಪ್ರವೇಶಿಸಿದರೆ, ಸಹ ಪಂಕ್ತಿ ಭೋಜನ ಮಾಡಿದರೆ ಮೈಲಿಗೆ ಆಗುತ್ತದೆ ಎಂಬಂತಹ  ಮೌಢ್ಯಗಳು, ನಂಬಿಕೆಗಳು ಸತ್ಯಾಸತ್ಯತೆಗಳ ಪರೀಕ್ಷೆಗೊಳಪಡದೆ ಇಂದಿಗೂ ನೆಲೆ ನಿಂತಿವೆ. ರೋಗಗ್ರಸ್ತ ಚಲನರಹಿತ ಸಂಸ್ಥೆಯಾದ ಜಾತಿಯಲ್ಲಿ ತಂದೆತಾಯಿಗಳು ಅನುಭವಿಸುತ್ತಿರುವ ಶೋಷಣೆ, ಸ್ಥಾನಮಾನಗಳು ಮಕ್ಕಳಿಗೂ ಖಚಿತವಾಗಿರುತ್ತವೆ.

ಹಿಂದೂ ಧರ್ಮದಲ್ಲಿ ಜನನವು ಜಾತಿಯೊಂದಿಗೆ ಬೆಸೆದುಕೊಂಡಿರುವುದರಿಂದ ತಮ್ಮ ಅನನ್ಯತೆಯನ್ನು ಕಂಡುಕೊಳ್ಳಲು ನಿರ್ದಿಷ್ಟವಾದ ಜಾತಿಯನ್ನು ಹೇಳುವುದು ಅನಿವಾರ್ಯವಾಗಿದೆ. ಅಸ್ಪೃಶ್ಯರನ್ನು ಸ್ತ್ರೀಯರನ್ನು ಗುಲಾಮರಂತೆ ಒಂದೇ ತಕ್ಕಡಿಯಲ್ಲಿ ತೂಗುವ ಭಾರತೀಯ ಸಮಾಜದಲ್ಲಿ ಪುತ್ರನಿಂದಲೇ ಸದ್ಗತಿಯೆಂಬ ಮೌಢ್ಯದ ಆಧಾರದ ಮೇಲೆ ನಿಂತಿರುವ ಪುರುಷ ಪ್ರಧಾನ ಸಮಾಜದಲ್ಲಿ ಜಾತಿಯು ಗಂಡಿನ ಮೂಲಕವೇ ತಲೆಮಾರಿನಿಂದ ತಲೆಮಾರಿಗೆ ಹರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.