ADVERTISEMENT

ಬದುಕಿಗೆ ಅಗತ್ಯ

ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ
Published 17 ಮಾರ್ಚ್ 2013, 19:59 IST
Last Updated 17 ಮಾರ್ಚ್ 2013, 19:59 IST

ಮನುಷ್ಯ ಬದುಕು ನಡೆಸುವುದಕ್ಕೆ ನಂಬಿಕೆ ಅಗತ್ಯ. ಜಾತಿ ವ್ಯವಸ್ಥೆ ನಿಂತಿರುವುದೂ ಈ ನಂಬಿಕೆಯ ನೆಲೆಗಟ್ಟಿನ ಮೇಲೆಯೇ. ಈ ವ್ಯವಸ್ಥೆಯಲ್ಲಿ ಸಮುದಾಯಗಳ ಮೂಲ ಕಸುಬು, ಆಚರಣೆ, ಆಹಾರ ಪದ್ಧತಿ ಮತ್ತು ಇತರ ಅಭ್ಯಾಸಗಳಿಗೆ ಅನುಸಾರವಾಗಿ ಜಾತಿ ವಿಂಗಡಣೆಯಾಗಿದೆ. ಇಂದಿಗೂ ಕೆಲ ಸಮುದಾಯಗಳ ಕಸುಬು, ಜಾತಿಗಳು ಒಂದೇ. ನಾನು ಒಕ್ಕಲಿಗ ಸಮುದಾಯಕ್ಕೆ ಸೇರಿದವನಾಗಿದ್ದು ನಮ್ಮ ಕಸುಬು ವ್ಯವಸಾಯ. ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಕಸುಬಿದು. ನಮ್ಮ ಜಾತಿಯ ಮೂಲವನ್ನು ಕೆದಕಿದಾಗ ಒಕ್ಕಲುತನ ಮಾಡುತ್ತಿದ್ದವರು ಒಕ್ಕಲಿಗರೆಂದು ತಿಳಿಯಿತು. ಒಂದು ನಿಘಂಟಿನ ಪ್ರಕಾರ ಒಕ್ಕಲಗಿತ್ತಿ ಎಂದರೆ ವ್ಯವಸಾಯ ಮಾಡುವ ಕುಟುಂಬಕ್ಕೆ ಸೇರಿದವಳೆಂಬ ಅರ್ಥವಿದೆ. ನೂರಾರು ತಲೆಮಾರಿನಿಂದ ಬಂದ ಕುಟುಂಬವೊಂದರ ಜಾತಿ ಮಧ್ಯೆ ಹೇಗೆ ಬದಲಾದೀತು?

ನಾವು ಇಂಥ ಜಾತಿ ಮತ್ತು ಹೇಳಿಕೊಳ್ಳುವುದು ಅಗತ್ಯ ಮತ್ತು ಅನಿವಾರ್ಯ. ಕುವೆಂಪು ಅವರ ವಿಶ್ವಮಾನವತಾ ವಾದದಿಂದ ನಾವು ಪ್ರಭಾವಿತರಾದರೂ ದಾಖಲೆಗಳಲ್ಲಿ, ಕೆಲಸದ ಅರ್ಜಿಗಳಲ್ಲಿ, ಕ್ಲೇಮುಗಳನ್ನು ಕೋರುವಲ್ಲಿ `ವಿಶ್ವ ಮಾನವ' ಎಂದು ಬರೆಯಲಾದೀತೇ? ನಮ್ಮ ವ್ಯವಸ್ಥೆ ಕೂಡಾ ಜಾತಿಯಲ್ಲಿ ಅಧಿಕೃತವಾಗಿ ಗುರುತಿಸಿಕೊಳ್ಳುವಂತೆ ಮಾಡುತ್ತಿದೆ. ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ತಂದೆಯ ಜಾತಿ ಮಕ್ಕಳಿಗೆ ಬರುವುದು ಸಹಜ. ಒಟ್ಟಿನಲ್ಲಿ ಜಾತಿ ಎಂಬುದು ನಮಗೆ ಅರಿವಿಲ್ಲದೆಯೇ ನಮಗೆ ಅಂಟಿಕೊಂಡಿರುತ್ತದೆ. ಈಗಂತೂ ಜಾತಿಯಲ್ಲಿ ಗುರುತಿಸಿಕೊಳ್ಳುವುದರಿಂದ ಲಾಭವಿದೆ. ಹೆಸರುಗಳಲ್ಲಿ ಮೊದಲಿಗಿಂತ ಹೆಚ್ಚಾಗಿ ಜಾತಿ ಸೂಚಕಗಳಿರುತ್ತವೆ. ವಾಹನಗಳ ಮೇಲೂ ಇಂಥ ಸೂಚಕಗಳನ್ನು ಕಾಣಬಹುದು. ಯಾವುದೇ ಲಾಭವಿಲ್ಲದೆ ಜನರು ಹೀಗೆ ಮಾಡುತ್ತಾರೆಯೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.