ADVERTISEMENT

ಮಹಿಳೆಯರ ಜಾತಿ ಕಷ್ಟಗಳು

ಸುಂದರ್ ಸರುಕ್ಕೈ
Published 5 ಮೇ 2013, 19:59 IST
Last Updated 5 ಮೇ 2013, 19:59 IST

ಜಾತಿ ಸಂವಾದ ಕೊನೆಯ ಹಂತಕ್ಕೆ ಬರುತ್ತಿದೆ. ಮುಂದಿನ ಮೂರು ವಾರಗಳಲ್ಲಿ ಈ ಸಂವಾದದ ಉಪಸಂಹಾರವನ್ನು ಯೋಜಿಸಿದ್ದೇವೆ. ಇಲ್ಲಿಯತನಕ ಸಾವಿರಾರು ಓದುಗರ ಬಹಳ ಮಾಹಿತಿ ಪೂರ್ಣ ಮತ್ತು ಕುತೂಹಲಕಾರಿ ಪ್ರತಿಕ್ರಿಯೆಗಳು ಬಂದಿವೆ. ಮೊದಲೇ ಹೇಳಿದಂತೆ ಇಲ್ಲಿ ಪ್ರಕಟವಾದ ಹಾಗೂ ಸ್ಥಳಾಭಾವದಿಂದ ಪ್ರಕಟವಾಗದೇ ಉಳಿದ ಎಲ್ಲಾ ಮುಖ್ಯ ಮತ್ತು ಮಹತ್ವದ ಪ್ರತಿಕ್ರಿಯೆಗಳು ಈ ಸಂವಾದಕ್ಕೆಂದೇ ಮೀಸಲಾಗಿರುವ ವಿಶೇಷ ಜಾಲತಾಣದಲ್ಲಿ ಕಾಣಿಸಿಕೊಳ್ಳಲಿವೆ. ಜಾತಿಯ ಕುರಿತ ಬಹಳ ಖಾಸಗಿಯಷ್ಟೇ ಆಗಿ ಉಳಿದಿದ್ದ ಅನೇಕ ಮಾಹಿತಿಗಳನ್ನು ಒದಗಿಸಿದ ಹಾಗೂ ಚರ್ಚೆಯನ್ನು ಭಿನ್ನ ನೆಲೆಗಳಲ್ಲಿ ಬೆಳೆಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಲು ಇಚ್ಛಿಸುತ್ತೇವೆ.

ಮುಂದಿನ ಮೂರು ವಾರಗಳಲ್ಲಿ ಸಂವಾದವನ್ನು ಕೊನೆಗೊಳಿಸುವ ಮೊದಲು ಜಾತಿ ಪರಿಕಲ್ಪನೆಗೆ ಸಂಬಂಧಿಸಿದ ಎರಡು ಮುಖ್ಯ ಆಯಾಮಗಳ ಕುರಿತಂತೆ ಚರ್ಚಿಸಬೇಕೆಂದುಕೊಂಡಿದ್ದೇವೆ. ಮೊದಲನೆಯದ್ದು ಜಾತಿಗೆ ಸಂಬಂಧಿಸಿದಂತೆ ಮಹಿಳೆಯ ಪಾತ್ರ. ಎರಡನೆಯದ್ದು ಜಾತಿಯ ಭವಿಷ್ಯ. ಜಾತಿಯ ಭವಿಷ್ಯಕ್ಕೆ ಸಂಬಂಧಿಸಿದಂತೆ ನಮ್ಮ ಅನಿಸಿಕೆಗಳನ್ನು ಮುಂದಿನ ಸಂಚಿಕೆಗಳಲ್ಲಿ ಹೇಳಲಿದ್ದೇವೆ. ಅದಕ್ಕೂ ಮೊದಲು ಓದುಗರಾದ ನೀವು ಜಾತಿಯ ಭವಿಷ್ಯವನ್ನು ಹೇಗೆ ಕಲ್ಪಿಸಿಕೊಳ್ಳುತ್ತೀರಿ ಎಂಬುದರ ಕುರಿತು ನಾವು ಕುತೂಹಲಿಗಳಾಗಿದ್ದೇವೆ. ಎಲ್ಲಾ ಜಾತಿ ಆಚರಣೆಗಳೂ ಸಾಮಾಜಿಕವಾದವು. ಇವುಗಳನ್ನು ಬೆಂಬಲಿಸಲು, ವಿರೋಧಿಸಲು ಅಥವಾ ಬದಲಾಯಿಸಲು ಸಮುದಾಯಗಳು ಇರಲೇಬೇಕಾಗುತ್ತದೆ. ಹಾಗಾಗಿ ಜಾತಿಯ ಭವಿಷ್ಯ ಎಂಬುದು ನಾವು ಯಾವುದನ್ನು ನಿರೀಕ್ಷಿಸುತ್ತೇವೆ ಅಥವಾ ಏನನ್ನು ಕಲ್ಪಿಸಿಕೊಳ್ಳುತ್ತೇವೆ ಎಂಬುದನ್ನೇ ಆಧಾರವಾಗಿಟ್ಟುಕೊಂಡಿದೆ. ಅಂದರೆ ನಾವು ಕೈಗೊಳ್ಳುವ ನಿರ್ಧಾರಗಳು ಮತ್ತು ಕ್ರಿಯೆಗಳು ಜಾತಿಯ ಭವಿಷ್ಯವನ್ನು ನಿರ್ಧರಿಸುತ್ತವೆ. ನಮ್ಮ ಸಮಾಜ ಭವಿಷ್ಯದಲ್ಲಿ ಹೇಗಿರಬೇಕೆಂದು ನೀವು ಭಾವಿಸುತ್ತೀರಿ? ನೀವು ಬೆಳೆಯುತ್ತಾ ಅನುಭವಿಸಿದ ಅದೇ ಸ್ಥಿತಿ ಮತ್ತು ಪರಿಸರ ನಿಮ್ಮ ಮಕ್ಕಳಿಗೂ ಇರಬೇಕೆಂದು ಭಾವಿಸುತ್ತೀರಾ? ಯಾವುದು ಬದಲಾಗಬೇಕೆಂಬುದು ನಿಮ್ಮ ನಿರೀಕ್ಷೆ? ನೀವು ಹೇಗೆ ಈ ಬದಲಾವಣೆಯ ಭಾಗವಾಗುತ್ತೀರಿ?

ಮುಂಬರುವ ವಾರಗಳಲ್ಲಿ ಈ ವಿಷಯಗಳ ಕುರಿತು ಚರ್ಚಿಸುವುದನ್ನು ಹೇಳುತ್ತಲೇ ಈ ವಾರ ಜಾತಿ ಮತ್ತು ಮಹಿಳೆಯ ಕುರಿತಂತೆ ಚರ್ಚಿಸಲು ಇಚ್ಛಿಸುತ್ತೇವೆ. ಹಲವರು ಭಾವಿಸಿರುವಂತೆ ವ್ಯವಸ್ಥೆಯ ಭಾಗವಾಗಿರುವ ಮಹಿಳೆಯರು ಜಾತಿ ಆಚರಣೆಗಳನ್ನು ತಲೆಮಾರಿನಿಂದ ತಲೆಮಾರಿಗೆ ಕೊಂಡೊಯ್ಯುತ್ತಾರೆ. ಈ ನಿಲುವಿನಂತೆ `ಮೈಲಿಗೆ'ಗೆ ಸಂಬಂಧಿಸಿದಂತೆ ಹೆಚ್ಚು ಸಂವೇದನಾಶೀಲರಾಗಿರುವುದೂ ಮಹಿಳೆಯರೇ. ಇದೇ ವೇಳೆ ಮಹಿಳೆಯರನ್ನು ಮನೆಯ ಮುಖ್ಯಧಾರಾ ಚಟುವಟಿಕೆಗಳಿಂದ ಹೊರಗಿಡುವ ಕ್ರಮ ಈಗಲೂ ಕೆಲವು ಕುಟುಂಬಗಳಲ್ಲಿ ಉಳಿದುಕೊಂಡುಬಂದಿದೆ. ಋತುಸ್ರಾವದ ಸಂದರ್ಭಗಳಲ್ಲಿ ಮಹಿಳೆಯರೇ ತಮ್ಮನ್ನು ನಿಯಂತ್ರಿಸಿಕೊಂಡು ಮನೆಯ ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೇ ಇರುವುದು, ನಿರ್ದಿಷ್ಟ ಭಾಗಗಳಿಗೆ ಹೋಗದೇ ಇರುವುದು ಹಾಗೆಯೇ ದೇವಸ್ಥಾನಗಳಿಂದ ದೂರ ಉಳಿಯುವುದು ಸಾಮಾನ್ಯವಾಗಿ ಕಂಡುಬರುವ ವಿದ್ಯಮಾನ. ಹಾಗೆಯೇ ಹೆಚ್ಚಿನ ಮಹಿಳೆಯರು ಇವುಗಳನ್ನು ತಮ್ಮ ಹೆಣ್ಣು ಮಕ್ಕಳ ಮೇಲೆಯೂ ಹೇರುತ್ತಾರೆ. ಅಂಬೇಡ್ಕರ್ ಸೇರಿದಂತೆ ಅನೇಕರು ಹೇಳಿರುವಂತೆ ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತದೆ. ಬೌದ್ಧ ಮತ್ತು ಸಿಖ್ ಮತಗಳು ಈ ನಂಬಿಕೆಯನ್ನು ಅಲ್ಲಗಳೆದರೂ ಇನ್ನುಳಿದ ಅನೇಕ ಮತ-ಧರ್ಮಗಳಲ್ಲಿ ಈ ಆಚರಣೆ ಇದೆ.

ಶೋಷಿತ ಜಾತಿಗಳು ಅನುಭವಿಸುವ ಹೆಚ್ಚಿನದ್ದನ್ನು ಮಹಿಳೆಯರೂ ಅನುಭವಿಸುತ್ತಾರೆ. ಮಹಿಳೆಯರಿಗೆ ಸಂಸ್ಕೃತಿ ಮತ್ತು ಪರಂಪರೆಯ ಹೆಸರಿನಲ್ಲಿ ಮೂಲಭೂತ ಹಕ್ಕುಗಳನ್ನೇ ನಿರಾಕರಿಸಲಾಗಿದೆ. `ಪರಂಪರೆ'ಯನ್ನು ಮುಂದುವರಿಸುವ ಜವಾಬ್ದಾರಿಯನ್ನು ಅವರ ಮೇಲೆ ಹೇರಲಾಗಿದೆ. ಪರಿಣಾಮವಾಗಿ ಅವರು ಪಿತೃಪ್ರಧಾನ ಮೌಲ್ಯಗಳನ್ನು ಅಂತರ್ಗತಗೊಳಿಸಿಕೊಂಡು ಅದನ್ನು ತಮ್ಮ ಮುಂದಿನ ತಲೆಮಾರಿಗೆ ಹಂಚುತ್ತಾರೆ. ನಮ್ಮ ಕೆಲವು ಓದುಗರು ಸೂಚಿಸಿರುವಂತೆ ಬ್ರಾಹ್ಮಣ ಮಹಿಳೆಯನ್ನು ಮನೆಯೊಳಗೆ ಕೀಳು ಜಾತಿಯವರಂತೆ ನಡೆಸಿಕೊಳ್ಳಲಾಗುತ್ತದೆ. ಈಗ ಪರಿಸ್ಥಿತಿ ಬದಲಾಗಿದೆ ಎಂದು ನಮ್ಮಲ್ಲಿ ಕೆಲವರು ಭಾವಿಸುತ್ತಾರೆ. ಆದರೆ ಹಲವು ಆಚರಣೆಗಳು ಇನ್ನೂ ಬದಲಾಗಿಲ್ಲ. ಮಹಿಳೆಯ ಶೋಷಣೆ ಎಂಬುದು ಎಲ್ಲಾ ಜಾತಿಗಳಲ್ಲೂ ಮುಂದುವರೆದಿದೆ.

ಉದಾಹರಣೆಗೆ ಈಗಲೂ ಮಹಿಳೆಯೊಬ್ಬಳು ವೇದಗಳನ್ನು ಅಧ್ಯಯನ ಮಾಡುವುದು ಅಥವಾ ವೇದಾಂತದಲ್ಲಿ ಒಂದು ಸರಿಯಾದ ಕೋರ್ಸ್‌ಗೆ ಸೇರಲು ಹಲವು ತೊಂದರೆಗಳಿವೆ. ಮಹಿಳೆ ವೇದಾಧ್ಯಯನ ಮಾಡದಿರಲಿ ಎಂಬ ಕಾರಣಕ್ಕಾಗಿಯೇ ಹಲವು ನಿಯಮಗಳನ್ನು ರೂಪಿಸಲಾಗಿದೆ. ಪರಿಣಾಮವಾಗಿ ಇದು ಕೆಲವೇ ಗಂಡಸರಿಗೆ ಸಾಧ್ಯ ಎಂಬ ಸ್ಥಿತಿ ಇದೆ. ಮಹಿಳಾ ಪುರೋಹಿತರು ಎಂಬುದು ಬಹಳ ಕ್ರಾಂತಿಕಾರಕ ಹೆಜ್ಜೆ ಆದರೆ ಈ ನಿಟ್ಟಿನಲ್ಲಿ ದೊರೆಯುವ ಉದಾಹರಣೆಗಳು ಬಹಳ ಕಡಿಮೆ. ಮೈಲಿಗೆಗೆ ಸಂಬಂಧಿಸಿದಂತೆ ಮಹಿಳೆಯ ಮೇಲಿನ ಅಪನಂಬಿಕೆ ಎಷ್ಟಿದೆಯೆಂದರೆ ಮೇಲ್ಜಾತಿಗಳಿಗೆ ಸೇರಿದ ಹಲವು ದೇವಸ್ಥಾನಗಳಲ್ಲಿ ಮಹಿಳೆಗೆ ಪ್ರಸಾದವನ್ನು ತಯಾರಿಸುವ ಅನುಮತಿಯೂ ಇಲ್ಲ.

ಹಾಗೆಯೇ ಮೀಸಲಾತಿಗೆ ಸಂಬಂಧಿಸಿದ ಚರ್ಚೆಯಲ್ಲಿಯೂ ಮಹಿಳೆಗೆ ಪಾಲಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಭಾರತದ ಅತಿ ದೊಡ್ಡ ಕ್ರಾಂತಿಗಳಲ್ಲೊಂದೆಂದರೆ ಪಂಚಾಯಿತಿ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿಯನ್ನು ಜಾರಿಗೆ ತಂದಿರುವುದು. ಈ ಮೀಸಲಾತಿಯ ಕೊರೆತಗಳ ಕುರಿತು ಅನೇಕರು ಹೇಳುತ್ತಾರಾದರೂ ಇದು ಮಹಿಳೆಗೆ ನಿಜವಾದ ಅಧಿಕಾರ ನೀಡಿದ ಕ್ರಾಂತಿ ಎಂಬುದನ್ನು ಮರೆಯಬಾರದು. ಇದು ಮಹಿಳೆಯನ್ನು ತಮ್ಮ ಸಮಾನಳೆಂಬಂತೆ ಕಾಣಲು ಗಂಡಸರನ್ನು ಪ್ರೇರೇಪಿಸಿತಷ್ಟೇ ಅಲ್ಲದೇ ಅವರು ಆಕೆಯ ಜೊತೆಗೆ ಸಂವಾದಕ್ಕೂ ಸಿದ್ಧರಾಗಬೇಕಾಯಿತು.ನಾವು ಜಾತಿಯ ಭವಿಷ್ಯದ ಬಗ್ಗೆ ಚಿಂತಿಸುವ ಹೊತ್ತಿನಲ್ಲೇ ಮಹಿಳೆಯ ಭವಿಷ್ಯದ ಕುರಿತೂ ಆಲೋಚಿಸಲೇಬೇಕಾಗುತ್ತದೆ.
-ಸುಂದರ್ ಸರುಕ್ಕೈ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.